ದಲಿತರ ಆದ್ಯತೆಗಳನ್ನು ದಲಿತ ಲೇಖಕರು ಸ್ವೀಕರಿಸಬೇಕು
ಉದಯವಾಣಿ ಸಂದರ್ಶನ
Team Udayavani, Aug 17, 2019, 3:10 AM IST
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇದೇ ಮೊದಲ ಬಾರಿಗೆ ಕೋಲಾರದಲ್ಲಿ ಇಂದಿನಿಂದ (ಆ.17) ಎರಡು ದಿನ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಾಹಿತಿ ಹಾಗೂ ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಮ್ಮೇಳನಾಧ್ಯಕ್ಷರಾದ ಸಂದರ್ಭದಲ್ಲಿ ಡಾ.ಎಲ್.ಹನುಮಂತಯ್ಯನವರು “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದು, ದಲಿತ ಹಾಗೂ ರೈತ ಚಳವಳಿ, ದಲಿತ ಚಳವಳಿಯ ವೈಫಲ್ಯ, ದಲಿತ ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.
* ದಲಿತ ಸಾಹಿತ್ಯ ಸಮ್ಮೇಳನದ ಅಗತ್ಯವಿತ್ತಾ?
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿವರ್ಷ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯದ ಕುರಿತಾಗಿ ಚರ್ಚೆಗಳು ಕೂಡ ನಡೆದಿವೆ. ಹಿಂದಿನ ಸಮ್ಮೇಳನಗಳಲ್ಲಿ ದಲಿತ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆಯೂ ಒತ್ತಾಯ ಬಂದಿತ್ತು. ಹೀಗಾಗಿ, ಕೋಲಾರದಲ್ಲಿ ಪರಿಷತ್ ವತಿಯಿಂದಲೇ ರಾಜ್ಯಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
* ಒಂದು ಕಾಲದಲ್ಲಿ “ದಲಿತ ಚಳವಳಿ’ ಪ್ರಬಲವಾಗಿ ಬೆಳೆದು, ಜನಪರ ಹೋರಾಟ ಹುಟ್ಟು ಹಾಕಿತ್ತು. ಆದರೆ, ಈಗ ಅಂತಹ ಹೋರಾಟ ಕಾಣುತ್ತಿಲ್ಲವಲ್ಲಾ?
ದಲಿತ ಚಳವಳಿ ಆರಂಭವಾದಾಗ ಎಲ್ಲಾ ಸಮುದಾಯದ ಪ್ರಗತಿಪರರು ದಲಿತ ಚಳವಳಿ ಬೆಂಬಲಿಸಿದರು. ಆದರೆ, ಈ ಚಳವಳಿ ಬಹಳ ವರ್ಷಗಳ ಕಾಲ ಪ್ರಬಲವಾಗಿ ಮುಂದುವರಿಯಲು ಆಗಲಿಲ್ಲ. ವೈಯಕ್ತಿಕ ಕಾರಣಗಳು ಮತ್ತು ಅದನ್ನು ಮುನ್ನಡೆಸುವವರ ವೈಫಲ್ಯ ಚಳವಳಿ ಛಿದ್ರವಾಗಲು ಕಾರಣ. ಈ ಹಿನ್ನೆಲೆಯಲ್ಲಿ ಇವತ್ತು ಬೇರೆ, ಬೇರೆ ಹೆಸರಿನಲ್ಲಿ ಅನೇಕ ಚಳವಳಿ ನೋಡುವಂತಾಗಿದೆ. ಎಲ್ಲರ ಗುರಿ-ಉದ್ದೇಶಗಳು ಒಂದೇ ಆದರೂ, ಅವರೆಲ್ಲಾ ಒಟ್ಟಿಗೆ ಸೇರಿ ಕೆಲಸ ಮಾಡುವಷ್ಟು ಔದಾರ್ಯ ತೋರಿಲ್ಲ. ತನ್ನಲ್ಲೇ ಇದ್ದಂತಹ ದಲಿತರನ್ನೇ ಒಟ್ಟಿಗೆ ತೆಗೆದುಕೊಂಡು ಹೋಗಲಾರದ ಚಳವಳಿ, ಇತರರನ್ನು ಒಳಗೊಳ್ಳುವುದು ಹೇಗೆ? ಇದು ಮೂಲ ಸಮಸ್ಯೆಯಾಗಿ ಕಾಣುತ್ತದೆ.
* ದಲಿತ ನಾಯಕರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇ ಚಳವಳಿ ಹಾದಿ ತಪ್ಪಲು ಕಾರಣವಾಯಿತಾ?
