ತಾಯಿ-ಮಗನಿಗೆ ಕೋವಿಡ್ 19 ಸೋಂಕು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆ
Team Udayavani, Apr 28, 2020, 5:00 AM IST
ಮಂಗಳೂರು: ಸೀಲ್‌ಡೌನ್ ಮಾಡಲಾಗಿರುವ ಶಕ್ತಿನಗರ ಪ್ರದೇಶ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಇಬ್ಬರಿಗೆ ಕೋವಿಡ್ 19 ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ದೃಢಪಟ್ಟವರು ತಾಯಿ, ಮಗ. ಇದರೊಂದಿಗೆ ಮಂಗಳೂರು ನಗರ ವ್ಯಾಪ್ತಿಗೂ ಕೋವಿಡ್ 19 ಸೋಂಕು ವ್ಯಾಪಿಸಿದಂತಾಗಿದೆ.
ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಶಕ್ತಿನಗರ ನಿವಾಸಿ 80 ವರ್ಷದ ವೃದ್ಧೆ ಮತ್ತು ಅವರ 45 ವರ್ಷದ ಪುತ್ರ ಕೋವಿಡ್ 19 ದೃಢಪಟ್ಟವರು. ಇಬ್ಬರೂ ಕೂಡ ಗುರುವಾರ ನಿಧನ ಹೊಂದಿದ ಬಂಟ್ವಾಳ ಕಸಬಾದ 75 ವರ್ಷದ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದರು. ವೃದ್ಧೆ ಸಾವನ್ನಪ್ಪಿದ್ದ ಬಳಿಕ ಈರ್ವರನ್ನೂ ಕ್ವಾರಂಟೈನ್ ಮಾಡಿ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ಶಕ್ತಿನಗರದ ಕಕ್ಕೆಬೆಟ್ಟು ಸೀಲ್‌ಡೌನ್
ಶಕ್ತಿನಗರದ ಕಕ್ಕೆಬೆಟ್ಟು ಪ್ರದೇಶವನ್ನು ಸೀಲ್‌ಡೌನ್ ಮಾಡಿ ಜಿಲ್ಲಾಡಳಿತ ಆದೇಶಿಸಿದೆ. 22 ಮನೆಗಳು, 5 ಅಂಗಡಿಗಳು, 1 ಕಚೇರಿ ಸೇರಿ ಒಟ್ಟು 120 ಮಂದಿ ಜನರು ಸೀಲ್‌ಡೌನ್ ಪ್ರದೇಶದ ವ್ಯಾಪ್ತಿಗೊಳಪಡಲಿದ್ದಾರೆ. ಈ ಪ್ರದೇಶದಿಂದ ಐದು ಕಿ.ಮೀ. ವ್ಯಾಪ್ತಿಯ 4,800 ಮನೆಗಳು, 1,315 ಅಂಗಡಿ, 35 ಕಚೇರಿ ಸಹಿತ ಒಟ್ಟು 73,000 ಮಂದಿಯನ್ನು ಬಫರ್ ಝೋನ್ ಒಳಗೆ ಸೇರಿಸಲಾಗಿದೆ.
ಇಲ್ಲಿ ಜನರ ಆಗಮನ-ನಿರ್ಗಮನವನ್ನು ನಿರ್ಬಂಧಿಸಿದೆ. ಕಂಟೈನ್‌ಮೆಂಟ್ ವ್ಯಾಪ್ತಿಯ ಎಲ್ಲ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಸೋಂಕು ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಂಗಳೂರು ಮನಪಾ ಆಯುಕ್ತರನ್ನು ಘಟನಾ ಕಮಾಂಡರ್ ಆಗಿ ನೇಮಿಸಲಾಗಿದೆ.
16 ಮಂದಿಗೆ ತೀವ್ರ ಉಸಿರಾಟ ಸಮಸ್ಯೆ
ದ.ಕ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ತೀವ್ರ ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸೋಮವಾರ 16 ಮಂದಿ ದಾಖಲಾಗಿದ್ದಾರೆ. 25 ಮಂದಿಯನ್ನು ಹೊಸದಾಗಿ ತಪಾಸಣೆಗೊಳಪಡಿಸಲಾಗಿದೆ. ಸುರತ್ಕಲ್ ಎನ್‌ಐಟಿಕೆಯಲ್ಲಿ 59 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಆರು ಮಂದಿ ಹೊಸದಾಗಿ ದಾಖ ಲಾದವರು. 32 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 123 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 340 ವರದಿ ಬರಲು ಬಾಕಿ ಇದೆ.
ವೃದ್ಧೆಯ ಸ್ಥಿತಿ ಗಂಭೀರ
ವೆನ್ಲಾಕ್ಆಸ್ಪತ್ರೆಯಲ್ಲಿ ಕೋವಿಡ್ 19 ದೃಢಪಟ್ಟು ಚಿಕಿತ್ಸೆ ಪಡೆಯುತ್ತಿರುವ 67 ವರ್ಷದ ವೃದ್ಧೆಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ. ಉಳಿದಂತೆ ಎಲ್ಲರ ಆರೋಗ್ಯ ಸ್ಥಿರವಾಗಿದೆ.
ಆರೆಂಜ್ ಝೋನ್‌ನಲ್ಲಿ ದ.ಕ.
ದ.ಕ. ಜಿಲ್ಲೆಗೆ ನಿರಾಳವಾಗುವ ಸುದ್ದಿಯೆಂದರೆ ಜಿಲ್ಲೆ ಈಗಲೂ ಆರೆಂಜ್ ಝೋನ್‌ನಲ್ಲಿಯೇ ಮುಂದುವರಿದಿರುವುದು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಬಿಡುಗಡೆ ಮಾಡಿರುವ ರಾಜ್ಯದ ಎಲ್ಲ ಜಿಲ್ಲೆಗಳ ಕೋವಿಡ್ 19 ವಲಯವಾರು ಮ್ಯಾಪ್‌ನಲ್ಲಿ ದ.ಕ. ಜಿಲ್ಲೆ ಆರೆಂಜ್ ಝೋನ್‌ನಲ್ಲಿ ಕಾಣಿಸಿಕೊಂಡಿದೆ.
ಮಂಗಳೂರಿಗೆ
ವಕ್ಕರಿಸಿದ ಕೋವಿಡ್ 19 ಈವರೆಗೆ ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಈ ಪೈಕಿ 19 ಕಾಸರಗೋಡು, ಭಟ್ಕಳ ಮತ್ತು ದ.ಕ. ಜಿಲ್ಲೆಯ ಬಂಟ್ವಾಳ,ಬೆಳ್ತಂಗಡಿ, ಪುತ್ತೂರು, ಸುಳ್ಯ, ಉಪ್ಪಿನಂಗಡಿಯ ಪ್ರಕರಣಗಳಾಗಿದ್ದು, ಮಂಗಳೂರಿನಲ್ಲಿ ಯಾವುದೇ ಪ್ರಕರಣ ಕಂಡು ಬಂದಿರಲಿಲ್ಲ. ಆದರೆ ಸೋಮವಾರ ಪತ್ತೆಯಾದ ಎರಡು ಪ್ರಕರಣಗಳು ಮಂಗಳೂರಿನದ್ದಾಗಿದ್ದು, ಆ ಮೂಲಕ ಮಂಗಳೂರಿಗೂ ಇದೀಗ ಕೋವಿಡ್ 19 ವಕ್ಕರಿಸಿದಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.