ರೈತರ ಕುರಿತ ವಿವಾದಾತ್ಮಕ ಹೇಳಿಕೆ: ಶಿವಾನಂದ ಪಾಟೀಲ್ ತಲೆದಂಡಕ್ಕೆ ಆಗ್ರಹ
ವಿಪಕ್ಷ, ರೈತ ಮುಖಂಡರ ಆಕ್ರೋಶ
Team Udayavani, Dec 25, 2023, 10:44 PM IST
ಬೆಂಗಳೂರು: “ಸಾಲ ಮನ್ನಾ ಆಗುತ್ತದೆ ಎಂಬ ಆಸೆಯಿಂದ ಮ್ಯಾಗೇ ಮ್ಯಾಗೇ ಬರ ಬರಲಿ ಎಂದು ರೈತರು ಬಯಸುತ್ತಾರೆ. ಹಾಗೆ ಬಯಸಬಾರದು’ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿವಾದದ ಕಿಚ್ಚು ಹೊತ್ತಿಸಿದ್ದು, ವಿಪಕ್ಷ ಮತ್ತು ರೈತರ ಆಕ್ರೋಶಕ್ಕೂ ಗುರಿಯಾಗಿದೆ. ಈ ಹೇಳಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಚಿವ ಶಿವಾನಂದ ಪಾಟೀಲ್ ಮತ್ತು ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿವಾನಂದ ಪಾಟೀಲ್ ರೈತರಲ್ಲಿ ಕ್ಷಮೆ ಯಾಚಿಸಬೇಕು ಇಲ್ಲವೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸೋಮವಾರ ಸುದ್ದಿಗಾರರ ಜತೆಗೆ ಮಾತ ನಾಡಿದ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ರೈತರನ್ನು ಅವಮಾನಿಸುತ್ತಿದ್ದಾರೆ. ಅಂಥ ಸಚಿವರಿಗೆ ಮುಖ್ಯಮಂತ್ರಿ ಬುದ್ಧಿವಾದ ಹೇಳಲಿ. ಒಂದು ವೇಳೆ ತಿದ್ದಿಕೊಳ್ಳದೆ ಹೋದರೆ ಸಚಿವರ ರಾಜೀನಾಮೆ ಪಡೆಯಲಿ ಎಂದರು.
ಬರ ಸಂಕಷ್ಟದ ಸಮಯದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಮತ್ತವರ ತಂಡದ ಐಷಾರಾಮಿ ದಿಲ್ಲಿ ಪ್ರವಾಸದ ನಡೆಯನ್ನು ಖಂಡಿಸುತ್ತೇನೆ. ನಾವೇನೂ ಮುಖ್ಯಮಂತ್ರಿ ಗಳನ್ನು ಜಟಕಾ ಬಂಡಿಯಲ್ಲಿ, ಎತ್ತಿನ ಗಾಡಿಯಲ್ಲಿ ಹೋಗಿ ಬನ್ನಿ ಎಂದು ಹೇಳುವುದಿಲ್ಲ. ಅತಿ ವಿಲಾಸಿತನ ಸಲ್ಲದು ಎನ್ನುತ್ತಿದ್ದೇನೆ. ಇದರ ಜತೆಗೆ ಸಚಿವರಾದ ಶಿವಾನಂದ ಪಾಟೀಲ್, ಜಮೀರ್ ಅಹ್ಮದ್ ಮುಂತಾದವರ ನಡವಳಿಕೆ ನಾವೆಲ್ಲ ತಲೆತಗ್ಗಿಸುವಂತ ರೀತಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಪುಟದಿಂದ ವಜಾಮಾಡಿ
ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಮಾತನಾಡಿ, ರೈತರನ್ನು ಅಪಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿರುವ ಸಚಿವ ಶಿವಾನಂದ ಪಾಟೀಲ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ಬರದಿಂದಾಗಿ ರೈತರು ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವುದು ಸರಕಾರದ ಕರ್ತವ್ಯ. ಅಧಿಕಾರ ತಲೆಗೆ ಹೋದ ಮೇಲೆ ಇಂತಹ ದುರಹಂಕಾರಿ ಮಾತುಗಳು ಬರುತ್ತವೆ ಎಂದರು.
