ಗೇರುಬೀಜ ಬೆಳೆ ಕುಸಿತ: ಬೆಲೆ ಏರಿಕೆ ಸಾಧ್ಯತೆ
Team Udayavani, Apr 1, 2024, 7:25 AM IST
ವಿಟ್ಲ: ಹವಾಮಾನ ವೈಪರೀತ್ಯ ಮತ್ತು ಎಲಿ°ನೊ ಪರಿಣಾಮ ದಿಂದ ಗೇರುಬೀಜ ಬೆಳೆ ಭಾರೀ ಕುಸಿತ ಕಂಡಿದೆ. ಬೆಲೆಯಲ್ಲಿಯೂ ಕುಸಿತ ಅನುಭವಿಸುತ್ತಿರುವುದು ಗೇರು ಬೆಳೆಗಾರರ ಸಂಕಷ್ಟಕ್ಕೆ ಕಾರಣ.
ಕಳೆದ ವರ್ಷ ಇದೇ ಅವಧಿಯಲ್ಲಿ ಕೆಜಿಗೆ 105ರಿಂದ 110 ರೂ. ವರೆಗೆ ಧಾರಣೆ ಇತ್ತು. ಆದರೆ ಪ್ರಸಕ್ತ ಅವಧಿಯಲ್ಲಿ ಕೆಜಿಗೆ 95ರಿಂದ 100 ರೂ.ಆಸುಪಾಸಿನಲ್ಲಿದೆ. ಬೆಲೆ ಕುಸಿತ ತಾತ್ಕಾಲಿಕ ಎನ್ನಲಾಗುತ್ತಿದ್ದು ಯುಗಾದಿ ಅನಂತರ ಬೆಲೆ ಏರಿಕೆಯಾಗುವ ಎಲ್ಲ ಸಾಧ್ಯತೆಗಳಿವೆ.
ಪ್ರಥಮ ಹಂತ ಸ್ಥಗಿತ
ಜನವರಿಯಲ್ಲಿ ಮಾರುಕಟ್ಟೆಗೆ ಬರಬೇಕಿದ್ದ ಪ್ರಥಮ ಹಂತದ ಬೆಳೆ ಚೇತರಿಸಿಕೊಂಡಿಲ್ಲ. ಊರ ಮರಗಳಲ್ಲಿ ಹೂ ಬಿಡಲೇ ಇಲ್ಲ. ಹೈಬ್ರಿಡ್ ಮರಗಳಲ್ಲಿ ಸ್ವಲ್ಪ ಮಟ್ಟಿಗೆ ಕಾಯಿಕಟ್ಟಿದ್ದು ಮಾರುಕಟ್ಟೆಗೆ ಬರುವ ಮುನ್ನವೇ ಹವಾಮಾನ ವೈಪರೀತ್ಯದಿಂದ ಹಾನಿಗೀಡಾಯಿತು. ಇದು ಬೆಳೆಗಾರರಿಗೂ ವ್ಯಾಪಾರಿಗಳಿಗೂ ಗೋಡಂಬಿ ಕಂಪೆನಿಗಳಿಗೂ ಭಾರೀ ಹೊಡೆತ ನೀಡಿತ್ತು.
ದ್ವಿತೀಯ ಹಂತದ ಬೆಳೆ ಸಿಗಬಹುದೇ ?
ಸಾಮಾನ್ಯವಾಗಿ ಗೇರುಬೀಜ ಬೆಳೆ 3 ಹಂತಗಳಲ್ಲಿರುತ್ತದೆ. ಜನವರಿಯಲ್ಲಿ ಪ್ರಥಮ, ಮಾರ್ಚ್-ಎಪ್ರಿಲ್ ಅಥವಾ ಯುಗಾದಿ ಸಂದರ್ಭದಲ್ಲಿ ದ್ವಿತೀಯ ಮತ್ತು ಮೇ ಅಥವಾ ಮಳೆಗಾಲಕ್ಕೂ ಮುನ್ನ ಮೂರನೇ ಹಂತದ ಬೆಳೆ ಕೃಷಿಕರ ಕೈಗೆ ಸಿಗುತ್ತದೆ. ಪ್ರಸ್ತುತ ವಾತಾವರಣ ಗೇರು ಬೆಳೆಯನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. ತಜ್ಞರ ಪ್ರಕಾರ ಹಲಸು, ಮಾವು ಮತ್ತು ಗೇರು ಬೆಳೆಯ ಋತುಮಾನವೇ ಬದಲಾಗಿದೆ. ಒಂದು ತಿಂಗಳು ಮುಂದೆ ಹೋಗಿದೆ. ಇದು ಬೆಳೆಗಾರರು ಗೇರು ಕೃಷಿಯಿಂದ ವಿಮುಖರಾಗುವ ಸನ್ನಿವೇಶವನ್ನು ಸೃಷ್ಟಿಸಿದೆ.
