ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕೋವಿಡ್ 19 ಅಬ್ಬರ
Team Udayavani, May 30, 2020, 7:42 AM IST
ಬೆಂಗಳೂರು: ಕರಾವಳಿ ಆಯಿತು.. ಈಗ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಸರದಿ. ಆ ಭಾಗದ ಮೂರೇ ಜಿಲ್ಲೆಗಳಲ್ಲಿ ಶುಕ್ರವಾರ ಕೋವಿಡ್ 19 ವೈರಸ್ “ಮಹಾ’ ಸ್ಫೋಟವಾಗಿದ್ದು, ಬರೊಬ್ಬರಿ 183 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಒಟ್ಟಾರೆ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ ಅತೀ ಹೆಚ್ಚು 248 ಮಂದಿ ಸೋಂಕಿತರಾಗಿದ್ದಾರೆ. ಅಂತೆಯೇ ಅತೀ ಹೆಚ್ಚು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 2781ಕ್ಕೆ ಏರಿಕೆಯಾಗಿದೆ. ಈ ಪೈಕಿ 1837 ಸಕ್ರಿಯ ಪ್ರಕರಣಗಳಿದ್ದು, 894 ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ. ಮೇ 23 ರಂದು ರಾಜ್ಯದಲ್ಲಿ 216 ಸೋಂಕು ಪ್ರಕರಣಗಳು ವರದಿಯಾಗಿ, ಮೊದಲ ಬಾರಿ ದ್ವಿಶತಕ ಗಡಿದಾಟಿತ್ತು. ಮತ್ತೂಮ್ಮೆ ಶುಕ್ರವಾರ ದ್ವಿಶತಕ ಪೂರೈಸಿದ್ದು, ಹಿಂದೆಂದಿಗಿಂತಲೂ ಹೆಚ್ಚು ಮಂದಿ ಒಂದೇ ದಿನ ಸೋಂಕಿತರಾಗಿದ್ದಾರೆ.
ಜತೆಗೆ ಚಿಕ್ಕಬಳ್ಳಾಪುರ ಮೂಲದ 50 ವರ್ಷದ ಪುರುಷ ಸಾವಿಗೀಡಾಗಿದ್ದಾರೆ. ಮೇ.24 ರಂದು ಚಿಕ್ಕಬಳ್ಳಾಪುರದಲ್ಲಿ ರಸ್ತೆ ಅಪಘಾತವಾಗಿದ್ದ ಈತನನ್ನು ಹೆಚ್ಚುವರಿ ಚಿಕಿತ್ಸೆಗೆಂದು ಗುರುವಾರ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಸೋಂಕು ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ಮೂತ್ರಪಿಂಡ ಸಮಸ್ಯೆ, ನ್ಯುಮೋನಿಯಾದಿಂದ ಬಳಲುತ್ತಿದ್ದು, ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಸೋಂಕು ತೀವ್ರತೆ : ದಕ್ಷಿಣ ಕನ್ನಡ ಮತ್ತು ಉಡುಪಿಗೆ ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಲ್ಲಿ ಗುರುವಾರ ಹೆಚ್ಚು ಸೋಂಕು ಪತ್ತೆಯಾಗಿ ಕರಾವಳಿ ಭಾಗದಲ್ಲಿ ಆತಂಕ ಮೂಡಿಸಿತ್ತು. ಶುಕ್ರವಾರ ಇದೇ ಮಹಾರಾಷ್ಟ್ರ ಮಹಾ ವಲಸೆ ಪ್ರಭಾವ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಮೇಲಾಗಿದೆ. ದಿನದ ಶೇ.75 ಸೋಂಕಿತರು ರಾಯಚೂರು (62), ಕಲಬುರಗಿ (61), ಯಾದಗಿರಿ(60) ಜಿಲ್ಲೆಗಳಲ್ಲಿಯೇ ವರದಿಯಾಗಿದ್ದು, ಎಲ್ಲರೂ ಮಹಾರಾಷ್ಟ್ರದಿಂದ ವಲಸೆ ಬಂದ ಕಾರ್ಮಿಕರು ಮತ್ತವರ ಅವರ ಕುಟುಂಬಸ್ಥರು.
