Coronary Angioplasty: ಕೊರೊನರಿ ಆಂಜಿಯೋಪ್ಲಾಸ್ಟಿಯ ಅನಂತರದ ಜೀವನಶೈಲಿ
Team Udayavani, Aug 20, 2023, 8:45 AM IST
ಪರಿಧಮನಿಯ ಕಾಯಿಲೆಯು ಅಥವಾ ಕೊರೊನರಿ ಆರ್ಟರಿ ಕಾಯಿಲೆಯು ಹೃದಯದ ರೋಗಗಳ ಪೈಕಿ ಅತ್ಯಂತ ಸಾಮಾನ್ಯವಾಗಿದ್ದು, ಭಾರತದಲ್ಲಿ ಮತ್ತು ಪಾಶ್ಚಾತ್ಯ ದೇಶದಲ್ಲಿ ಮರಣದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಭಾರತವು 142.86 ಕೋಟಿಗಳಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಅದರಲ್ಲಿ ಪರಿಧಮನಿಯ ಕಾಯಿಲೆಗೆ ಪ್ರತೀ ವರ್ಷ ಸರಿಸುಮಾರು 2.4 ಲಕ್ಷ ಮರಣಗಳು ಸಂಭವಿಸುತ್ತವೆ. ಪ್ರತೀ ಅರ್ಧ ನಿಮಿಷಕ್ಕೆ ಪರಿಧಮನಿಯ ಕಾಯಿಲೆ ಇರುವ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಶೇ. 30ರಷ್ಟು ನಗರಗಳಲ್ಲಿ, ಶೇ. 15ರಷ್ಟು ಗ್ರಾಮೀಣ ಜನರಲ್ಲಿ ಕಂಡುಬರುತ್ತದೆ.
ಹೃದಯಕ್ಕೆ ರಕ್ತ ಪೂರೈಸಲು ಇರುವ ರಕ್ತನಾಳಗಳಿಗೆ “ಕೊರೊನರಿ ರಕ್ತನಾಳಗಳು’ ಎಂದು ಹೆಸರು. ಈ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಮತ್ತು ಕ್ಯಾಲ್ಸಿಯಂ ಶೇಖರಣೆಗೊಂಡು, ರಕ್ತನಾಳಗಳ ಒಳ ಪದರ ಕುಗ್ಗಲು ಆರಂಭವಾಗಿ ಬ್ಲಾಕ್ ಉಂಟಾಗುತ್ತದೆ. ಈ ಬ್ಲಾಕ್ ಶೇ. 70ಕ್ಕಿಂತ ಜಾಸ್ತಿ ಇದ್ದರೆ ಅದು ರಕ್ತನಾಳಗಳ ಕಾರ್ಯವನ್ನು ನಿರ್ಬಂಧಿಸುವುದರಿಂದ ಹೃದಯಾಘಾತ ಆಗುವ ಸಂಭವವಿರುತ್ತದೆ.
ಪರಿಧಮನಿಯ ಕಾಯಿಲೆಗೆ ಚಿಕಿತ್ಸೆಯು ಬಹುರೂಪಿಯಾಗಿದ್ದು, ವೈದ್ಯಕೀಯ ನಿರ್ವಹಣೆ, ಶಸ್ತ್ರಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆಗಳನ್ನು ಒಳಗೊಂಡಿದೆ. ಜೀವನಶೈಲಿಯ ಬದಲಾವಣೆ ಮತ್ತು ಮನಸ್ಸಿನ ಒತ್ತಡದ ನಿಯಂತ್ರಣ ಇವುಗಳು ಎಲ್ಲ ತರಹದ ಪ್ರಾಥಮಿಕ ಮತ್ತು ದ್ವಿತೀಯ ಪರಿಧಮನಿಯ ಕಾಯಿಲೆಗಳ ತಡೆಗಟ್ಟುವಿಕೆಯಲ್ಲಿ ಬಹಳ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಹೃದ್ರೋಗಿಗಳಲ್ಲಿ ಇತರ ಚಿಕಿತ್ಸೆಗಳನ್ನು ಪ್ರಾರಂಭಿಸಿದ ಅನಂತರ ಜೀವನಶೈಲಿಯ ಬದಲಾವಣೆಯು ರೋಗ ತಡೆಗಟ್ಟುವುದು ಮಾತ್ರವಲ್ಲದೆ, ಹೆಚ್ಚುವರಿ ಪರಿಣಾಮಗಳನ್ನೂ ಉಂಟು ಮಾಡುತ್ತದೆ ಎಂದು ಸಾಬೀತಾಗಿದೆ. ಇತ್ತೀಚೆಗಿನ ಅಧ್ಯಯನದ ಪ್ರಕಾರ ಪರಿಧಮನಿಯ ಕಾಯಿಲೆಯ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಜೀವನ ಶೈಲಿಯ ಬದಲಾವಣೆಗಳು ಚಿಕಿತ್ಸಾ ಕ್ರಮದ ಒಂದು ಅವಿಭಾಜ್ಯ ಅಂಗವಾಗಿದೆ.
