ಜವಾರಿ ಕುಟುಕಿನ ಚಂಪಾಕಲಿ ಚೇಳು : ಚಳವಳಿಯ ಚಳಕ್‌ ಮುರಿದ ಚಂಪಾ


Team Udayavani, Jan 11, 2022, 1:40 PM IST

ಜವಾರಿ ಕುಟುಕಿನ ಚಂಪಾಕಲಿ ಚೇಳು : ಚಳವಳಿಯ ಚಳಕ್‌ ಮುರಿದ ಚಂಪಾ

ಧಾರವಾಡ: ಅದು ಎಪ್ಪತ್ತರ ದಶಕದ ಒಂದು ಬೆಳಗು. ಕೆಸಿಡಿ ಮೈದಾನದಲ್ಲಿ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಕೆಂಪು ಕಟ್ಟಡಕ್ಕೆ ಮುಖ ಮಾಡಿ ನಡೆದುಕೊಂಡು ಹೋಗುತ್ತಿದ್ದ, ಅಖಂಡ ಧಾರವಾಡ ಜಿಲ್ಲೆಯ ಕಟ್ಟ ಕಡೆಯ ಮತ್ತು ದಟ್ಟ ದರಿದ್ರ ಹಳ್ಳಿಯಿಂದ ದೊಡ್ಡ ಸಾಲಿ ಕಲಿಯಲು ಬಂದಿದ್ದ ಅಪ್ಪಟ ಜವಾರಿ ಹುಡುಗ ದೈತ್ಯ ದೇಹಿಯೊಬ್ಬನಿಗೆ ಡಿಕ್ಕಿ ಹೊಡೆದ. ಡಿಕ್ಕಿಗೆ ಪ್ರತಿಯಾಗಿ ಹುಡುಗ ಹಿಂದಕ್ಕೆ ಸರಿದ. ವ್ಯಕ್ತಿ ಕೆಕ್ಕರಿಸಿಕೊಂಡು ನೋಡಿದ. ಹುಡುಗ, ಲಾರಿ ಎದುರಿಗೆ ಸ್ಕೂಟರ್‌ ಯಾವ ಲೆಕ್ಕಾ, ಅಲ್ಲೇನ್ರಿ? ಎಂದ. ದೈತ್ಯ ವ್ಯಕ್ತಿಯ ಸಿಟ್ಟು ಇಳಿದು, ನಗುತ್ತಲೇ ಆತ, ಇರ್ಲಿ ಹೋಗಪಾ ಅಂದನಂತೆ.

ಹೌದು. ಬಹುಶಃ ಪ್ರೊ|ಚಂಪಾ ಅವರಿಂದ ಧಾರವಾಡದಲ್ಲಿ ವಿಡಂಬಣೆಗೆ ಒಳಗಾದ ಮೊದಲ ವ್ಯಕ್ತಿ ಈತನೇ ಇರಬೇಕು. ಚಂಪಾ ಅವರು ಇಂತಹ ಸಣ್ಣ ಘಟನೆಗಳಲ್ಲಿ ತಮ್ಮನ್ನು ತಾವೇ ವಿಡಂಬನೆ ಮಾಡಿಕೊಂಡಾದರೂ ಸರಿ ಅದನ್ನು ಸೊಗಸಾದ ಸಾಹಿತ್ಯ ಮಾಡಿ ಬಿಸಾಕಿ ಬಿಡುತ್ತಿದ್ದರು. ಬೇಂದ್ರೆ ಧಾರವಾಡದ ಶಿಷ್ಠ ಭಾಷೆಯನ್ನಷ್ಟೇ ಆಯ್ದುಕೊಳ್ಳಲು ಸಫಲರಾದರೆ,
ಪ್ರೊ|ಚಂಪಾ ಅವರು ಗುದ್ದು, ಗುದ್ದಲಿ, ಮದ್ದಲಿ, ಪಳಾರಾ, ಉಗುಳು, ಉಂಡಿ, ಹೊಡತಾ, ಕಡತಾ, ಬಡತಾ, ಕಚ್ಚಿ, ಇಚ್ಚಿ, ಮಚ್ಚಿ, ನಾಯಿ, ಕಾಯಿ, ಬಾಯಿ ಹೀಗೆ ಈ ನೆಲದ ಎಲ್ಲಾ ಶಬ್ದಗಳನ್ನು ಬಿಡದೇ ಬಾರಿಸಿ ಹಾಕುತ್ತಿದ್ದರು. ಅವರ ಶಬ್ದಗಳ ಹೆಣೆತಕ್ಕೆ ಎಂತಹ ಗಂಭೀರ ವ್ಯಕ್ತಿಗಳು ಸಹ ಸಂಕಟ ಪಟ್ಟಾದರೂ ಸರಿ ನಗುವಂತೆ ಮಾಡುತ್ತಿದ್ದವು.

