ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದು 76ನೇ ಹುಟ್ಟುಹಬ್ಬದ ಸಂಭ್ರಮ


Team Udayavani, Aug 3, 2023, 7:10 AM IST

siddu leader

ಸಮಾಜವಾದಿ ಚಳವಳಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು 76ನೇ ಹುಟ್ಟುಹಬ್ಬದ ಸಂಭ್ರಮ. ರಾಮಮನೋಹರ ಲೋಹಿಯಾ ಅವರಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶ ಮಾಡಿರುವ ಸಿದ್ದರಾಮಯ್ಯ ಅವರು, ಸದ್ಯ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. 14 ಬಜೆಟ್‌ಗಳನ್ನು ಮಂಡಿಸಿ ದಾಖಲೆಗಳನ್ನೂ ಬರೆದಿದ್ದಾರೆ. 2013ರಲ್ಲಿನ ಸರ್ಕಾರದಲ್ಲಿ ಬಡವರ ಪರವಾಗಿ ಸಿದ್ದರಾಮಯ್ಯ ಅವರು ಸಾಕಷ್ಟು ಯೋಜನೆಗಳನ್ನು ತಂದಿದ್ದರು. ಈಗಲೂ ಗ್ಯಾರಂಟಿಗಳ ಮೂಲಕ ಜನರ ಆಶೋತ್ತರ ಈಡೇರಿಸುವತ್ತ ಹೊರಟಿದ್ದಾರೆ.

“ನುಡಿದಂತೆ ನಡೆಯುವ” ಮೌಲ್ಯಾಧಾರಿತ ರಾಜಕಾರಣದ ಕೊಂಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗ 76ನೇ ವಸಂತದ ಸಂಭ್ರಮ. ಸಮಾಜವಾದಿ ಹಿನ್ನೆಲೆಯಲ್ಲಿ ಬೆಳೆದು ಬಂದ ಸಿದ್ದರಾಮಯ್ಯ ಸವಾಲಿನ ರಾಜಕೀಯ ಹಾದಿಯನ್ನು ಸವೆಸಿ ಇದೀಗ ಎರಡನೇ ಬಾರಿಗೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಗ್ಯಾರಂಟಿ ಯೋಜನೆಗಳ ಜಾರಿ ಹಾಗೂ ಸಂಪನ್ಮೂಲ ಕ್ರೋಡೀಕರಣ ಎರಡರಲ್ಲೂ ಸೈ ಎನ್ನಿಸಿಕೊಳ್ಳುತ್ತಲೇ ರಾಷ್ಟ್ರ ನಾಯಕರ ದೃಷ್ಟಿಯನ್ನು ಈಗ ಕರ್ನಾಟಕದತ್ತ ಸೆಳೆದಿದ್ದಾರೆ.

ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆ ಎಂದರೆ ಚುನಾವಣೆಯ ಸರಕು. ಅದರಿಂದಾಚೆಗೆ ಅದು ಮರೆತು ಮೂಲೆಗೆ ಸೇರುವ ಕಡತ. ಆದರೆ ಸಿದ್ದರಾಮಯ್ಯ ಮಾತ್ರ ಈ ವಿಚಾರದಲ್ಲಿ ವಿಭಿನ್ನ. ತಮ್ಮ ಮೊದಲ ಅವಧಿಯಲ್ಲೂ ಪ್ರಣಾಳಿಕೆ ಆಧರಿಸಿಯೇ ಆಡಳಿತ ನಡೆಸಿದ ಈ ಬಾರಿಯೂ ಅದೇ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಲೂ ಸಿದ್ದರಾಮಯ್ಯ ಪ್ರಣಾಳಿಕೆಯ ಘೋಷಣೆ ಜಾರಿಗೆ ಮೊದಲ ಆದ್ಯತೆ ನೀಡಿದರು. ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಅನ್ನಭಾಗ್ಯ ಜನ್ಮ ತಾಳಿತು. ಆ ಬಳಿಕ  ಕ್ಷೀರಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್‌ ಸೇರಿದಂತೆ ಪ್ರಣಾಳಿಕೆಯ 160ಕ್ಕೂ ಹೆಚ್ಚು ಭರವಸೆಗಳ ಪೈಕಿ 158 ನ್ನು ಈಡೇರಿಸಿದರು. 2023ರ ವಿಧಾನಸಭೆಯಲ್ಲಿ  ಸಿದ್ದರಾಮಯ್ಯನವರ ನಾಯಕತ್ವವನ್ನು ಒಪ್ಪಿ ಜನ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಈ ಬಾರಿಯ ಹಾದಿ ಸವಾಲಿನದ್ದಾಗಿದ್ದರೂ ಸಿದ್ದರಾಮಯ್ಯ ಮಾತ್ರ ತಮ್ಮ ಗುರಿಯೆಡೆಗಿನ ನಡೆಯಲ್ಲಿ ದೃಢವಾಗಿದ್ದಾರೆ.