ನಿರಂತರ ಜೀವನಶೈಲಿಯ ಬದಲಾವಣೆ, ತೀವ್ರವಾದ ಪರಿಧಮನಿಯ ಕಾಯಿಲೆ (Acute Coronary Syndrome) ಮತ್ತು ಆಂಜಿಯೋಪ್ಲಾಸ್ಟಿ ಅನಂತರ ಕಂಡುಬರುವ ಪ್ರಮುಖ ಹೃದಯದ ಪ್ರತಿಕೂಲ ಘಟನೆಗಳನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪರಿಣಾಮವನ್ನು ಬೀರುತ್ತದೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ಅಲ್ಲದೆ ತೀವ್ರವಾದ ಪರಿಧಮನಿಯ ಕಾಯಿಲೆ ಮತ್ತು ಅದಕ್ಕೆ ಮಾಡಿದ ಆಂಜಿಯೋಪ್ಲಾಸ್ಟಿ/ ಸ್ಟೆಂಟಿಂಗ್ ನ ಅನಂತರ, ನಿಯಮಿತ ರಕ್ತದೊತ್ತಡ (ಬಿಪಿ) ಮತ್ತು ರಕ್ತದ ಗ್ಲೂಕೋಸಿನ ತಪಾಸಣೆಯನ್ನು ಮಾಡುವುದು ಕೂಡ ರೋಗಿಯ ಜೀವನಕ್ಕೆ ಅಗತ್ಯವಾದ ಪ್ರಮುಖ ಬದಲಾವಣೆ ಆಗಿದೆ.
ಕೊರೊನರಿ ಅಥವಾ ಹೃದಯದ ರಕ್ತನಾಳದ ಆಂಜಿಯೋಪ್ಲಾಸ್ಟಿ ಎಂದರೇನು? ಕೊರೊನರಿ ಆಂಜಿಯೋಪ್ಲಾಸ್ಟಿ ಎಂಬುದು ಹೃದಯದ ರಕ್ತನಾಳದಲ್ಲಿ ಅಥಿರೋಸ್ ಕ್ಲಿರೋಸಿಸ್ (Atherosclerosis) ನಿಂದ ಉಂಟಾದ ಬ್ಲಾಕ್ ಅನ್ನು ತೆಗೆದು, ಆ ಸಂಕುಚಿತವಾದ ರಕ್ತನಾಳದಲ್ಲಿ ಸ್ಟೆಂಟ್ ಅನ್ನು ಅಳವಡಿಸುವ ವಿಧಾನ. ಇದರಿಂದಾಗಿ ಸಂಕುಚಿತವಾದ ರಕ್ತನಾಳದಲ್ಲಿ ಪುನಃ ರಕ್ತದ ಹರಿಯುವಿಕೆ ಸರಾಗವಾಗುತ್ತದೆ. ಇದನ್ನು ಪರ್ಕ್‌ಯುಟೇನಿಯಸ್ ಕರೋನರಿ ಇಂಟರ್ವೆನ್ಶನ್ (PCI) ಎಂದು ಕರೆಯುತ್ತೇವೆ.
ಕೊರೊನರಿ ಸ್ಟೆಂಟಿಂಗ್ ಅಥವಾ ಆಂಜಿಯೋಪ್ಲಾಸ್ಟಿಯು ನಿರ್ಬಂಧಿತ ಹೃದಯದ ರಕ್ತನಾಳದ ನಿರ್ವಹಣೆಯಲ್ಲಿ ಸಾಕಷ್ಟು ಪ್ರಮಾಣಿತ ಮತ್ತು ಸಾಮಾನ್ಯ ವಿಧಾನವಾಗಿದ್ದು, ಪ್ರಪಂಚದಾದ್ಯಂತ ಅನೇಕ ನುರಿತ ಹೃದ್ರೋಗ ತಜ್ಞರು ಈ ವಿಧಾನವನ್ನು ಬಳಸುತ್ತಾರೆ. ಆದರೂ ಹೃದ್ರೋಗಿಯ ಕಡೆಯಿಂದ ಆಂಜಿಯೋಪ್ಲಾಸ್ಟಿಯ ಅನಂತರದ ಅಭ್ಯಾಸಗಳ ಪ್ರಾಮುಖ್ಯದ ತಿಳುವಳಿಕೆ ಮತ್ತು ಅನುಸರಣೆಯಲ್ಲಿ ಇನ್ನೂ ಕೊರತೆಯಿದೆ.
