ಚೀನದ ಕುತಂತ್ರವೀಗ ಜಗಜ್ಜಾಹೀರು
Team Udayavani, Feb 9, 2023, 6:00 AM IST
ಚೀನದ ಕುತಂತ್ರ ಮತ್ತೂಮ್ಮೆ ಜಗತ್ತಿನ ಎದುರು ಜಗಜ್ಜಾಹೀರಾಗಿದೆ. ಹವಾಮಾನ ಅಧ್ಯಯನದ ನೆಪದಲ್ಲಿ ತನಗಾಗದ ದೇಶಗಳ ಮೇಲೆ ಆಕಾಶದಿಂದ ಗೂಢಚರ್ಯೆ ನಡೆಸುವ ಅದರ ದುರ್ಬುದ್ಧಿಗೆ ಅಮೆರಿಕ ಸೂಕ್ತ ಪ್ರತ್ಯುತ್ತರ ನೀಡಿದೆ.
ಅಮೆರಿಕದ ಆಗಸದಲ್ಲಿ ಎಂಟು ದಿನಗಳ ಕಾಲ ಬೇಹುಗಾರಿಕೆಯಲ್ಲಿ ನಿರತವಾಗಿದ್ದ ಚೀನದ ಬಲೂನ್ ಅನ್ನು ಅಮೆರಿಕದ ವಾಯುಪಡೆಯ ವಿಮಾನ ಹೊಡೆದುರುಳಿಸಿದ ಬಳಿಕ ದೊಡ್ಡಣ್ಣನ ವಿರುದ್ಧ ಕಿಡಿ ಕಾರಿದ್ದ ಚೀನಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತೀಕ್ಷ್ಣ ಮಾತುಗಳಲ್ಲಿ ತಿರುಗೇಟು ನೀಡಿದ್ದಾರೆ. ವಾಣಿಜ್ಯ, ವ್ಯವಹಾರ, ತಂತ್ರಜ್ಞಾನ ಸಹಿತ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಒಡ್ಡಲು ಅಮೆರಿಕ ಸಿದ್ಧವಿದೆಯೇ ವಿನಾ ಸಂಘರ್ಷ ನಡೆಸದು.
ಹಾಗೆಂದು ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎನ್ನುವ ಮೂಲಕ ಬೈಡೆನ್ ಅವರು ಚೀನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಚೀನದ ಬೇಹುಗಾರಿಕ ಬಲೂನ್ ಬಗ್ಗೆ ಜ. 28ರಂದು ಅಮೆರಿಕಕ್ಕೆ ಮಾಹಿತಿ ಲಭಿಸಿತ್ತಾದರೂ ಬಲೂನ್ ಅನ್ನು ಸ್ಫೋಟಿಸಿದರೆ ಅದು ಜನವಸತಿ ಪ್ರದೇಶದ ಮೇಲೆ ಬಿದ್ದು ಅಪಾರ ಹಾನಿ ಉಂಟಾಗುವ ಸಾಧ್ಯತೆ ಇದ್ದುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಈ ಬಲೂನ್ ಅಟ್ಲಾಂಟಿಕ್ ಸಮುದ್ರ ಮಧ್ಯೆ ಆಗಸದಲ್ಲಿ ಹಾರಾಡುತ್ತಿದ್ದಾಗ ಕ್ಷಿಪಣಿ ಪ್ರಯೋಗಿಸಿ ಅದನ್ನು ಹೊಡೆದುರುಳಿಸಿತ್ತು.
ಅಮೆರಿಕದ ಈ ಕ್ರಮದಿಂದ ವಿಚಲಿತಗೊಂಡ ಚೀನ, ಹವಾಮಾನ ಅಧ್ಯಯನಕ್ಕಾಗಿ ಹಾರಿಬಿಟ್ಟಿದ್ದ ಬಲೂನ್ ಗಾಳಿಯಿಂದಾಗಿ ಅಮೆರಿಕದತ್ತ ಹಾರಿತ್ತು. ಇದೊಂದು ಏರ್‌ಶಿಪ್ ಆಗಿತ್ತೇ ವಿನಾ ಬೇಹುಗಾರಿಕ ಬಲೂನ್ ಅಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿತ್ತು. ಏರ್‌ಶಿಪ್ ಅನ್ನು ಹೊಡೆದುರುಳಿಸುವ ಮೂಲಕ ಅಮೆರಿಕ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂ ಸಿದೆ ಎಂದು ಆರೋಪಿಸಿದ್ದ ಚೀನ, ತಕ್ಕ ಪ್ರತ್ಯುತ್ತರ ನೀಡುವುದಾಗಿ ಬೆದರಿಕೆಯನ್ನೂ ಒಡ್ಡಿತ್ತು. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಚೀನಕ್ಕೆ ಎಚ್ಚರಿಕೆ ನೀಡಿರುವುದೇ ಅಲ್ಲದೆ ಭವಿಷ್ಯದಲ್ಲಿ ಇಂತಹ ಅತಿರೇಕದ ವರ್ತನೆ ತೋರದಿರುವಂತೆಯೂ ಕಿವಿಮಾತು ಹೇಳಿದ್ದಾರೆ.