ಅಸಂಗತದ ಚೇಳಿನ ಕುಟುಕು: ಧಾರವಾಡದಲ್ಲಿ ರಾಷ್ಟ್ರಮಟ್ಟದಲ್ಲಿ ಕೂಡ ಹೆಸರು ಮಾಡುವ ಗಂಭೀರ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ರಚನೆಯಾಗುವ ಕಾಲಘಟ್ಟವಿತ್ತು. ಡಾ|ಗಿರೀಶ ಕಾರ್ನಾಡ, ಡಾ|ಕಂಬಾರ, ಡಾ|ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ|ಕಲಬುರ್ಗಿ ಸೇರಿ ಅನೇಕರು ಸ್ಪರ್ಧೆಗೆ ಇಳಿದ ಸಂದರ್ಭ. ಆದರೆ ಚಂಪಾ ಮಾತ್ರ ಗಂಭೀರತೆಯ ಹೊರತಾಗಿಯೂ ವಿಡಂಬನಾತ್ಮಕ ಶೈಲಿಯ, ಜವಾರಿ ಭಾಷೆಯ, ದೇಶಿ ಜನರ ಮನ ಮುಟ್ಟುವ ಮತ್ತು ಸಮಕಾಲಿನ ಸಮಸ್ಯೆಗಳ ಬಗ್ಗೆ ಮೈ ಪರಚಿಕೊಳ್ಳುವಂತೆ ಮಾಡಿ ಬಿಡುತ್ತಿದ್ದರು. ಟಿಂಗರ್‌ ಬುಡ್ಡಣ್ಣ, ಕೊಡೆಗಳು, ಕುಂಟಾ ಕುಂಟಾ ಕುರವತ್ತಿ, ಗೋಕರ್ಣದ ಗೌಡಶ್ಯಾನಿಯಂತಹ ಅಸಂಗತ ನಾಟಕಗಳ ಪ್ರದರ್ಶನ, ಅವುಗಳ ವಿಚಾರದ ಮೇಲೆ ಚರ್ಚೆ ಧಾರವಾಡದಲ್ಲಿ ನಡೆದರೂ ಇಡೀ ರಾಜ್ಯವೇ ಧಾರವಾಡದತ್ತ ಗಿರುಗುವಂತೆ ಮಾಡಿದ್ದವು. ಈ ನಾಟಕಗಳಲ್ಲಿನ ಮಾತುಗಳು ಹಾಸ್ಯದ ಮೂಲಕವೇ ತಪ್ಪಿತಸ್ಥರನ್ನು ಚೇಳಾಗಿ ಕುಟುಕುತ್ತಿದ್ದವು.

