90 ಲಕ್ಷ ಗಡಿ ತಲುಪಿದ ಕೋವಿಡ್ ಸೋಂಕಿತರ ಸಂಖ್ಯೆ
Team Udayavani, Jun 22, 2020, 4:01 PM IST
ಲಂಡನ್: ಜಗತ್ತಿನಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ನಿಮಿಷ ನಿಮಿಷಗಳಿಗೂ ಹೆಚ್ಚಾಗುತ್ತಿದ್ದು ಒಟ್ಟು ಸೋಂಕಿತರ ಸಂಖ್ಯೆ 89 ಲಕ್ಷ ದಾಟಿದೆ. ಸಾವಿನ ಸಂಖ್ಯೆ 4 ಲಕ್ಷದ ಗಡಿಯನ್ನು ದಾಟಿದ್ದು ಆತಂಕ ಇನ್ನೂ ಇದೆ ವೈದ್ಯಕೀಯ ಅಧಿಕೃತರು ಹೇಳುತ್ತಿದ್ದಾರೆ. ವೈರಸ್ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಈಗಲೂ ಮುಂಚೂಣಿಯಲ್ಲಿದೆ. ರವಿವಾರ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 23.33 ಲಕ್ಷವಾಗಿದೆ. ಕೋವಿಡ್ ಪರೀಕ್ಷೆ ಹೆಚ್ಚು ನಡೆದಷ್ಟು ಸೋಂಕು ಇನ್ನೂ ಹೆಚ್ಚು ಕಂಡು ಬರುವ ಸಾಧ್ಯತೆಯಿದೆ. ಬ್ರಜಿಲ್ ಎರಡನೇ ಅತಿ ಹೆಚ್ಚು ಸೋಂಕಿತರಿರುವ ರಾಷ್ಟ್ರವಾಗಿದೆ. ಇಲ್ಲಿ ಈಗಾಗಲೇ ಸಾವಿನ ಸಂಖ್ಯೆ 50 ಸಾವಿರದ ಗಡಿ ದಾಟಿದೆ ಎಂದು ಅಲ್ಲಿನ ಸರಕಾರಿ ಮೂಲಗಳು ಹೇಳಿವೆ. ಅನಂತರದ ಸ್ಥಾನದಲ್ಲಿ ಕ್ರಮವಾಗಿ ರಷ್ಯಾ, ಭಾರತ ಮತ್ತು ಬ್ರಿಟನ್ ಇವೆ. ಈ ದೇಶಗಳಲ್ಲೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ರಷ್ಯಾದಲ್ಲಿ 5.84 ಲಕ್ಷ, ಭಾರತದಲ್ಲಿ 4.13 ಲಕ್ಷ, ಇಂಗ್ಲೆಂಡ್ ನಲ್ಲಿ 3.3 ಲಕ್ಷ ಸೋಂಕಿತರಿದ್ದಾರೆ. ಇಲ್ಲಿನ ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ.
ಲಾಕ್‌ಡೌನ್‌ನ್ನು ಎಲ್ಲ ದೇಶಗಳು ಹಂತಹಂತವಾಗಿ ಸಡಿಲಿಕೆ ಮಾಡುತ್ತ ಬರುತ್ತಿರುವುದು ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಒಂದು ಕಾರಣವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಜನರು ವೈರಸ್‌ನ್ನು ಲಘುವಾಗಿ ತೆಗೆದುಕೊಂಡು ಸರಕಾರದ ಕ್ರಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬುದು ದೇಶಗಳ ಅಧಿಕೃತರ ಹೇಳಿಕೆಯಾಗಿದೆ.
ಅಫ್ಘಾನಿಸ್ಥಾನದ ಗಡಿ ತೆರೆದ ಪಾಕಿಸ್ಥಾನ
ಈಗಾಗಲೇ ಇರಾನ್‌ನ ಜತೆ ಹೊಂದಿರುವ ಗಡಿಯನ್ನು ತೆರೆದಿದ್ದ ಪಾಕಿಸ್ಥಾನ ಸರಕಾರ ಅಫ್ಘಾನಿಸ್ಥಾನದ ಜತೆ ಹಂಚಿಕೊಂಡಿರುವ ಎಲ್ಲ ಗಡಿಗಳನ್ನು ತೆರೆಯುತ್ತಿರುವುದಾಗಿ ಹೇಳಿಕೊಂಡಿದೆ. ಸೋಮವಾರದಿಂದ ಈ ಗಡಿಗಳ ಮೂಲಕ ಹಣ್ಣು ಹಂಪಲು, ಆಹಾರ ಸಾಮಗ್ರಿಗಳ ಟ್ರಕ್‌ಗಳು ಸಂಚರಿಸಲಿವೆ. ಪಾಕ್‌ನಲ್ಲಿ ರವಿವಾರ ಮತ್ತೆ 4,951 ಹೊಸ ಕೋವಿಡ್ ಸೋಂಕಿತರು ಕಂಡು ಬಂದಿದ್ದು ಒಟ್ಟು ಸೋಂಕಿತರ ಸಂಖ್ಯೆ 17,6617ಕ್ಕೇರಿದೆ. 119 ಜನರು ರವಿವಾರ ಸಾವನ್ನಪ್ಪಿದ್ದಾರೆ.