ಪರಿಧಮನಿಯ ಕಾಯಿಲೆಗೆ ಪ್ರಮುಖ ಕಾರಣಗಳು
ಪಾಶ್ಚಾತ್ಯೀಕರಣ (westernization)
ಅನಾವಶ್ಯಕ ಹೆಚ್ಚುತ್ತಿರುವ ಮಾನಸಿಕ ಒತ್ತಡಗಳು (ಆತಂಕ)
ಬದಲಾಗುತ್ತಿರುವ ನಮ್ಮ ಜೀವನ ಪದ್ಧತಿ
ಆಹಾರ ಪದ್ಧತಿ ಮತ್ತು ವಿಹಾರ ಪದ್ಧತಿ (ಬೊಜ್ಜು, ಅಧಿಕ ಕೊಲೆಸ್ಟ್ರಾಲ್)
ಅಧಿಕ ರಕ್ತದೊತ್ತಡ (ಬ್ಲಿಡ್ ಪ್ರಶರ್)
ಮಧುಮೇಹ (ಬ್ಲಿಡ್ ಶುಗರ್)
ತಂಬಾಕು ಬಳಕೆ
ಕಡಿಮೆ ದೈಹಿಕ ಚಟುವಟಿಕೆ (ಜಡ ಜೀವನಶೈಲಿ)
ಆಂಜಿಯೋಪ್ಲಾಸ್ಟಿಯ ಅನಂತರ ಒಬ್ಬ ವ್ಯಕ್ತಿಯು ಸಾಮಾನ್ಯ ಜೀವನವನ್ನು ನಡೆಸಬಹುದೇ?
ಆಂಜಿಯೋಪ್ಲಾಸ್ಟಿಯ ಅನಂತರ ನೀವು ಸಾಮಾನ್ಯ ದಿನಚರಿಗೆ ಹಿಂದಿರುಗಬಹುದು. ಆದರೆ ಇದು ಎಲ್ಲರಿಗೂ ಒಂದೇ ರೀತಿ ಆಗಿರುವುದಿಲ್ಲ. ಮುಂದೆ ಆಗುವ ಹೃದಯದ ದುರ್ಘಟನೆಗಳನ್ನು ಕಡಿಮೆ ಮಾಡಲು ನಿಮ್ಮ ದೇಹದ ಮೇಲೆ ಹೆಚ್ಚು ತೀವ್ರವಾದ ಅಡ್ಡ ಪರಿಣಾಮ ಬೀರುವ ಯಾವುದೇ ಜೀವನಶೈಲಿಯನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ಬದಲಾಯಿಸಬೇಕು.
ಆಂಜಿಯೋಪ್ಲಾಸ್ಟಿ / ಸ್ಟೆಂಟಿಂಗ್ ಕಾರ್ಯವಿಧಾನಕ್ಕೆ ಒಳಗಾದ ಹೃದ್ರೋಗಿಗಳು ಅನುಸರಿಸಬೇಕಾದ ಸಲಹೆಗಳು
ಆಂಜಿಯೋಪ್ಲಾಸ್ಟಿ ಅನಂತರ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಮತ್ತು ದೀರ್ಘಾವಧಿಯ ಫಲಿತಾಂಶಗಳಿಗೆ ಈ ಕೆಳಗಿನ ಸಲಹೆಗಳನ್ನು ಅನುಸರಿಸುವುದು ಅತ್ಯಗತ್ಯ.
- ಔಷಧಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ
ಆಂಜಿಯೋಪ್ಲಾಸ್ಟಿಯ ಅನಂತರ ದಿನ ಕಳೆದಂತೆ ರೋಗಿಗಳು ಔಷಧಗಳನ್ನು ನಿಯಮಿತವಾಗಿ ಸೇವಿಸದೆ ಇರುವುದು ಸಾಮಾನ್ಯವಾಗಿದೆ. ಹಾಗೆಯೇ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾದ ಅನಂತರ ಜನರಿಗೆ ಔಷಧಗಳನ್ನು ನಿಲ್ಲಿಸಬಹುದು ಎಂಬ ತಪ್ಪು ನಂಬಿಕೆ ಇದೆ. ಈ ನಂಬಿಕೆಗೆ ವ್ಯತಿರಿಕ್ತವಾಗಿ ಕೆಲವೊಂದು ಕನಿಷ್ಟ ಔಷಧಗಳು, ಉದಾಹರಣೆಗೆ, ರಕ್ತ ತೆಳುವಾಗಿಸುವ (ಆಸ್ಪಿರಿನ್), ರಕ್ತದಲ್ಲಿ ಕೊಬ್ಬಿನಾಂಶ ಅಥವಾ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ (ಸ್ಟಾಟಿನ್), ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸುವ ಮಾತ್ರೆಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿವೆ. ಏಕೆಂದರೆ ಅವುಗಳು ಮುಂದಿನ ದಿನಗಳಲ್ಲಿ ಆಗುವ ಸ್ಟೆಂಟ್ ಥÅಂಬೋಸಿಸ್ ಎನ್ನುವ ಮಾರಣಾಂತಿಕ ತೊಡಕನ್ನು ತಡೆಯುತ್ತವೆ. ಆದ್ದರಿಂದ ನಿಮ್ಮ ಹೃದ್ರೋಗ ತಜ್ಞರು ಶಿಫಾರಸು ಮಾಡಿದಂತೆ ಔಷಧಗಳನ್ನು ತೆಗೆದುಕೊಳ್ಳಬೇಕು.