ಚಳವಳಿಯ ಚಳಕ್‌ ಮುರಿದ ಚಂಪಾ : ಸ್ವತಃ ಗುರುಗಳಾಗಿದ್ದ ಡಾ|ವಿ.ಕೃ.ಗೋಕಾಕರಿಗೆ ಗೋಕಾಕ್‌ ಗೋ ಬ್ಯಾಕ್‌ ಎಂದು ಪ್ರತಿಭಟನೆ ಬಿಸಿ ಮುಟ್ಟಿಸಲು ಚಂಪಾ ಹಿಂದೆ ಸರಿದಿರಲಿಲ್ಲ. ಡಾ|ಸರೋಜಿನಿ ಮಹಿಷಿ ವರದಿ ಜಾರಿ ಸಂಬಂಧ ಮತ್ತು ಕನ್ನಡಿಗರಿಗೆ ಕನ್ನಡಕ್ಕೆ ರಾಜ್ಯದಲ್ಲಿ ಅಗ್ರಸ್ಥಾನ ಸಿಕ್ಕುತ್ತಿಲ್ಲ ಎನ್ನುವ ಕೂಗು ರಾಜ್ಯಾದ್ಯಂತ ಕೇಳುವ ಸಂದರ್ಭವದು. ಇದಕ್ಕೂ ಧಾರವಾಡವೇ ವೇದಿಕೆಯಾಗಿತ್ತು. ಆ ವೇದಿಕೆಯಲ್ಲಿ ಚಂಪಾ ಕೂಡ ಇದ್ದರು. ಕನ್ನಡದ ಚಳವಳಿಯನ್ನು ಸಾಹಿತಿಗಳು ಮಾತ್ರ ಮಾಡಬೇಕೇ ಎಂಬ ವಕ್ರ ಪ್ರಶ್ನೆ ಎಸೆದಿದ್ದೇ ಪ್ರೊ|ಚಂಪಾ.
ಅಲ್ಲಿಂದ ಶುರುವಾಗಿದ್ದು ನೋಡಿ, ಡಾ|ರಾಜ್‌ಕುಮಾರ್‌ ಅವರು ಈ ಚಳವಳಿಗೆ ಬರಬೇಕು. ಅವರು ಕನ್ನಡದ ಕಂದ, ಹೀಗಾಗಿ ಕನ್ನಡ ತಾಯಿಗೆ ತೊಂದರೆಯಾದಾಗ ಮಗ ಅದನ್ನು ಪರಿಹರಿಸಲೇಬೇಕೆಂದು ವರನಟನನ್ನು ಸಹ ಚಂಪಾ ಚಳವಳಿಗೆ ಎಳೆದು ತಂದಿದ್ದು ಇತಿಹಾಸ. ಅದರಂತೆ ಕನ್ನಡ ಚಳವಳಿ ಕೇಂದ್ರ ಕ್ರಿಯಾ ಸಮಿತಿ, ಬಂಡಾಯ ಚಳವಳಿ, ದಲಿತ ಚಳವಳಿಯಲ್ಲಿ ಭಾಗಿಯಾಗಿದ್ದು ಅಷ್ಟೇ ಅಲ್ಲ ಅವುಗಳನ್ನು ಆರಂಭಿಸುವಲ್ಲಿ ಚಂಪಾ ಮುಂಚೂಣಿಯಲ್ಲಿದ್ದರು. ಇನ್ನು ಯಾವುದೇ ಹೋರಾಟಗಳಿಗೆ ಚಳಕ್‌(ಸ್ನಾಯು ಸೆಳೆತ )ಹಿಡಿದಾಗ
ಅದನ್ನು ಮುರಿದು ಮುನ್ನಡೆಸುತ್ತಿದ್ದರು ಚಂಪಾ.

