Chikkodi: ಜೊಲ್ಲೆ, ಕತ್ತಿ: ಯಾರಿಗೆ ಬಿಜೆಪಿ ನಿಶಾನೆ?
ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ರಮೇಶ್ ಕತ್ತಿ ಕಾಂಗ್ರೆಸ್‌ನಿಂದ ಸ್ಪರ್ಧೆ? ಜೊಲ್ಲೆ-ಕತ್ತಿ ಪೈಪೋಟಿಯಲ್ಲಿ ಹೊಸಬರ ಪ್ರವೇಶ?
Team Udayavani, Jan 21, 2024, 5:26 AM IST
ಬೆಳಗಾವಿ: ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಮೂರು ದಶಕಗಳಿಂದಲೂ ಪಕ್ಷಗಳ ಹೊಯ್ದಾಟ ನಡೆದಿದೆ. ಶತಾಯಗತಾಯ ಗತವೈಭವವನ್ನು ಮರುಸ್ಥಾಪಿಸುವ ಗುರಿಯೊಂದಿಗೆ ಬಿಜೆಪಿಯಿಂದ ಕ್ಷೇತ್ರವನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ಹತ್ತಾರು ರೀತಿಯ ರಾಜಕೀಯ ತಂತ್ರಗಾರಿಕೆಯನ್ನು ಆರಂಭಿಸಿದೆ.
ಈ ಕ್ಷೇತ್ರ 8 ವಿಧಾನಸಭಾ ಕ್ಷೇತ್ರ ಗಳ ಪೈಕಿ 5ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೀಗಾಗಿ ಅಧಿಕೃತ ಅಭ್ಯರ್ಥಿ ಹೆಸರು ಪ್ರಕಟವಾದ ಬಳಿಕ ಈ ತಂತ್ರಗಾರಿಕೆ ಮತ್ತಷ್ಟು ರಂಗು ಪಡೆಯಲಿದೆ.
ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲೂ ಜಾತಿ ಆಧಾರಿತ ಚುನಾವಣೆ ನಡೆಯಲಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತಿದೆ. ಮೇಲ್ನೋಟಕ್ಕೆ ಬಿಜೆಪಿಯಲ್ಲಿ ಅಂತಹ ಟಿಕೆಟ್ ಪೈಪೋಟಿ ಕಾಣುತ್ತಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಮಾತ್ರ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಟಿಕೆಟ್‌ಗೆ ಕುರುಬ ಹಾಗೂ ಲಿಂಗಾಯತ ಸಮಾಜದ ನಾಯಕರ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿರು ವುದು ಕುತೂಹಲ ಮೂಡಿಸಿದೆ.
ಶಂಕರಾನಂದ ದಾಖಲೆ
ಕಾಂಗ್ರೆಸ್‌ನಲ್ಲಿ ಪ್ರಭಾವಶಾಲಿ ನಾಯಕರಾಗಿದ್ದು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಅವರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ಬಿ.ಶಂಕರಾನಂದ ಸತತ ಏಳು ಬಾರಿ ಗೆದ್ದು ದಾಖಲೆ ಮಾಡಿದ ಕ್ಷೇತ್ರವಿದು. 1962ರಿಂದ 1991ರ ವರೆಗೆ ಕಾಂಗ್ರೆಸ್‌ನದ್ದೇ ದರ್ಬಾರು. 1962ರಲ್ಲಿ ವಿ.ಎಲ್.ಪಾಟೀಲ ಗೆದ್ದು ಕಾಂಗ್ರೆಸ್‌ನ ಪ್ರಾಬಲ್ಯಕ್ಕೆ ಮುನ್ನುಡಿ ಬರೆದರೆ ಅನಂತರ ಅವರ ಶಿಷ್ಯ ಶಂಕರಾನಂದ 1967ರಿಂದ ಸತತ 29 ವರ್ಷಗಳ ಕಾಲ ಈ ಕ್ಷೇತ್ರವನ್ನು ಆಳಿದರು.
1996ರಲ್ಲಿ ಜನತಾದಳದ ಅಭ್ಯರ್ಥಿ ರತ್ನಮಾಲಾ ಸವಣೂರ ಗೆದ್ದು ಕಾಂಗ್ರೆಸ್ ಮತ್ತು ಶಂಕರಾನಂದ ಅವರ ಅಧಿಪತ್ಯಕ್ಕೆ ಮಂಗಳ ಹಾಡಿದರು. ಅಲ್ಲಿಂದ ಈ ಕ್ಷೇತ್ರದಲ್ಲಿ ಪಕ್ಷಗಳ ಹೊಯ್ದಾಟ ನಡೆದಿದೆ. ರತ್ನಮಾಲಾ ಬಳಿಕ ಹಾಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಸತತ 3 ಬಾರಿ ಗೆದ್ದಿದ್ದರು. ಈಗ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಅಣ್ಣಾಸಾಹೇಬ ಜೊಲ್ಲೆ ಹಾಲಿ ಸಂಸದರು.
