ಡಿ.ಕೆ.ಶಿವಕುಮಾರ್ ಬೆನ್ನಿಗೆ ನಿಂತ ಕಾಂಗ್ರೆಸ್
Team Udayavani, Sep 12, 2019, 3:09 AM IST
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಐಟಿ, ಇ.ಡಿ, ಸಿಬಿಐ ಸಂಸ್ಥೆಗಳು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪರವಾಗಿ ಒಕ್ಕಲಿಗರ ಸಂಘಟನೆಗಳ ಒಕ್ಕೂಟ ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರ ಸರ್ಕಾರ ಪ್ರತಿಪಕ್ಷಗಳ ನಾಯಕರನ್ನು ಕೇಂದ್ರದ ತನಿಖಾ ಸಂಸ್ಥೆಗಳ ಮೂಲಕ ನಿಯಂತ್ರಣ ಮಾಡುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರ ಮೇಲಷ್ಟೇ ಏಕೆ ಐಟಿ ದಾಳಿ ಆಗುತ್ತಿದೆ? ಬಿಜೆಪಿ ನಾಯಕರ ಮೇಲೆ ಏಕೆ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಎಲ್ಲ ರೀತಿಯ ತನಿಖೆಗೂ ಸಹಕರಿಸಿ, ಇ.ಡಿ ಅಧಿಕಾರಿಗಳು ಕರೆದ ಎಲ್ಲ ವಿಚಾರಣೆಗೂ ಹಾಜರಾಗಿದ್ದಾರೆ. ಗುಜರಾತ್ ಶಾಸಕರನ್ನು ಬಿಜೆಪಿಯ ಒತ್ತಡದಿಂದ ರಕ್ಷಿಸಿದ್ದಕ್ಕಾಗಿ ಅವರನ್ನು ರಾಜಕೀಯ ದುರುದ್ದೇಶಕ್ಕೆ ಬಂಧಿಸಲಾಗಿದೆ. ಇ.ಡಿ ಅಧಿಕಾರಿಗಳು ಅಮಾನವೀಯವಾಗಿ ಡಿಕೆಶಿ ತಾಯಿ, ಮಗಳನ್ನು ವಿಚಾರಣೆಗೆ ಕರೆಸಿಕೊಂಡಿದ್ದಾರೆ. ಬಿಜೆಪಿಯ ದಮನಕಾರಿ ನೀತಿಯ ವಿರುದ್ಧ ಎಚ್ಚರಿಕೆ ಕೊಡಲು ಪ್ರತಿಭಟನೆ ನಡೆಸಲಾಗಿದೆ. ಒಕ್ಕಲಿಗ ಸಮಾಜವಷ್ಟೇ ಅಲ್ಲ. ಎಲ್ಲಾ ಸಮುದಾಯದವರು ಬಿಜೆಪಿ ವಿರುದ್ಧ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಡಿ.ಕೆ.ಶಿವಕುಮಾರ್ ಬೆಂಬಲಕ್ಕಿದೆ ಎಂದು ಹೇಳಿದರು.
ಬಿಜೆಪಿಯಿಂದ ಹೇಡಿತನದ ರಾಜಕೀಯ: ಬಿಜೆಪಿಗೆ ಪ್ರತಿಪಕ್ಷಗಳ ನಾಯಕರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ ವಾಮ ಮಾರ್ಗದ ಮೂಲಕ ನಿಯಂತ್ರಿಸುವ ಪ್ರಯತ್ನ ನಡೆಸುತ್ತಿದೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು. ಐಟಿ, ಸಿಬಿಐ ಇಡಿಯಲ್ಲಿ ಬಿಜೆಪಿಯ ಸೀಳು ನಾಯಿಗಳಿದ್ದಾರೆ. ಬಿಜೆಪಿಯ ನಾಯಕರಿಗೆ ಚುನಾವಣಾ ರಣರಂಗದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲಾಗದೇ ಸರ್ಕಾರಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ವಿಜಯ ಮಲ್ಯ ದೇಶ ಬಿಟ್ಟು ಓಡಿ ಹೋದಾಗ ಬಿಜೆಪಿಯ ನಾಯಕರು ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.
