ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮನೆ ಮನೆ ಭೇಟಿಗೆ ಆದ್ಯತೆ
Team Udayavani, Apr 25, 2024, 2:06 AM IST
ಮಂಗಳೂರು: ಬೇಸಗೆಯ ತೀವ್ರತೆಯ ಮಧ್ಯೆ ಅಷ್ಟೇನೂ ಅಬ್ಬರವಿಲ್ಲದ ಈ ಬಾರಿಯ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ ಸಂಜೆ ಸಮಾಪ್ತಿಗೊಂಡಿದ್ದು, ಮತದಾನಕ್ಕೆ ಒಂದೇ ದಿನ ಉಳಿದಿದೆ.
ಕೊನೆಯ ದಿನ ಪಕ್ಷಗಳ ಕಾರ್ಯ ಕರ್ತರು, ನಾಯಕರು ಆದಷ್ಟೂ ಮನೆ ಮನೆಗಳಿಗೆ ತೆರಳಿ ಜನರನ್ನು ತಲುಪಲು ಯೋಜಿಸಿದ್ದಾರೆ. ಎ. 26ರಂದು ಮತದಾನ ನಡೆಯಲಿದ್ದು, ನೀತಿ ಸಂಹಿತೆ ಪ್ರಕಾರ ಮತದಾನಕ್ಕೆ 48 ಗಂಟೆ ಬಾಕಿ ಇರುವಂತೆಯೇ ಬಹಿರಂಗ ಸಭೆ, ರೋಡ್ ಶೋ ಸೇರಿದಂತೆ ಬಹಿರಂಗ ಪ್ರಚಾರ ನಡೆಸಲು ಅವಕಾಶ ಇಲ್ಲ.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ನ್ಯಾಯೋಚಿತ, ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ 6ರಿಂದ ಎ. 26ರಂದು ರಾತ್ರಿ 10ರ ವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.
ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಹೊಟೇಲ್‌ಗಳು ಮತ್ತು ಅತಿಥಿ ಗೃಹಗಳಲ್ಲಿ ವಾಸ್ತವ್ಯ ಹೂಡಿರು ವವರ ಪಟ್ಟಿಗಳ ಪರಿಶೀಲಿಸಿ ಕ್ಷೇತ್ರದ ಮತದಾರ ರಲ್ಲದ ರಾಜಕೀಯ ಪಕ್ಷಗಳ ವ್ಯಕ್ತಿಗಳು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಕಳುಹಿಸುವ ಕೆಲಸ ನಡೆದಿದೆ.
ರೋಡ್ ಶೋ ಹೆಚ್ಚು ಆಕರ್ಷಣೆ
ಈ ಬಾರಿ ಹಿಂದಿಗಿಂತ ಪ್ರಚಾರ ವೈಖರಿ ಭಿನ್ನವಾಗಿದ್ದು ಸುಡು ಬೇಸಗೆಯಲ್ಲಿ ಬಹಿರಂಗ ಸಮಾವೇಶ ಗಳಿಗಿಂತಲೂ ಪಕ್ಷಗಳು ನೆಚ್ಚಿಕೊಂಡದ್ದು ರೋಡ್ ಶೋಗಳನ್ನು. ಪ್ರಧಾನಿ ನರೇಂದ್ರ ಮೋದಿಯವರೂ ಸಮಾವೇಶ ರದ್ದುಗೊಳಿಸಿ ರೋಡ್ ಶೋ ನಡೆಸಿದರು. ಅದೇ ರೀತಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಜಿಲ್ಲೆಯ ವಿವಿಧೆಡೆ ರೋಡ್ ಷೋ ನಡೆಸಿದರು.
ಆದರೆ ಕಾಂಗ್ರೆಸ್‌ನಿಂದ ಯಾವುದೇ ಗಣ್ಯಾತಿಗಣ್ಯರು ಬಾರದಿರುವುದು ಅಚ್ಚರಿ. ಹಿಂದಿನ ಚುನಾವಣೆಗಳಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಷ್ಟ್ರೀಯ ವಕ್ತಾರರು ಆಗಮಿಸುತ್ತಿದ್ದರು. ಸ್ವತಃ ಅಭ್ಯರ್ಥಿ ಪದ್ಮರಾಜ್ ಅವರೇ ಜಿಲ್ಲೆಯ ನಾಯಕರೊಂದಿಗೆ ವಿವಿಧೆಡೆ ಓಡಾಡಿ ಸಣ್ಣ ಸಭೆ, ರೋಡ್ ಶೋ ನಡೆಸಿದರು. ಉಳಿದಂತೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ , ಸಚಿವ ದಿನೇಶ್ ಗುಂಡೂರಾವ್ ಸಭೆ, ಪತ್ರಿಕಾಗೋಷ್ಠಿಗೆ ಸೀಮಿತರಾಗಿದ್ದರು.