ಇದನ್ನೂ ಓದಿ : ಯಾರಿಗಾಗಿ ನಿಯಮ..?: ಸಚಿವ ಕೆ.ಎಸ್.ಈಶ್ವರಪ್ಪರಿಂದ ಕೋವಿಡ್ ನಿಯಮ ಉಲ್ಲಂಘನೆ

ಟಿಂಗರ್‌ ಬುಡ್ಡಣ್ಣನೆಂಬ ಧಾರವಾಡಿ: ಚಂಪಾ ಅವರು ಯಾರನ್ನಾದರೂ ಟಾರ್ಗೆಟ್‌ ಮಾಡಿದರೆ ಮುಗಿಯಿತು. ಅವರ ಪಕ್ಕದಲ್ಲಿ ಕೂಡಲೂ ಸಹ ಟಾರ್ಗೆಟ್‌ಗೆ ಒಳಗಾದ ವ್ಯಕ್ತಿ ಹೆದರುತ್ತಿದ್ದರು. ಅವರ ಮಾತು ಮೊಣಚು, ಚೇಳಿನಂತೆ ಕುಟುಕಿ ಬಿಡುತ್ತಿದ್ದ ಅವರ ಜವಾರಿ ಮಾತಿನ ಶೈಲಿಗೆ ಯಾರೂ ಕಿಮಕ್‌ ಅನ್ನುವಂತಿರಲಿಲ್ಲ. ರಾಜ್ಯೋತ್ಸವದಲ್ಲಿ ಭಾಷಣ ಮಾಡುವ ದೊಡ್ಡ ವ್ಯಕ್ತಿಯೊಬ್ಬ, ಕನ್ನಡಿಗರಾದ ನಾವು ವೀರರೂ ಅಲ್ಲ, ಧೀರರೂ ಅಲ್ಲ, ಶಂಡರು..ಎಂದೆಲ್ಲ ಮಾತನಾಡುತ್ತಿದ್ದರಂತೆ. ವೇದಿಕೆಯ ಮೇಲಿದ್ದ ಚಂಪಾ ಅವರಿಗೆ ಒಂದು ಚೀಟಿ ಕಳುಹಿಸಿದ್ದರು.

ಚೀಟಿಯಲ್ಲಿ ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಕನ್ನಡದ ಸಮಸ್ಯೆ ಮಾಡಬೇಡಿ ಎಂದು ಬರೆದಿದ್ದರಂತೆ. ಮರು ಕ್ಷಣವೇ ಭಾಷಣಕಾರ ಮಾತು ನಿಲ್ಲಿಸಿದ್ದ. ನಾಟಕಗಳನ್ನು ಮುಂದಿಟ್ಟುಕೊಂಡು ಒಂದಿಷ್ಟು ಸಮಸ್ಯೆಗಳನ್ನು ತಿದ್ದಿ, ತೀಡಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದರು.

