CM ಐಷಾರಾಮಿ ಜೆಟ್‌ನಲ್ಲಿ- ಇದು ಸಮಾಜವಾದದ ಪರಿಕಲ್ಪನೆಯೇ: ಆರ್. ಆಶೋಕ್ ಪ್ರಶ್ನೆ
Team Udayavani, Dec 23, 2023, 12:40 AM IST
ಬೆಂಗಳೂರು: ರಾಜ್ಯದಲ್ಲಿ ಮಕ್ಕಳು ಜೆಸಿಬಿಯಲ್ಲಿ ಶಾಲೆಗೆ ಹೋಗುತ್ತಾರೆ. ಆದರೆ ಮುಖ್ಯಮಂತ್ರಿ ಮತ್ತು ಅವರ ಆಪ್ತ ವಲಯದವರು ಐಷಾರಾಮಿ ಜೆಟ್‌ನಲ್ಲಿ ಹಾರಾಡುತ್ತಿದ್ದಾರೆ. ಇದೇನಾ ಸಿದ್ದರಾಮಯ್ಯ ಅವರ ಸಮಜವಾದ ಎಂದು ವಿಪಕ್ಷ ನಾಯಕ ಆರ್. ಅಶೋಕ ತರಾಟೆಗೆ ತೆಗೆದುಕೊಂಡರು.
ಬರದಿಂದ ತತ್ತರಿಸಿರುವ ರಾಜ್ಯದ ಜನರ ಬದುಕು ಸಂಕಷ್ಟದಲ್ಲಿದೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಈ ದೌಲತ್ತು ಬೇಕಿತ್ತಾ? ರಸ್ತೆ, ಹಳ್ಳ, ಗುಂಡಿ ಯಾವುದೂ ಬೇಡ ಅಂತ ಮುಖ್ಯಮಂತ್ರಿಗಳು ಜೆಟ್‌ನಲ್ಲಿ ಓಡಾಡಿಕೊಂಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಈಚೆಗೆ ಆಳಂದ ಶಾಸಕ ಬಿ.ಆರ್. ಪಾಟೀಲ್ ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಕುಂಠಿತ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ರಾಜ್ಯದ ಜನರ ಜೀವನಕ್ಕೆ ಕಾಂಗ್ರೆಸ್ ಕಲ್ಲು ಹಾಕಿದೆ. ಈ ಸರಕಾರ ಕಾಲುವೆ ನೀರಿಗೂ ತೆರಿಗೆ ಹಾಕುತ್ತಿದೆ. ಸಮುದ್ರವನ್ನು ಮಾತ್ರ ಬಿಟ್ಟಿದ್ದಾರಷ್ಟೇ. ಇದು ಕಾಂಗ್ರೆಸ್ ಆಡಳಿತ ವೈಖರಿ. ಕಾಂಗ್ರೆಸ್‌ನವರು ಎಲ್ಲದಕ್ಕೂ ಕಲ್ಲು ಹಾಕಿದ್ದಾರೆ. ಇದು ಬಹುಶಃ ಅದೇ ಪಕ್ಷದ ಶಾಸಕ ಬಿ.ಆರ್. ಪಾಟೀಲ್‌ಗೆ ಗೊತ್ತಿಲ್ಲ ಅನಿಸುತ್ತದೆ ಎಂದು ತೀಕ್ಷ್ಣವಾಗಿ ಹೇಳಿದರು.
ಸಿಎಂ ರಾಜೀನಾಮೆಗೆ ಆಗ್ರಹ
ಸಂಸತ್ತಿನಲ್ಲಿ ಭದ್ರತಾ ಲೋಪ ಮತ್ತು ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಮುಂದಾಗಿರುವ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಪ್ರತಿಭಟನೆಯು ದೆವ್ವದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ. ಸಂಸತ್ತಿನಲ್ಲಾದ ಘಟನೆಗೆ ಸಂಬಂಧಿಸಿ ಈಗಾಗಲೇ ಹಲವಾರು ತನಿಖೆಗಳು ನಡೆಯುತ್ತಿವೆ. ಆದರೆ ರಾಜ್ಯದ ವಿಧಾನಸಭೆಯಲ್ಲಿ ಅನಾಮಧೇಯ ವ್ಯಕ್ತಿ ಸೂಟ್‌ಕೇಸ್ ತಂದು ಕುಳಿತಿದ್ದರು. ಅದರಲ್ಲಿ ಬಾಂಬ್ ಇತ್ತೋ ಏನಿತ್ತೋ ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಏನು ಕ್ರಮ ಕೈಗೊಂಡಿದ್ದಾರೆ? ಸಂಸದ ಪ್ರತಾಪಸಿಂಹ ರಾಜೀನಾಮೆ ಕೇಳುತ್ತಿರುವ ಮುಖ್ಯಮಂತ್ರಿ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮೋದಿ ಯಾವ ವಿಮಾನದಲ್ಲಿ ಓಡಾಡುತ್ತಾರೆ: ಸಿಎಂ ಪ್ರಶ್ನೆ
ಪ್ರಧಾನಿ ನರೇಂದ್ರ ಮೋದಿ ಯಾವ ವಿಮಾನದಲ್ಲಿ ಓಡಾಡುತ್ತಾರೆ? ಅವರದು ಐಷಾರಾಮಿ ವಿಮಾನ ಅಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಸಚಿವ ಜಮೀರ್ ಅಹಮದ್ ಜತೆ ಐಷಾರಾಮಿ ಜೆಟ್‌ನಲ್ಲಿ ಪ್ರಯಾಣಿಸಿದ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ದೇಶದಲ್ಲಿ ಯಾವುದೇ ಸ್ಥಿತಿ ಇದ್ದರೂ ಮೋದಿ ಓಡಾಡುವ ವಿಮಾನ ಎಂಥದ್ದು? ಮೊದಲು ಅದನ್ನು ಬಿಜೆಪಿಯವರಿಗೆ ಕೇಳಿ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.