ಒಕ್ಕಲಿಗ ಸಮುದಾಯ ಗುರಿಯಾಗಿಸಿದರೆ ಉಗ್ರ ಹೋರಾಟ: ನಂಜಾವಧೂತ ಸ್ವಾಮೀಜಿ
ಬೆಂಗಳೂರು: ಒಕ್ಕಲಿಗ ಸಮುದಾಯವನ್ನು ಗುರಿ ಯಾಗಿಸಿಕೊಂಡರೆ ಹಿಂದೆ ಚಿನ್ನಪ್ಪ ರೆಡ್ಡಿ ಆಯೋಗದ ವಿರುದ್ಧ ಮಾಡಿದ ಹೋರಾಟಕ್ಕಿಂತಲೂ ನಾಲ್ಕು ಪಟ್ಟು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಬೀದಿಗಿಳಿಯಬೇಕಾಗುತ್ತದೆ ಎಂದು ಸ್ಫಟಿಕಪುರಿ ಮಹಾ ಸಂಸ್ಥಾನದ ನಂಜಾವಧೂತ ಸ್ವಾಮೀಜಿ ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಕೆಶಿ ಪರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಒಕ್ಕಲಿಗ ಸಮುದಾಯ, ಬಿಜೆಪಿಯಿಂದಲೂ ಶಾಸಕರು ಹಾಗೂ ಸಂಸದರನ್ನು ಗೆಲ್ಲಿಸಿ ಕಳುಹಿಸಿದೆ. ವಾಸ್ತವ ಪರಿಸ್ಥಿತಿಯನ್ನು ಬಿಜೆಪಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೇಳುತ್ತಿದ್ದೇವೆ. ಇಂದಿನ ಪ್ರತಿಭಟನೆಯಿಂದ ಯಾರಿಗೆ ಸಂದೇಶ ರವಾನಿಸಬೇಕಿತ್ತೋ ಅದು ಆಗಿದೆ. ಇದು ಬರೀ ಸ್ಯಾಂಪಲ್ ಎಂದರು.
ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಒಕ್ಕಲಿಗ ಸಮುದಾಯದ ಮೂವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಆರ್.ಅಶೋಕ್, ಸಿ.ಟಿ.ರವಿ ಹಾಗೂ ಡಾ.ಅಶ್ವತ್ಥ್ ನಾರಾಯಣ ಅವರಿಗೆ ಜನರ ಜೊತೆಗಿದ್ದು ಕೆಲಸ ಮಾಡುವ ಇಲಾಖೆಗಳನ್ನು ನೀಡಿಲ್ಲ. ಆರ್.ಅಶೋಕ್ ಅವರ ಹಿರಿತನಕ್ಕೆ ಸಿಗಬೇಕಾದ ಗೌರವ, ಬಿಜೆಪಿ ಸರ್ಕಾರದಲ್ಲಿ ದೊರೆತಿಲ್ಲ. ಒಕ್ಕಲಿಗ ಸಮುದಾಯ ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು.
ಡಿಕೆಶಿ ತಪ್ಪು ಮಾಡದಿದ್ದರೆ ಪ್ರತಿಭಟನೆ ಏಕೆ?: ಶೆಟ್ಟರ್
ಬೆಳಗಾವಿ: ಡಿ.ಕೆ.ಶಿವಕುಮಾರ್ ಯಾವುದೇ ತಪ್ಪು ಮಾಡಿಲ್ಲ ಎನ್ನುವುದಾದರೆ ಹೆದರಿಕೆಯಿಲ್ಲದೆ ವಿಚಾರಣೆ ಎದುರಿಸಲಿ. ರಾಜಕೀಯ ಬೆರೆಸಿ, ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಕುಮಾರ್ ಅವರ ವ್ಯವಹಾರಗಳ ಎಲ್ಲ ದಾಖಲೆಗಳು ದೊರೆತ ನಂತರವೇ ವಿಚಾರಣೆ ನಡೆ ಯುತ್ತಿದೆ. ಒಂದು ವೇಳೆ ಅವರು ತಪ್ಪೇ ಮಾಡಿರದಿದ್ದರೆ ವಿಚಾರಣೆ ಎದುರಿಸಲು ಹೆದರಿಕೆ ಏಕೆ ಎಂದರು.
ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳು ಸ್ವಾಯತ್ತ ಸಂಸ್ಥೆಗಳು. ಈ ಸಂಸ್ಥೆಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆಗಳಲ್ಲ. ಯುಪಿಎ ಸರ್ಕಾರ ಇದ್ದಾಗಲೂ ಈ ಸಂಸ್ಥೆಗಳಿದ್ದವು. ತಪ್ಪು ಮಾಡಿದವರ ಮೇಲೆ ದಾಳಿಗಳು ನಡೆದಿದ್ದವು. ಎಲ್ಲವೂ ಕಾನೂನುಬದ್ಧವಾಗಿ ನಡೆಯುತ್ತಿದೆ. ಇದರಲ್ಲಿ ರಾಜಕೀಯ ಬೆರೆಸುವುದು ಹಾಗೂ ಪ್ರತಿಭಟನೆ ಮಾಡುವುದು ಸರಿಯಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿಯೇ ಅದಕ್ಕೆ ಉತ್ತರ ಸಿಗಲಿದೆ ಎಂದರು.
“ತನಿಖೆ ಮಾಡುವುದೇ ತಪ್ಪೆಂದರೆ ಹೇಗೆ?’
ಮೈಸೂರು: ಅಕ್ರಮ ಆಸ್ತಿ ಬಗ್ಗೆ ತನಿಖೆಗಾಗಿ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಒಕ್ಕಲಿಗರ ಸಂಘ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸಮುದಾಯಕ್ಕೆ ಶಾಂತವೇರಿ ಗೋಪಾಲಗೌಡರು, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂತಹ ಮಹನೀಯರು ಆದರ್ಶರಾಗಬೇಕೋ ಅಥವಾ ಇನ್ಯಾರು ಆದರ್ಶರಾಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ. ಸತ್ಯ ಹೇಳಿದರೆ ಕೆಲವರಿಗೆ ಅಪಥ್ಯವಾಗುತ್ತದೆ. ಸತ್ಯವಂತರಿಗಿದು ಕಾಲವಲ್ಲ ಎಂದರು.
ಜಾರಿ ನಿರ್ದೇಶನಾಲಯಕ್ಕೆ ಯಾವ ಜಾತಿ, ಯಾವ ಪಕ್ಷ ಇದೆ. ಇ.ಡಿ ಹುಟ್ಟು ಹಾಕಿದ್ದೇನು ಬಿಜೆಪಿಯಲ್ಲ. ಕೋಟ್ಯಂತರ ರೂ.ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಇ.ಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ತನಿಖೆ ಮಾಡುವುದೇ ತಪ್ಪು ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಚಲುವರಾಯಸ್ವಾಮಿ ಭಾಷಣಕ್ಕೆ ವಿರೋಧ
ಬೆಂಗಳೂರು: ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ನಾಯಕರೂ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸು ತ್ತಿದ್ದರು. ಅದೇ ಪ್ರತಿಭಟನೆಯಲ್ಲಿ ಮಾಜಿ ಸಚಿವ ಚಲುವರಾಯ ಸ್ವಾಮಿ ಕೂಡ ಪಾಲ್ಗೊಂಡಿದ್ದರು. ಅವರಿಗೂ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡುವಂತೆ ಕೋರಲಾ ಯಿತು. ಅವರು ಮಾತನಾಡಲು ಆರಂಭಿಸಿದಾಗ ಅವರಿಗೆ ಮಾತನಾಡಲು ಅವಕಾಶ ನೀಡದಂತೆ ಆಗ್ರಹಿಸಿದರು. ಸಾರ್ವ ಜನಿಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಲುವರಾಯಸ್ವಾಮಿ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
“ಜಾತಿ ಬಣ್ಣ ಸರಿಯಲ್ಲ’
ಚಿತ್ರದುರ್ಗ: ಡಿ.ಕೆ.ಶಿವಕುಮಾರ್ ಬಂಧನ ಪ್ರಕರಣಕ್ಕೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಸದ್ಯ ಇ.ಡಿ ವಶದಲ್ಲಿದ್ದಾರೆ. ಅವರಿಗೆ ಜಾಮೀನು ಸಿಕ್ಕಿಲ್ಲ. ಹೀಗಿರುವಾಗ ಒಕ್ಕಲಿಗ ಸಮುದಾಯವನ್ನು ಎತ್ತಿ ಕಟ್ಟಿ ಪ್ರತಿಭಟಿಸುವುದು ಸರಿಯಲ್ಲ. ಕಳ್ಳನನ್ನು ಕಳ್ಳನೆಂದು ಕರೆದರೆ ಸಿಟ್ಟು ಬರುತ್ತದೆ. ಆದ್ದರಿಂದ ಕಳ್ಳ ಅಲ್ಲ ಅನ್ನೋದನ್ನು ಸಾಬೀತು ಮಾಡಬೇಕು. ಕಾಂಗ್ರೆಸ್‌ನವರೂ ದ್ವೇಷದ ರಾಜಕಾರಣ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ತಪ್ಪಿತಸ್ಥ ಅಲ್ಲ ಎಂದು ಹೊರಗೆ ಬಂದರೆ ಸಂತೋಷ ಎಂದರು.