- ಆಹಾರದ ಆಯ್ಕೆಗಳು
ಆಂಜಿಯೋಪ್ಲಾಸ್ಟಿ ಆದ ಅನಂತರ ಕೆಲವು ರೀತಿಯ ಆಹಾರವನ್ನು ನಿಲ್ಲಿಸಬೇಕು. ಅಂದರೆ ಸ್ಯಾಚುರೇಟೆಡ್ ಕೊಬ್ಬು ಕಡಿಮೆ ಇರುವ ಆರೋಗ್ಯಕರ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ನಿಮ್ಮ ಆಹಾರದಲ್ಲಿ ಬಹಳಷ್ಟು ಮೀನನ್ನು ಸೇರಿಸಿ. ಏಕೆಂದರೆ ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು (Omega 3 Fatty Acids) ಎನ್ನುವ ಹೃದಯಕ್ಕೆ ಸಹಕಾರಿಯಾದ ಅಂಶ ಇರುವುದರಿಂದ ಅದನ್ನು ನಿಮ್ಮ ಆಹಾರದಲ್ಲಿ ಸಾಕಷ್ಟು ಬಳಸುವುದು ಉತ್ತಮ.
- ಮಧ್ಯಮ ರೀತಿಯ ವ್ಯಾಯಾಮ
ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಯ ಅನಂತರ ರೋಗಿಗಳು ಸಾಮಾನ್ಯವಾಗಿ 12 ರಿಂದ 24 ತಾಸುಗಳ ಒಳಗಾಗಿ ನಡೆಯಲು ಸಮರ್ಥರಾಗಿರುತ್ತಾರೆ ಹಾಗೂ ಒಂದು ವಾರದ ಅನಂತರ ತಮ್ಮ ಸಾಮಾನ್ಯ ದಿನಚರಿಗೆ ಮರಳಬಹುದು. ಆದ್ದರಿಂದ ಸ್ಟೆಂಟ್ ಅಳವಡಿಸಿದ ಅನಂತರ ಯಾವುದೇ ರೋಗಿಗೆ ಪರಿಪೂರ್ಣವಾಗಿ ಬೆಡ್ ರೆಸ್ಟ್ ಅಗತ್ಯವಿಲ್ಲ. ಆಂಜಿಯೋಪ್ಲಾಸ್ಟಿಯ ಅನಂತರ ರೋಗಿಯು ಬೇಗನೆ ಚೇತರಿಸಿಕೊಳ್ಳಬೇಕಾದರೆ ಈ ಪ್ರಕ್ರಿಯೆ ನಡೆದ ಹಲವಾರು ದಿನಗಳವರೆಗೆ ದೈಹಿಕ ಚಟುವಟಿಕೆಯನ್ನು ತಡೆಹಿಡಿಯಬೇಕು. ರೋಗಿಗಳು ಆಂಜಿಯೋಪ್ಲಾಸ್ಟಿಯ ಅನಂತರ ನೆಲದ ಮೇಲೆ ನಡೆಯುವಂತಹ ಸರಳವಾದ ಮಧ್ಯಮ ವ್ಯಾಯಾಮವನ್ನು ಪ್ರಾರಂಭಿಸುವುದು ಮತ್ತು ಕ್ರಮೇಣ ವ್ಯಾಯಾಮದ ತೀವ್ರತೆಯನ್ನು ಹೆಚ್ಚಿಸುವುದು ಸೂಕ್ತವಾಗಿದೆ. ನಿಯಮಿತ ವ್ಯಾಯಾಮ ಮಾಡಿ. ಸ್ಟೆಂಟಿಂಗ್ ಕಾರ್ಯವಿಧಾನದ ಒಂದು ತಿಂಗಳೊಳಗೆ ರೋಗ ಪೂರ್ವ ವ್ಯಾಯಾಮ ಸ್ಥಿತಿಯನ್ನು ತಲುಪಲು ನಿರೀಕ್ಷಿಸಬಹುದು. ರೋಗಿಗಳು ಯಾವುದೇ ರೀತಿಯ ಭಾರ ಎತ್ತದಂತೆ ಸಲಹೆ ನೀಡಲಾಗುತ್ತದೆ ಮತ್ತು ಕಡಿದಾದ ಇಳಿಜಾರುಗಳಲ್ಲಿ ನಡೆಯುವುದು ಮುಂತಾದ ಶ್ರಮದಾಯಕ ದೈಹಿಕ ಚಟುವಟಿಕೆಯನ್ನು ಸುಮಾರು 4 ರಿಂದ 6 ವಾರಗಳ ವರೆಗೆ ತಪ್ಪಿಸಬೇಕು.
