ಮಾತುಕತೆಗಳ ಅನಂತರ ಬದಲಾಗುವುದೇ ಕಾಂಗ್ರೆಸ್?
Team Udayavani, Aug 20, 2020, 10:40 AM IST
ಕಾಂಗ್ರೆಸ್‌ನಲ್ಲೀಗ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಜೋರಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು “”ಗಾಂಧಿಯೇತರ ವ್ಯಕ್ತಿಗಳು ಪಕ್ಷದ ಮುಖ್ಯಸ್ಥರಾಗಬೇಕು ಎಂಬ ರಾಹುಲ್ ಹೇಳಿಕೆಗೆ ತಮ್ಮ ಒಪ್ಪಿಗೆ ಇತ್ತು” ಎಂದು ಹೇಳಿದ್ದಾರೆ. ಆದಾಗ್ಯೂ ಪ್ರಿಯಾಂಕಾ ವಾದ್ರಾ ಈ ಮಾತನ್ನು ವರ್ಷದ ಹಿಂದೆ ಸಂದರ್ಶನದ ರೂಪದಲ್ಲಿ ಹೇಳಿದ್ದಾರಾದರೂ, ಈಗ ಈ ಪುಸ್ತಕ ಬಿಡುಗಡೆಯಾಗಿದ್ದು ಕಾಂಗ್ರೆಸ್ ನಾಯಕತ್ವದ ವಿಚಾರದಲ್ಲಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಕೆಲವೇ ದಿನಗಳ ಹಿಂದಷ್ಟೇ ಕಾಂಗ್ರೆಸ್‌ನ ಉಚ್ಚಾಟಿತ ನಾಯಕ ಸಂಜಯ್ ಝಾ “ಸುಮಾರು ನೂರಕ್ಕೂ ಹೆಚ್ಚು ಕಾಂಗ್ರೆಸಿಗರು, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ’ ಎಂದು ಹೇಳಿದ್ದರು. ಆದರೆ ಇದನ್ನು ಅಲ್ಲಗಳೆದಿರುವ ಕಾಂಗ್ರೆಸ್, ಇದು ಬಿಜೆಪಿ ಪ್ರೇರಿತ ವದಂತಿ ಎಂದಿತ್ತು. ಇದು ವದಂತಿ ಹೌದೋ ಅಲ್ಲವೋ ಎನ್ನುವುದಕ್ಕಿಂತ ಹೆಚ್ಚಾಗಿ, ಗಾಂಧಿ ಯೇತರ ವ್ಯಕ್ತಿಯೊಬ್ಬರು ಕಾಂಗ್ರೆಸ್‌ನ ನೇತೃತ್ವ ವಹಿಸಬೇಕೆನ್ನುವ ವಿಷಯದಲ್ಲಿ ಕಾಂಗ್ರೆಸ್ ಈಗಲಾದರೂ ಗಂಭೀರವಾಗಿ ಯೋಚಿಸಲೇಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವೈಫಲ್ಯದ ಅನಂತರ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಕಾಂಗ್ರೆಸ್‌ನ ಹಿರಿಯ ನಾಯಕತ್ವವು “ಪ್ರಿಯಾಂಕಾ ವಾದ್ರಾರನ್ನು ಅಥವಾ ಸೋನಿಯಾರನ್ನೇ ಅಧ್ಯಕ್ಷರನ್ನಾಗಿಸಬೇಕೆಂದು’ ವಾದಿಸಿತು! ಗಾಂಧಿಯೇತರ ಕುಟುಂಬದವರಿಗೆ ನಾಯಕತ್ವ ವಹಿಸಿದರೆ ಮಾತ್ರ ಪಕ್ಷದ ಪುನರುತ್ಥಾನ ಸಾಧ್ಯ ಎಂಬ ಪ್ರತಿವಾದವೂ ಜೋರಾಗಿತ್ತು. ಆಗ ಅಧ್ಯಕ್ಷ ಸ್ಥಾನಕ್ಕೆ ಕೆಲವು ಪರ್ಯಾಯ ಹೆಸರುಗಳೂ ಕೇಳಿಬಂದವು. ಆದರೆ ಕೊನೆಗೆ ಮತ್ತೆ, ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿಯವರನ್ನೇ ನೇಮಿಸಲಾಯಿತು.
