Chennai: ಮಿಚಾಂಗ್‌ಗೆ ನಲುಗಿದ ಚೆನ್ನೈ- ವಿದ್ಯುತ್ ಸಂಪರ್ಕ, ನೀರು ಪೂರೈಕೆ ಇಲ್ಲ
ಸುರಕ್ಷಿತ ಜಾಗಕ್ಕೆ ತೆರಳುತ್ತಿದ್ದಾರೆ ಜನ
Team Udayavani, Dec 7, 2023, 12:01 AM IST
ಚೆನ್ನೈ: ಮಿಚಾಂಗ್ ಚಂಡಮಾರುತದಿಂದ ತಮಿಳುನಾಡು ರಾಜಧಾನಿ ಚೆನ್ನೈ ಅಕ್ಷರಶಃ ನಲುಗಿ ಹೋಗಿದೆ. ಪ್ರವಾಹದಿಂದ ಲಕ್ಷಾಂತರ ಮಂದಿಯ ಜೀವನ ಸಂಕಷ್ಟಕ್ಕೆ ಸಿಲುಕಿದೆ. ರಸ್ತೆಗಳು, ಸೇತುವೆಗಳು, ಕಟ್ಟಡಗಳಿಗೆ ಅಪಾರ ಪ್ರಮಾಣದ ಹಾನಿ ಯಾಗಿದೆ. ಚೆನ್ನೈ ಮಾತ್ರವಲ್ಲದೇ ತಿರುವಳ್ಳೂರ್, ಕಾಂಚಿಪುರಂ ಮತ್ತು ಚೆಂಗಲ್‌ಪೇಟೆ ಜಿಲ್ಲೆಗಳಲ್ಲೂ ಧಾರಾಕಾರ ಮಳೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಬುಧವಾರ ಚೆನ್ನೈಯಲ್ಲಿ ಮಳೆ ಕೊಂಚ ತಗ್ಗಿತ್ತು.
ಜನಜೀವನ ಅಸ್ತವ್ಯಸ್ತ: ಭಾರೀ ಮಳೆಯಿಂದಾಗಿ ಚೆನ್ನೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತ ಗೊಂಡಿವೆ. ವಿದ್ಯುತ್ ಸಂಪರ್ಕ ಮತ್ತು ನೀರಿನ ಪೂರೈಕೆ ಇಲ್ಲದೇ ಜನಜೀವನ ಅಸ್ತವ್ಯಸ್ತವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿಪತ್ತು ನಿರ್ವಹಣ ತಂಡಗಳು ಪರಿಹಾರ ಕ್ರಮಗಳನ್ನು ಮುಂದುವರಿಸಿವೆ. ರಕ್ಷಣ ಸಿಬಂದಿಯು ಜಲಾವೃತಗೊಂಡಿರುವ ಸ್ಥಳದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಹೆಲಿಕಾಪ್ಟರ್‌ಗಳ ಮೂಲಕ ಆಹಾರ ಪೊಟ್ಟಣಗಳ ಪೂರೈಕೆ ಮುಂದುವರಿದಿದೆ. ಸ್ವಯಂ ಸೇವಾ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಕೆಲವು ಸೆಲೆಬ್ರೆಟಿಗಳು ಸಂತ್ರಸ್ತರ ಸಹಾಯದಲ್ಲಿ ನಿರತರಾಗಿದ್ದಾರೆ.
5,060 ಕೋಟಿ ರೂ. ಪರಿಹಾರಕ್ಕೆ ಮನವಿ: ಮಿಚಾಂಗ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದ್ದು, ಮಧ್ಯಾಂತರ ಪರಿಹಾರವಾಗಿ ಕೇಂದ್ರ ಸರಕಾರ 5,060 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಬೇಕು ಎಂದು ತಮಿಳುನಾಡು ಸರಕಾರ ಮನವಿ ಮಾಡಿದೆ.
ಈ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಡಿಎಂಕೆ ಸಂಸದ ಟಿ.ಆರ್.ಬಾಲು ಅವರು ಪ್ರಧಾನಿ ಅವರಿಗೆ ಹಸ್ತಾಂತರಿಸಲಿದ್ದಾರೆ. ಪ್ರವಾಹದಿಂದ ಉಂಟಾಗಿರುವ ಆಸ್ತಿಯ ಹಾನಿ ಕುರಿತ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಈ ಸಂಬಂಧ ವಿವರವಾದ ವರದಿಯನ್ನು ಅನಂತರ ಸಿದ್ಧಪಡಿಸಲಿದ್ದು, ಹೆಚ್ಚುವರಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ತಮಿಳುನಾಡು ಸರಕಾರದ ಪ್ರಕಟನೆ ತಿಳಿಸಿದೆ.
