Justin Trudeau: ಕೆನಡಾ ಪ್ರಧಾನಿಯ ಬಾಲಿಶ ವರ್ತನೆ
Team Udayavani, Sep 21, 2023, 12:04 AM IST
ನಿಷೇಧಿತ ಖಲಿಸ್ಥಾನ ಟೈಗರ್ ಫೋರ್ಸ್(ಕೆಟಿಎಫ್)ನ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್‌ನನ್ನು ಕೆನಡಾದಲ್ಲಿ ಜೂ.18ರಂದು ಅಪರಿಚಿತ ದುಷ್ಕರ್ಮಿಗಳು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ನೀಡಿದ ವಿವಾದಾತ್ಮಕ ಹೇಳಿಕೆ ಭಾರತ ಮತ್ತು ಕೆನಡಾ ಸಂಬಂಧವನ್ನು ಮತ್ತಷ್ಟು ಹದಗೆಡುವಂತೆ ಮಾಡಿದೆ.
ಸಿಕ್ಖ್ ಪ್ರತ್ಯೇಕತಾವಾದಿಗಳಿಗೆ ಕೆನಡಾ ಪರೋಕ್ಷ ಬೆಂಬಲ ನೀಡುತ್ತಿರುವುದನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿರುವ ಭಾರತವು ಭಯೋತ್ಪಾದಕರು ಮತ್ತು ಸಮಾಜಘಾತುಕ ಶಕ್ತಿಗಳಿಗೆ ಆಶ್ರಯ ನೀಡದಂತೆ ಕೆನಡಾ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. ಇದರ ಹೊರತಾಗಿ ಕೆನಡಾದ ವಿವಿಧ ಭಾಗಗಳಲ್ಲಿ ಭಾರತೀಯ ಸಮುದಾಯದ ಮೇಲೆ ಅದರಲ್ಲೂ ಮುಖ್ಯವಾಗಿ ಸಿಕ್ಖ್ ಸಮುದಾಯವರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಲೇ ಬಂದಿವೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರ, ಭಾರತೀಯ ಸಮುದಾಯಕ್ಕೆ ರಕ್ಷಣೆ ನೀಡುವುದರ ಜತೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ತನ್ನ ನೆಲದಲ್ಲಿ ಅವಕಾಶ ನೀಡದಂತೆ ಕೆನಡಾ ಸರಕಾರದ ಮೇಲೆ ತೀವ್ರ ತೆರನಾದ ಒತ್ತಡ ಹೇರಿತ್ತು. ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಅವರ ಜತೆಗಿನ ಭೇಟಿಯ ಸಂದರ್ಭದಲ್ಲೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಪ್ರಸ್ತಾವಿಸಿ, ಕೆನಡಾದಲ್ಲಿನ ಬೆಳವಣಿಗೆಗಳ ಕುರಿತಂತೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕೆನಡಾ ಇದೇ ಮೊದಲ ಬಾರಿಯೇನಲ್ಲ, ಏರ್ ಇಂಡಿಯಾ ವಿಮಾನ ಸ್ಫೋಟದ ಸಂದರ್ಭದಲ್ಲೂ ಭಾರತಕ್ಕೆ ಸಹಾಯ ಮಾಡಿರಲಿಲ್ಲ.
ಕೆನಡಾ ಪ್ರಧಾನಿ ಹೇಳಿಕೆಯಿಂದ ಉಂಟಾಗಿರುವ ವಿವಾದ, ಉಭಯ ದೇಶಗಳೂ ರಾಜತಾಂತ್ರಿಕರನ್ನು ಉಚ್ಚಾಟನೆಗೊಳಿಸುವ ಹಂತದವರೆಗೆ ಬಂದು ತಲುಪಿದೆ. ಇನ್ನೂ ಮುಂದುವರಿದು ಎರಡೂ ದೇಶಗಳು ಪ್ರವಾಸದ ಎಚ್ಚರಿಕೆಯನ್ನೂ ನೀಡಿವೆ. ಇದರಿಂದ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿರುವುದೇ ಅಲ್ಲದೆ ಉಭಯ ದೇಶಗಳ ನಡುವಣ ವಾಣಿಜ್ಯ ಸಂಬಂಧದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.
ಕೆನಡಾ ಪ್ರಧಾನಿ ಅವರು, ತೀರಾ ಅಪ್ರಬುದ್ಧ ಮತ್ತು ಅಸಮಂಜಸ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಕೆನಡಾದ ಆಂತರಿಕ ವಿಚಾರಗಳಲ್ಲಿ ಭಾರತದ ಹೆಸರನ್ನು ಸುಖಾಸುಮ್ಮನೆ ಎಳೆದು ತಂದಿದ್ದಾರೆ. ಈ ಮೂಲಕ ಜಸ್ಟಿನ್ ಟ್ರಾಡೊ, ಜಾಗತಿಕ ಸಮುದಾಯದ ದೃಷ್ಟಿಯನ್ನು ತಮ್ಮತ್ತ ಸೆಳೆಯುವ ಷಡ್ಯಂತ್ರ ನಡೆಸಿದ್ದು ಸ್ವದೇಶದಲ್ಲಿ ಮಸುಕಾಗಿರುವ ತಮ್ಮ ವರ್ಚಸ್ಸನ್ನು ಮರಳಿ ಗಿಟ್ಟಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ.
ಕೆನಡಾದಲ್ಲಿ ಭಾರತೀಯ ಸಮುದಾಯದವರ ಮೇಲೆ ನಡೆಯುತ್ತಿರುವ ದಾಳಿಗಳು, ಸಂಘಟಿತ ಅಪರಾಧ ಕೃತ್ಯಗಳು, ಮಾದಕ ದ್ರವ್ಯ ಮತ್ತು ಮಾನವ ಕಳ್ಳಸಾಗಣೆ ಜಾಲ ಸಕ್ರಿಯವಾಗಿರುವುದರ ಕುರಿತಂತೆ ಭಾರತ ಸರಕಾರ ಸಹಜವಾಗಿಯೇ ಕಳವಳ ವ್ಯಕ್ತಪಡಿಸಿತ್ತು. ಕೆನಡಾದ ಅಭಿವೃದ್ಧಿಯಲ್ಲಿ ಭಾರತೀಯ ಸಮುದಾಯದ ಕೊಡುಗೆ ಗಣನೀಯವಾಗಿದ್ದು ತನ್ನ ವರ್ತನೆಯನ್ನು ತಿದ್ದಿಕೊಳ್ಳದೇ ಹೋದಲ್ಲಿ ಕೆನಡಾ ತಾನೇ ತೋಡಿದ ಖೆಡ್ಡಾಕ್ಕೆ ಬೀಳಲಿರುವುದು ಶತಃಸಿದ್ಧ. ಇನ್ನು ಭಯೋತ್ಪಾದನೆ ವಿಚಾರದಲ್ಲಿನ ಮೃದು ಧೋರಣೆ ಭವಿಷ್ಯದಲ್ಲಿ ತನ್ನ ಕುತ್ತಿಗೆಗೇ ಉರುಳಾಗಲಿದೆ ಎಂಬುದನ್ನು ಕೆನಡಾ ಮರೆಯಬಾರದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.