ಬಿಎಸ್‌ವೈಗೆ ಈಗ ಸಂಪುಟ ವಿಸ್ತರಣೆ ಸಂಕಟ
Team Udayavani, Dec 12, 2019, 3:09 AM IST
ಬೆಂಗಳೂರು: ಡಿ.5ರಂದು ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈಗ ಸಂಪುಟ ವಿಸ್ತರಣೆಯ ಸಂಕಷ್ಟ ಎದುರಾಗಿದೆ. ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಪಕ್ಷದ ಹಿರಿಯ ನಾಯಕರಿಂದ ಒತ್ತಡ, ಲಾಬಿ ಶುರುವಾಗಿದ್ದು, ಅವರೆಲ್ಲರನ್ನೂ ಸಂತೈಸಿ, ಸರಕಾರವನ್ನು ಸುಭದ್ರವಾಗಿ ಮುನ್ನಡೆಸುವ ಬಹುದೊಡ್ಡ ಸವಾಲು ಮುಖ್ಯಮಂತ್ರಿಗೆ ಈಗ ಎದುರಾಗಿದೆ.
ಉಪಚುನಾವಣೆಯಲ್ಲಿ ಜಯ ಗಳಿಸಿದ ಬಿಜೆಪಿಯ ಹಲವು ನೂತನ ಶಾಸಕರು ಒಟ್ಟಾಗಿ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಸೋತವರಿಗೆ ಸ್ಥಾನಮಾನ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಇಟ್ಟಿದ್ದರೆ, ಮೂಲ ಬಿಜೆಪಿಗರು ಸಚಿವ ಸ್ಥಾನಕ್ಕಾಗಿ ಲಾಬಿ ಮುಂದುವರಿಸಿದ್ದಾರೆ.
ಬಿಜೆಪಿ ಹಿರಿಯ ಶಾಸಕರಾದ ಜಿ.ಕರುಣಾಕರೆಡ್ಡಿ, ಎಂ.ಪಿ.ಕುಮಾರಸ್ವಾಮಿ, ಸುಭಾಷ್ ಗುತ್ತೇದಾರ್ ಅವರು ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ, ಹಿರಿತನ ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಕರುಣಾಕರ ರೆಡ್ಡಿ, ಸುಭಾಷ್ ಗುತ್ತೇದಾರ್ ಮನವಿ ಮಾಡಿದ್ದಾರೆ.
ಪರಿಶಿಷ್ಟ ಜಾತಿ ಚಲವಾದಿ (ಬಲಗೈ) ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಂತೆ ಎಂ.ಪಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಬುಧವಾರವೂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ರಾಜೀನಾಮೆ ಪಡೆಯುವ ಸಾಧ್ಯತೆ?: ಉಪಚುನಾವಣೆಯಲ್ಲಿ ಗೆದ್ದಿರುವ 11 ಶಾಸಕರನ್ನು ಸಚಿವರನ್ನಾಗಿ ಮಾಡಲು ಯಡಿಯೂರಪ್ಪ ಅವರು ತೀರ್ಮಾನಿಸಿದ್ದಾರೆ. ಎಂ.ಟಿ.ಬಿ.ನಾಗರಾಜ್, ಎಚ್.ವಿಶ್ವನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲು ಸ್ವಲ್ಪ ಸಮಯ ಬೇಕಾಗಲಿದೆ. ಹಾಗಾಗಿ, ಅವರಿಗೆ ಮುಂದಿನ ಬಾರಿ ಸಚಿವ ಸ್ಥಾನ ನೀಡುವ ಬಗ್ಗೆ ಚಿಂತಿಸಿದ್ದಾರೆ. ಆ ಹಿನ್ನೆಲೆಯಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಆಯ್ದ ಸದಸ್ಯರಿಂದ ರಾಜೀನಾಮೆ ಪಡೆಯುವ ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ತೇಜಸ್ವಿನಿ ಗೌಡ, ಎನ್.ರುದ್ರೇಗೌಡ, ರಘುನಾಥರಾವ್ ಮಲ್ಕಾಪುರೆ ಇತರರ ಅವಧಿ 2024ರ ಜೂನ್ 17ರವರೆಗೆ ಇದ್ದು, ಅಗತ್ಯಬಿದ್ದರೆ ಕೆಲವರ ಮನವೊಲಿಸಿ ರಾಜೀನಾಮೆ ಪಡೆದು ಸರ್ಕಾರ ರಚನೆಗೆ ನೆರವಾದವರಿಗೆ ಸ್ಥಾನಮಾನ ಕಲ್ಪಿಸಲು ಚಿಂತನೆ ನಡೆದಿದೆ. ಮುಖ್ಯಮಂತ್ರಿಯವರು ಕೆಲವರೊಂದಿಗೆ ಈ ಸಂಬಂಧ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ, ಅನರ್ಹ ಶಾಸಕ ಆರ್.ಶಂಕರ್ ಅವರನ್ನು ಸದ್ಯಕ್ಕೆ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗಿದೆ.
ವರಿಷ್ಠರ ಜೊತೆ ಸಿಎಂ ಚರ್ಚೆ ಸಾಧ್ಯತೆ: ಸಂಸತ್ ಅಧಿವೇಶನ, ಜಾರ್ಖಂಡ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರು ಕಾರ್ಯ ಒತ್ತಡದಲ್ಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ರಾತ್ರಿ ಇಲ್ಲವೇ, ಶುಕ್ರವಾರ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.
ಸೋಮವಾರದಿಂದ ಧನುರ್ಮಾಸ ಆರಂಭವಾಗಲಿದ್ದು, ಅಷ್ಟರೊಳಗೆ ಸಂಪುಟ ವಿಸ್ತರಣೆ ಸಾಧ್ಯವಾಗದಿದ್ದರೆ ಸೋಮವಾರದ ನಂತರ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಪರಾಭವಗೊಂಡವರಿಗೆ ಸ್ಥಾನಮಾನ ಇತರ ವಿಚಾರಗಳನ್ನು ಅಂತಿಮಗೊಳಿಸಿಕೊಂಡೇ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ, ಸಂಪುಟ ವಿಸ್ತರಣೆ ವಿಳಂಬವಾದರೆ ಸಂಕ್ರಾಂತಿವರೆಗೆ ಮುಂದೂಡಿಕೆಯಾಗಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ಉಪಮುಖ್ಯಮಂತ್ರಿ ಹುದ್ದೆ ತೆಗೆಯುವುದು ಅಥವಾ ಇನ್ನಷ್ಟು ಉಪಮುಖ್ಯಮಂತ್ರಿಗಳನ್ನು ನೇಮಿಸಿಕೊಳ್ಳುವುದು ಸೇರಿದಂತೆ ಎಲ್ಲ ನಿರ್ಧಾರವು ಸಿಎಂ ಯಡಿಯೂರಪ್ಪ ಅವರಿಗೆ ಬಿಟ್ಟ ವಿಷಯ. ಪಕ್ಷ ಮತ್ತು ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ.
-ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಡಿಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.