ಖಂಡಿತ, ಅದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ಯಾವುದೇ ದಲಿತ ಚಳವಳಿ ನಾಯಕರನ್ನು ಮಾತನಾಡಿಸಿ ನೋಡಿ. ನಿಮಗೆ ಮಾರ್ಗದರ್ಶನ ಯಾವುದು ಎಂದು ಕೇಳಿದರೆ ತಕ್ಷಣ ಅವರು ಅಂಬೇಡ್ಕರ್ ವಾದ ಅನ್ನುತ್ತಾರೆ. ಅಂಬೇಡ್ಕರ್ ವಾದ ಒಂದೇ ಇರುವುದರಿಂದ ನಾವೆಲ್ಲ ಒಂದಾಗಲು ಏನು ಕಷ್ಟ? ಚಳವಳಿ ವೈಫಲ್ಯಕ್ಕೆ ವೈಯಕ್ತಿಕ ಹಿತಾಸಕ್ತಿಯೇ ಹೊರತು ತಾತ್ವಿಕ ಭಿನ್ನಾಭಿಪ್ರಾಯ ಕಾರಣವಲ್ಲ.
* ದಲಿತ, ರೈತ ಚಳವಳಿ ಜತೆಗೂಡಿ ಹೋರಾಟ ಮಾಡಿದ್ದರೆ ರಾಜ್ಯ, ರಾಷ್ಟ್ರಮಟ್ಟದ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಬಹುದಿತ್ತಲ್ಲವೇ?
ಹೌದು, ಈ ಮಾತನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪುತ್ತೇನೆ. ವಿಶಾಲ ತಳಹದಿಯ ಮೇಲೆ ದಲಿತ ಹಾಗೂ ರೈತ ಚಳವಳಿ ಒಂದಾಗಬೇಕಿತ್ತು.
* ದೇವನೂರು ಮಹಾದೇವ ಸೇರಿದಂತೆ ಹಲವರು ದಲಿತ ಚಳವಳಿಯ ಮುಂಚೂಣಿಯಲ್ಲಿದ್ದರು. ಈಗ ಅವರೆಲ್ಲಾ ದೂರ ಸರಿದಂತಾಗಿದ್ದಾರೆ?
ಇಲ್ಲ, ದೇವನೂರು ಮಹಾದೇವ ಅವರು ಚಳವಳಿಯ ಮುಂಚೂಣಿಯಲ್ಲಿದ್ದಾಗಲೇ ಈ ಚಳವಳಿ ವೈಫಲ್ಯ ಕಂಡಿತು. ದೇವನೂರು ಮಹಾದೇವ ಮತ್ತು ಪ್ರೊ.ಬಿ.ಕೃಷ್ಣಪ್ಪನವರು ಇದ್ದಾಗ ಎಲ್ಲರೂ ಕೂಡಿ ಈ ಚಳವಳಿ ಒಂದಾಗಿ ಹೋಗಬೇಕು ಎಂಬ ಚಿಂತನೆಗೆ ಬರಲಿಲ್ಲ. ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎಂಬುದರಲ್ಲಿ ಭಿನ್ನಾಭಿಪ್ರಾಯ ಮೂಡಿತು. ಸಾಮಾನ್ಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಅಲ್ಲಿ ವ್ಯತ್ಯಾಸವಾಯಿತು. ಆಗ ಕಾರ್ಯಕರ್ತರದ್ದೇ ಒಂದು ಗುಂಪು, ನಾಯಕರದ್ದೇ ಒಂದು ಗುಂಪು ಆಯಿತು. ನಾವೇ ಒಂದು ಪಕ್ಷದ ಬುನಾದಿಯಾಗಬೇಕು ಎಂಬ ಚರ್ಚೆ ಕೂಡ ನಡೆಯಿತು. ಆದರೆ, ಅದು ಸಫಲವಾಗಲಿಲ್ಲ. ಎಲ್ಲರೂ ಕವಲು ದಾರಿ ಹಿಡಿದರು.
* ದಲಿತ ಸಾಹಿತ್ಯ ಎನ್ನುವ ವರ್ಗೀಕರಣದಲ್ಲೇ ಇತಿಮಿತಿ ಅಡಗಿದೆ ಎಂದು ಅನಿಸುವುದಿಲ್ಲವೆ?