ಶೋಷಿತ ಸಮುದಾಯದ ಪರವಾಗಿರುವ ಸಿದ್ದರಾಮಯ್ಯನವರ ನಡೆ ಪ್ರಶ್ನಾತೀತ. ಎರಡು ದಿನಗಳ ಹಿಂದೆ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಪರಿಷತ್‌ ಸಭೆಯಲ್ಲಿ ಎಸ್ಸಿ-ಎಸ್ಪಿ ಮತ್ತು ಟಿಎಸ್ಪಿ ಕಾರ್ಯಕ್ರಮಗಳಿಗೆ 34 ಸಾವಿರ ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಇದು ರಾಜ್ಯದ ಒಟ್ಟು ಬಜೆಟ್‌ ಗಾತ್ರದ ಶೇ.24ರಷ್ಟಾಗಬಹುದೆಂದು ಅಂದಾಜಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಇದನ್ನು ನಿರ್ವಹಿಸಬೇಕಿದೆ. ಆದರೆ ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಸಿದ್ದರಾಮಯ್ಯ ಈ ಸವಾಲನ್ನು ಲೀಲಾಜಾಲವಾಗಿ ನಿಭಾಯಿಸಬಲ್ಲರು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಸಂಪನ್ಮೂಲ ಸಂಗ್ರಹಕ್ಕೆ ಅವರು ಇಡುತ್ತಿರುವ ಒಂದೊಂದು ಹೆಜ್ಜೆಯೂ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ್ದಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಸ್ವಂತಕ್ಕೆ ಸ್ವಲ್ಪ , ಸಮಾಜಕ್ಕೆ ಎಲ್ಲವೂ ಎಂಬ ತತ್ವದಲ್ಲಿ  ನಂಬಿಕೆ ಇಟ್ಟಿರುವ ಸಿದ್ದರಾಮಯ್ಯ ಕರ್ನಾಟಕದ “ನಾನ್‌ ಕರೆಪ್ಟ್ ‘ ರಾಜಕಾರಣಿಗಳ ಪೈಕಿ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು.