ಕಾಂಗ್ರೆಸ್‌ದಲ್ಲಿ ಯಾರು?
ಈಗಿನ ಮಾಹಿತಿ ಪ್ರಕಾರ ಕಾಂಗ್ರೆಸ್‌ನಲ್ಲಿ ನಾಲ್ವರು ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಕಾಣುತ್ತಿದೆ. ಕುರುಬ ಸಮಾಜದ ಮುಖಂಡ ಮತ್ತು ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಟಿಕೆಟ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಲಿಂಗಾಯತ ಸಮಾಜದಿಂದ ಪ್ರಕಾಶ ಹುಕ್ಕೇರಿ ತಮಗೆ ಇಲ್ಲವೇ ಪುತ್ರ ಹಾಗೂ ಶಾಸಕ ಗಣೇಶ ಹುಕ್ಕೇರಿ ಪರ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಮಗನಿಗೆ ಟಿಕೆಟ್ ಸಿಕ್ಕರೆ ತೆರವಾಗುವ ಶಾಸಕ ಸ್ಥಾನಕ್ಕೆ ಸೊಸೆಯನ್ನು ಕಣಕ್ಕಿಳಿಸುವುದು ಅವರ ಆಲೋಚನೆ.
ರಾಜಕೀಯದಲ್ಲಿ ಸಾಕಷ್ಟು ಪಳಗಿರುವ ಹುಕ್ಕೇರಿಗೆ ಕಾಂಗ್ರೆಸ್ ಟಿಕೆಟ್ ಪಡೆಯುವುದು ಕಷ್ಟವೇನಲ್ಲ. ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಜಾತಿ, ಹಣ ಮತ್ತು ಜನ ಬಲ ಇದೆ. ಆದರೆ ಕ್ಷೇತ್ರದ ಕೆಲ ನಾಯಕರು ಅವರ ಪರವಾಗಿಲ್ಲ. ಎಲ್ಲ ಅವಕಾಶಗಳನ್ನು ಒಂದೇ ಕುಟುಂಬಕ್ಕೆ ಕೊಡುವುದು ಸರಿಯಲ್ಲ ಎಂಬುದು ಈ ನಾಯಕರ ವಾದ. ಇದು ಪ್ರಕಾಶ ಹುಕ್ಕೇರಿಗೆ ಸಮಸ್ಯೆಯಾಗಿ ನಿಂತಿದೆ.
ಅಥಣಿ ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಪರ ಲಾಬಿ ಆರಂಭಿಸಿದ್ದಾರೆ. ಒಂದು ಮೂಲದ ಪ್ರಕಾರ ಸವದಿ ಇದೇ ಕರಾರಿನೊಂದಿಗೆ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ಅಂತಿಮವಾಗಿ ಸತೀಶ ಜಾರಕಿಹೊಳಿ ಅವರ ಮಾತೇ ಅಂತಿಮ ಎಂಬುದನ್ನು ತಳ್ಳಿಹಾಕುವಂತಿಲ್ಲ.
ರಮೇಶ ಕತ್ತಿ ಎರಡು ದೋಣಿಗಳಲ್ಲಿ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಯಲ್ಲಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‌ದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್‌ನಲ್ಲಿ ಇದುವರೆಗೆ ಅಂಥ ಯಾವುದೇ ಚರ್ಚೆಗಳು ನಡೆದಿಲ್ಲ.
ಹಾಲಿ ಸಂಸದರಿಗೆ ಅವಕಾಶ..?
ಇನ್ನು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡೇನಿಲ್ಲ. ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದರ ನಡುವೆಯೂ ಮಾಜಿ ಸಂಸದ ರಮೇಶ ಕತ್ತಿ ಸಹ ತೀವ್ರ ಪ್ರಯತ್ನ ನಡೆಸಿದ್ದಾರೆ. ಇವರಿಬ್ಬರ ಪೈಪೋಟಿಯ ನಡುವೆ ಅಂತಿಮವಾಗಿ ಪಕ್ಷದ ವರಿಷ್ಠರು ಹೊಸಬರಿಗೆ ಟಿಕೆಟ್ ಕೊಟ್ಟರೂ ಅಚ್ಚರಿಯಿಲ್ಲ ಎನ್ನುವ ಅಭಿಪ್ರಾಯ ಸಹ ಇದೆ.
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.