ಗೇರು ಅವಗಣಿಸಲ್ಪಡುತ್ತಿದೆಯೇ?
ಕರಾವಳಿಯಲ್ಲಿ ಗೇರುಬೀಜ ಬೆಳೆಯನ್ನು ಅವಗಣಿಸಲಾಗುತ್ತಿದೆ ಎನ್ನಲಾಗುತ್ತಿದೆ. ಅಡಿಕೆಗೆ ಬೆಲೆ ಏರುತ್ತಿರುವುದರಿಂದ ಮತ್ತು ಕೆಜಿಗೆ 400ಕ್ಕೂ ಅಧಿಕ ಬೆಲೆ ಇರುವುದರಿಂದ ಕೇವಲ 100 ರೂ.ಗಳಷ್ಟೇ ಸಿಗುವ ಗೇರುಬೀಜ ಮೂಲೆಪಾಲಾಗುತ್ತಿದೆ ಎಂಬ ಮಾತು ಮಾರುಕಟ್ಟೆ ವಲಯ ದಲ್ಲಿ ಕೇಳಿಸುತ್ತಿದೆ. ಹವಾಮಾನ ವೈಪರೀತ್ಯ, ಅಕಾಲಿಕ ಮಳೆ ಮೊದಲಾದ ಕಾರಣಗಳಿಂದ ಬೆಳೆ/ಬೆಲೆ ಎರಡೂ ಕುಸಿತ ಆಗುತ್ತಿರುವುದರಿಂದ ಬೆಳೆ ಗಾರರು ದೂರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಗುಡ್ಡಕ್ಕೆ ಹೋಗುವವರಿಲ್ಲ!
ಹಿಂದೆ ಮಕ್ಕಳಿಗೆ ಗುಡ್ಡ ಏರಿ ಗೇರುಹಣ್ಣು ತಿನ್ನುವ ಉತ್ಸಾಹವಿತ್ತು. ಪಾಕೆಟ್ ಮನಿಗಾಗಿ ಗೇರುಬೀಜ ಸಂಗ್ರಹಿಸುವ ವಿಶೇಷ ಆಸಕ್ತಿ ಇರುತ್ತಿತ್ತು. ಆಧುನಿಕ ಕಾಲಘಟ್ಟದಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆ ಜತೆಗೆ ಮೊಬೈಲ್ ಸಮಯ ಕಬಳಿಸುತ್ತಿರುವುದರಿಂದ ಗುಡ್ಡಕ್ಕೆ ಹೋಗುವವರೇ ಇಲ್ಲ ಎಂಬಂತಾಗಿದೆ. ವೈಜ್ಞಾನಿಕವಾಗಿ ಮತ್ತು ಆದ್ಯತೆ ನೀಡಿ ಗೇರು ಕೃಷಿಯನ್ನು ನೆಚ್ಚುವವರು ಕಡಿಮೆಯಾಗುತ್ತಿರುವುದು ಕೂಡ ಬೆಳೆ ಕುಸಿಯಲು ಕಾರಣ. ಕ್ರಮೇಣ ಗೇರು ಬೆಳೆಯುವ ಪ್ರದೇಶ ಇಲ್ಲವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಕಳ್ಳದಾರಿಯಲ್ಲಿ ಗೋಡಂಬಿ ಆಮದು!
ಈಗಾಗಲೇ ಗೇರುಬೀಜ ಉತ್ಪಾದನೆಯಲ್ಲಿ ಕುಸಿತ ಕಾಣುತ್ತಿರುವುದು ಮತ್ತು ಗೋಡಂಬಿ ಕಂಪೆನಿಗಳಲ್ಲಿ ವರ್ಷಪೂರ್ತಿ ಉದ್ಯೋಗ ಇಲ್ಲದೇ ತತ್ತರಿಸುವ ಕಾರ್ಮಿಕರಿಗೆ ಕಳ್ಳದಾರಿಯಲ್ಲಿ ಗೋಡಂಬಿಯೇ ಆಮದಾಗುತ್ತಿರುವುದು ಮತ್ತೊಂದು ಹೊಡೆತವಾಗಿದೆ. ಗುಣಮಟ್ಟವಿಲ್ಲದ, ಕಡಿಮೆ ವೆಚ್ಚದ ಗೋಡಂಬಿ ಮಾರುಕಟ್ಟೆಗೆ ನುಗ್ಗಿ ಅಸ್ತವ್ಯಸ್ತಗೊಳಿಸುವ ಸಂಚು ಗೋಡಂಬಿ ಕ್ಷೇತ್ರವನ್ನು ತಲ್ಲಣಗೊಳಿಸಿದೆ.