ನೀರು ಇಂಗುವ ತಂತ್ರಜ್ಞಾನ ಬಳಸಿ: ಧಾರಾಕಾರ ಮಳೆ ಸಂದರ್ಭದಲ್ಲಿ ಡಾಮರು ಮತ್ತು ಸಿಮೆಂಟ್ ರಸ್ತೆಯಲ್ಲಿ ನೀರು ಇಂಗದೇ, ಸರಾಗವಾಗಿ ಹರಿದು ಹೋಗುತ್ತದೆ. ಇದು ನೆರೆ, ಪ್ರವಾಹಕ್ಕೆ ಕಾರಣವಾಗಲಿದೆ. ವಿದೇಶದಲ್ಲಿ ಡಾಮರು ರಸ್ತೆಯಲ್ಲಿ ನೀರು ಇಂಗುವ ತಂತ್ರಜ್ಞಾನ ಬಳಸುತ್ತಾರೆ. ಇದರಿಂದ ಪ್ರಭಾವಿತರಾದ ಉದ್ಯಮಿ ಆನಂದ್ ಮಹೀಂದ್ರಾ ಅವರು ನಮ್ಮ ದೇಶದಲ್ಲೂ ಈ ತಂತ್ರಜ್ಞಾನ ಬಳಕೆಗೆ ಸಲಹೆ ನೀಡಿದ್ದಾರೆ. ಈ ಸಂಬಂಧ ಇದರ ವೀಡಿಯೋ ಅನ್ನು ಟ್ವಿಟರ್(ಎಕ್ಸ್)ನಲ್ಲಿ ಹಂಚಿಕೊಂಡಿದ್ದಾರೆ.
“ವೀಡಿಯೋದಲ್ಲಿ ತೋರಿಸುವಂತೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಡಾಮರು ರಸ್ತೆಗಳನ್ನು ನಿರ್ಮಿಸಬೇಕು. ಇದರಿಂದ ಪ್ರವಾಹ ಮತ್ತು ಧಾರಾಕಾರ ಮಳೆಯ ಸಂದರ್ಭದಲ್ಲಿ ನೀರು ರಸ್ತೆಯಲ್ಲಿ ಹರಿದುಹೋಗದೇ, ಅಲ್ಲಿಯೇ ಇಂಗಿ ಅಂತರ್ಜಲವಾಗಿ ಪರಿವರ್ತನೆಯಾಗುತ್ತದೆ. ನೆರೆಯೂ ಸೃಷ್ಟಿಯಾಗುವುದಿಲ್ಲ. ಈ ತಂತ್ರಜ್ಞಾನವು ಪ್ರಯೋಜನಕಾರಿಯಾಗಿದೆ’ ಎಂದು ಚೆನ್ನೈ ಪ್ರವಾಹವನ್ನು ಪ್ರಸ್ತಾವಿಸಿ ಆನಂದ್ ಮಹೀಂದ್ರಾ ಸಲಹೆ ನೀಡಿದ್ದಾರೆ.
ಒಡಿಶಾ, ಆಂಧ್ರದಲ್ಲಿ ತೀವ್ರತೆ ಕಳೆದುಕೊಂಡ ಮಾರುತ
ಮಿಚಾಂಗ್ ಚಂಡಮಾರುತವು ತೆಲಂಗಾಣ, ಛತ್ತೀಸ್‌ಗಢ, ಆಂಧ್ರಪ್ರದೇಶ, ಒಡಿಶಾಗೂ ಕಾಲಿಟ್ಟಿದೆ. ಆದರೆ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಮಂಗಳವಾರ ರಾತ್ರಿಯಿಂದ ಸತತ 6 ಗಂಟೆಗಳವರೆಗೆ ಚಂಡಮಾರುತವು ಗಂಟೆಗೆ 11 ಕಿ.ಮೀ. ವೇಗದಲ್ಲಿ ಈಶಾನ್ಯ ತೆಲಂಗಾಣ, ದಕ್ಷಿಣ ಛತ್ತೀಸ್‌ಗಢ, ದಕ್ಷಿಣ ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿಯಲ್ಲಿ ಹಾದು ಹೋಗಿದೆ. ಇದರ ಪರಿಣಾಮವಾಗಿ ವಿಶಾಖಪಟ್ಟಣ, ವಿಜಯನಗರಂ, ಅಲ್ಲುರಿ ಸೀತಾರಾಮ ರಾಜು, ಅಂಕಾಪಲ್ಲಿ, ಕಾಕಿನಾಡ, ಕೋನಸೀಮಾ ಮತ್ತು ಎಲ್ಲೂರು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ. ಆಂಧ್ರಪ್ರದೇಶದ ವಿವಿಧ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಹನ ಕಂಪೆನಿಗಳ ಸಹಾಯ
