ಕೋವಿಡ್-19 ನಾಡಿಗೆ ನಮ್ಮೂರಿಗೇ…
ತೊರೆದು ಜೀವಿಸಬಹುದೇ ಅನುಮಾನವ...
Team Udayavani, Apr 21, 2020, 1:36 PM IST
ನಾನು ಊರಿಗೆ ಹೋದರೆ ಹಬ್ಬದ ವಾತಾವರಣ. ಬೆಂಗಳೂರಿಂದ ಮಗ ಬರ್ತಾ ಇದ್ದಾನೆ ಅಂತ ಅಮ್ಮ, ನಮ್ಮ ಹುಡ್ಗ ಬರ್ತಾ ಇದ್ದಾನೆ ಅಂತ ಗೆಳೆಯರ ಬಳಗ. ಈ ಸಲ ಇಂಥ ಸಂಭ್ರಮಕ್ಕಿಂತ, ಅನುಮಾನದ ಮೆರವಣಿಗೆಯೇ ಜಾಸ್ತಿ ಇತ್ತು. ಹಾಗೂ ಹೀಗೂ ಊರು ಸೇರಿದಾಗ, ಅದು ನನ್ನನ್ನು ಹೇಗೆ ಸ್ವಾಗತಿಸಿತು ಗೊತ್ತಾ..? ಈ ಮೊದಲೆಲ್ಲಾ, ನಾನು ಊರಿಗೆ ಬರ್ತಿದೀನಿ ಅಂತ ಗೊತ್ತಾದಾಗ, ನನ್ನ ದೋಸ್ತಿಗಳ ಮಧ್ಯೆ ಮತ್ತು ನನ್ನ ಮನೆಯಲ್ಲಿ ಸಣ್ಣ ಹಬ್ಬವೇ ಏರ್ಪಡುತ್ತಿತ್ತು. ಆದರೆ, ಮೊನ್ನೆ ಮಾತ್ರ ಊರಿಗೆ ಕಾಲಿಟ್ಟಾಗ ನನ್ನೂರಲ್ಲೇ ನಾನು ಅಪರಿಚಿತನಂತಾಗಿಬಿಟ್ಟೆ!
ಕೋವಿಡ್-19 ಬೆಂಗಳೂರಿನಲ್ಲಿ ಸೆಂಚುರಿ ಬಾರಿಸುತ್ತಿದ್ದರೆ, ನಾನು ಅದೇ ಬೆಂಗಳೂರಿನಿಂದ ನನ್ನೂರಿಗೆ ಬಂದಿಳಿದಿದ್ದೆ. ಬಸ್ ಇಳಿದು ಮನೆ ಸೇರುವವರೆಗೂ, ಮೊದಲೆಲ್ಲಾ ಸಿಗುತ್ತಿದ್ದ ಆತ್ಮೀಯತೆ, ಅಂದು ಗೈರು ಹಾಜರಾಗಿತ್ತು. ಕೆಟ್ಟು ಪಟ್ಟಣ ಸೇರು ಅಂತಾರೆ. ಜಾಗತೀಕರಣದ ಬಳುವಳಿಯಿಂದ, ಕೆಡದೆಯೂ ಪಟ್ಟಣ ಸೇರುವ ಅನಿವಾರ್ಯತೆ ಇದೆ. ವ್ಯಕ್ತಿ, ಹುಟ್ಟಿದ ಊರಲ್ಲೇ ಬೇರು ಬಿಟ್ಟುಕೊಂಡು ಬದುಕಲು ಸಾಧ್ಯವಿಲ್ಲ. ಆತ ಅಲ್ಲಿಂದ ಎದ್ದು, ಕವಲು ದಾರಿಗಳನ್ನು ದಾಟಿ, ಬದುಕು ರೂಪಿಸಿಕೊಳ್ಳಬೇಕಾಗುತ್ತದೆ. ಹಾಗೆ ರೂಪಿಸಿಕೊಂಡೇ ಊರಿನ ಒಂದು ತಂತುವನ್ನು ತನ್ನೊಂದಿಗೆ ಸುತ್ತಿಕೊಂಡಿರುತ್ತಾನೆ.