ಸಾಹಿತ್ಯವನ್ನು ಇಂದು ದಲಿತ ಸಾಹಿತ್ಯ, ಶೂದ್ರ ಸಾಹಿತ್ಯ ಅಂತ ಓದುವ ಕಾರಣಕ್ಕೆ ವಿಭಾಗೀಕರಣ ಮಾಡಬೇಕೇ ಹೊರತು, ಸಾಹಿತ್ಯ ಯಾವಾಗಲೂ ಸಾಹಿತ್ಯವೇ. ಅದರಲ್ಲಿ ಜಾತಿ ಆಧಾರಿತ ವಿಭಾಗೀಕರಣ ತಪ್ಪು. ದಲಿತ ಸಾಹಿತ್ಯಕ್ಕೆ ಚಾರಿತ್ರಿಕ ಕಾರಣ ಕೂಡ ಇದೆ. ದಲಿತ ಸಾಹಿತ್ಯದಲ್ಲಿ ಹಲವರು ತೊಡಗಿಕೊಂಡ ಮೇಲೆ ಕನ್ನಡದ ಸಾಹಿತ್ಯದ ಮುಖ್ಯ ಪ್ರವಾಹದ ಜೊತೆಗೆ ಬಂದರು. ಕನ್ನಡ ಸಾಹಿತ್ಯ ಕೂಡ ಇಂದು ದಲಿತ ಸಾಹಿತ್ಯ ಅಂತ ಪ್ರತ್ಯೇಕ ಮಾಡಿಲ್ಲ. ಅದು ನಮ್ಮ ಕನ್ನಡದ ಮುಖ್ಯವಾಹಿನಿ ಅಂತ ಭಾವಿಸಿದೆ.
* ಬದಲಾದ ಕಾಲಮಾನದಲ್ಲಿ ಬದುಕಿನ ಆದ್ಯತೆ ಮತ್ತು ಜೀವನ ಕ್ರಮದಿಂದಾಗಿ ದಲಿತ ಸಾಹಿತ್ಯ, ಘೋಷಣೆಗೆ ಮಾತ್ರ ಸೀಮಿತಗೊಂಡಿದೆಯಾ?
ಆರಂಭದಲ್ಲಿ ದಲಿತ ಸಾಹಿತ್ಯ, ಘೋಷಣೆಯಾಗಿತ್ತು ನಿಜ. ಆದರೆ, ಅದು ಆವತ್ತಿನ ಅಗತ್ಯವೂ ಇರಬಹುದು. ನಂತರ ಬಂದ ಲೇಖಕರ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ಅಲ್ಲಿ ಆಕ್ರೋಶಕ್ಕಿಂತಲೂ ತೀವ್ರವಾದ ಅನುಭವ ಕೊಡುವಂತಹ ಬರಹಗಳಿವೆ. ಎಲ್ಲಿಯೂ ಆಕ್ರೋಶ ವ್ಯಕ್ತಪಡಿಸದೆ ತಾತ್ವಿಕ ಹಿನ್ನೆಲೆಯಿಂದ ದಲಿತ ಸಾಹಿತ್ಯ ರಚನೆಯಾಗಿದೆ.
* ಅಂದಿನ ದಲಿತ ಸಾಹಿತ್ಯಕ್ಕೂ, ಇವತ್ತಿನ ದಲಿತ ಸಾಹಿತ್ಯಕ್ಕೂ ಇರುವ ಬದಲಾವಣೆ ಏನು?
ಈ ಮೊದಲು ದಲಿತ ಸಾಹಿತ್ಯ ಹುಟ್ಟುಹಾಕಿದ ತೀವ್ರತೆ ಈಗ ಒಂದು ಹದಕ್ಕೆ ಬಂದಿದೆ. ಹಾಗೆಯೇ, ಇವತ್ತು ದಲಿತರ ಸವಾಲುಗಳು ಕೂಡ ಬದಲಾವಣೆಯಾಗಿವೆ. ಜಾಗತೀಕರಣ ಆದ ಮೇಲೆ ದಲಿತರ ಆದ್ಯತೆಗಳು ಬೇರೆ ಬೇರೆಯಾಗಿವೆ. ಎಪ್ಪತ್ತರ ದಶಕದಲ್ಲಿ ಯಾರನ್ನು ನಮ್ಮ ಶತ್ರುಗಳು ಎಂದು ಭಾವಿಸುತ್ತಿದ್ದೆವೋ, ಇವತ್ತು ಆ ಶತ್ರುಗಳು ಮಿತ್ರರಾಗಿದ್ದಾರೆ. ಜೊತೆಗೆ ದಲಿತರ ಸಮಸ್ಯೆ ಮತ್ತು ಆದ್ಯತೆಗಳು ಕೂಡ ಬದಲಾಗಿವೆ. ಈ ಆದ್ಯತೆಗಳನ್ನು ದಲಿತ ಲೇಖಕರು ಸ್ವೀಕಾರ ಮಾಡಬೇಕು. ಈ ಸವಾಲುಗಳು ದಲಿತ ಸಾಹಿತ್ಯದ ವಸ್ತುಗಳಾಗಬೇಕು.
