Congress Government: ನನ್ನನ್ನು ರಾಜಕೀಯವಾಗಿ ಮುಗಿಸುವುದು ಭ್ರಮೆ: ಸಿಎಂ
ರಾಜಕೀಯ ಪಿತೂರಿಗೆ ರಾಜಕೀಯ ಹೋರಾಟದ ಮೂಲಕವೇ ಉತ್ತರ
Team Udayavani, Aug 20, 2024, 1:13 AM IST
ಬೆಂಗಳೂರು: ನಾನು ಯಾವ ತಪ್ಪೂ ಮಾಡಿಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಸಿದ್ದರಾಮಯ್ಯನನ್ನು ರಾಜಕೀಯವಾಗಿ ಮುಗಿಸುತ್ತೇನೆ ಎಂಬುದು ವಿಪಕ್ಷಗಳ ಭ್ರಮೆ ಅಷ್ಟೇ. ಅವರ ರಾಜಕೀಯ ಪಿತೂರಿಗೆ ರಾಜಕೀಯ ಹೋರಾಟದ ಮೂಲಕವೇ ಉತ್ತರ ನೀಡಲಾಗುವುದು.
– ಇದು ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ತಿರುಗೇಟು.
ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸೋಮವಾರ ಫೋಟೋ ಜರ್ನಲಿಸ್ಟ್ ವತಿಯಿಂದ ಆಯೋಜಿಸ ಲಾಗಿದ್ದ ಫೋಟೋ ಪ್ರದರ್ಶನ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ಜನರ ಆಶೀರ್ವಾದದಿಂದ ಅವರ ಸೇವೆಯಲ್ಲಿ ನಿರತನಾಗಿದ್ದೇನೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಯಾವುದೇ ತಪ್ಪು ಮಾಡಿಲ್ಲವೆಂದು ರಾಜ್ಯದ ಜನರಿಗೂ ಗೊತ್ತಿದೆ’ ಎಂದರು.
ನಮ್ಮ ವಿರುದ್ಧ ಮಾತ್ರ ಯಾಕೆ ಕ್ರಮ: ಡಿಕೆಶಿ ಪ್ರಶ್ನೆ
ಜನತಾದಳದ ಅಗ್ರಗಣ್ಯ ನಾಯಕ ಬರೀ ಬುರುಡೆ ಬಿಡುವ “ನವರಂಗಿ ನಕಲಿ ಸ್ವಾಮಿ’ ವಿರುದ್ಧ ಇಲ್ಲದ ಕ್ರಮ ನಮ್ಮ ವಿರುದ್ಧ ಯಾಕೆ ರಾಜ್ಯಪಾಲರೇ? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಟೀಕಿಸುವುದರ ಜತೆಗೆ ರಾಜ್ಯಪಾಲರ ನಡೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರಶ್ನಿಸಿದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಿಎಂ ಏನು ತಪ್ಪು ಮಾಡಿದ್ದಾರೆ? ಅಗಾಧ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಿದ್ದೀರಿ. ಅವರು (ಸಿಎಂ) ತಪ್ಪು ಮಾಡಿದ್ದಾರೆ ಅಂತ ಯಾರು ವರದಿ ನೀಡಿದ್ದಾರೆ?
ಹಾಗೆ ನೋಡಿದರೆ ಲೋಕಾಯುಕ್ತರು ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಮತ್ತು ಜೆಡಿಎಸ್‌ನ ನವರಂಗಿ, ಅಗ್ರಗಣ್ಯ ನಾಯಕ ನಕಲಿ ಸ್ವಾಮಿ ಕಳಂಕಿತರು ಅಂತ ವರದಿ ನೀಡಿದ್ದಾರೆ. ಅವರ ವಿರುದ್ಧ ಇಲ್ಲದ ಕ್ರಮ ನಮ್ಮ ವಿರುದ್ಧ ಯಾಕೆ? ನಕಲಿ ಸ್ವಾಮಿ ಬರೀ ಬುರುಡೆ ಬಿಡ್ತಾನೆ. ಅವರ ವಿರುದ್ಧದ ಫೈಲ್ ಪೆಂಡಿಂಗ್ ಯಾಕೆ’ ಎಂದು ಕೇಳಿದರು. ನಿಮ್ಮ ಈ ರೀತಿಯ ಯಾವ ಹುನ್ನಾರಗಳಿಗೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ, ಹೆದರುವುದಿಲ್ಲ. ಹೋರಾಟಕ್ಕೆ ಸಿದ್ಧವಾಗಿದ್ದೇವೆ ಎಂದರು.