2014ರಿಂದ ಕಾಂಗ್ರೆಸ್‌ನ ಸ್ಥಿತಿ ಯಾವ ರಾಜ್ಯದಲ್ಲೂ ಹೇಳಿಕೊಳ್ಳುವಂತೆಯೇ ಇಲ್ಲ. ಅದು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಾಯಕರು ಆಂತರಿಕ ಜಗಳಗಳಲ್ಲಿ ಮುಳುಗಿದ್ದರೆ, ಮಹಾರಾಷ್ಟ್ರದಂಥ ರಾಜ್ಯದಲ್ಲಿ ಅದರ ಮೈತ್ರಿ ಸರಕಾರ ಅಧಿಕಾರದಲ್ಲಿ ಇದ್ದರೂ ಇಲ್ಲದಂತಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾರಂಥ ಪರಿಶ್ರಮಿಗಳನ್ನು ದೂರ ಮಾಡಿಕೊಂಡು ಮಧ್ಯಪ್ರದೇಶದಲ್ಲಿ ಅಧಿಕಾರವನ್ನೂ ಕಳೆದುಕೊಂಡಿದೆ. ರಾಷ್ಟ್ರ ಮಟ್ಟದಲ್ಲಿ ಬಲಿಷ್ಠ ನಾಯಕತ್ವದ ಅಭಾವ ಹಾಗೂ ಅನ್ಯ ನಾಯಕರನ್ನು ಬೆಳೆಸುವ ಮನಸ್ಥಿತಿ ಇಲ್ಲದಿರುವುದರಿಂದ ಹೀಗಾಗುತ್ತಿದೆ ಎಂದು ಸ್ವಪಕ್ಷೀಯರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಸಮಯದಿಂದ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹಲೋಟ್ ನಡುವೆ ಬಿಕ್ಕಟ್ಟು ಸೃಷ್ಟಿಯಾದ ಅನಂತರದಿಂದ ಂತೂ ಈ ವಾದ ಬಲ ಪಡೆದಿದೆ. ಸೋನಿಯಾರನ್ನು ಭೇಟಿಯಾಗಬೇಕೋ, ರಾಹುಲ್ ಜತೆ ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆಯೋ, ಪ್ರಿಯಾಂಕಾ ಮಾತಿಗೆ ಬಲವಿದೆಯೋ ತಿಳಿಯದಂಥ ಗೊಂದಲ ಎರಡೂ ಬಣಗಳಲ್ಲಿ ಸೃಷ್ಟಿಯಾಗಿದೆ.
ಏನೇ ಇದ್ದರೂ ಈಗಲಾದರೂ ಕಾಂಗ್ರೆಸ್ ಪಕ್ಷವು ಗಾಂಧಿ ಕುಟುಂಬದ ನೆರಳಿಂದ ಹೊರಬಂದು, ಅನ್ಯ ನಾಯಕರಿಗೆ ಜಾಗ ಕೊಡಲೇಬೇಕು. ಹಾಗೆ ಜಾಗ ಕೊಟ್ಟರೂ, ನೂತನ ಅಧ್ಯಕ್ಷರು “ಕೈಗೊಂಬೆ’ಯಂತಾಗಬಾರದು. ಅವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಾಗಬೇಕು. ಈ ವಿಚಾರದಲ್ಲಿ ಪ್ರಿಯಾಂಕಾ ಗಾಂಧಿ, “”ಯಾರೇ ಕಾಂಗ್ರೆಸ್‌ನ ಅಧ್ಯಕ್ಷರಾದರೂ ಅವರ ಆದೇಶವನ್ನು ಖಂಡಿತ ಪಾಲಿಸುತ್ತೇವೆ” ಎಂದು ಹೇಳಿರುವುದು ಸ್ವಾಗತಾರ್ಹ. ಆದರೆ ಇದೇ ಮನಃಸ್ಥಿತಿ ಕಾಂಗ್ರೆಸ್‌ನ ಎಲ್ಲ ನಾಯಕರಲ್ಲೂ ಮೂಡಬೇಕಾದ ಅಗತ್ಯವಿದೆ. ಆಗ ಮಾತ್ರ ರಾಷ್ಟ್ರಾದ್ಯಂತ ಕಾಂಗ್ರೆಸ್ ಒಂದು ಪ್ರಬಲ ಪಕ್ಷವಾಗಿ (ಪ್ರಬಲ ವಿಪಕ್ಷವಾಗಿಯಾದರೂ) ಬಲಿಷ್ಠವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.