ಬಡವರು ಮತ್ತು ಅಹಿಂದ

ಸಿದ್ದರಾಮಯ್ಯ ಎಂದಾಕ್ಷಣ ಮೇಲ್ನೋಟಕ್ಕೆ “ಅಹಿಂದ’ ನಾಯಕ ಎಂದು ಬಿಂಬಿತವಾದರೂ ಎಲ್ಲ ವರ್ಗದ ಬಡವರ ಬಗ್ಗೆ ಪ್ರೀತಿ ಇಟ್ಟುಕೊಂಡಿರುವ, ಕುವೆಂಪು, ಬಸವಣ್ಣ, ಅಂಬೇಡ್ಕರ್‌ ಸಿದ್ಧಾಂತದಲ್ಲಿ ನಂಬಿಕೆಯುಳ್ಳ, ಸಂವಿಧಾನವೇ ಶ್ರೇಷ್ಠ ಎಂದು ಸರ್ವಕಾಲಕ್ಕೂ ಪ್ರತಿಪಾದಿಸುವ ನಾಯಕ.  ದೇವರಾಜ ಅರಸು ಅವರ ನಂತರ ಅಹಿಂದ ವರ್ಗಕ್ಕೂ ದೊಡ್ಡ ಮಟ್ಟದಲ್ಲಿ ಶಕ್ತಿ ತುಂಬಿದವರು ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರು ಮೂಲತಃ ಹಳ್ಳಿಗಾಡಿನ ಹಿನ್ನೆಲೆಯ ಬಡ ರೈತನ ಕುಟುಂಬದಿಂದ ಬಂದವರು. ಅವರೇ ಸಾಕಷ್ಟು ಬಾರಿ ಹೇಳಿಕೊಂಡಿರುವಂತೆ ಉನ್ನತ ವ್ಯಾಸಂಗ ಮಾಡುವಾಗ ಹಾಸ್ಟೆಲ್‌ನಲ್ಲಿ ಕೊಠಡಿ ಸಿಗದೆ ಪ್ರತ್ಯೇಕ ರೂಂ ಮಾಡಿಕೊಂಡು ಹೋಟೆಲ್‌ನಲ್ಲಿ ಸಾಂಬಾರ್‌ ತಂದು ಅನ್ನ ಮಾಡಿಕೊಂಡು ಊಟ ಮಾಡಿ ಶಿಕ್ಷಣ ಪೂರೈಸಿದವರು. ಸಿದ್ದರಾಮಯ್ಯ ರಾಜಕಾರಣಕ್ಕೆ ಬರಬೇಕು ಎಂದು ಬಯಸಿ ಬಂದವರಲ್ಲ. ವಕೀಲಿ ವೃತ್ತಿ ಆಯ್ಕೆ ಮಾಡಿಕೊಂಡು ತಾಲೂಕು ಬೋರ್ಡ್‌ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿ ಆರ್ಥಿಕ ತಜ್ಞರೇ ಅಚ್ಚರಿಗೊಳ್ಳುವಂತೆ ದಾಖಲೆಯ 14  ಬಾರಿ ಬಜೆಟ್‌ ಮಂಡಿಸಿ ರಾಜ್ಯದ ಆರ್ಥಿಕತೆ ಹಳಿ ತಪ್ಪದಂತೆ ನೋಡಿಕೊಂಡವರು.

ಆಕಸ್ಮಿಕ ರಾಜಕೀಯ ಪ್ರವೇಶ

ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ಸಿದ್ಧಾಂತದಿಂದ ಪ್ರಭಾವಿತರಾದವರು ಸಿದ್ದರಾಮಯ್ಯ. ರಾಜಕೀಯ ಪ್ರವೇಶ ಆಕಸ್ಮಿಕ. ಕಾನೂನು ಪದವಿ ನಂತರ ಮೈಸೂರು ಕೋರ್ಟ್‌ ನಲ್ಲಿ ವಕೀಲರಾಗಿ ಕಾರ್ಯನಿರ್ವ ಹಿಸುವ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ನಂಜುಂಡಸ್ವಾಮಿಯವರು ಸಿದ್ದರಾಮಯ್ಯ ಅವರ ಮಾತಿನ ಶೈಲಿ, ಹೋರಾಟ ಸ್ವಭಾವ, ಬಡವರು, ರೈತರ ಪರ ಬದ್ಧತೆ ನೋಡಿ ರಾಜಕೀಯ ಕ್ಷೇತ್ರಕ್ಕೆ ಇಳಿಯುವಂತೆ ನೀಡಿದ ಪ್ರೇರಣೆಯಿಂದ ರಾಜಕಾರಣಕ್ಕೆ ಪ್ರವೇಶ ಮಾಡಿ 45 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ.