ಇ.ಡಿ ಸಮನ್ಸ್: ಮೇಲ್ಮನವಿ ವಿಚಾರಣೆ ಮುಂದಕ್ಕೆ
ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ದೆಹಲಿಯ ಮನೆಗಳಲ್ಲಿ ದೊರೆತ 8.69 ಕೋಟಿ ರೂ.ಬೇನಾಮಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ತೀರ್ಪಿನ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಲಾಗಿದೆ. ದೆಹಲಿಯ ಮನೆಗಳಲ್ಲಿ ದೊರೆತ 8.69 ಕೋಟಿ ರೂ.ಬೇನಾಮಿ ಹಣ ಪತ್ತೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿ, ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿತ್ತು. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಇತರ ಮೇಲ್ಮನವಿಗಳು ಸೆ.16ರಂದು ವಿಚಾರಣೆಗೆ ನಿಗದಿಯಾಗಿವೆ. ಹೀಗಾಗಿ, ಈ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನೂ ಅಂದೇ ನಡೆಸಲಾಗುವುದು ಎಂದು ತಿಳಿಸಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ರಾಜ್ಯದ ಇತಿಹಾಸದಲ್ಲಿ ಅನೇಕ ದಾಳಿಗಳಾಗಿವೆ. ಯಾವ ಸಂಸ್ಥೆ, ಯಾರ ಪರವಾಗಿಯೂ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ಒಬ್ಬೊಬ್ಬರಿಗೆ ಒಂದೊಂದು ನೀತಿಗಳಿಲ್ಲ. ಇವತ್ತು ಕಾನೂನು ಎತ್ತರದಲ್ಲಿದೆ. ಡಿಕೆಶಿ ಅವರಿಗಾಗಿ ಕಾನೂನನ್ನು ಕೆಳಗಿಳಿಸಲಾಗದು. ಕಾನೂನು ಪ್ರಕಾರ ಏನಾಗಬೇಕೋ ಅದು ಆಗುತ್ತಿದೆ. ಕಾನೂನಿನ ಬಗ್ಗೆ ಮಾತನಾಡಿ ನಾನು ದೊಡ್ಡಸ್ತಿಕೆ ತೋರಿಸುವುದಿಲ್ಲ.
-ಬಿ. ಶ್ರೀರಾಮುಲು, ಆರೋಗ್ಯ ಸಚಿವ
ಒಕ್ಕಲಿಗರೆಂದರೆ ಒಂದು ಸಮುದಾಯ ಮಾತ್ರ ವಲ್ಲ. ಎಲ್ಲಾ ಸಮಾಜದಲ್ಲಿಯೂ ಒಕ್ಕಲಿಗರಿದ್ದಾರೆ. ಒಕ್ಕಲುತನ ಮಾಡುವವರೆಲ್ಲರೂ ಒಕ್ಕಲಿಗರೇ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಒಕ್ಕಲಿಗರು ಇಂದು ಪ್ರತಿಭಟನೆಗೆ ಇಳಿದಿದ್ದಾರೆ.
-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ
ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ನ ನಿಷ್ಠಾವಂತ ನಾಯಕರು. ಅದೇ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಿದೆ. ನಾವೆಲ್ಲ ಡಿ.ಕೆ.ಶಿವಕುಮಾರ್ ಜೊತೆಗೆ ಇದ್ದೇವೆ.
-ಟಿ.ಬಿ. ಜಯಚಂದ್ರ, ಮಾಜಿ ಸಚಿವ
ಗುಜರಾತ್ ಶಾಸಕರಿಗೆ ರಕ್ಷಣೆ ಕೊಟ್ಟ ಬಳಿಕ ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾಗಿದೆ. ಮಾಜಿ ಸಚಿವ ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ. ಹೀಗಾಗಿಯೇ ಅವರನ್ನು ರಾಜಕೀಯವಾಗಿ ಮುಗಿಸುವ ಕೆಲಸ ಮಾಡುತ್ತಿದ್ದಾರೆ.
-ಎಲ್. ಆರ್. ಶಿವರಾಮೇಗೌಡ, ಮಾಜಿ ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.