ಸಂಪುಟ ವಿಸ್ತರಣೆಗೆ ಸಚಿವಾಕಾಂಕ್ಷಿಗಳ ಅಸಮಾಧಾನ
Team Udayavani, Jun 15, 2019, 3:09 AM IST
ಬೆಂಗಳೂರು: ಅತೃಪ್ತರ ಬೆದರಿಕೆ, ಬಹಿರಂಗ ಬಂಡಾಯದ ನಡುವೆಯೂ ಮೈತ್ರಿ ಸರ್ಕಾರದ ನಾಯಕರು ಸಂಪುಟ ವಿಸ್ತರಣೆ ಮಾಡಿದ್ದು, ನಾಯಕರ ವಿರುದ್ಧದ ಅತೃಪ್ತರ ಆಕ್ರೋಶ, ಬೇಗುದಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಕಳೆದ ಆರು ತಿಂಗಳಿನಿಂದ ಮೈತ್ರಿ ಸರ್ಕಾರಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕಂಟಕವಾಗಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಲೋಕಸಭೆ ಚುನಾವಣೆ ಮತದಾನ ಮುಗಿದ ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಬಳಿಕ, ಆಪ್ತರೊಂದಿಗೆ ಚರ್ಚಿಸಿ ಸಾಮೂಹಿಕವಾಗಿ ರಾಜೀನಾಮೆ ನೀಡಲು ಪ್ರಯತ್ನ ನಡೆಸಿದರು.
ತಮ್ಮ ಪ್ರಯತ್ನಕ್ಕೆ ಪಕ್ಷೇತರ ಶಾಸಕರನ್ನೂ ಜತೆಗೆ ಸೇರಿಸಿಕೊಂಡಿದ್ದರು. ಇದೇ ವೇಳೆ, ಹಿರಿಯ ಶಾಸಕರಾದ ರೋಷನ್ ಬೇಗ್ ಹಾಗೂ ರಾಮಲಿಂಗಾರೆಡ್ಡಿ ಅವರು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ವಿರುದ್ಧ ನೇರ ಆರೋಪ ಮಾಡುವ ಮೂಲಕ ಬಂಡಾಯಗಾರರಿಗೆ ಮತ್ತಷ್ಟು ಶಕ್ತಿ ನೀಡಿದ್ದರು.
ಹಿರಿಯ ನಾಯಕರು ಹಾಗೂ ಅತೃಪ್ತ ಶಾಸಕರ ಬಂಡಾಯಕ್ಕೆ ಕಂಗಾಲಾಗಿದ್ದ ಮೈತ್ರಿ ಪಕ್ಷಗಳ ನಾಯಕರು ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಬೇಕೆಂದು ಸಂಪುಟ ಪುನಾರಚನೆಗೆ ಕಸರತ್ತು ನಡೆಸಿದ್ದರು. ಆದರೆ, ಹಾಲಿ ಸಚಿವರ ವಿರೋಧದಿಂದ ಸಂಪುಟ ಪುನಾರಚನೆ ಬದಲು ವಿಸ್ತರಣೆಗೆ ತೀರ್ಮಾನಿಸಿದರು.
ಎರಡೂ ಪಕ್ಷಗಳು ತಮ್ಮ ಶಾಸಕರಿಗೆ ಅವಕಾಶ ನೀಡುವ ಬದಲು ಎರಡೂ ದೋಣಿಯ ಮೇಲೆ ಕಾಲಿಡುತ್ತಿದ್ದ ಪಕ್ಷೇತರರನ್ನು ಉಳಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ. ಖಾಲಿ ಇರುವ ಮೂರು ಸ್ಥಾನಗಳಲ್ಲಿ ಎರಡೂ ಪಕ್ಷಗಳಿಂದ ಯಾವುದೇ ಶಾಸಕರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳದೆ ಪಕ್ಷೇತರರಿಗೆ ಮಾತ್ರ ಮಣೆ ಹಾಕಿ, ಸರ್ಕಾರ ರಕ್ಷಿಸಿಕೊಳ್ಳುವ ಮೂಲಕ ಜಾಣ ನಡೆ ಇಟ್ಟಿದ್ದಾರೆ.