ಗೇರು ವಿಸ್ತರಣೆ ಅವಶ್ಯ
ದೇಶದಲ್ಲಿ ಪ್ರತೀ ವರ್ಷ 20 ಲಕ್ಷ ಟನ್ ಗೇರುಬೀಜಕ್ಕೆ ಬೇಡಿಕೆ ಇದೆ. ಆದರೆ ಕೇವಲ 7 ಲಕ್ಷ ಟನ್ ಬೆಳೆ ಬರುತ್ತಿದೆ. ದೇಶದ ಗೇರು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ. ರಾಜ್ಯದಲ್ಲಿ ಬೀದರ್, ತುಮಕೂರು ಮತ್ತು ಘಟ್ಟಪ್ರದೇಶದಲ್ಲಿ ಗೇರು ಬೆಳೆಗೆ ಮಹತ್ವ ಕೊಡುತ್ತಿದ್ದು, ಉತ್ತಮ ಬೆಳೆ ಲಭ್ಯವಾಗುತ್ತಿದೆ. ಒಟ್ಟಿನಲ್ಲಿ ಗೇರು ಕೃಷಿಯು ವಿಸ್ತರಣೆಯನ್ನು ಬಯಸುತ್ತಿದೆ. ಗೇರುಬೀಜ ಬೆಳೆ 13 ಲಕ್ಷ ಟನ್‌ನಷ್ಟು ಹೆಚ್ಚು ಬಂದಲ್ಲಿ ಗೋಡಂಬಿ ಕಂಪೆನಿಗಳಲ್ಲಿ ವರ್ಷಪೂರ್ತಿ ಉದ್ಯೋಗ ಸಿಗುತ್ತದೆ. ಕಂಪೆನಿಗಳಿಗೂ ಉದ್ಯೋಗಿಗಳಿಗೂ ಬೆಳೆಗಾರರಿಗೂ ಉತ್ತಮ ಆದಾಯ ಬರಬಹುದಾಗಿದೆ.
ದೈನಂದಿನ ಸಂಗ್ರಹ 5 – 6 ಚೀಲಕ್ಕೆ ಕುಸಿತ
ಹಿಂದೆ ಈ ಅವಧಿಯಲ್ಲಿ ಮಾರುಕಟ್ಟೆಗೆ ಪ್ರತೀದಿನ ಆವಕವಾಗುತ್ತಿದ್ದ 40ರಿಂದ 50 ಚೀಲ ಗೇರುಬೀಜ ಬೇಸಗೆಯ ಇಂದಿನ ಸನ್ನಿವೇಶದಲ್ಲಿ 5ರಿಂದ 6 ಚೀಲಕ್ಕೆ ಕುಸಿದಿದೆ. ಕಳೆದ ವರ್ಷವೇ 7ರಿಂದ 8 ಚೀಲಕ್ಕೆ ಇಳಿದಿತ್ತು. ಪ್ರಥಮ ಹಂತದ ಬೆಳೆ ಸಿಗದೇ, ಇದೀಗ ದ್ವಿತೀಯ ಹಂತದ ಬೆಳೆಗೆ ಮಾರುಕಟ್ಟೆ ಕಾಯಲಾರಂಭಿಸಿದೆ. ಇದೀಗ ಹೂವು ಅರಳಬೇಕಿತ್ತು. ತಜ್ಞರ ಪ್ರಕಾರ ನಾಲ್ಕೈದು ದಿನಗಳಲ್ಲಿ ಮಳೆ ಬಂದಲ್ಲಿ ಕಾಯಿಕಟ್ಟುವ ಸಾಧ್ಯತೆಯಿದೆ. ಮಳೆ ಬಾರದೇ ಇದ್ದರೆ ಬಿಸಿ ವಾತಾವರಣಕ್ಕೆ ಹೂವು ಬಾಡಿಬಿದ್ದು ಹೋಗುವ ಸಂಭವವಿದೆ. ಆಗ ಎರಡನೇ ಹಂತದ ಬೆಳೆಯೂ ಕೈಗೆಟಕದೇ ಹೋಗುವ ಸಾಧ್ಯತೆಯಿದೆ. ತಾಪಮಾನ ಏರುತ್ತಿರುವುದರಿಂದ ಮಳೆ ನಿರೀಕ್ಷೆ ಮಾಡುತ್ತಿರುವ ಬೆಳೆಗಾರರು ಎರಡನೇ ಹಂತದ ಬೆಳೆಯಲ್ಲಿ ಬೆಲೆ ಏರಿಕೆ ಕಾಣಬಹುದು ಎನ್ನುತ್ತಾರೆ. ಯುಗಾದಿಗೆ ಬೆಳೆ ಸಿಗಬಹುದು ಎನ್ನಲಾಗುತ್ತಿದೆ.
-ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.