![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, May 4, 2022, 6:20 AM IST
ಕಡಬ: ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪದ ಎನ್ಕಜೆಯಲ್ಲಿನ ಇಮ್ಯಾನ್ಯುವೆಲ್ ಎ.ಜಿ. ಚರ್ಚ್‌ನ ಗೋಪುರದ ಶಿಲುಬೆಯನ್ನು ಕಿತ್ತು ಕೇಸರಿ ಧ್ವಜ ಹಾಕಿದ್ದಾರೆ ಎನ್ನುವ ಸುದ್ದಿಯ ಹಿನ್ನೆಲೆ ಹಿಂದೂಪರ ಸಂಘಟನೆಗಳ ಪ್ರಮುಖರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚರ್ಚ್‌ನಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಎರಡು ದಿನಗಳ ಹಿಂದೆ ಕಿಡಿಗೇಡಿಗಳು ಗೋಪುರದ ಶಿಲುಬೆಯನ್ನು ಕಿತ್ತು ಅಲ್ಲಿ ಕೇಸರಿ ಧ್ವಜ ಅಳವಡಿಸಿ ಚರ್ಚ್‌ನ ಬಾಗಿಲು ಒಡೆದು ಒಳಪ್ರವೇಶಿಸಿ ಹನುಮಂತನ ಫೋಟೋ ಇರಿಸಿ ದೀಪ ಹಚ್ಚಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದ್ದುದು ಗೊಂದಲಕ್ಕೆ ಕಾರಣವಾಗಿತ್ತು. ಅದು ಹಿಂದೂ ಪರ ಸಂಘಟನೆಗಳ ಕೃತ್ಯ ಎನ್ನುವ ದೂರುಗಳು ವ್ಯಕ್ತವಾಗಿತ್ತು. ಆದರೆ ಪೊಲೀಸ್ ಠಾಣೆಯಲ್ಲಿ ಆ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ.
ಆರೋಪದ ಹಿನ್ನೆಲೆ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆಯಲ್ಲಿ ಹಿಂದೂ ಸಂಘಟನೆಗಳ ಪಾತ್ರವನ್ನು ಅಲ್ಲಗಳೆದಿದ್ದಾರೆ. ಚರ್ಚ್ ಎನ್ನಲಾಗಿರುವ ಕಟ್ಟಡ ಸ್ಥಳೀಯ ಎನ್ಕಜೆ ವಿಶ್ವನಾಥ ಗೌಡ ಅವರಿಗೆ ಸೇರಿದ್ದು, ಅದನ್ನು ಈ ಹಿಂದೆ ಬಾಡಿಗೆ ಆಧಾರದಲ್ಲಿ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರಿಗೆ ನೀಡಲಾಗಿತ್ತು. ಆದರೆ ಅವರು ಅಲ್ಲಿ ಹಲವು ವರ್ಷಗಳ ಹಿಂದೆ ಕ್ರಿಶ್ಚಿಯನ್ ದಫನ ಭೂಮಿ ನಿರ್ಮಿಸಲು ಮುಂದಾದಾಗ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಹೊರಗಿನಿಂದ ಬಂದಿರುವ ಕ್ರಿಶ್ಚಿಯನ್ ಸಮುದಾಯದ ಕೆಲವರು ಅದೇ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಾಗುತ್ತಿದ್ದಾರೆ. ದಫನ ಭೂಮಿಗಾಗಿ ಮಣ್ಣು ಅಗೆದು ಗುಂಡಿಯನ್ನೂ ತೋಡಿದ್ದಾರೆ. ಜನರ ಅನುಕಂಪ ಗಳಿಸುವ ಉದ್ದೇಶದಿಂದ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಮುರಳಿಕೃಷ್ಣ ಹಸಂತಡ್ಕ ದೂರಿದರು. ಕೂಡಲೇ ಅಲ್ಲಿನ ಅಕ್ರಮ ರಚನೆಗಳನ್ನು ತೆರವು ಮಾಡಿ ವಿಶ್ವನಾಥ ಗೌಡರಿಗೆ ಸೇರಿದ ಜಮೀನನ್ನು ಅವರಿಗೆ ಕೊಡಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆಯವರು ಮಾಡಬೇಕು. ಇಲ್ಲದೇ ಹೋದರೆ ಉಗ್ರ ರೀತಿಯ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
ಆರೆಸ್ಸೆಸ್ ಮುಖಂಡ ವೆಂಕಟ್ರಮಣ ರಾವ್ ಮಂಕುಡೆ, ವಿಹಿಂಪ- ಬಜರಂಗ ದಳ ಕಡಬ ಪ್ರಖಂಡದ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಪ್ರಮೋದ್ ರೈ ನಂದಗುರಿ, ಉಮೇಶ್ ಶೆಟ್ಟಿ ಸಾಯಿರಾಂ, ಅಜಿತ್ ರೈ ಆರ್ತಿಲ ಮುಂತಾದವರು ಹಾಜರಿದ್ದರು.
You seem to have an Ad Blocker on.
To continue reading, please turn it off or whitelist Udayavani.