ಮಿರ್ಚಿ ತಿಂದು ಚರ್ಚೆ ಗೆದ್ದ ಪಾಟೀಲ್‌: ಚಂಪಾ ಅವರನ್ನು ಯಾರೂ ಕೇವಲವಾಗಿ ನೋಡುತ್ತಿರಲಿಲ್ಲ. ಹೋರಾಟದ ವಿಚಾರಗಳು ಬಂದಾಗ ಚಂಪಾ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಿದ್ದರು. ಶಿಷ್ಠ ಪರಂಪರೆಯೊಂದರ ಸರಪಳಿಯನ್ನೇ ತುಂಡರಿಸಿ ಮತ್ತು ಸಾರ್ವಜನಿಕವಾಗಿ ಧಿಕ್ಕರಿಸಿ ಅದನ್ನು ಧಕ್ಕಿಸಿಕೊಂಡ ಗಂಡುಗಲಿ ಚಂಪಾ ಎಂದರೆ ತಪ್ಪಾಗಲಿಕ್ಕಿಲ್ಲ. ಧಾರವಾಡದ ಎಲ್ಲಾ ಕ್ಷೇತ್ರಗಳಲ್ಲಿಯೂ ಶಿಷ್ಠರೇ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಬಂಡಾಯ ಸಾರಿದರಲ್ಲದೇ ಪಾಟೀಲಗಿರಿಗೂ ಕೈ ಹಾಕಿದ್ದರು. ಏಕವಚನದ ಮಾತುಗಳಿಗೆ ಎರಡಲಗಿನ ಕತ್ತಿಯಿಂದ
ತಿವಿಯುವ ಅವರ ವಾಕ್‌ಚಾತುರ್ಯಕ್ಕೆ ನಾ..ನೀ… ಎನ್ನುವ ಪಂಡಿತರೆಲ್ಲರೂ ಸೋತು ಸುಣ್ಣವಾಗಿ ಹೋಗುತ್ತಿದ್ದರು. ಚಂಪಾ ಅವರ ಚರ್ಚೆಗೆ ಬರೀ ಸಾಹಿತ್ಯ ವೇದಿಕೆ, ಕಾರ್ಯಕ್ರಮಗಳೇ ಆಗಬೇಕೆಂದೇನು ಇರಲಿಲ್ಲ. ಎಲ್‌ಇಎ ಕ್ಯಾಂಟೀನ್‌ನಲ್ಲಿ ಗಿರಿಮಿಟ್‌, ಮಿರ್ಚಿ ತಿನ್ನುವಾಗಲೂ ಅವರ ಸಹಚರರನ್ನು ಚಂಪಾ ಗಂಭೀರವಾಗಿಯೇ ಪರಿಗಣಿಸಿ ಗುದ್ದು ಕೊಡುತ್ತಿದ್ದರು.
ಅವರ ಕಣ್ಣಿಗೆ ಬೀಳುವ ಎಲ್ಲವನ್ನೂ ಕುಟುಕಿ ಬಿಡುವ ಪ್ರವೃತ್ತಿ ಇದಕ್ಕೆ ಕೆಸಿಡಿಯ ಫ್ಯಾರನ್‌ ಹಾಲ್‌ಗೆ ಹೋಗುವಾಗಿನ ಎರಡು ಕಬ್ಬಿಣದ ಸಿಂಹಗಳು ಹೊರತಾಗಿಲ್ಲ.

ಲಿಂಗ ಧಾರಣೆ ತ್ಯಜಿಸಿದ್ದ ಚಂಪಾ
ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದ ಪೀರಸಾಬ್‌ ಬಾವಿ ಬಗ್ಗೆ ಚಂಪಾ ಅವರು ಅಪಾರ ಒಲವು ಹೊಂದಿದ್ದರು. ಅವರ ಬದುಕಿಗೆ ತಿರುವು ನೀಡಿದ್ದೇ ಆ ಬಾವಿಯಂತೆ. ಇದನ್ನು ಸ್ವತಃ ಚಂಪಾ ಅವರೇ ಅನೇಕ ಬಾರಿ ತಮ್ಮೊಂದಿಗೆ ಹಂಚಿಕೊಂಡಿದ್ದಾರೆಂದು ಅವರ ಸ್ನೇಹಿತರು ಸ್ಮರಿಸುತ್ತಾರೆ. ಬಾಲ್ಯದಲ್ಲಿದ್ದಾಗ ಗ್ರಾಮದಲ್ಲಿರುವ ಪೀರಸಾಬ್‌ ಬಾವಿಗೆ ಚಂಪಾ ಅವರ ಸಹೋದರ ಮಾವನವರು ನಿತ್ಯವೂ ಸ್ನಾನಕ್ಕೆಂದು ಕರೆದೊಯ್ಯುತ್ತಿದ್ದರು. ಒಂದು ದಿನ ಸ್ನಾನ ಮಾಡುತ್ತಿದ್ದಾಗ ಕೊರಳಲ್ಲಿದ್ದ ಲಿಂಗು ಬಾವಿಯಲ್ಲಿ ಬಿದ್ದಿತು. ಆಗ ಮಾವ ಚಂಪಾರನ್ನು ಹೊಡೆದರಂತೆ. ತನ್ನನ್ನು ಶಿಕ್ಷಿಸುವ ಈ ಲಿಂಗು ಅಗತ್ಯವೇ ಇಲ್ಲ ಎಂದು ಅಂದಿನಿಂದ ಲಿಂಗಧಾರಣೆಯನ್ನೇ ಕೈಬಿಟ್ಟರಂತೆ. ಈ ಬಾವಿ ಕಲಿಸಿದ ಪಾಠವೇ ಮುಂದೆ ತಮ್ಮನ್ನು ಚಾರ್ವಾಕನನ್ನಾಗಿ
ಮಾಡಿತೆಂದು ಚಂಪಾ ಹೇಳಿಕೊಂಡಿದ್ದರು.