ಎಲ್ಲೋ ಇದ್ದ ಆತ ಊರಿಗೆ ಬಂದಾಗಲೆಲ್ಲ, ಹುಟ್ಟಿದೂರೂ ಪುಳಕಗೊಳ್ಳುತ್ತದೆ. ಆ ಪುಳಕದ, ರೋಮಾಂಚನ, ತಲ್ಲಣಗಳ ಸುಖ ಅದನ್ನು ಅನುಭವಿಸಿದವರಿಗೇ ಗೊತ್ತು. ಇಂತಹ
ಅನುಭೂತಿಯ ನಡುವೆ ಮೊನ್ನೆ ಊರಲ್ಲಿ ಬಸ್ ಇಳಿದಾಗ, ಅಲ್ಲಿನ ಜನ ನೋಡಿದ್ದು ಮಾತ್ರ ತೀರಾ ವಿಚಿತ್ರವಾಗಿ. “ಯಾಕೆ ಬಂದ್ನಪ್ಪ, ಅಲ್ಲಿಯೇ ಇರೋದಲ್ವ?’ ಅನ್ನುವ ಮಾತುಗಳು ಊರಿನ ಜನರ ಮಧ್ಯೆಯಿಂದ ಕೇಳಿ ಬಂದವು.
ಬಿಡಿ, ಇದರಲ್ಲಿ ಊರಿನ ತಪ್ಪಿಲ್ಲ. ಇಡೀ ಜಗತ್ತೇ ಕೋವಿಡ್-19 ದಿಂದ ಲ್ಲಣಿಸುತ್ತಿರುವಾಗ, ಕೇವಲ ನೂರುಗಟ್ಟಲೆ ಜನರಿರುವ ನನ್ನ ಹಳ್ಳಿಯೂ ಅದಕ್ಕೆ ಹೊರತಾಗಿಲ್ಲ. ಕೋವಿಡ್-19 ಸೊಂಕಿತರ ಲೆಕ್ಕಾಚಾರದಲ್ಲಿ ಬೆಂಗಳೂರೇ ಮುಂದಿರುವಾಗ, ಅಲ್ಲಿಂದಲೇ ಬಂದ ನನ್ನನ್ನು ಒಂದೇ ಏಟಿಗೆ ಅಪ್ಪಿಕೊಳ್ಳುವುದಾದರೂ ಹೇಗೆ?. ಜೀವ- ಜೀವನ ಅಂತ ಬಂದಾಗ, ಯಾರೇ ಆದರೂ ತಮ್ಮ ತಮ್ಮ ಸುರಕ್ಷತೆಗೆ ಆದ್ಯತೆ ಕೊಡುತ್ತಾರೆ. ಅದರಲ್ಲೂ, ಸಾವನ್ನು ಅಂಗೈಯಲ್ಲಿಟ್ಟು ಬಂದಿರುವ ಕೋವಿಡ್-19 ದ ವಿಷಯದಲ್ಲಿ, ಎಂಥವನಿಗೂ ಗಡಗಡ. ಊರಲ್ಲಿ ಎಲ್ಲರೂ ಒಂದು ಅಂತರ ಇಟ್ಟುಕೊಂಡೇ ಮಾತಿಗಿಳಿದರು. ಮನೆಯವರಿಗೆಂತೂ ಕಳವಳ.
ಕೆಲವರಂತೂ- “ಯಾಕೆ ಬಂದ್ರಿ? ಅಲ್ಲೇ ಇರೋದಲ್ವಾ! ಇರುವಲ್ಲಿಯೇ ಇರೋದು ಸೇಫು’ ಅಂದರು. ನಗರದಲ್ಲಿ ಒಂಟಿಯಾಗಿರುವುದು ಕಷ್ಟ ಅಂದುಕೊಂಡು ನಾನು ಊರಿಗೆ ಬಂದಿದ್ದೆ.
ಮನೆ ಸೇರಿದ ಸ್ವಲ್ಪ ಹೊತ್ತಲ್ಲೇ, ಆರೋಗ್ಯ ಕಾರ್ಯಕರ್ತರು ಬಂದರು. ತಮಗೆ ಬೇಕಾದ ಮಾಹಿತಿ ಪಡೆದುಕೊಂಡು ಹೋದರು. ಊರಿನ ಜನ, ಮನೆಯವರ ಕಳವಳ, ಆರೋಗ್ಯ ಕಾರ್ಯಕರ್ತರ ವಿಚಾರಣೆ ಇವೆಲ್ಲವೂ, ನಾನೊಬ್ಬ ತಪ್ಪಿತಸ್ಥ ಎಂಬ ಭಾವನೆ ಬರುವಂತೆ ಮಾಡಿದವು. ಆರೋಗ್ಯದ ವಿಷಯ ಬಂದಾಗ, ಜನ ಹೇಗೆಲ್ಲ ನಡೆದುಕೊಳ್ಳುತ್ತಾರೆ ಅನ್ನುವುದು ಈಗ ನನ್ನ ಗಮನಕ್ಕೆ ಬಂದಿತು. ಮೂರ್ನಾಲ್ಕು ದಿನ ಕಳೆದರೂ, ಊರು ಅನುಮಾನದಿಂದಲೇ ನೋಡುತ್ತಿತ್ತು. ವಾರ ಕಳೆದರೂ ನನಗೆ ಏನೂ ಆಗಲಿಲ್ಲ ಎಂದು ಖಚಿತವಾದ ನಂತರ ಎಲ್ಲವೂ
ಮೊದಲಿನಂತೆಯೇ ಶುರುವಾದವು. ಜೀವ ಮುಖ್ಯ ಅಂತ ಬಂದಾಗ ಕಟ್ಟ ಕಡೆಗೆ ಮನುಷ್ಯ ಸ್ವಾರ್ಥಕ್ಕಿಳಿಯುತ್ತಾನೆ. ಅದು ಸಹಜ ಕೂಡ. ನಾನು ಕೂಡ ಅಂಥದ್ದೇ ಜಾಗದಲ್ಲಿದಿದ್ದರೆ ಹೀಗೆಯೇ ವರ್ತಿಸುತ್ತಿದ್ದೆ ಅನ್ನುವುದು ಸುಳ್ಳಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಒಂದು ಪುಟ್ಟ ಕಥೆ ನೆನಪಾಗುತ್ತದೆ. ಒಮ್ಮೆ ತಜ್ಞರು ಒಂದು ಪ್ರಯೋಗಕ್ಕೆ ಮುಂದಾದರು.
