ಸ್ಥಿರ ಸರ್ಕಾರದಿಂದ ಸಮಗ್ರ ಅಭಿವೃದ್ಧಿಯ ವಿಶ್ವಾಸ
Team Udayavani, Feb 19, 2020, 3:07 AM IST
ವಿಧಾನಸಭೆ: ರಾಜ್ಯದ ಬಿಜೆಪಿ ಸರ್ಕಾರ ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ಜತೆಗೆ ಸ್ಪಷ್ಟ ಬಹುಮತ ಗಳಿಸುವ ಮೂಲಕ ರಾಜಕೀಯ ಸ್ಥಿರತೆ ನೀಡಿದೆ. ಬಿಜೆಪಿ ಸರ್ಕಾರದ ಆಡಳಿತಾ ವಧಿಯಲ್ಲಿ ರಾಜ್ಯದ ಎಲ್ಲ ಪ್ರದೇಶಗಳು ಸಮಾನವಾಗಿ ಅಭಿವೃದ್ಧಿಯಾಗುವ ಭರವಸೆ ಮೂಡಿಸಿದೆ ಎಂದು ಆಡಳಿತರೂಢ ಪಕ್ಷದ ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಭೋಜನಾನಂತರ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಸಲ್ಲಿಸುವ ಪ್ರಸ್ತಾಪದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಎದುರಾದ ನೆರೆ ನಿರ್ವಹಣೆ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ಹಾಗೂ ರಾಜಕೀಯ ಸ್ಥಿರತೆ ತರುವ ಮೂರು ಸವಾಲನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 100 ದಿನದಲ್ಲೇ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಾಜ್ಯದ ಎಲ್ಲ ಪ್ರದೇಶಗಳ ಅಭಿವೃದ್ಧಿಗೂ ಗಮನ ಹರಿಸುವ ಮೂಲಕ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನೆರೆ ಪ್ರದೇಶಗಳಿಗೆ ಖುದ್ದಾಗಿ ಯಡಿಯೂರಪ್ಪ ಅವರೇ ಪ್ರವಾಸ ಕೈಗೊಂಡಿದ್ದು, ಆ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಸಂಕಲ್ಪ ತೋರಿಸುತ್ತದೆ. ಮುಖ್ಯಮಂತ್ರಿಗಳೇ ನೆರೆ ಪ್ರದೇಶದಲ್ಲಿದ್ದ ಕಾರಣ ಅಧಿಕಾರಿಗಳು ಚುರುಕಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಯಿತು. ಕೃಷ್ಣಾ ಮೇಲ್ದಂಡೆ ಯೋಜನೆ- 3ನೇ ಹಂತದ ಕಾಮಗಾರಿ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಮಲಪ್ರಭಾ ಕಾಲುವೆಗಳ ಆಧುನೀಕರಣಕ್ಕಾಗಿ 1000 ಕೋಟಿ ರೂ. ಅನುದಾನದ ಜತೆಗೆ ಹೇಮಾವತಿ ನಾಲೆ ಆಧುನೀಕರಣಕ್ಕೂ 975 ಕೋಟಿ ರೂ. ವೆಚ್ಚ ಮಾಡಲು ಆಡಳಿತಾತ್ಮಕ ಮಂಜೂರಾತಿ ನೀಡುವ ಮೂಲಕ ಮುಖ್ಯಮಂತ್ರಿಗಳು ತಾರತಮ್ಯಕ್ಕೆ ಅವಕಾಶವಿಲ್ಲದಂತೆ ಎಲ್ಲ ಭಾಗದ ರೈತರಿಗೆ ನೆರವಾಗಿದ್ದಾರೆ ಎಂದರು.
ಗುಲಾಮಗಿರಿಯಿಂದ ಮುಕ್ತಿ: ಹೈದರಾಬಾದ್ ಕರ್ನಾಟಕವೆಂಬ ಗುಲಾಮಗಿರಿ ಸಂಕೇತವನ್ನು ತೊಡೆದು ಹಾಕಿರುವ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಮಾಡಿದ್ದಾರೆ. ಕಲಬುರಗಿ, ಬೀದರ್ ವಿಮಾನನಿಲ್ದಾಣಗಳಿಂದ ವಿಮಾನ ಹಾರಾಟ ಆರಂಭಿಸುವ ಮೂಲಕ ಸಂಪರ್ಕ ವ್ಯವಸ್ಥೆಗೆ ಒತ್ತು ನೀಡಿದ್ದಾರೆ. ತೊಗರಿಗೆ ಬೆಂಬಲ ಬೆಲೆ ಘೋಷಿಸಿ 20 ಕ್ವಿಂಟಾಲ್ ಖರೀದಿಗೂ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಇದಕ್ಕೆ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, “20 ಕ್ವಿಂಟಾಲ್ ತೊಗರಿ ಖರೀದಿ ಘೋಷಣೆಗಷ್ಟೇ ಸೀಮಿತವಾಗಿದ್ದು, ಎಲ್ಲಿಯೂ ಖರೀದಿ ಪ್ರಕ್ರಿಯೆ ನಡೆದಿಲ್ಲ’ ಎಂದು ದೂರಿದರೆ, “ರೈತರು ಸಂಕಷ್ಟದಲ್ಲಿದ್ದು ಸುಳ್ಳು ಹೇಳಬೇಡಿ’ ಎಂದು ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಕಿಡಿ ಕಾರಿದರು. ಬಿಜೆಪಿಯ ಹಿರಿಯ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಎಂಪಿಎಂ ಕಾರ್ಖಾನೆಗೆ 3000 ಹೆಕ್ಟೇರ್ ಭೂಮಿ ನೀಡಲಾಗಿದ್ದು, ಅದರಲ್ಲಿ ಗೋಮಾಳ, ಕಂದಾಯ ಭೂಮಿಯೂ ಸೇರಿದೆ.