* ಸರ್ಕಾರ ಕನ್ನಡ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲೆ ಇಂಗ್ಲಿಷ್ ಭಾಷೆ ಕಲಿಕೆ ಮಾಡಲು ಹೊರಟಿದೆ. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ವಿರೋಧಿಸಿದೆ. ಈ ಬಗ್ಗೆ ನಿಮ್ಮ ನಿಲುವೇನು?
ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದು ತಪ್ಪಲ್ಲ. ಇಂಗ್ಲಿಷ್ ಭಾಷೆ ನಮ್ಮ ಬದುಕಿಗೆ ಅಗತ್ಯ ಎನ್ನುವ ಭಾವನೆ ಬಂದಿದ್ದರೆ ಕಲಿಸುವುದರಲ್ಲಿ ತಪ್ಪಿಲ್ಲ. ಆದರೆ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕು ಎನ್ನುವ ತತ್ವಕ್ಕೆ ಬದ್ಧರಾಗಿರಬೇಕು. ಬರೀ ಕರ್ನಾಟದಲ್ಲಿ ಬದಲಾವಣೆ ಮಾಡಿದರೆ ಸಾಲದು ರಾಷ್ಟ್ರಮಟ್ಟದಲ್ಲಿ ಆಗಬೇಕು. ಬಡವರಿಗೆ ಕನ್ನಡ ಭಾಷೆ, ಶ್ರೀಮಂತರಿಗೆ ಇಂಗ್ಲಿಷ್ ಭಾಷೆಯಾಗಬಾರದು.
* ಕೋಲಾರ ದಲಿತ ಚಳವಳಿಗಳ ತವರು ನೆಲ. ಈ ನೆಲದಲ್ಲಿ ನಡೆಯುವ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಏನು ಸಂದೇಶ ನೀಡುವಿರಿ?
ಈಗ ನಗರ ದಲಿತರು ಮತ್ತು ಗ್ರಾಮೀಣ ದಲಿತರು ಇಬ್ಭಾಗವಾಗಿದ್ದಾರೆ. ನಗರ ದಲಿತರ ಶಕ್ತಿಯೇ ಬೇರೆ, ಗ್ರಾಮೀಣ ಭಾಗದ ದಲಿತರ ಅಸಹಾಯಕತೆ ಬೇರೆ. ಸಣ್ಣ, ಸಣ್ಣ ವಿಚಾರಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆ ಪರಿಸ್ಥಿತಿಯಿಂದ ಹೊರಗೆ ಬರಲು ಏನು ಮಾಡಬೇಕು, ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎಂಬ ಸಂದೇಶವನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ನೀಡಲಿದ್ದೇನೆ.
* ದಲಿತ ಚಳವಳಿಯ ನಾಯಕರು ಹೋರಾಟದ ಮೂಲಕ ಪಡೆದ ವರ್ಚಸ್ಸನ್ನು ವೈಯಕ್ತಿಕ ರಾಜಕೀಯ ಲಾಭಕ್ಕೆ ಬಳಸಿಕೊಂಡರು ಎಂಬ ಅಪವಾದ ಇದೆಯಲ್ಲಾ?
ಚಳವಳಿಯ ಲಾಭವನ್ನು ರಾಜಕೀಯ ವರ್ಚಸ್ಸಿಗೆ ಕೆಲವೇ ಕೆಲವರು ಬಳಸಿಕೊಂಡಿದ್ದಾರೆ. ಆ ರಾಜಕೀಯ ಲಾಭವನ್ನು ದಲಿತರ ವಿಮೋಚನೆಗೆ ಬಳಸಿಕೊಂಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ, ರಾಜಕೀಯ ಪಕ್ಷಗಳು ಯಾವಾಗ ದಲಿತ ಚಳವಳಿಯನ್ನು ಉಪಯೋಗಿಸಿಕೊಂಡವೋ ಆನಂತರದ ದಿನಮಾನಗಳಲ್ಲಿ ದಲಿತ ಚಳವಳಿಯ ರೂಪವೇ ದಾರಿ ತಪ್ಪಿತು.
ದಲಿತ ಚಳವಳಿ ಶೂದ್ರರ ಚಳವಳಿ. ರೈತರ ಚಳವಳಿ ಶೂದ್ರಾತಿಶೂದ್ರರ ಚಳವಳಿ. ಇವೆರಡೂ ಒಂದಾಗಿ ಹೋರಾಟ ಹಮ್ಮಿಕೊಂಡಿದ್ದರೆ ಅದುವೇ ಆಳುವ ವರ್ಗ ಆಗುತ್ತಿತ್ತು. ರೈತ ಮುಖಂಡ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಕನಸೂ ಅದೇ ಆಗಿತ್ತು.
-ಡಾ.ಎಲ್.ಹನುಮಂತಯ್ಯ. ಸಾಹಿತಿ
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.