ಹಿಂದಿನ ಚುನಾವಣೆಗಳಲ್ಲಿ ಎಡಪಕ್ಷಗಳು, ಎಸ್‌ಡಿಪಿಐ, ಜನತಾ ದಳ ದ.ಕ. ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದವು. ಹಾಗಾಗಿ ಕ್ಷೇತ್ರದಲ್ಲಿ ಮೇಲ್ನೋಟಕ್ಕಾದರೂ ಸ್ಪರ್ಧೆಯಿತ್ತು. ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊರತು ಪಡಿಸಿದರೆ ಬೇರಾವುದೇ ದೊಡ್ಡ ಪಕ್ಷ ಸ್ಪರ್ಧೆಯಲ್ಲೇ ಇಲ್ಲ.
ಚುನಾವಣೆಗೆ ಸಜ್ಜು
ಎ. 26ರಂದು ಮತದಾನವನ್ನು ಶಾಂತಿಯುತ ಹಾಗೂ ಹೆಚ್ಚಿನ ಪ್ರಮಾಣಕ್ಕೇರಿಸುವ ಗುರಿಯೊಂದಿಗೆ ಜಿಲ್ಲಾಡಳಿತವೂ ಸಜ್ಜಾಗಿದೆ. ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. 1,876 ಮತಗಟ್ಟೆಗಳ ಪೈಕಿ ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ 72 ಮತ್ತು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 105 ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣೆ ಸಾಂಗವಾಗಿ ನೆರವೇರುವ ಉದ್ದೇಶದಿಂದ ಒಟ್ಟು 11,255 ಸಿಬಂದಿಯನ್ನು ನಿಯೋಜಿಸಲಾಗಿದೆ.
ಉಡುಪಿ: ವಿಶೇಷ ಅಬ್ಬರ ಇಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ ಅಂತ್ಯಗೊಂಡಿದೆ. ಗುರುವಾರ ಅಂತಿಮ ದಿನ ಮನೆ ಮನೆ ಭೇಟಿಗೆ ಪಕ್ಷಗಳು ಹಾಗೂ ಮುಖಂಡರು ತೊಡಗಲಿದ್ದಾರೆ.
ಲೋಕಸಭೆ ಚುನಾವಣೆ ಎಂದಾಕ್ಷಣ ರಾಷ್ಟ್ರ ಮತ್ತು ರಾಜ್ಯಮಟ್ಟದ ನಾಯಕರು ಮೇಲಿಂದ ಮೇಲೆ ಆಗಮಿಸಿ ರ್‍ಯಾಲಿ, ಸಮಾವೇಶ ನಡೆಸುವುದು ಸಾಮಾನ್ಯ. ಆದರೆ ಈ ಬಾರಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರವನ್ನು ನಿರ್ವಹಿಸಿರುವುದು ಬಹುತೇಕ ಜಿಲ್ಲಾ ಮಟ್ಟದ ಮುಖಂಡರೇ.ಸೀಮಿತ ಸಂಖ್ಯೆಯಷ್ಟು ರಾಜ್ಯ ನಾಯಕರು ಬಂದದ್ದು ಬಿಟ್ಟರೆ, ರಾಷ್ಟ್ರೀಯ ನಾಯಕರು ಜಿಲ್ಲೆಗೆ ಬರಲೇ ಇಲ್ಲ.
ಕಾಂಗ್ರೆಸ್ ಪರ ಸಚಿವರು, ಮಾಜಿ ಸಚಿವರು ಪ್ರಚಾರ ನಡೆಸಿದ್ದರೆ, ಬಿಜೆಪಿ ಪರ ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರು, ಮಾಜಿ ಸಚಿವರು ಪಾಲ್ಗೊಂಡರು.
ಎರಡೂ ಪಕ್ಷಗಳು ಈ ಬಾರಿ ಕಾರ್ನರ್ ಸಭೆ ಹಾಗೂ ಸಣ್ಣ ಸಣ್ಣ ಸಮಾವೇಶಗಳಿಗೆ ಹೆಚ್ಚಿನ ಮಹತ್ವ ನೀಡಿದ್ದವು. ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್ ಇತ್ಯಾದಿ ಕಡಿತಗೊಳಿಸಿದವು. ಹಾಗೆಯೇ ಒಂದು ಅಥವಾ ಎರಡು ಬೈಕ್ ರ್ಯಾಲಿ, ರೋಡ್ ಶೋಗಳಿಗೆ ಸೀಮಿತವಾದವು.