ಬಹುತೇಕ ಪ್ರದೇಶದಲ್ಲಿ ನೀಲಗಿರಿ, ಅಕೇಷಿಯಾ ಬೆಳೆದಿದ್ದು, ಅರಣ್ಯದ ಸ್ವರೂಪವನ್ನೇ ಕಳೆದು ಕೊಂಡಿವೆ. ಹಾಗಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಭೂಮಿ ವಾಪಸ್ ನೀಡಿ ಅರಣ್ಯ ಬೆಳೆಸಲು ಉತ್ತೇಜನ ನೀಡಬೇಕು. ಮಂಗನಕಾಯಿಲೆ ಕುರಿತು ಜಾಗೃತಿ, ನಿಯಂತ್ರಣ ಕಾರ್ಯದಲ್ಲಿ ಶುಶ್ರೂಷಕಿಯರು ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಎಫ್ಡಿಗೆ ನಿರ್ದಿಷ್ಟ ಔಷಧವಿಲ್ಲದ ಕಾರಣ ಮುನ್ನೆಚ್ಚರಿಕೆ ಮುಖ್ಯ. ಹಾಗಾಗಿ 40 ವರ್ಷಗಳ ಹಿಂದಿನಿಂದ ಬಳಕೆಯಲ್ಲಿರುವ ಲಸಿಕೆ ಹಾಕಿಸಿಕೊಳ್ಳಲು ಆ ಭಾಗದ ಜನ ಮುಂದಾಗಬೇಕು ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಹಿಂಬಾಲಕರಿಂದಲೂ ಹಲ್ಲೆ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಮೇಲಿನ ಹಲ್ಲೆಗಳು ಸರಿಯಲ್ಲ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ದ ಕೂಡಲೇ ಗುಣಮುಖವಾಗಬೇಕು ಎಂಬ ನಿರೀಕ್ಷೆಯಲ್ಲಿ ಜನ ಇರುತ್ತಾರೆ. ಸ್ವಲ್ಪ ವ್ಯತ್ಯಾಸವಾದರೂ ವೈದ್ಯರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಕೆಲವೊಮ್ಮೆ ನಮ್ಮ ಹಿಂಬಾಲಕರು ಸೇರಿಕೊಳ್ಳುತ್ತಾರೆ.
ಸರ್ಕಾರಿ ಆಸ್ಪತ್ರೆಗೆ ಬರುವ ವೈದ್ಯರು ಮೆರಿಟ್ ಆಧಾರದಲ್ಲಿ ಸೀಟು ಪಡೆದವರಾಗಿದ್ದು, ಮೃದು ಸ್ವಭಾವದವರಾಗಿರುತ್ತಾರೆ. ಅವರನ್ನು ಗ್ರಾಮ ಪಂಚಾಯ್ತಿ ಸದಸ್ಯರು, ಮೀಸಲಾತಿಯಿಂದ ಬಂದವರು, 5ನೇ ಕ್ಲಾಸ್ ಫೇಲಾದವರೆಲ್ಲಾ ಎದೆ ಉಬ್ಬಿಸಿಕೊಂಡು ಪ್ರಶ್ನಿಸಿ ಹಲ್ಲೆ ನಡೆಸುವುದು ಸರಿಯಲ್ಲ. ಇದರಿಂದ ಗ್ರಾಮೀಣ ಸೇವೆಗೆ ವೈದ್ಯರು ಹಿಂಜರಿಯುವಂತಾಗುತ್ತದೆ. ಸರ್ಕಾರ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳ ತಡೆಗೆ ಕ್ರಮ ಕೈಗೊಳ್ಳಬೇಕು ಇಲ್ಲವೇ ವೈದ್ಯಕೀಯ ಕಾಲೇಜುಗಳನ್ನು ಹೆಚ್ಚು ಮಾಡಬೇಕು ಎಂದು ಶಾಸಕ ಹರತಾಳು ಹಾಲಪ್ಪ ಮನವಿ ಮಾಡಿದರು.
ಸರ್ಕಾರಕ್ಕೆ ಜನಾಭಿಪ್ರಾಯವಿದೆ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಂದು ವೋಟು, ಎರಡು ಸರ್ಕಾರ ಎಂದು ಮತದಾರರಿಗೆ ತಿಳಿಸಲಾಗಿತ್ತು. ಅದರಂತೆ ರಾಜ್ಯದ ಜನ 26 (ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್) ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿ ಸುವ ಮೂಲಕ ರಾಜ್ಯ ಸರ್ಕಾರ ರಚನೆಗೂ ಜನಾಭಿಪ್ರಾಯ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತಂದೆ, ಪುತ್ರ ಸೋತ ಕ್ಷಣದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರೆ ಉತ್ತಮ ವಾಗಿರುತ್ತಿತ್ತು ಎಂದು ಶಾಸಕ ಹರತಾಳು ಹಾಲಪ್ಪ ಕುಟುಕಿದರು. ಇದಕ್ಕೆ ಜೆಡಿಎಸ್‌ನ ಕೆಲ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.