1948 ಆ. 12ರಂದು ಮೈಸೂರಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿ ಗ್ರಾಮದಲ್ಲಿ ಸಿದ್ದರಾಮಯ್ಯ ಜನಿಸಿದರು. ಮೂಲತಃ ವೃತ್ತಿಯಿಂದ ವಕೀಲರಾದ ಇವರು ಸಮಾಜವಾದಿ ಯುವಜನ ಸಭಾ ಮೂಲಕ ರಾಜಕೀಯಕ್ಕೆ ಬಂದರು. 1978ರವರೆಗೂ ಇವರು ಜ್ಯೂನಿಯರ್‌ಲಾಯರ್‌ ಆಗಿ ಕೆಲಸ ಮಾಡಿದರು.  ಸಿದ್ದರಾಮಯ್ಯ ಅವರು ಕರುನಾಡು ಕಂಡ ಅತ್ಯಂತ ಶ್ರೇಷ್ಠ ರಾಜಕೀಯ ಮುತ್ಸದ್ಧಿಯೂ ಹೌದು. ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಲೋಕದಳ ಮೂಲಕ ಶಾಸನಸಭೆ ಪ್ರವೇಶಿಸಿ ನಂತರ ಜನತಾಪಕ್ಷ, ಜನತಾದಳ, ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜತೆ ರಾಜಕೀಯ ಭಿನ್ನಾಭಿಪ್ರಾಯ ಗಳಿಂದ ಪಕ್ಷದಿಂದ ಹೊರಬಿದ್ದವರು. ನಂತರ ಸ್ವಲ್ಪ ಕಾಲ ಎಬಿಪಿಜೆಡಿನಲ್ಲಿ ಗುರುತಿಸಿಕೊಂಡು ಖುದ್ದು ಸೋನಿಯಾ ಗಾಂಧಿ ಆಹ್ವಾನದ ಮೇರೆಗೆ ರಾಜ್ಯದ ಕಾಂಗ್ರೆಸ್‌ ನಾಯಕರ  ಒತ್ತಾಸೆಯಿಂದ ಕಾಂಗ್ರೆಸ್‌ ಸೇರಿದವರು.

ಕಾಂಗ್ರೆಸ್‌ ಸೇರಿದ ನಂತರ ಸಿದ್ದರಾಮಯ್ಯ ಅವರ ರಾಜಕೀಯ ಪಯಣದ ಹಾದಿಯೇ ಬದಲಾಯಿತು. ಎರಡು ಬಾರಿ ವಿಪಕ್ಷ ನಾಯಕ ಹಾಗೂ ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ಅವರಿಗೆ ಕಾಂಗ್ರೆಸ್‌ನಿಂದ ಒಲಿದು ಬಂದಿದೆ. ಬೇರೆ ಪಕ್ಷದಿಂದ ಬಂದವರಿಗೆ ಈ ಪರಿಯ ಅವಕಾಶ ಕಾಂಗ್ರೆಸ್‌ನಲ್ಲಿ ಯಾರಿಗೂ ಸಿಕ್ಕಿಲ್ಲ.