ಕಾಂಗ್ರೆಸ್‌ನಲ್ಲಿ ಬೂದಿ ಮುಚ್ಚಿದ ಕೆಂಡ: ನಾಯಕರ ಈ ನಿರ್ಧಾರದ ಬಗ್ಗೆ ಪಕ್ಷದ ಹಿರಿಯ ಶಾಸಕರಿಂದ ಹಿಡಿದ ಬಹುತೇಕರು ಅಸಮಾಧಾನ ಹೊಂದಿದ್ದಾರೆ. ಆದರೆ, ತಕ್ಷಣವೇ ಯಾರ ವಿರುದ್ಧವೂ ಬಹಿರಂಗವಾಗಿ ಆಕ್ರೋಶ ಹೊರ ಹಾಕದೆ, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.
ಆರ್.ಶಂಕರ್ ಪ್ರತಿನಿಧಿಸುತ್ತಿದ್ದ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿರುವುದರಿಂದ ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅಸಮಾಧಾನ ಹೊಂದಿದ್ದು, ತಮ್ಮ ಅಸಮಾಧಾನವನ್ನು ದಿನೇಶ್ ಗುಂಡೂರಾವ್ ಹಾಗೂ ಡಾ.ಜಿ.ಪರಮೇಶ್ವರ್ ಎದುರು ಹೊರ ಹಾಕಿದ್ದಾರೆ. ಮಂತ್ರಿ ಸ್ಥಾನಕ್ಕಾಗಿ ಬಹಿರಂಗ ಹೇಳಿಕೆ ನೀಡಿದ್ದ ರಾಮಲಿಂಗಾ ರೆಡ್ಡಿ, ಬಿ.ಸಿ.ಪಾಟೀಲ್, ಡಾ.ಸುಧಾಕರ್ ಮೌನ ವಹಿಸಿದ್ದಾರೆ.
ಬಹಿರಂಗ ಬಂಡಾಯ ಸಾರಿರುವ ರಮೇಶ್ ಜಾರಕಿಹೊಳಿ ಕೂಡ ಮೌನ ವಹಿಸಿದ್ದು, ಆಕ್ರೋಶ ಯಾವಾಗಲಾದರೂ ಸ್ಫೋಟಗೊಳ್ಳಬಹುದೆಂಬ ಆತಂಕ ರಾಜ್ಯ ಕಾಂಗ್ರೆಸ್ ನಾಯಕರಲ್ಲಿದೆ. ಅದೇ ಕಾರಣಕ್ಕೆ ಕೆಲವು ಅತೃಪ್ತ ಶಾಸಕರಿಗೆ ನಿಗಮ ಮಂಡಳಿ ನೀಡುವ ಕುರಿತಂತೆಯೂ ಮೈತ್ರಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಚುನಾವಣೆಗೆ ಹಿಂದೇಟು: ಕಾಂಗ್ರೆಸ್‌ನ ಬಹುತೇಕ ಶಾಸಕರಿಗೆ ಮೈತ್ರಿ ಸರ್ಕಾರದಲ್ಲಿ ಮುಂದುವರಿಯಲು ಮನಸ್ಸಿಲ್ಲದಿದ್ದರೂ, ತಕ್ಷಣಕ್ಕೆ ಚುನಾವಣೆ ಎದುರಾದರೆ ಮತ್ತೆ ಗೆದ್ದು ಬರುವ ವಿಶ್ವಾಸ ಇಲ್ಲ. ಅದೇ ಕಾರಣಕ್ಕೆ ಅನೇಕ ಶಾಸಕರು ರಮೇಶ್ ಜಾರಕಿಹೊಳಿ ಜತೆಗೆ ಗುರುತಿಸಿಕೊಂಡರೂ, ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅತೃಪ್ತ ಶಾಸಕರ ಈ ನಡೆಯನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಮೈತ್ರಿ ನಾಯಕರು ಅತೃಪ್ತರನ್ನು ಕೈ ಬಿಟ್ಟು ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿಯಿಂದ ಸಿಗದ ಸೂಕ್ತ ಸ್ಪಂದನೆ: ರಮೇಶ್ ಜಾರಕಿಹೊಳಿ ಜತೆಗೆ ನಾಲ್ಕರಿಂದ ಐದು ಶಾಸಕರು ಮಾತ್ರ ಇದ್ದಾರೆ ಎನ್ನಲಾಗಿದ್ದು, ಅವರಲ್ಲಿಯೂ ಎಲ್ಲರೂ ತಕ್ಷಣಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದಾರೆ. ಇನ್ನೊಂದೆಡೆ, ಅಗತ್ಯಕ್ಕಿಂತ ಕಡಿಮೆ ಶಾಸಕರು ಬಂದರೆ ಪ್ರಯೋಜನವಿಲ್ಲ. ಕನಿಷ್ಠ 15 ಶಾಸಕರು ರಾಜೀನಾಮೆಗೆ ನಿರ್ಧರಿಸಿದರೆ ಮಾತ್ರ ಮುಂದಿನ ಹೆಜ್ಜೆ ಇಡಲು ಬಿಜೆಪಿಯವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ, ಕೇಂದ್ರ ಸರ್ಕಾರದ ಮೊದಲ ಅಧಿವೇಶನ ಕೂಡ ನಡೆಯಲಿದ್ದು, ಈ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಉರುಳಿಸಲು ಕೈ ಹಾಕಿದರೆ, ದೇಶಾದ್ಯಂತ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ ಎನ್ನುವ ಕಾರಣಕ್ಕೆ ಬಿಜೆಪಿ, ರಾಜ್ಯ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನವನ್ನು ಮುಂದೂಡಿದೆ ಎನ್ನಲಾಗುತ್ತಿದೆ.
