Chhattisgarh Election: ಕಾಂಗ್ರೆಸ್ ಓಲೈಕೆ- ಕಮಲದ್ದು ವಿಭಜನೆ
Team Udayavani, Oct 16, 2023, 10:52 PM IST
ಹೊಸದಿಲ್ಲಿ: “ಮುಂದಿನ ತಿಂಗಳು ಛತ್ತೀಸ್‌ಗಡದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಅದು ಮತ್ತೆ ಓಲೈಕೆ ರಾಜಕಾರಣವನ್ನು ನೆಚ್ಚಿಕೊಳ್ಳಲಿದೆ. ಅಲ್ಲದೇ, ರೆಸ್ಟಾರೆಂಟ್‌ಗಳ ಆಹಾರ ಸರಪಳಿಯ ಮಾದರಿಯಲ್ಲೇ ಕಾಂಗ್ರೆಸ್ ದೆಹಲಿಯವರೆಗೂ ಭ್ರಷ್ಟಾಚಾರದ ಸರಪಳಿಯನ್ನು ವಿಸ್ತರಿಸಿಕೊಂಡಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರಿದ್ದಾರೆ.
ಸೋಮವಾರ ಛತ್ತೀಸ್‌ಗಡದ ರಾಜನಂದಗಾಂವ್‌ನಲ್ಲಿ ರ್ಯಾಲಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ, ನಾವು ಭ್ರಷ್ಟರಿಂದ ಪ್ರತಿಯೊಂದು ಪೈಸೆಯನ್ನೂ ವಸೂಲು ಮಾಡುತ್ತೇವೆ ಮತ್ತು ಅವರೆಲ್ಲರನ್ನೂ ತಲೆಕೆಳಗಾಗಿ ನೇತು ಹಾಕುತ್ತೇವೆ ಎಂದಿದ್ದಾರೆ.
ಸಿಎಂ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಶಾ, ಬಿರಾನ್‌ಪುರ ಗ್ರಾಮದಲ್ಲಿ ನಡೆದ ಕೋಮುಗಲಭೆ ಬಗ್ಗೆ ಪ್ರಸ್ತಾಪಿಸಿ, ನೀವು ಛತ್ತೀಸ್‌ಗಡವನ್ನು ಕೋಮುಗಲಭೆಯ ಕೇಂದ್ರಸ್ಥಾನವಾಗಿಸಲು ಬಯಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸದಾ ಓಲೈಕೆ ರಾಜಕಾರಣವನ್ನೇ ನಡೆಸುತ್ತಾ ಬಂದಿದೆ. ಮುಂದೆಯೂ ಅದನ್ನೇ ನಡೆಸುತ್ತದೆ ಎಂದಿದ್ದಾರೆ.
10 ಗ್ರಾಂ ಚಿನ್ನ, ಉಚಿತ ಇಂಟರ್ನೆಟ್?: ವಿವಾಹದ ವೇಳೆ ಅರ್ಹ ಫಲಾನುಭವಿಗಳಿಗೆ 10 ಗ್ರಾಂ ಚಿನ್ನ, 1 ಲಕ್ಷ ರೂ. ಆರ್ಥಿಕ ನೆರವು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ಸೌಲಭ್ಯ ಸೇರಿದಂತೆ ಹಲವು ಹೊಸ ಘೋಷಣೆಗಳು ತೆಲಂಗಾಣ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಬಿಆರ್‌ಎಸ್ ಸರ್ಕಾರವು ಕಲ್ಯಾಣ ಲಕ್ಷ್ಮಿ ಮತ್ತು ಶಾದಿ ಮುಬಾರಕ್ ಯೋಜನೆಯನ್ವಯ ವಧುವಿಗೆ ತಲಾ 1,00,116 ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.
ದಿಲ್ಲಿಗೂ ತಲುಪಿದೆ ಕೆಸಿಆರ್ ಭ್ರಷ್ಟಾಚಾರದ ಸುದ್ದಿ
ಸಿಎಂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರದಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದ್ದು, ಕೆಸಿಆರ್ ಕುಟುಂಬದ ಭ್ರಷ್ಟಾಚಾರದ ಸುದ್ದಿ ಕೇವಲ ತೆಲಂಗಾಣ ಮಾತ್ರವಲ್ಲ ದೆಹಲಿಯವರೆಗೂ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ತೆಲಂಗಾಣದ ಜಮ್ಮಿಕುಂಟದಲ್ಲಿ ರ್ಯಾಲಿ ನಡೆಸಿ ಮಾತನಾಡಿದ ಅವರು, 10 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ ಸೀಮಿತಗೊಂಡಿದ್ದು, ಅದು ಖಾಸಗಿ ಲಿಮಿಟೆಡ್‌ಕಂಪೆನಿಯಾಗಿ ಉಳಿದುಬಿಟ್ಟಿತು ಎಂದು ಆರೋಪಿಸಿದ್ದಾರೆ.
ಎಲ್ಲ ವರ್ಗಗಳ ಜನರು ಅಭಿವೃದ್ಧಿಯಾಗುವವರೆಗೂ ನಾನು ವಿರಮಿಸುವುದಿಲ್ಲ. ನಾನು ಬದುಕಿರುವವರೆಗೂ ತೆಲಂಗಾಣವು “ಜಾತ್ಯತೀತ’ ರಾಜ್ಯವಾಗಿ ಉಳಿಯಲಿದೆ.