ಅಹಿಂದ ನಾಯಕ

ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಸೇರಿದ್ದರೂ ರಾಜ್ಯ ರಾಜಕಾರಣದಲ್ಲಿ ಅವರು ಅಹಿಂದ ನಾಯಕ. ರಾಜ್ಯದಲ್ಲಿ 2013 ಹಾಗೂ 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು  ಈ ವರ್ಗದ ಮತಗಳು ಕ್ರೋಢೀಕರಣವಾಗಿ ಕಾಂಗ್ರೆಸ್‌ನತ್ತ ವಾಲಿದ್ದು. ಅದರಲ್ಲೂ ವಿಶೇಷವಾಗಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಸಿದ್ದರಾಮಯ್ಯ ಅವರು ಈ ಬಾರಿ ಅಹಿಂದ ಮತಬ್ಯಾಂಕ್‌ ಸೆಳೆಯುವಲ್ಲಿ ಯಶಸ್ವಿಯೂ ಆಗಿರುವುದು ಫ‌ಲಿತಾಂಶದ ಅಂಕಿ-ಅಂಶಗಳಿಂದ ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರನ್ನು ಅನ್ನರಾಮಯ್ಯ, ದಲಿತ ರಾಮಯ್ಯ ಎಂದೂ ಕರೆದಿದ್ದು ಇದೆ. ರಾಜ್ಯದ ದಲಿತ ಸಂಘಟನೆಗಳ ಜತೆ ಉತ್ತಮ ಬಾಂಧವ್ಯ ಹೊಂದಿರುವ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಯಡಿ ಬಜೆಟ್‌ ಗಾತ್ರದ ಇಂತಿಷ್ಟು ಹಣ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಕಲ್ಯಾಣಕ್ಕೆ ವೆಚ್ಚ ಆಗಬೇಕು ಎಂಬ ಕ್ರಾಂತಿಕಾರಣ ನಿರ್ಧಾರ ಕೈಗೊಂಡು ಕಾಯ್ದೆ ರೂಪಿಸಿದ್ದರು.

ಅಭಿನವ ಅರಸು

ಸಿದ್ದರಾಮಯ್ಯ ಎಂದರೆ ತಳಮಟ್ಟದಿಂದ ಬಂದ ಜನನಾಯಕ, ಸಾಮಾಜಿಕ ನ್ಯಾಯದ ಪ್ರತಿಪಾದಕ ಅಭಿನವ ಅರಸು ಎಂದೇ ಅವರ ಅಭಿಮಾನಿಗಳಿಂದ ಕರೆಯಲ್ಪಡುತ್ತಾರೆ. ಸಿದ್ದರಾಮಯ್ಯ ಅವರು ತಳವರ್ಗದವರ ಬಗ್ಗೆ ಹೊಂದಿರುವ ಕಾಳಜಿ ಹಾಗೂ ಅಧಿಕಾರ ಇದ್ದಾಗ ಕೈಗೊಂಡ ಜನಪರ ಕೆಲಸ, ಪ್ರತಿಪಕ್ಷದಲ್ಲಿದ್ದರೂ ಬಡವರ್ಗದವರ ಪರ ಹೋರಾಟ ಇದಕ್ಕೆ ಸಾಕ್ಷಿ. 2013 ಮೇ 13 ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಾಲ್ಕು ಸಾವಿರ ಕೋಟಿ ರೂ. ವೆಚ್ಚದ ಅನ್ನಭಾಗ್ಯ ಯೋಜನೆ ಘೋಷಿಸಿದರು. ಸಿದ್ದರಾಮಯ್ಯ ಅವರ ಸಂಪುಟ ಅರ್ಹತೆ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಹಾಗೂ ಜಿಲ್ಲಾವಾರು ಪ್ರಾತಿನಿಧ್ಯ ಎಲ್ಲವೂ ಒಳಗೊಂಡ ಸಮತೋಲಿತವಾಗಿತ್ತು. ಇದೀಗ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳ ಪೈಕಿ ನಾಲ್ಕನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ.

