ತೈಲ ಬೆಲೆ ಹೆಚ್ಚಳ ಖಂಡಿಸಿ ಸೈಕಲ್ ಚಳವಳಿ
Team Udayavani, Jun 30, 2020, 7:44 AM IST
ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗಿದ್ದರೂ ದೇಶದಲ್ಲಿ ನಿರಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳ ಮಾಡುತ್ತಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಸೈಕಲ್ ಚಳವಳಿ ನಡೆಸಿ, ನಂತರ ರಾಜ್ಯಪಾಲರಿಗೆ ದೂರು ಸಲ್ಲಿಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸುಮಾರು 500 ಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧ ಹತ್ತಿರ ಇರುವ ಜಿಪಿಒ ಕಚೇರಿವರೆಗೂ ಸೈಕಲ್ ಸವಾರಿ ಮಾಡುವ ಮೂಲಕ ಕೇಂದ್ರದ ಬೆಲೆ ಏರಿಕೆಯನ್ನು ಖಂಡಿಸಿದರು.
ರ್ಯಾಲಿ ಉದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಂಡಿಯನ್ ಎಕ್ಸ್‌ಪ್ರೆಸ್ ಸರ್ಕಲ್ ಬಳಿ ಪೆಟ್ರೋಲ್ ಟ್ಯಾಂಕ್ ಲಾರಿ ಮೇಲೆ ಹತ್ತಿ ಕೇಂದ್ರ ಸರ್ಕಾರದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ನಂತರ ಜಿಪಿಒ ಕಚೇರಿ ಬಳಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಯುಪಿಎ ಅವಧಿಯಲ್ಲಿ ತೈಲ ಬೆಲೆ ಸ್ಪಲ್ಪ ಬೆಲೆ ಏರಿಕೆಯಾದರೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದರು.
ಮೋದಿ ಮತ್ತು ಪಟಾಲಂ ಒಂದೇ ಸಮನೆ ವಾಗ್ಧಾಳಿ ನಡೆಸುತ್ತಿದ್ದರು. ಆಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿತ್ತು. ಮನಮೋಹನ್ ಸಿಂಗ್ ಕಾಲದಲ್ಲಿ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಿದ್ದರು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಆದರೂ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬ್ಯಾಟರಿ ಚಾಲಿತ ಸೈಕಲ್: ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಸೈಕಲ್ ಸವಾರಿ ನಡೆಸಿದರು. ಸಿದ್ದರಾಮಯ್ಯ ಅವರು ತಮ್ಮ ಮನೆಯಿಂದ ಸಾಮಾನ್ಯ ಸೈಕಲ್ ತುಳಿದುಕೊಂಡು ಕೆಪಿಸಿಸಿವರೆಗೂ ಆಗಮಿಸಿದ್ದರು. ಅಲ್ಲಿಂದ ಪ್ರತಿಭಟನಾ ಸ್ಥಳದವರೆಗೆ ಬ್ಯಾಟರಿ ಚಾಲಿತ ಸೈಕಲ್ ಏರಿದರು. ಡಿ.ಕೆ.ಶಿವಕುಮಾರ್ ಸದಾಶಿವನಗರದ ತಮ್ಮ ನಿವಾಸದಿಂದಲೂ ಎಲೆಕ್ಟ್ರಿಕ್ ಸೈಕಲ್‌ನಲ್ಲೇ ಬಂದರು.
ಪ್ರತಿಭಟನೆಗೆ ಅನುಮತಿ ಇರಲಿಲ್ಲ?: ಕಾಂಗ್ರೆಸ್ ಸೈಕಲ್ ಪ್ರತಿಭಟನೆಗೆ ಪೊಲಿಸರು ಅನುಮತಿ ನಿರಾಕರಿಸಿದ್ದರು. ಆದರೂ 500 ಕ್ಕೂ ಹೆಚ್ಚು ಜನ ಸೈಕಲ್ ಯಾತ್ರೆ ಮೂಲಕ ಪ್ರತಿಭಟನೆ ಮಾಡಿದರೂ, ಪ್ರತಿಭಟಕಾರರಿಗೆ ಯಾವುದೇ ಅಡ್ಡಿ ಪಡಿಸದಿರುವುದು ಕಂಡು ಬಂತು. ಪ್ರತಿಭಟನಾ ಸಂದರ್ಭದಲ್ಲಿಯೇ ಅಂಬ್ಯುಲೆನ್ಸ್ ಒಂದು ಸಿಲುಕಿಕೊಂಡಿತ್ತು. ಅದನ್ನು ಅರಿತ ಕಾರ್ಯಕರ್ತರು ಅಂಬ್ಯುಲೆನ್ಸ್ ದಾಟಿ ಹೋಗಲು ಅವಕಾಶ ಕಲ್ಪಿಸಿದರು.
ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಕೆ: ಕೋವಿಡ್ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶಿಷ್ಟಾಚಾರ ಹಾಗೂ ಮಾರ್ಗಸೂಚಿ ಉಲ್ಲಂಘನೆ ಮಾಡಿರುವ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಸಚಿವರಾದ ಶ್ರೀರಾಮುಲು, ಈಶ್ವರಪ್ಪ ಅವರ ವಿರುದ್ಧ ಮೊದಲು ಕೇಸ್ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಮಲ್ಲಿಕಾರ್ಜುನ ಖರ್ಗೆ ಹಾಜರಿದ್ದರು.
ರಾಜ್ಯಪಾಲರ ಭೇಟಿ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ನಡೆದ ಮದುವೆಗೆ ಮುಖ್ಯಮಂತ್ರಿಗಳು ಹೋದಾಗ, ಸಚಿವ ಶ್ರೀರಾಮುಲು ಕಾರ್ಯಕ್ರಮ, ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಕಾರ್ಯಕ್ರಮದಲ್ಲಿ ಎಷ್ಟು ಜನ ಸೇರಿದ್ದರು? ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ಳಲಾಗಿತ್ತು, ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮಾವಳಿಗಳನ್ನು ಯಾವ ರೀತಿ ಉಲ್ಲಂಘನೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದರು.
ಜನ ಸಾಮಾನ್ಯರ ರಕ್ಷಣೆಗೆ ಹೋರಾಟ: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರನ್ನು ಜೀವಂತ ಸುಡುತ್ತಿದೆ. ಕೇಂದ್ರ ಸರ್ಕಾರದಿಂದ ಜನರನ್ನು ರಕ್ಷಿಸಲು ಹೋರಾಟ ಮಾಡುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಇಂಧನ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಕಾಂಗ್ರೆಸ್ ವತಿಯಿಂದ ನಡೆಸಿದ ಸೈಕಲ್ ಜಾಥಾ ಪ್ರತಿಭಟನೆಯಲ್ಲಿ ಮಾತನಾಡಿ, ಪ್ರತಿಭಟನೆಗೆ ಸರ್ಕಾರ ಅನು ಮತಿ ನೀಡಲಿಲ್ಲ. ಜನರ ಪರ ಧ್ವನಿ ಎತ್ತಲು ಸರ್ಕಾರದ ಅನುಮತಿ ಬೇಡ. ಈ ಹೋರಾ ಟ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತದೆ. ಮುಂದಿನ ತಿಂಗಳು 4 ರಿಂದ 7 ರವರೆಗೆ ಪ್ರತೀ ತಾಲೂಕು ಹಾಗೂ ಬ್ಲಾಕ್ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಯಾವ ಕೇಸಿಗೂ ಹೆದರುವುದಿಲ್ಲ: ಜನರ ಧ್ವನಿಯಾಗುವುದು ನಮ್ಮ ಕರ್ತವ್ಯ. ನಾವು ಅದನ್ನು ಮಾಡಿದ್ದೇವೆ. ಪೊಲೀಸ್ ಅಧಿಕಾರಿಗಳು ನಮ್ಮ ವಿರುದ್ಧ ಯಾವ ಕೇಸ್ ಬೇಕಾದರೂ ಹಾಕಿಕೊಳ್ಳಲಿ ಎಂದರಲ್ಲದೆ, ಕೇಸು ಹಾಕಿ ನಮ್ಮನ್ನು ಎದುರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸುಸ್ತಾಗಿ ಕುಸಿದ ಸೌಮ್ಯಾ ರೆಡ್ಡಿ: ಕಾಂಗ್ರೆಸ್ ನಾಯಕರು ಸೈಕಲ್ ಜಾಥಾ ನಡೆಸುವ ಸಮ ಯ ದಲ್ಲಿ ಕೆಪಿಸಿಸಿ ಕಚೇರಿ ಮುಂದೆ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಸುಸ್ತಾಗಿ ಕುಸಿದು ಕುಳಿತರು. ನಂತರ ಅವರಿಗೆ ನೀರು ಕುಡಿಸಿ ಆರೈಕೆ ಮಾಡಿ ಮನೆಗೆ ಕಳುಹಿಸಲಾಯಿತು.
ತೈಲ ಬೆಲೆ ಹೆಚ್ಚಳವಾಗುತ್ತಿದ್ದರೂ ಅದನ್ನು ಕಡಿಮೆ ಮಾಡಿ ಬಡವರ ಜೇಬಿನ ಹೊರೆ ಕಡಿಮೆ ಮಾಡುವ ಬದಲು ಕೇಂದ್ರ ಸರ್ಕಾರ ಶ್ರೀಮಂತರ ಜೇಬು ತುಂಬಿಸುವ ಕೆಲಸ ಮಾಡು ತ್ತಿದ್ದಾರೆ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕಾರಣ.
-ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.