- ಮೇಲ್ವಿಚಾರಣೆ ಮತ್ತು ಸ್ವಯಂ-ಆರೈಕೆ
ಆಂಜಿಯೋಪ್ಲಾಸ್ಟಿಯ ಅನಂತರ, ರೋಗಿಗಳನ್ನು ರಾತ್ರಿಪೂರ್ತಿ ತೀವ್ರ ನಿಗಾ ಘಟಕ ದಲ್ಲಿ (ICU) ಮೇಲ್ವಿಚಾರಣೆ ನಡೆಸಲಾಗುತ್ತದೆ. ಸಂಶೋಧಕರ ವೈದ್ಯಕೀಯ ಅನುಭವಗಳ ಆಧಾರದ ಮೇಲೆ ಕೊರೊನರಿ ಆಂಜಿಯೋಪ್ಲಾಸ್ಟಿ ಅನಂತರ ರೋಗಿಗಳಿಗೆ 8ರಿಂದ 12 ತಾಸುಗಳ ವಿಶ್ರಾಂತಿ ಬೇಕಾಗುತ್ತದೆ. ಯಾವುದೇ ಸಮಸ್ಯೆಗಳು ಕಂಡುಬರದಿದ್ದಲ್ಲಿ 2ರಿಂದ 3 ದಿನಗಳ ಒಳಗೆ ರೋಗಿಗಳನ್ನು ಮನೆಗೆ ಕಳುಹಿಸಲಾಗುತ್ತದೆ. ಕೆಥೆಟರ್ ಅಳವಡಿಸಲಾದ ಜಾಗದಲ್ಲಿ ರಕ್ತಸ್ರಾವವಾಗುತ್ತಿದೆಯೇ ಹಾಗು ಊದಿದೆಯೇ ಎಂಬುದನ್ನು ಪರೀಕ್ಷಿಸುವುದರ ಜತೆಗೆ ಹೃದಯ ಬಡಿತದ ಪ್ರಮಾಣ ಹಾಗೂ ರಕ್ತದೊತ್ತಡವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಸ್ನಾಯು ಸಂಕೋಚನಗಳ ವಿರುದ್ಧ ಅಪಧಮನಿಗಳನ್ನು ರಕ್ಷಿಸುವ ಸಲುವಾಗಿ ರೋಗಿಗಳು ವಿರಮಿಸಲು ಔಷಧ ನೀಡಲಾಗುತ್ತದೆ. ಆಂಜಿಯೋಪ್ಲಾಸ್ಟಿ ಆದ ಅನಂತರ ರೋಗಿಯು ಎದೆ ನೋವು ರೂಪದಲ್ಲಿ ಯಾವುದೇ ಅಸಾಮಾನ್ಯ ಅಸ್ವಸ್ಥತೆಯನ್ನು ಅನುಭವಿಸಿದರೆ ಹೃದ್ರೋಗ ತಜ್ಞರನ್ನು ತ್ವರಿತವಾಗಿ ಸಂಪರ್ಕಿಸುವುದು ಸೂಕ್ತವಾಗಿದೆ. ಯಾವುದೇ ರೋಗಲಕ್ಷಣಗಳು ವಿಚಿತ್ರವಾದ ಸಮಯದಲ್ಲಿ ಅಥವಾ ಸ್ಥಳದಲ್ಲಿ ಸಂಭವಿಸಿದರೂ ಕೂಡ ಅವುಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಈ ವರ್ಗದ ರೋಗಿಗಳಲ್ಲಿ ಯಾವುದೇ ಸಣ್ಣ ತೊಡಕುಗಳು ಕೂಡ ಜೀವಕ್ಕೆ ಅಪಾಯಕಾರಿಯಾಗಬಹುದು.
- ಹೃದಯ ಪುನರ್ವಸತಿ (Cardiac Rehabilitation)
ಹೃದಯ ಪುನರ್ವಸತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ರಚನಾತ್ಮಕ ವ್ಯಾಯಾಮ, ಶಿಕ್ಷಣ ಮತ್ತು ಚೇತರಿಕೆಯ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಬೆಂಬಲವನ್ನು ನೀಡುತ್ತದೆ.