ಟ್ರೆಂಡ್‌ ಬದಲಿಸಿದ ಸಿದ್ದರಾಮೋತ್ಸವ

ಕಳೆದ ವರ್ಷ ದಾವಣಗೆರೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳೆಲ್ಲ ಸೇರಿ ಆಯೋಜಿಸಿದ್ದ “ಸಿದ್ದರಾಮೋತ್ಸವ’-75 ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸಿದ ಬೃಹತ್‌ ಸಮಾವೇಶ. ಬಿಜೆಪಿಯ ಅಶ್ವಮೇಧ ಕುದುರೆಗೆ ಲಗಾಮು ಹಾಕುವುದಕ್ಕೆ ಈ ಕಾರ್ಯಕ್ರಮ ತನ್ನದೇ ಆದ ಕೊಡುಗೆ ನೀಡಿತು. ಎಲ್ಲದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪರವಾಗಿ ಒಂದು ಟ್ರೆಂಡ್‌ ಸೆಟ್‌  ಮಾಡುವುದಕ್ಕೆ ಈ ಕಾರ್ಯಕ್ರಮ ಕಾರಣವಾಯಿತು. ರಾಜ್ಯದ ಇತಿಹಾಸದಲ್ಲಿ ಯಾವುದೇ ಸಮಾವೇಶಕ್ಕೂ ಇಷ್ಟೊಂದು ಜನರು ಸ್ವಯಂ ಪ್ರೇರಣೆಯಿಂದ ಆಗಮಿಸಿರಲಿಲ್ಲ. ಐದು ಲಕ್ಷಕ್ಕೂ ಹೆಚ್ಚು ಜನರು ಸಿದ್ದರಾಮಯ್ಯ ಅವರಿಗೆ ಶುಭ ಕೋರಲು ಆಗಮಿಸಿದ್ದರು. ಸಿದ್ದರಾಮಯ್ಯ ಪರ ಇರುವ ಅಲೆಯನ್ನು ನೋಡಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಿಬ್ಬೆರಗಾಗಿದ್ದರು. ಅಷ್ಟಾದ ಬಳಿಕವೂ 2023ರ ಚುನಾವಣೆ ಅವರ ಪಾಲಿಗೆ ಒಂದು ರೀತಿಯಲ್ಲಿ ಅಗ್ನಿ ಪರೀಕ್ಷೆಯಂತೆಯೇ ಆಗಿತ್ತು. ಆದರೂ 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ವರುಣಾದಲ್ಲಿ ಗೆಲುವು ಸಾಧಿಸಿದರು. ಚುನಾವಣೆಗೆ ಮುನ್ನವೇ ವರುಣಾದಲ್ಲಿ ಚಾಮುಂಡೇಶ್ವರಿ ಉಪಚುನಾವಣೆಯ ವಾತಾವರಣ ಸೃಷ್ಟಿಸಲಾಗಿತ್ತು. ಆದಾಗಿಯೂ ಸಿದ್ದರಾಮಯ್ಯ ಗೆದ್ದಿದ್ದು ಮಾತ್ರವಲ್ಲ, ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿ ಗಾಧಿಯನ್ನೂ ಏರಿದರು.

ಬಳ್ಳಾರಿ ಪಾದಯಾತ್ರೆ, ಪ್ರಜಾಧ್ವನಿ

ಪ್ರತಿಪಕ್ಷ ನಾಯಕನಾಗಿದ್ದಾಗ ಬಳ್ಳಾರಿ ಗಣಿದಣಿಗಳ  ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ 320 ಕಿ.ಮೀ. ಪಾದಯಾತ್ರೆ ನಡೆಸಿದ್ದು ಇತಿಹಾಸ. ಅದು ಅವರನ್ನು ಮುಖ್ಯಮಂತ್ರಿ ಸ್ಥಾನದವರೆಗೂ ತಂದು ನಿಲ್ಲಿಸಿತು. ಕಾಂಗ್ರೆಸ್‌ನಲ್ಲಿ ದೇವರಾಜ ಅರಸು ಬಿಟ್ಟರೆ ಪೂರ್ಣಾವಧಿ ಮುಖ್ಯಮಂತ್ರಿಯಾದವರು ಸಿದ್ದರಾಮಯ್ಯ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಬಲಿಷ್ಠಗೊಳಿಸುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೂ ಇದೆ. ಬಂಗಾರಪ್ಪ ಅವರ ನಂತರ ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗಗಳ ವರ್ಚಸ್ವೀ ನಾಯಕನ ಕೊರತೆ ತುಂಬಿದವರು ಸಿದ್ದರಾಮಯ್ಯ. ಈ ಬಾರಿಯ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜತೆಗೂಡಿ ಪ್ರಜಾಧ್ವನಿ ಯಾತ್ರೆ ನಡೆಸಿ  ಆ ನಂತರ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರಂತರ ಪ್ರಚಾರ ಕೈಗೊಂಡು ಕಾಂಗ್ರೆಸ್‌ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸಲು ಕಾರಣರಾದರು.