ಬಿಸಿಲಿನ ತಾಪದ ಮಧ್ಯೆ ದೊಡ್ಡ ಸಮಾವೇಶಗಳಿಗೆ ಕಾರ್ಯಕರ್ತರನ್ನು ಮತ್ತು ಬೆಂಬಲಿಗರನ್ನು ಸೇರಿಸುವುದು ಕಷ್ಟ ಎಂಬುದು ಒಂದು ಲೆಕ್ಕಾಚಾರವಾದರೆ, ದೇಶವ್ಯಾಪಿ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರ ದಿನಾಂಕ ಹೊಂದಿಕೆ ಆಗದಿರುವುದು ಮತ್ತೂಂದು ಕಾರಣ. ಚುನಾವಣೆ ವೆಚ್ಚ ಕಡಿವಾಣ ಇತ್ಯಾದಿಯ ಯೋಚನೆಯೂ ಸೇರಿ ದೊಡ್ಡ ಸಮಾವೇಶಕ್ಕೆ ಆದ್ಯತೆ ನೀಡಿಲ್ಲ.
ಅಂತಿಮ ದಿನದ ಪ್ರಚಾರ
ಬಿಜೆಪಿ ಅಭ್ಯರ್ಥಿಯು ಜಿಲ್ಲೆಯ ಮುಖಂಡರ ಜತೆಗೆ ಉಡುಪಿ ನಗರದ ಜೋಡುಕಟ್ಟೆಯಿಂದ ಸಿಟಿ ಬಸ್ ನಿಲ್ದಾಣವರೆಗೆ ಪಾದಯಾತ್ರೆ ನಡೆಸಿ ಮತ ಯಾಚಿಸುವ ಮೂಲಕ ಬಹಿರಂಗ ಪ್ರಚಾರ ಅಂತ್ಯಗೊಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ತಮ್ಮ ಪಕ್ಷದ ಮುಖಂಡರೊಂದಿಗೆ ಕುಂದಾಪುರ ತಾಲೂಕು ಪಂಚಾಯತ್ ಎದುರಿನ ಪೊಲೀಸ್ ಚೌಕಿ ಬಳಿಯಿಂದ ಹೊಸ ಬಸ್ ನಿಲ್ದಾಣದ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಬಹಿರಂಗ ಪ್ರಚಾರ ಸಮಾರೋಪ ಮಾಡಿದರು.
ಬಹಿರಂಗ ಪ್ರಚಾರ ಎ. 24ರ ಸಂಜೆ 6ಕ್ಕೆ ಅಂತ್ಯಗೊಂಡಿದ್ದು, ಎ. 25ರಂದು ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ. ಅಭ್ಯರ್ಥಿಗಳ ಸಹಿತ ಪಕ್ಷದ ಪ್ರಮುಖರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಂತಿಮ ದಿನದ ಪ್ರಚಾರ ನಡೆಸುವರು. ನಿಷೇಧಾಜ್ಞೆ ಜಾರಿಯಲ್ಲಿದ್ದು, ಮನೆ ಮನೆ ಪ್ರಚಾರದ ವೇಳೆ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರಿ ಹೋಗುವಂತಿಲ್ಲ.
ಪ್ರಮುಖರ ಪ್ರವಾಸ ರದ್ದು
ಉಡುಪಿಯಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲು ಜಿಲ್ಲಾ ಕಾಂಗ್ರೆಸ್ ಯೋಚಿಸಿತ್ತು. ತಾಂತ್ರಿಕ ಕಾರಣದಿಂದ ಸಮಾವೇಶ ರದ್ದಾಯಿತು. ಹಾಗಾಗಿ ಹಾಗೂ ಚುನಾವಣೆ ಘೋಷಣೆಯ ಅನಂತರ ಸಿಎಂ, ಡಿಸಿಎಂ ಜಿಲ್ಲೆಗೆ ಪ್ರಚಾರಕ್ಕೆ ಆಗಮಿಸಿಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣ್‌ದೀಪ್ ಸಿಂಗ್ ಸುರ್ಜೆವಾಲ ಆಗಮಿಸಿ ಮುಖಂಡರ ಸಭೆ ನಡೆಸಿದ್ದರು.
ಬಿಜೆಪಿಯಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕರೆಸಿ ಮಲ್ಪೆ ಸೀ ವಾಕ್ ಸಮೀಪ ಬೃಹತ್ ಸಭೆ ನಡೆಸಿ ಬಹಿರಂಗ ಪ್ರಚಾರ ಸಮಾರೋಪಗೊಳಿಸುವ ಆಲೋಚನೆಯಿತ್ತು. ಕೊನೆಯ ಕ್ಷಣದಲ್ಲಿ ಅವರ ಪ್ರವಾಸ ರದ್ದಾಯಿತು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರೋಡ್‌ಶೋ, ಸಮಾವೇಶ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.