- ಮನಸ್ಸಿನ ಒತ್ತಡ, ಆತಂಕ, ಖನ್ನತೆ ಮತ್ತು ಕೋಪವನ್ನು ನಿಯಂತ್ರಿಸಿ
ಆಂಜಿಯೋಪ್ಲಾಸ್ಟಿ ಕಾರ್ಯವಿಧಾನದ ಒತ್ತಡವನ್ನು ನಿಭಾಯಿಸುವುದು ಮತ್ತು ಜೀವನಶೈಲಿಯ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಸವಾಲಿನದ್ದಾಗಿರಬಹುದು. ಆದ್ದರಿಂದ ಕುಟುಂಬ, ಸ್ನೇಹಿತರು ಅಥವಾ ವೃತ್ತಿಪರ ಸಲಹೆಗಾರರಿಂದ ಬೆಂಬಲವನ್ನು ಪಡೆಯುವುದು ಪ್ರಯೋಜನಕಾರಿಯಾಗಿದೆ. ಯೋಗ, ಧ್ಯಾನ, ಪ್ರಾಣಾಯಾಮ, ಸಂಗೀತ ಕೇಳುವುದು ಅಥವಾ ಒಮ್ಮೊಮ್ಮೆ ರಜೆ ತೆಗೆದುಕೊಳ್ಳುವಂತಹ ವಿಶ್ರಾಂತಿ ತಂತ್ರಗಳನ್ನು ಬಳಸಿಕೊಂಡು ನೀವು ಒತ್ತಡವನ್ನು ನಿಯಂತ್ರಿಸಬಹುದು. ಮನಸ್ಸನ್ನು ಯಾವಾಗಲೂ ಶಾಂತವಾಗಿರಿಸಿ. ಸರಳ ಉಸಿರಾಟದ ವ್ಯಾಯಾಮವು ಒತ್ತಡದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಆರೋಗ್ಯಕರ ಸಂಬಂಧಗಳನ್ನು ಖಚಿತಪಡಿಸಿಕೊಳ್ಳಿ ಮತ್ತು ಪ್ರೀತಿಪಾತ್ರರ ಬೆಂಬಲವನ್ನು ಪಡೆಯಿರಿ. ಒತ್ತಡ, ಆತಂಕ ಮತ್ತು ಖನ್ನತೆಯು ಹೃದ್ರೋಗದೊಂದಿಗೆ ನಿಕಟ ಸಂಬಂಧ ಹೊಂದಿದೆ. ಕೆಲವೊಮ್ಮೆ ಹೃದ್ರೋಗವು ಒತ್ತಡ ಮತ್ತು ಖನ್ನತೆಗೆ ಕಾರಣವಾಗುತ್ತದೆ ಅಥವಾ ಒತ್ತಡ ಮತ್ತು ಖನ್ನತೆಯು ಹೃದ್ರೋಗಕ್ಕೆ ಕಾರಣವಾಗುತ್ತದೆ.
- ನಿಗದಿತ ವೈದ್ಯರ ಮರುಭೇಟಿ
ಆಂಜಿಯೋಪ್ಲಾಸ್ಟಿ ಅನಂತರದ ವೈದ್ಯರ ನಿಯಮಿತ ಮರು ಭೇಟಿಗಳು, ಪ್ರಗತಿಯನ್ನು ನಿರ್ಣಯಿಸಲು, ಅಗತ್ಯವಿದ್ದಲ್ಲಿ ಔಷಧಗಳ ಪ್ರಮಾಣವನ್ನು ಸರಿಹೊಂದಿಸಲು, ಪ್ರತಿಕೂಲ ಪರಿಣಾಮಗಳು ಅಥವಾ ತೊಡಕುಗಳನ್ನು ಕಂಡುಹಿಡಿಯಲು ಮತ್ತು ಅಪಾಯಕಾರಿ ಅಂಶಗಳ ನಿಯಂತ್ರಣದ ಗುರಿಯನ್ನು ಹೊಂದಿವೆ. ಅದೇ ರೀತಿ ರೋಗಿಯು ಹೊಂದಿರಬಹುದಾದ ಯಾವುದೇ ಕಾಳಜಿ ಅಥವಾ ಪ್ರಶ್ನೆಗಳನ್ನು ಪರಿಹರಿಸಲು ನಿರ್ಣಾಯಕವಾಗಿವೆ. ರೋಗಿಯ ಪರಿಸ್ಥಿತಿ ಮತ್ತು ಅಪಾಯಕಾರಿ ಅಂಶಗಳನ್ನು ಅವಲಂಬಿಸಿ ಅನುಸರಣೆಯ ಆವರ್ತನವು ಬದಲಾಗಬಹುದು. ಸಾಮಾನ್ಯವಾಗಿ ತಿಂಗಳಿಗೊಮ್ಮೆ ಅಥವಾ ಚಿಕಿತ್ಸೆ ನೀಡುವ ಹೃದ್ರೋಗ ತಜ್ಞರು ಸೂಚಿಸಿದಂತೆ ಹೃದ್ರೋಗಿಗಳು ಇವುಗಳಿಗೆ ಬದ್ಧವಾಗಿರಬೇಕು.
- ಅಪಾಯಕಾರಿ ಅಂಶಗಳ ಮೇಲೆ ಗಮನವಿಡಿ
ನೀವು ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರೆ, ಭವಿಷ್ಯದಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಎದುರಿಸುವ ನಿಮ್ಮ ಅಪಾಯವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಆಹಾರ ಮಾರ್ಗಸೂಚಿಗಳು, ವ್ಯಾಯಾಮದ ಕಟ್ಟುಪಾಡು ಮತ್ತು ಇತರ ಜೀವನಶೈಲಿಯ ಬದಲಾವಣೆಗಳನ್ನು ಅನುಸರಿಸುವ ಮೂಲಕ ರಕ್ತದೊತ್ತಡ, ರಕ್ತದಲ್ಲಿನ ಕೊಲೆಸ್ಟ್ರಾಲ್, ಸಕ್ಕರೆಯ ಮಟ್ಟ ಸುಧಾರಿಸಲು, ಹಾಗೂ ಬೊಜ್ಜು ಮುಂತಾದ ಇತರ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸಲು ಪ್ರಯತ್ನಿಸಿ.