ವ್ಯಾಟ್‌ ಕ್ರಾಂತಿ

ನೂರು ಕುರಿ ಎಣಿಸಲು ಬರದವನನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದಾರೆಂದು ಕುಹಕವಾಡಲಾಗಿತ್ತಂತೆ. ಆದರೆ ಇದೆಲ್ಲವನ್ನೂ ಮೀರಿ ನಿಂತ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ಹಾಗೂ ನೀಡಿದ ಕಾರ್ಯಕ್ರಮಗಳು ಹಾಗೂ ಆರ್ಥಿಕ ಶಿಸ್ತು ಮೆಚ್ಚುವಂತದ್ದು. ದೇಶದಲ್ಲೇ ಕರ್ನಾಟಕದಲ್ಲಿ ಮೊದಲ ಬಾರಿಗೆ ವ್ಯಾಟ್‌ ಜಾರಿಗೆ ತಂದ ಹೆಗ್ಗಳಿಕೆಯೂ ಇವರದು. ರಾಜಕಾರಣದಲ್ಲೂ ಅವರಿಗೆ ನೇರವಾಗಿ ಅಧಿಕಾರದ ಗದ್ದುಗೆ ಸಿಗಲಿಲ್ಲ. ಅದರ ಹಿಂದೆ ಸಾಕಷ್ಟು ಹೋರಾಟ, ಶ್ರಮ, ಸಂಘಟನೆಯೂ ಇದೆ. ಮುಖ್ಯಮಂತ್ರಿಯಾಗಿ ಅವರು ರೂಪಿಸಿದ ಅನ್ನಭಾಗ್ಯ ಇಡೀ ದೇಶಕ್ಕೆ ಮಾದರಿ. ಇಂದಿರಾ ಕ್ಯಾಂಟೀನ್‌, ಕ್ಷೀರಭಾಗ್ಯ, ಮನಸ್ವಿನಿ, ಆರೋಗ್ಯ ಭಾಗ್ಯ, ಶಾದಿ ಭಾಗ್ಯ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ಬಡವರಿಗೆ ಅನ್ನಭಾಗ್ಯ, ಶಾಲಾಮಕ್ಕಳಿಗೆ ಉಚಿತವಾಗಿ ಹಾಲು ಪೂರೈಕೆ ಮಾಡುವ ಕ್ಷೀರಭಾಗ್ಯ, ಪಶು ಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನ ನೀಡುವ ಕ್ಷೀರಧಾರೆ, ಬಡ ಕುಟುಂಬಗಳು ಹಾಗೂ ರೈತರಿಗೆ ವರದಾನವಾಯಿತು.