ರಾಜ್ಯದ ಸೋಂಕು ಹೆಚ್ಚಳಕ್ಕೆ ಮಹಾರಾಷ್ಟ್ರ ಕೊಡುಗೆ ಮುಂದುವರಿದಿದೆ. ಶುಕ್ರವಾರ ದೃಢಪಟ್ಟ 248 ಪ್ರಕರಣದಲ್ಲಿ 227 ಮಂದಿ ಹೊರರಾಜ್ಯದಿಂದ ಕರ್ನಾಟಕಕ್ಕೆ ಬಂದವರು. ಈ ಪೈಕಿ ಮಹಾರಾಷ್ಟ್ರದಿಂದ ಅತೀ ಹೆಚ್ಚು 209 ಮಂದಿ, ನವದೆಹಲಿ 8 ಮಂದಿ, ರಾಜಸ್ಥಾನದಿಂದ 7 ಮಂದಿ, ಆಂಧ್ರಪ್ರದೇಶ ಮತ್ತು ತಮಿಳುನಾಡು, ಗುಜರಾತ್‌ನಿಂದ ತಲಾ ಒಬ್ಬರು ರಾಜ್ಯಕ್ಕೆ ಬಂದಿದ್ದಾರೆ. ವಿದೇಶದಿಂದ ಬೆಂಗಳೂರಿಗೆ ಆಗಮಿಸಿ ಕ್ವಾರಂಟೈನ್ ಇದ್ದ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಹೆಚ್ಚು ಸೋಂಕಿತರು ಗುಣಮುಖ: ಜಿಲ್ಲಾವಾರು ಸೋಂಕಿತರು/ ಸೋಂಕಿನ ಹಿನ್ನೆಲೆ ಈ ಹಿಂದೆ ಒಂದೇ ದಿನ 55 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಶುಕ್ರವಾರ ಹಾಸನದಲ್ಲಿ 30, ಕಲಬುರಗಿ 10, ದಾವಣಗೆರೆ, ಮಂಡ್ಯ ತಲಾ ಐದು, ಉತ್ತರ ಕನ್ನಡ, ಶಿವಮೊಗ್ಗ ತಲಾ ಮೂವರು, ಉಡುಪಿಯಲ್ಲಿ ಇಬ್ಬರು, ಚಿಕ್ಕಮಗಳೂರು, ತುಮಕೂರಿನಲ್ಲಿ ತಲಾ ಒಬ್ಬರು ಸೇರಿ ಒಟ್ಟು 60 ಮಂದಿ ಗುಣಮುಖರಾಗಿದ್ದಾರೆ. ಹೆಚ್ಚು ಸೋಂಕು ಮತ್ತು ಗುಣಮುಖ ಪ್ರಕರಣಗಳು ಒಂದೇ ದಿನ ವರದಿಯಾಗಿದೆ.
50 ಪ್ರಕರಣಗಳಲ್ಲಿ ಸೋಂಕಿತರು ಸಾವು: ಕೋವಿಡ್ 19 ಸೋಂಕು ದೃಢಪಟ್ಟಿದ್ದ 50 ಮಂದಿ ಸಾವಿಗೀಡಾಗಿದ್ದು, ಈ ಪೈಕಿ 48 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾರೆ. ಬೆಂಗಳೂರಿನಲ್ಲಿ 10 ಮಂದಿ, ಕಲಬುರಗಿಯಲ್ಲಿ 7, ದಕ್ಷಿಣ ಕನ್ನಡದಲ್ಲಿ 6, ವಿಜಯಪುರದಲ್ಲಿ 5, ದಾವಣಗೆರೆಯಲ್ಲಿ 4, ಚಿಕ್ಕಬಳ್ಳಾಪುರ, ಬೀದರ್‌ನಲ್ಲಿ ತಲಾ ಮೂವರು, ತುಮಕೂರು ಇಬ್ಬರು, ಯಾದಗಿರಿ, ಉಡುಪಿ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಗದಗ, ಬೆಂಗಳೂರು ಗ್ರಾಮಾಂತರ ಹಾಗೂ ಹೊರರಾಜ್ಯಕ್ಕೆ ಸೇರಿದ ಒಬ್ಬರು ಸಾವಿಗೀಡಾಗಿದ್ದಾರೆ. ದಕ್ಷಿಣ ಕನ್ನಡ ಮತ್ತು ಬೆಂಗಳೂರಿನಲ್ಲಿ ಸೋಂಕಿತರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.