- ಮದ್ಯಪಾನ ನಿಲ್ಲಿಸಿ
ಆರೋಗ್ಯ ಪ್ರಯೋಜನಕ್ಕಾಗಿ ಮದ್ಯಪಾನ ಪ್ರಾರಂಭಿಸಲು ಯಾವುದೇ ಶಿಫಾರಸು ಇಲ್ಲ. ನಿಯಮಿತವಾಗಿ ನೀವು ಕುಡಿಯುತ್ತಿದ್ದರೆ ದಿನಕ್ಕೆ ಒಂದು ಪಾನೀಯಕ್ಕೆ ಮಿತಿಗೊಳಿಸಿ.
- ಧೂಮಪಾನವನ್ನು ತ್ಯಜಿಸಿ ಮತ್ತು ತಂಬಾಕು ಉತ್ಪನ್ನಗಳನ್ನು (ಪಾನ್ ಮಸಾಲ) ಚೀಪುವುದನ್ನು ತಪ್ಪಿಸಿ ಧೂಮಪಾನ ಮತ್ತು ತಂಬಾಕು ಚೀಪುವುದು ಇವೆರಡೂ ಹೃದ್ರೋಗ ಉಲ್ಬಣಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತವೆ. ನಿಷ್ಕ್ರಿಯ ಧೂಮಪಾನ ಅಂದರೆ, ಸುಡುವ ಸಿಗರೇಟಿನ ತುದಿಯಿಂದ ಅಥವಾ ಧೂಮಪಾನಿಯು ಉಸಿರಾಡುವಾಗ ಬರುವ ಹೊಗೆಯನ್ನು ತಪ್ಪಿಸಿ.
- ಆರೋಗ್ಯಕರ ದೇಹದ ತೂಕ ಮತ್ತು ಆಕಾರವನ್ನು ಕಾಪಾಡಿಕೊಳ್ಳಿ ತೂಕ ಹೆಚ್ಚಾಗುವುದರಿಂದ ರಕ್ತದೊತ್ತಡ, ಮಧುಮೇಹ ಮತ್ತು ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯವನ್ನುಂಟು ಮಾಡುತ್ತದೆ. ದೈಹಿಕ ಚಟುವಟಿಕೆಯು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವ ಮೂಲಕ ಆದರ್ಶ ದೇಹದ ತೂಕವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಡೆಗಟ್ಟುವಿಕೆಗೆ, ಅದೇ ರೀತಿ ಆರೋಗ್ಯಕ್ಕೂ ಇದು ಮಹತ್ವದ್ದಾಗಿದೆ.
- ಸಾಕಷ್ಟು ನಿದ್ರೆ ಮಾಡಿ ದಿನಕ್ಕೆ ಕನಿಷ್ಠ 6-8 ಗಂಟೆಗಳ ಕಾಲ ನಿದ್ರೆ ಮಾಡಿ.
- ಕಡಿಮೆ ಕುಳಿತುಕೊಳ್ಳಿ ಮತ್ತು ಹಗಲಿನಲ್ಲಿ ಹೆಚ್ಚು ಚಲಿಸಿ ಒಂದೇ ಸಮಯದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ (ಉದಾ. ಟಿವಿ ನೋಡುವುದು, ದೂರವಾಣಿಯಲ್ಲಿ ಮಾತನಾಡುವುದು, ಕಥೆ ಪುಸ್ತಕಗಳನ್ನು ಓದುವುದು, ಕೆಲಸ ಮಾಡುವುದು). ಬದಲಿಗೆ ಆಗಾಗ್ಗೆ ಎದ್ದು ಅಡ್ಡಾಡಿ. ದಿನಕ್ಕೆ 20 ನಿಮಿಷಂತೆ, ವಾರಕ್ಕೆ ಕನಿಷ್ಠ 5 ಬಾರಿಯಾದರೂ ಮಧ್ಯಮ ವೇಗದಲ್ಲಿ ನಡೆಯಬೇಕು.
ಆಂಜಿಯೋಪ್ಲಾಸ್ಟಿ ಅನಂತರ ಸಾಮಾನ್ಯ ಸಮಸ್ಯೆಗಳು ಯಾವುವು?
ಎಲ್ಲ ರೀತಿಯ ಶಸ್ತ್ರಚಿಕಿತ್ಸೆಗಳಂತೆ ಕೊರೊನರಿ ಆಂಜಿಯೋಪ್ಲಾಸ್ಟಿಯ ಅನಂತರ ಕೂಡ ಕೆಲವು ತೊಡಕುಗಳು ಬರುವ ಸಂಭವವಿದೆ. ಆದರೂ ಗಂಭೀರ ಸಮಸ್ಯೆಗಳ ಅಪಾಯವು ಬಹಳ ಕಡಿಮೆ. ಈ ತೊಡಕುಗಳು ಆಂಜಿಯೋಪ್ಲಾಸ್ಟಿ ಸಮಯದಲ್ಲಿ ಅಥವಾ ಆಂಜಿಯೋಪ್ಲಾಸ್ಟಿಯ ಅನಂತರ ಸಂಭವಿಸಬಹುದು. ಈ ತೊಡಕುಗಳು ನಿಮ್ಮ ವಯಸ್ಸು, ನಿಮ್ಮ ಆರೋಗ್ಯ, ನೀವು ಇತರ ಯಾವುದೇ ರೋಗಗಳನ್ನು ಹೊಂದಿದ್ದರೆ ಮತ್ತು ಆಂಜಿಯೋಪ್ಲಾಸ್ಟಿ ಕಾರ್ಯವಿಧಾನವನ್ನು ಯೋಚಿಸಿ ಮಾಡಲಾಗಿದೆಯೇ ಅಥವಾ ತುರ್ತು ಚಿಕಿತ್ಸೆ ಮಾಡಲಾಗಿದೆಯೇ ಎಂಬುದನ್ನು ಅವಲಂಬಿಸಿರುತ್ತದೆ.