ಹೀಗಾಗಿ, ಬಂಡಾಯ ಶಾಸಕರಿಗೆ ರಾಜೀನಾಮೆ ನೀಡಲಾಗದೆ, ಪಕ್ಷದ ನಾಯಕರ ವಿರುದ್ಧ ಬಹಿರಂಗ ಆಕ್ರೋಶವನ್ನೂ ಹೊರ ಹಾಕಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಆದರೆ, ಬಂಡಾಯಗಾರರ ಅಸಮಾಧಾನ ಯಾವ ರೂಪದಲ್ಲಾದರೂ ನ್ಪೋಟಗೊಳ್ಳಬಹುದು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿಯೇ ಕೇಳಿ ಬರುತ್ತಿವೆ.
ಅತೃಪ್ತಿ ಶಮನಕ್ಕೆ ಅಧ್ಯಕ್ಷರ ಹುದ್ದೆ ಭರವಸೆ: ಪಕ್ಷದ ನಾಯಕರ ವಿರುದ್ಧ ಬಹಿರಂಗ ಆಕ್ರೋಶ ಹೊರ ಹಾಕುತ್ತಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಹಾಗೂ ಬಿ.ಸಿ. ಪಾಟೀಲರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ನಾಯಕರು ಆಲೋಚಿಸಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿರುವ ಜಯರಾಮ್‌ರಿಂದ ರಾಜೀನಾಮೆ ಪಡೆದು, ಶಾಸಕ ಸುಧಾಕರ್‌ರನ್ನು ಅಧ್ಯಕ್ಷರನ್ನಾಗಿ ಮಾಡಲು ಚಿಂತನೆ ನಡೆಸಿದ್ದಾರೆ. ಅದೇ ರೀತಿ, ಕೆಎಂಎಫ್ ಅಧ್ಯಕ್ಷ ಸ್ಥಾನವೂ ಖಾಲಿ ಇರುವುದರಿಂದ ಬಿ.ಸಿ. ಪಾಟೀಲ್ ಅಥವಾ ಬೇರೆ ಯಾರಿಗಾದರೂ ಈ ಹುದ್ದೆ ನೀಡಿ ಬಂಡಾಯ ಶಮನ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರೂ ಪಕ್ಷೇತರ ಶಾಸಕರು ಸಚಿವರಾಗಿದ್ದಕ್ಕೆ ಅಭಿನಂದನೆಗಳು. ಅವರಿಗೆ ನೀಡುವ ಖಾತೆಗಳಲ್ಲಿ ರಾಜ್ಯದ ಜನತೆಗೆ ಒಳ್ಳೆಯ ಕೆಲಸ ಮಾಡಲಿ. ನನಗೆ ಯಾವುದೇ ಹುದ್ದೆಯ ಭರವಸೆ ನೀಡಿಲ್ಲ. ಎರಡು ಮೂರು ದಿನ ಬಿಟ್ಟು ಎಲ್ಲ ವಿಷಯ ಮಾತನಾಡುತ್ತೇನೆ.
-ಡಾ. ಸುಧಾಕರ್, ಚಿಕ್ಕಬಳ್ಳಾಪುರ ಶಾಸಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.