ಸರಕಾರ ಬಂಡೆಯಂತೆ ಗಟ್ಟಿಯಾಗಿ ನಿಂತಿದೆ. ತಿಪ್ಪರಲಾಗ ಹಾಕಿದರೂ ಏನೂ ಮಾಡಲು ಆಗಲ್ಲ. ನಾವೆಲ್ಲರೂ ಸಿಎಂ ಬೆನ್ನಿಗೆ ಇದ್ದೇವೆ. ವಿಪಕ್ಷಗಳು ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿವೆ. ಏಳು ಕೋಟಿ ಜನರಿಂದ ಆಯ್ಕೆಯಾದ ಸರಕಾರ ನಮ್ಮದು. ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗಿಲ್ಲ.– ಈಶ್ವರ ಖಂಡ್ರೆ, ಅರಣ್ಯ ಸಚಿವ
ಮುಡಾ ನಿವೇಶನ ಹಂಚಿಕೆಯಲ್ಲಿ ಸಿಎಂ ಯಾವ ತಪ್ಪೂ ಮಾಡಿಲ್ಲ. ಮುಡಾದವರೇ ನಿವೇಶನ ನೀಡಿದ್ದಾರೆ. ಆದರೂ ಹಗರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ.ಇದಾವುದಕ್ಕೂ ನಾವು ಬಗ್ಗುವುದಿಲ್ಲ. ನಾವೆಲ್ಲರೂ ಸಿಎಂ ಬೆನ್ನಿಗಿದ್ದೇವೆ.
– ಕೆ.ಜೆ. ಜಾರ್ಜ್, ಇಂಧನ ಸಚಿವ
ಬಿಜೆಪಿಯೇ ಭ್ರಷ್ಟಾಚಾರದ ಗಂಗೋತ್ರಿ. ಬುಡಬುಡಕೆ ಜನ ಇವರು. ಇಂತಹವರು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ರಾಜಭವನ ಗುಮಾಸ್ತರ ಕಚೇರಿಯಾಗಿದೆ. ಮೆದುಳಿಲ್ಲದ ಸಲಹೆಗಾರರನ್ನು ರಾಜ್ಯಪಾಲರು ಇಟ್ಟುಕೊಂಡಿದ್ದಾರೆ. ಅದರಿಂದ ಈ ಎಲ್ಲ ಅವಾಂತರಗಳು ಆಗುತ್ತಿವೆ.
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ನೀವು ರಾಜ್ಯಪಾಲ ರಾಗಿರುವುದು ಯಾಕೆ? ಸಂವಿಧಾನದ ಪ್ರಕಾರ ಕೆಲಸ ಮಾಡುವುದಕ್ಕಾ ಅಥವಾ ಬಿಜೆಪಿ ಏಜೆಂಟರಾಗಿ ವರ್ತಿಸುವುದಕ್ಕಾ? ಏಕೆ ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ, ನಿರಾಣಿ ಕೇಸುಗಳು ಪೆಂಡಿಂಗ್ ಇಟ್ಟಿದ್ದೀರಾ? ರಾಜ್ಯದ ಗಟ್ಟಿ ನಿಲುವನ್ನು ಕೇಂದ್ರಕ್ಕೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ರಾಜ್ಯಪಾಲರನ್ನು ಬಳಸಿ ಸರಕಾರ ಬೀಳಿಸಲು ನೋಡುತ್ತಿದ್ದಾರೆ.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.