ಉತ್ತರ ಉತ್ತುಂಗಕ್ಕೇರಿಸಿದ “ಪಂಚ್‌’ ಪಾಂಡವರ ಪಡೆ
50ರ ದಶಕದವರೆಗೂ ಹಳೆಮೈಸೂರು ಪ್ರಾಂತ್ಯ ಎಲ್ಲದರಲ್ಲೂ ಮುಂಚೂಣಿಯಲ್ಲಿತ್ತು. ರಾಜಧಾನಿ ಕೂಡ ಅಲ್ಲಿಯೇ ಆಯಿತು. ಚಂಪಾ ದೂರದೃಷ್ಟಿಯ ಬಂಡಾಯಗಾರರಾಗಿದ್ದರು. ಗಂಭೀರ ಬರಹಗಳನ್ನು ಸಹಿತ ಹಾಸ್ಯಕ್ಕೆ ತಿರುಗಿಸಿ ಅದನ್ನು ವಕ್ರವಾಗಿಸಿ ಬಿಡುತ್ತಿದ್ದರು. ಈ ಭಯ ಒಂದು ಕಾಲಕ್ಕೆ ಧಾರವಾಡದ ಎಲ್ಲಾ ಸಾಹಿತಿಗಳು, ವಿಮರ್ಶಕರಿಗೂ ಇತ್ತು. ಆಗಲೇ ಜಾರಿಯಲ್ಲಿದ್ದ ಸಾಹಿತ್ಯ ಬ್ರಿಗೇಡ್‌ ವೊಂದನ್ನು ತುಂಡರಿಸಲು ಬಹುಭಾಷಿಕ, ಬಹು ನೆಲೆಯ ಸಾಹಿತ್ಯ ಸೈನಿಕರನ್ನು ಚಂಪಾ ಸಿದ್ಧಗೊಳಿಸಿದ್ದರೇನೋ. ಡಾ|ಎಂ.ಎಂ.ಕಲಬುರ್ಗಿ, ಡಾ|ಚಂದ್ರಶೇಖರ ಕಂಬಾರ, ಡಾ|ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ|ಗಿರಡ್ಡಿ ಗೋವಿಂದರಾಜ್‌ ಹಾಗೂ ಪ್ರೊ|ಚಂಪಾ. ಈ ಐವರಿಂದಲೇ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಸಂಕ್ರಮಣ ಕಾಲ ಮತ್ತು ಎಲ್ಲರೂ ಸೇರಲು ಸ್ನೇಹ ಕುಂಜ ಸಜ್ಜಾಯಿತು. ಎಲ್ಲರದ್ದೂ ದೇಶಿಯತೆ ಮತ್ತು ಅಪ್ಪಟ ಧಾರವಾಡಿ ಜವಾರಿ ಸಾಹಿತ್ಯ ಕೃಷಿ. ಧಾರವಾಡ ಎಂದರೆ ನನ್ನ ತವರು ಮನೆ ಎನ್ನುತ್ತಿದ್ದ ಚಂಪಾರಿಗೆ ಈ ನೆಲದ ಪ್ರೀತಿ ಸದಾ ಇದ್ದೇ ಇತ್ತು. ಇವರಿಂದಾಗಿ ಇಡೀ ಕನ್ನಡದ ಇಡೀ ದಕ್ಷಿಣ ಭಾಗ ಉತ್ತರ ಕರ್ನಾಟಕದತ್ತ ಮುಖ ತಿರುಗಿಸುವುದು ಅನಿವಾರ್ಯವಾಯಿತು.

– ಡಾ|ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.