ಕೆ. ಚಂದ್ರಶೇಖರ್ ರಾವ್, ತೆಲಂಗಾಣ ಸಿಎಂ
ಭಾರತವು ಎಂದಿಗೂ ವಿಭಜನೆ ಆಗಬಾರದಿತ್ತು. ಇದೊಂದು ಐತಿಹಾಸಿಕ ಪ್ರಮಾದ. ನೀವೇನಾದರೂ ಚರ್ಚೆ ಏರ್ಪಡಿಸುವುದಿದ್ದರೆ ಏರ್ಪಡಿಸಿ, ದೇಶದ ವಿಭಜನೆಗೆ ಯಾರು ಕಾರಣ ಎಂಬುದನ್ನು ತಿಳಿಸುತ್ತೇನೆ.
ಅಸಾದುದ್ದೀನ್ ಒವೈಸಿ, ಎಐಎಂಐಎಂ ಮುಖ್ಯಸ್ಥ
ಕಾಂಗ್ರೆಸ್ ಓಲೈಕೆ
“ದೇಶಾದ್ಯಂತ ಜಾತಿಗಣತಿ ನಡೆಸಿ ಎಂದು ನಾವು ಕೇಳಿಕೊಂಡರೆ, ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ವಿರುದ್ಧ ವಾಗ್ಧಾಳಿ ನಡೆಸುತ್ತಾರೆ. ನಾವು ಈ ಪ್ರಕ್ರಿಯೆಗೆ ಆಗ್ರಹಿಸುವ ಮೂಲಕ ಜನರನ್ನು ವಿಭಜಿಸುತ್ತಿದ್ದೇವೆ ಎಂದು ಆರೋಪಿಸುತ್ತಾರೆ. ಆದರೆ, ವಾಸ್ತವದಲ್ಲಿ ಧರ್ಮ, ಜಾತಿಯ ಆಧಾರದಲ್ಲಿ ದೇಶದ ಜನರನ್ನು ವಿಭಜಿಸುತ್ತಿರುವುದು ಬಿಜೆಪಿಯೇ ಹೊರತು ನಾವಲ್ಲ.’
ಹೀಗೆಂದು ಹೇಳಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಚುನಾವಣೆಯ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಸೋಮವಾರ ಕಾಂಗ್ರೆಸ್‌ನ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. “ಮೋದಿಯವರು ಇತ್ತೀಚೆಗೆ ತಮ್ಮ ಭಾಷಣದಲ್ಲಿ ಕೆಂಪು ಡೈರಿಯ ಬಗ್ಗೆ ಪ್ರಸ್ತಾಪಿಸಿದ್ದರು.
ಈಗ ನಾನು ಹೇಳುತ್ತೇನೆ ಕೇಳಿ: ಈ ವಿಧಾನಸಭಾ ಚುನಾವಣೆಯಲ್ಲೂ ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುತ್ತದೆ ಎಂದು ಆ ಡೈರಿಯಲ್ಲಿ ಬರೆದಿದೆ’ ಎಂದು ಖರ್ಗೆ ಹೇಳಿದರು. ಅಲ್ಲದೇ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರಅಧಿಕಾರಕ್ಕೇರಿದರೆ, 2024ರ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದೂ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಮಿಜೋರಾಂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ನ.7ರಂದು ಮಿಜೋರಾಂ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ 39 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಸೋಮವಾರ ಬಿಡುಗಡೆ ಮಾಡಿದೆ. ರಾಜ್ಯಕ್ಕೆ ರಾಹುಲ್ ಭೇಟಿಯ ದಿನವೇ ಈ ಪಟ್ಟಿಯೂ ಬಿಡುಗಡೆಯಾಗಿದೆ. ಎಂಎನ್‌ಎಫ್ ಮತ್ತು ಝೆಡ್‌ಪಿಎಂ ಈಗಾಗಲೇ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಬಿಜೆಪಿ ಪಟ್ಟಿ ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ. ಇದೇ ವೇಳೆ, ಆಮ್ ಆದ್ಮಿ ಪಕ್ಷವು ಈ ಬಾರಿ ಮಿಜೋರಾಂನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಸೋಮವಾರ ಘೋಷಿಸಿದೆ.
ಮಣಿಪುರಕ್ಕಿಂತಲೂ ಇಸ್ರೇಲ್ ಬಗ್ಗೆ ಚಿಂತೆ
“ಪ್ರಧಾನಿ ಮೋದಿಯವರಿಗೆ ನಮ್ಮದೇ ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕಿಂತಲೂ ಇಸ್ರೇಲ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆಯೇ ಚಿಂತೆಯಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 2 ದಿನಗಳ ಮಿಜೋರಾಂ ಭೇಟಿಯನ್ನು ಆರಂಭಿಸಿರುವ ರಾಹುಲ್, ಸೋಮವಾರ ಐಜ್ವಾಲ್‌ನಲ್ಲಿ ರ್ಯಾಲಿ ಹಾಗೂ ಪಾದಯಾತ್ರೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ಈಗ ಮಣಿಪುರವು ಒಂದು ರಾಜ್ಯವಾಗಿ ಉಳಿದಿಲ್ಲ. ಅದನ್ನು ಜನಾಂಗೀಯ ಆಧಾರದಲ್ಲಿ 2 ರಾಜ್ಯಗಳಾಗಿ ವಿಂಗಡಣೆ ಮಾಡಲಾಗಿದೆ. ಬಿಜೆಪಿಯು ಮಣಿಪುರವನ್ನು ನಾಶ ಮಾಡಿದೆ. ಪ್ರಧಾನಿ ಮೋದಿ ಮತ್ತು ಭಾರತ ಸರ್ಕಾರವು ಇಸ್ರೇಲ್ ಮೇಲೆ ತೋರಿಸುತ್ತಿರುವ ಕಾಳಜಿಯನ್ನು ಮಣಿಪುರದ ಮೇಲೆ ಏಕೆ ತೋರಿಸುತ್ತಿಲ್ಲ ಎಂದೇ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.