ಜಾರಕಿಹೊಳಿ ಸಮಜಾಯಿಷಿ
ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಹಲವು ಸಚಿವರು ಸಮಜಾಯಿಷಿ ನೀಡಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ರೈತರು ಯಾವುದೇ ಕಾರಣಕ್ಕೂ ಬರಗಾಲ ಬರಲಿ ಅಂತ ಅಪೇಕ್ಷಿಸುವುದಿಲ್ಲ. ಬರಗಾಲ ಬಂದರೆ ರೈತರಿಗೆ ಮಾತ್ರವಲ್ಲ, ಎಲ್ಲರಿಗೂ ತೊಂದರೆ ಆಗುತ್ತದೆ. ಸಚಿವರು ಏನೋ ಮಾತನಾಡುವಾಗ ಎಲ್ಲೋ ತಪ್ಪಾಗಿರಬೇಕು ಎಂದು ಸಮಜಾಯಿಷಿ ನೀಡಿದರು. ರೈತರು, ಬರ, ಸಾಲ ಮನ್ನಾ ವಿಷಯದಲ್ಲಿ ಶಿವಾನಂದ ಪಾಟೀಲ್ ಏನು ಹೇಳಿಕೆ ನೀಡಿದ್ದಾರೆಂದು ಗಮನಿಸಿಲ್ಲ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ರೈತ ಮುಖಂಡರ ಆಕ್ರೋಶ
ಬೆಂಗಳೂರು: ಶಿವಾನಂದ ಪಾಟೀಲ್ ಹೇಳಿಕೆಗೆ ರೈತ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು, ಪಾಟೀಲ್ ಅವರು ರೈತರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು, ಇದು ಅವಿವೇಕದ ಪರಮಾವಧಿಯಾಗಿದೆ. ಮಂತ್ರಿಯಾಗಿ ಜವಾಬ್ದಾರಿಯುತ ಹೇಳಿಕೆ ನೀಡುವುದನ್ನು ಅವರು ಕಲಿಯಬೇಕು. ರೈತರು ಸರಕಾರ ಸಾಲ ಮನ್ನಾ ಮಾಡಲಿ ಎಂದು ಬಯಸುವುದಿಲ್ಲ. ಪಡೆದಿರುವ ಸಾಲವನ್ನು ರೈತರು ಭೂಮಿಗೆ ಹಾಕಿದ್ದಾರೆ. ಆದರೆ ಪ್ರಾಕೃತಿಕ ಕಾರಣಗಳಿಂದಾಗಿ ಬೆಳೆ ಬಾರದೆ ಸಾಲ ಮರುಪಾವತಿ ಮಾಡಲು ಆಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ ಎಂದರು.
ರಘು ಕೌಟಿಲ್ಯ ಆಕ್ರೋಶ
ಮೈಸೂರು: ರೈತರ ಬಗ್ಗೆ ಲಘುವಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಆಗ್ರಹಿ ಸಿ ದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಹೇಳಿಕೆ ಕ್ರೌರ್ಯದ ಪರಮಾವಧಿ. ರೈತರ ಬಗ್ಗೆ ತಾತ್ಸಾರದಿಂದ ಮಾತನಾಡುವ ಹಾಗೂ ಅವರ ಆತ್ಮಹತ್ಯೆ ಬಗ್ಗೆ ವ್ಯಂಗ್ಯವಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದರು.
ಶಿವಾನಂದ ಪಾಟೀಲ್ ರೈತರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಅನ್ನದಾತನ ಕಷ್ಟಗಳನ್ನು ಅವಹೇಳನ ಮಾಡುವುದು ಸರಿಯಲ್ಲ. ಸಚಿವರು ಇಂಥ ವಿಷಯಗಳ ಬಗ್ಗೆ ಬಹಳ ಎಚ್ಚರಿಕೆ, ಸೂಕ್ಷ್ಮತೆ, ಸಂಯಮ ದಿಂದ ಮಾತನಾಡಬೇಕು. ನಾನು ಕೃಷಿ ಸಾಲ ಮನ್ನಾ ಮಾಡುವ ಮುನ್ನ ರಾಜ್ಯದಲ್ಲಿ ನಡೆದ ಸರಣಿ ಆತ್ಮಹತ್ಯಾಕಾಂಡ ನೆನಪು ಮಾಡಿಕೊಂಡರೆ ಈಗಲೂ ಮೈ ನಡುಗುತ್ತದೆ. ರೈತ ಕೇಳುತ್ತಿರುವುದು ತನ್ನ ಹಕ್ಕನ್ನಷ್ಟೇ, ಭಿಕ್ಷೆಯನ್ನಲ್ಲ. ಸಚಿವರು ಬೇಷರತ್ ಕ್ಷಮೆ ಕೇಳಬೇಕು.
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ಇದೇ ಸಚಿವರು ಈ ಹಿಂದೆ 5 ಲಕ್ಷ ರೂ. ಪರಿಹಾರ ಸಿಗುತ್ತದೆಂಬ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರು. ಈಗ ಮತ್ತೆ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಯಾವುದೇ ಸಚಿವರು ಇಂಥ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ರೈತ ವಿರೋ ಧಿ ಹೇಳಿಕೆ ನೀಡುವ ಸಚಿವರಿಗೆ ಅನ್ನದಾತರ ಬಗ್ಗೆ ಗೌರವ ಇದೆಯೋ, ಇಲ್ಲವೋ ಎಂಬುದನ್ನು ಜನರೇ ಹೇಳಬೇಕು.
-ಬಸನಗೌಡ ಪಾಟೀಲ್ ಯತ್ನಾಳ್ , ಬಿಜೆಪಿ ಶಾಸಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.