ಒಂದು ಕೋತಿ ಮತ್ತು ಕೋತಿ ಮರಿಯನ್ನು ಆಳದ ಡಬ್ಬದಲ್ಲಿ ಹಾಕಿದರು. ಮತ್ತು ಅದಕ್ಕೆ ನೀರು ಸುರಿಯುತ್ತಾ ಹೋದರು. ಕೋತಿ, ತನ್ನ ಮರಿಯನ್ನು ನೀರಿನಿಂದ ಪಾರುಮಾಡಲು
ಹೆಗಲಮೇಲೆ ಕೂರಿಸಿಕೊಂಡಿತು. ಮತ್ತಷ್ಟು ನೀರು ಹಾಕಲಾಯಿತು ಈಗ ಕೋತಿ, ಮರಿಯನ್ನು ತಲೆಯ ಮೇಲೆ ಕೂರಿಸಿಕೊಂಡಿತು. ಇನ್ನಷ್ಟು ನೀರು ಹಾಕಲಾಯಿತು ಈ ಬಾರಿ ಕೋತಿಯು, ತಾನು ಬದುಕಲು ನಿರ್ಧರಿಸಿ, ಮರಿಯನ್ನು ಕೆಳಗೆ ಹಾಕಿ, ಅದರ ಮೇಲೆ ನಿಂತುಕೊಂಡಿತು. ನೋಡಿ, ಜೀವ ಅಂತ ಬಂದಾಗ ಎಲ್ಲರೂ ಹೇಗೆ ಸ್ವಾರ್ಥಿಗಳಾಗುತ್ತಾರೆ ಅನ್ನುವುದನ್ನು ಇದಕ್ಕಿಂತ ಚೆನ್ನಾಗಿ ವಿವರಿಸಲು ಸಾಧ್ಯವಿಲ್ಲ. ಊರಿನ ಜನ ಹಾಗೆ ನಡೆಸಿಕೊಂಡಿದ್ದಕ್ಕೆ ನಾನು ಖುಷಿಪಟ್ಟೆ. ಒಬ್ಬರಿಂದ ಒಬ್ಬರಿಗೆ ಹರಡುವ ಈ ಕಾಯಿಲೆ ವಿಚಾರದಲ್ಲಿ, ಅವರ ಜಾಗೃತಿ ಕಂಡು ಬೆರಗಾದೆ. ಕಾಯಿಲೆಯ ಬಗೆಗೆ ಇದ್ದ ಭಯವೇ ನನ್ನನ್ನು ಪ್ರತ್ಯೇಕವಾಗಿ ನೋಡಲು ಕಾರಣ ಎಂದು ಅರ್ಥವಾಯಿತು. ಈಗ, ನಿಶ್ಚಲ ರಸ್ತೆಗಳ ಸದ್ದಿಗೆ ನಾನೂ, ನನ್ನ ಅರೆಬೆಂದ ಬೆಂಗಳೂರು ತನಕ್ಕೆ ಅವೂ ಒಗ್ಗಿಹೋಗಿದ್ದೇವೆ. ಊರ ಮನದ ಮೂಲೆಯಲ್ಲಿ ಸಣ್ಣ ಅನುಮಾನದ ಹೊಗೆ ಆಡುತ್ತಲೇ ಇದೆ;
ಇವನಿಗೇನಾದರೂ ಕೋವಿಡ್-19 ಹೊಕ್ಕಿದೆಯಾ ಅಂತ…
ಸದಾಶಿವ್ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.