ಈ ಬೆಳವಣಿಗೆಗಳ ನಡುವೆಯೇ ಚೀನ ಕಳೆದ ಹಲವಾರು ವರ್ಷಗಳಿಂದ ವಿಶ್ವದ ಪ್ರಬಲ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಗುರಿಯಾಗಿಸಿ ಇದೇ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದು ಆ ದೇಶಗಳಲ್ಲಿನ ಭದ್ರತಾ ವ್ಯವಸ್ಥೆ, ರಕ್ಷಣ ಜಾಲದ ಪ್ರಮುಖ ನೆಲೆಗಳ ಮಾಹಿತಿಯನ್ನು ಕಲೆಹಾಕುವ ಕಾರ್ಯದಲ್ಲಿ ನಿರತವಾಗಿದೆ ಎಂದು ಅಮೆರಿಕದ ರಕ್ಷಣ ಮತ್ತು ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖೀಸಿ ಮಾಧ್ಯಮವೊಂದು ವರದಿ ಮಾಡಿದೆ. ಅಮೆರಿಕದ ಮಿತ್ರ ರಾಷ್ಟ್ರಗಳಲ್ಲದೆ ಭಾರತ, ಜಪಾನ್ ಸಹಿತ ಕೆಲವೊಂದು ದೇಶಗಳಲ್ಲಿ ಚೀನ ಬೇಹುಗಾರಿಕೆ ನಡೆಸಲು ಇದೇ ಕಾರ್ಯತಂತ್ರವನ್ನು ಅನುಸರಿಸುತ್ತ ಬಂದಿದೆ. ಈ ಸಂಬಂಧ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಮಾಹಿತಿಯನ್ನು ನೀಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಕಣ್ಗಾವಲು ಏರ್‌ಶಿಪ್‌ಗ್ಳು ಚೀನ ಸೇನೆಯ ಭಾಗವಾಗಿದ್ದು ಬೇಹುಗಾರಿಕೆ ನಡೆಸಲೆಂದೇ ಈ ಬಲೂನ್‌ಗಳನ್ನು ಚೀನ ಸೇನೆ ಬಳಸುತ್ತಿದೆ. ಚೀನದ ಈ ವರ್ತನೆಯು ಆಯಾಯ ದೇಶಗಳ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವಂತಾಗಿದ್ದು ಅಂತಾರಾಷ್ಟ್ರೀಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಭಾರತವನ್ನು ಗುರಿಯಾಗಿಸಿ ಚೀನ ಸೇನೆ ಗಡಿಯಲ್ಲಿ ನಿರಂತರವಾಗಿ ಒಂದಲ್ಲ ಒಂದು ತಗಾದೆ ತೆಗೆಯುತ್ತಲೇ ಬಂದಿದೆಯಲ್ಲದೆ ಇಂಥ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಗೂಢಚಾರಿಕೆಯನ್ನು ನಡೆಸುವ ಪ್ರಯತ್ನ ನಡೆಸುತ್ತಿರುವುದು ಹೊಸದೇನಲ್ಲ. ಇಂಥ ಸಂದರ್ಭದಲ್ಲಿ ಭಾರತ ಚೀನಕ್ಕೆ ಸೂಕ್ತ ತಿರುಗೇಟು ನೀಡಿದೆ ಕೂಡ. ಇದೀಗ ಅಮೆರಿಕದ ವಿರುದ್ಧವೂ ಚೀನ ಈ ಕಾರ್ಯತಂತ್ರವನ್ನು ಅನುಸರಿಸಲು ಮುಂದಾಗಿ ಜಾಗತಿಕ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನಾದರೂ ಚೀನ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಜಾಗತಿಕ ಸಮುದಾಯ ಅದರ ವಿರುದ್ಧ ಆಕ್ರಮಣಕಾರಿ ನಿಲುವನ್ನು ತಾಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.