Sullia; ನಿರಂತರ ಕಳ್ಳತನ; ಓರ್ವನ ಹಿಡಿದ ಪೈಚಾರಿನ ಯುವಕರು
Team Udayavani, Dec 2, 2024, 11:32 PM IST
ಸುಳ್ಯ: ಎರಡು ದಿನಗಳ ಹಿಂದೆ ಪೈಚಾರು ಫುಡ್ ಪಾಯಿಂಟ್ ಹೊಟೇಲಿಗೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪದಲ್ಲಿ ಓರ್ವನನ್ನು ಪೈಚಾರಿನ ಯುವಕರೇ ಹಿಡಿದು ಸೋಮವಾರ ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಶನಿವಾರ ನಡೆದಿದ್ದ ಹೊಟೇಲ್ ಕಳ್ಳತನದ ಬಳಿಕ ಸ್ಥಳೀಯ ಯುವಕರು ಈ ತನಕ ಪತ್ತೆಗಾಗಿ ಹಗಲು ರಾತ್ರಿ ಎನ್ನದೇ ಗುಂಡ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಪುತ್ತೂರು, ಕಲ್ಲುಗುಂಡಿ ಮುಂತಾದ ಕಡೆಗಳಿಗೆ ಇಬ್ಬರು, ಮೂವರ ತಂಡವನ್ನು ಮಾಡಿ ಕಳ್ಳತನ ನಡೆಸಿದಾತನ ಹುಡುಕಾಟಕ್ಕೆ ಮುಂದಾಗಿದ್ದರು. ಕಳ್ಳನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ ಈತನನ್ನು ಕಂಡಲ್ಲಿ ಮಾಹಿತಿ ನೀಡುವಂತೆ ಕೋರಿದ್ದರು.
ಸೋಮವಾರ ಮಧ್ಯಾಹ್ನ ಪೈಚಾರಿನ ಆರ್. ಬಿ ಬಶೀರ್, ನಝಿರ್ ಶಾಂತಿನಗರ, ಅಶ್ರಫ್ ಅಚ್ಚಪ್ಪು, ರಿಫಾಯಿ, ಕರೀಂ ಫುಡ್ ಪಾಯಿಂಟ್ ಮೊದಲಾದವರು ಪುತ್ತೂರು ಭಾಗದಲ್ಲಿ ಹುಡುಕಾಟ ನಡೆಸುತಿದ್ದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದ ಈ ಕಳ್ಳನನ್ನು ಪುತ್ತೂರು ರೈಲು ನಿಲ್ದಾಣದ ಬಳಿ ಕಂಡಿದ್ದು ಕೂಡಲೇ ಅಲ್ಲಿ ಹುಡುಕಾಟ ನಡೆಸುತ್ತಿದ್ದ ತಂಡಕ್ಕೆ ಮಾಹಿತಿ ನೀಡಿದರು.
ತತ್‌ಕ್ಷಣ ಯುವಕರ ತಂಡ ಅಲ್ಲಿಗೆ ತೆರಳಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಹೆಸರು ಮತ್ತು ವಿಳಾಸ ತಿಳಿದು ಬರಬೇಕಷ್ಟೆ. ಬಳಿಕ ಆತನನ್ನು ಸುಳ್ಯಕ್ಕೆ ತಂದು ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.