ಚೆನ್ನೈ: ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಮಿಚಾಂಗ್ ಚಂಡಮಾರುತದ ಆರ್ಭಟದಿಂದ ಜನಜೀವನ ತತ್ತರಿಸಿರುವ ನಡುವೆಯೇ ಖ್ಯಾತ ವಾಹನ ತಯಾರಕ ಸಂಸ್ಥೆ ಮಾರುತಿ ಸುಜುಕಿ ತನ್ನ ಗ್ರಾಹಕರ ನೆರವಿಗೆ ನಿಂತಿದೆ. ಪ್ರವಾಹ ಪರಿಸ್ಥಿತಿಗಳಲ್ಲಿ ಗ್ರಾಹಕರು ಹೇಗೆ ಅವರ ವಾಹನಗಳನ್ನು ರಕ್ಷಣೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸರಿಸುಮಾರು 7 ಲಕ್ಷಕ್ಕೂ ಅಧಿಕ ಮಂದಿಗೆ ಎಚ್ಚರಿಕೆ ಮತ್ತು ರಕ್ಷಣಾತ್ಮಕ ಕ್ರಮಗಳ ಬಗ್ಗೆ ಸಂದೇಶ ರವಾನಿಸಿದೆ. ಮಾರುತಿ ಮಾತ್ರವಲ್ಲ ಆಡಿ, ಮಹೀಂದ್ರಾ, ಹ್ಯುಂಡಾಯ್‌ಗಳೂ ಸಹಾಯಹಸ್ತ ಚಾಚಿವೆ. ಅಷ್ಟೇ ಅಲ್ಲದೇ, ಯಾವ ಪ್ರದೇಶಗಳಲ್ಲಿ ಗ್ರಾಹಕರು ಸಮಸ್ಯೆಗೆ ಸಿಲುಕಿದ್ದಾರೋ ಅಂಥ ಪ್ರದೇಶಗಳ ಸಮೀಪದಲ್ಲಿಯೇ ಸಹಾಯ ಒದಗಿಸುವ ಸೇವಾ-ನಿರ್ವಾಹಕರನ್ನು ನಿಯೋಜಿಸಿ ಅವರ ಫೋನ್ ನಂಬರ್‌ಗಳನ್ನೂ ಗ್ರಾಹಕರ ಜತೆಗೆ ಹಂಚಿಕೊಂಡಿವೆ.
ಮಿಚಾಂಗ್ ಚಂಡಮಾರುತ ದಿಂದ ಪ್ರಾಣ ಕಳೆದಕೊಂಡವರ ಕುಟುಂಬಗಳೊಂದಿಗೆ ನಾವಿದ್ದೇವೆ. ಸಂತ್ರಸ್ತರನ್ನು ರಕ್ಷಿಸಲು ಅಧಿಕಾರಿಗಳು, ಸಿಬಂದಿ ಸ್ಥಳದಲ್ಲಿ ದಣಿವರಿಯದೆ ಕಾರ್ಯನಿರ್ವಹಿಸುತ್ತಿದ್ದಾರೆ.
ನರೇಂದ್ರ ಮೋದಿ, ಪ್ರಧಾನಿ
ನನ್ನ ಮನೆಯು ಚೆನ್ನೈಯ ಪಶ್ಚಿಮ ಮಾಬಲಂನ ಪೋಸ್ಟಲ್ ಕಾಲನಿಯಲ್ಲಿದೆ. ಈ ಪ್ರದೇಶದಲ್ಲಿ ಕಳೆದ 30 ಗಂಟೆಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಉಳಿದ ಪ್ರದೇಶಗಳ ಗತಿ ಏನು ಎಂಬುದನ್ನು ಊಹಿಸಲು ಅಸಾಧ್ಯ. ನಮ್ಮ ಮುಂದೆ ಯಾವ ಆಯ್ಕೆ ಉಳಿದಿದೆ ಎಂಬುದು ತಿಳಿಯುತ್ತಿಲ್ಲ.
ಆರ್.ಅಶ್ವಿನ್, ಕ್ರಿಕೆಟರ್
ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೇಂದ್ರ ಸರಕಾರ ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಸ್ಥಳಕ್ಕೆ ವಿಪತ್ತು ನಿರ್ವಹಣ ತಂಡಗಳನ್ನು ಕಳುಹಿಸಬೇಕು.
ಟಿ.ಆರ್.ಬಾಲು, ಡಿಎಂಕೆ ಸಂಸದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.