ಆಂಜಿಯೋಪ್ಲಾಸ್ಟಿ ಕೆಥೆಟರ್ ಹಾಕಿದ ಜಾಗದಲ್ಲಿ, ಕೆಲವೊಮ್ಮೆ ಚರ್ಮದ ಅಡಿಯಲ್ಲಿ ರಕ್ತಸ್ರಾವ ಕಂಡುಬರುತ್ತದೆ.
ಆಂಜಿಯೋಪ್ಲಾಸ್ಟಿಯ ಸಮಯದಲ್ಲಿ ಬಳಸಿದ ಕಾಂಟ್ರಾಸ್ಟ್ ಏಜೆಂಟ್‌ನಿಂದ ಕೆಲವರಿಗೆ ಅಲರ್ಜಿ ಉಂಟಾಗಬಹುದು.
ಕೆಲವೊಮ್ಮೆ ಹೃದಯದ ರಕ್ತನಾಳಕ್ಕೆ ಹಾನಿಯಾಗಬಹುದು.
ಆಂಜಿಯೋಪ್ಲಾಸ್ಟಿ ಮಾಡುವಾಗ ಕೆಲವೊಮ್ಮೆ ಅತಿಯಾದ ರಕ್ತಸ್ರಾವವಾಗುವ ಸಂಭವವಿರುತ್ತದೆ.
ತೀವ್ರ ತರಹದ ಹೃದಯಾಘಾತವಾಗಿದ್ದರೆ, ಕೆಲವೊಮ್ಮೆ ಇಂತಹ ಹೆಚ್ಚು ಅಪಾಯ ಇರುವ ರೋಗಿಗಳಲ್ಲಿ ಪಾರ್ಶ್ವವಾಯು ಮತ್ತು ಕೆಲವೊಮ್ಮೆ ಸಾವು ಸಂಭವಿಸುವ ಸಾಧ್ಯತೆಗಳು ಇರುತ್ತವೆ.
ಆಂಜಿಯೋಪ್ಲಾಸ್ಟಿಯ ಅನಂತರದ ಆರೈಕೆಯ ಈ ಮೇಲಿನ ಅಂಶಗಳ ಮೇಲೆ ಗಮನ ಹರಿಸುವುದರ ಮೂಲಕ, ಹೃದ್ರೋಗಿಗಳು ತಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು. ಮತ್ತಷ್ಟು ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಆರೋಗ್ಯಕರ ಮತ್ತು ಸಂತೋಷದ ಭವಿಷ್ಯವನ್ನು ಹೊಂದಬಹುದು. ನೆನಪಿಡಿ, ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿಯು ವಿಶಿಷ್ಟವಾಗಿದೆ. ಆದ್ದರಿಂದ ಆರೋಗ್ಯ ತಂಡದಿಂದ ವೈಯಕ್ತಿಕಗೊಳಿಸಿದ ಸಲಹೆ ಮತ್ತು ಮಾರ್ಗದರ್ಶನವನ್ನು ಅನುಸರಿಸುವುದು ನಿರ್ಣಾಯಕವಾಗಿದೆ.
ಹೆನಿಟಾ ಜೋಸ್ನಾ ಮಿನೇಜಸ್, ಪಿಎಚ್.ಡಿ ಸಂಶೋಧನ ವಿದ್ಯಾರ್ಥಿನಿ, ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್, ಮಾಹೆ, ಮಣಿಪಾಲ.
ಡಾ| ಪ್ರಸಾದ್ ನಾರಾಯಣ ಶೆಟ್ಟಿ ರಿಸರ್ಚ್ ಅಸೋಸಿಯೇಟ್, ಹೃದ್ರೋಗ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ
ಡಾ| ಸೋನಿಯಾ ಆರ್.ಬಿ. ಡಿ’ಸೋಜಾ ಪ್ರೊಫೆಸರ್ ಮತ್ತು ಮುಖ್ಯಸ್ಥೆ , ಒಬಿಜಿ ನರ್ಸಿಂಗ್ ವಿಭಾಗ, ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಹೃದ್ರೋಗ ವಿಭಾಗ, ಕೆಎಂಸಿ ಆಸ್ಪತ್ರೆ, ಮಾಹೆ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.