ದಿಗ್ಗಜರ ಜತೆ ಸಂಪರ್ಕ

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ದಿಗ್ಗಜರ ಜತೆಗಿನ ಸಂಪರ್ಕ ಸಿದ್ದರಾಮಯ್ಯ ಅವರ ರಾಜಕೀಯ ಬೆಳವಣಿಗೆಗೆ ಕಾರಣ. ಚಂದ್ರಶೇಖರ್‌, ಮಧು ದಂಡವತೆ, ಬಾಪು ಕಲ್ದಾತೆ,  ಎಚ್‌. ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ, ಜಾರ್ಜ್‌ ಫೆರ್ನಾಂಡಿಸ್‌, ಜೆ.ಎಚ್‌.ಪಟೇಲ್‌, ಎಸ್‌.ಆರ್‌.ಬೊಮ್ಮಾಯಿ, ವೀರೇಂದ್ರಕುಮಾರ್‌, ಶರದ್‌ ಪವಾರ್‌,  ಮುಲಾಯಂಸಿಂಗ್‌ ಯಾದವ್‌, ಲಾಲೂ ಪ್ರಸಾದ್‌ ಯಾದವ್‌, ರಾಂ ವಿಲಾಸ್‌ ಪಾಸ್ವಾನ್‌ ಹೀಗೆ ಸಮಾಜವಾದಿ ಮೂಲದ ನಾಯಕರ ಸಂಪರ್ಕ ಹಾಗೂ ಜತೆಗೂಡಿ ಕೆಲಸ ಮಾಡಿದ ಅನುಭವದಿಂದ ಸಿದ್ದರಾಮಯ್ಯ ಪರಿಪಕ್ವ ರಾಜಕಾರಣಿ  ಆಗಿದ್ದಾರೆ. ಕಾಂಗ್ರೆಸ್‌ಗೆ ಬಂದ ಅನಂತರ ಪಕ್ಷದ ಎಲ್ಲ ಉನ್ನತ ನಾಯಕರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದಾರೆ. 2024ರ ಲೋಕಸಭಾ ಚುನಾವಣೆಗೂ ಕಾಂಗ್ರೆಸ್‌ ರಾಷ್ಟ್ರೀಯ ನಾಯಕತ್ವ ಸಿದ್ದರಾಮಯ್ಯನವರ ಶಕ್ತಿಯನ್ನೇ ನೆಚ್ಚಿಕೊಂಡಿದೆ.

ಟಾಪ್ ನ್ಯೂಸ್

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Development of 2-dose vaccine for HIV prevention: MIT

HIV vaccine; ಎಚ್‌ಐವಿ ತಡೆಗೆ 2 ಡೋಸ್‌ ಲಸಿಕೆ ಅಭಿವೃದ್ಧಿ: ಎಂಐಟಿ

India’s first bullet train to be made in Bangalore?

Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್‌ ರೈಲು?

Ma’nene; ಪ್ರತಿ ವರ್ಷ ಶ*ವಗಳಿಗೆ ವಿಶಿಷ್ಟ ಗೌರವ!: ಅಚ್ಚರಿಗೊಳಪಡಿಸುವ ಸಂಪ್ರದಾಯ

Ma’nene;ಸ್ಮಶಾನದಲ್ಲಿದ್ದ ಶವ ಮನೆಗೆ ತಂದು ಸಂಭ್ರಮಿಸ್ತಾರೆ! ಇದು ವಿಚಿತ್ರ ಅಚ್ಚರಿ ಸಂಪ್ರದಾಯ

ಮುಂಜಾನೆ ಮನೆಗೆ ನುಗ್ಗಿ ಪುಣೆ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Karwar: ಮುಂಜಾನೆ ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Duleep trophy

Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ? 

We are not against anyone…: PM Modi at Quad Summit

Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupati: ಲಡ್ಡು ಪ್ರಸಾದ ಪ್ರಮಾದ!

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2

Crime: ಪ್ರೇಯಸಿ ಜತೆ ಸುತ್ತಾಡಿದ್ದಕ್ಕೆ ಹತ್ಯೆಗೈದ ಪ್ರಿಯಕರ!

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Development of 2-dose vaccine for HIV prevention: MIT

HIV vaccine; ಎಚ್‌ಐವಿ ತಡೆಗೆ 2 ಡೋಸ್‌ ಲಸಿಕೆ ಅಭಿವೃದ್ಧಿ: ಎಂಐಟಿ

India’s first bullet train to be made in Bangalore?

Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್‌ ರೈಲು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.