ಆದಿವಾಸಿಗಳಿಗೆ ದಸರಾ ದರ್ಶನ: ಸಚಿವ ವಿ. ಸೋಮಣ್ಣ
Team Udayavani, Sep 7, 2019, 7:15 PM IST
ಮೈಸೂರು: ಈ ಬಾರಿ ಜಿಲ್ಲೆಯ ಆದಿವಾಸಿ ಜನರಿಗೆ ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಜಿಲ್ಲಾಡಳಿತದ ವತಿಯಿಂದ ಕಲ್ಪಿಸಲಾಗುವುದು ಎಂದು ವಸತಿ ಸಚಿವರೂ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ತಿಳಿಸಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾಮೀಣ ದಸರಾ ಮಹೋತ್ಸವ ಏರ್ಪಡಿಸುವ ಸಂಬಂಧ ಆಯೋಜಿಸಿದ್ದ ತಾಲ್ಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಗಡಿ ತಾಲ್ಲೂಕುಗಳಾದ ಎಚ್.ಡಿ. ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ನೆಲೆಸಿರುವ ಆದಿವಾಸಿ ಜನರನ್ನು ದಸರಾ ಉತ್ಸವದ ವೇಳೆ ಬಸ್ ಗಳ ಮೂಲಕ ಮೈಸೂರಿಗೆ ಕರೆತಂದು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಬಾರಿ ನಮ್ಮ ಆದ್ಯತೆಯ ಕೆಲಸವಾಗಿದೆ. ಹೀಗೆ ಮೈಸೂರಿಗೆ ಆಗಮಿಸುವ ಗಿರಿಜನರಿಗೆ ಊಟೋಪಚಾರದ ವ್ಯವಸ್ಥೆಯೊಂದಿಗೆ ಚಾಮುಂಡಿ ಬೆಟ್ಟ, ಅರಮನೆ ಹಾಗೂ ಮೃಗಾಲಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಇದರೊಂದಿಗೆ ಗ್ರಾಮೀಣ ಜನರನ್ನು ದಸರಾ ಹಬ್ಬದಲ್ಲಿ ಸಕ್ರಿಯವಾಗಿ ತೊಡಗಿಸುವ ಕೆಲಸ ಆಗಬೇಕು. ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ದಸರಾದಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರು ನಮ್ಮೊಂದಿಗೆ ಕೈಜೋಡಿಸುವ ಮೂಲಕ ನಾಡಹಬ್ಬದ ಯಶಸ್ಸಿಗೆ ಶ್ರಮಿಸುವಂತೆ ಮನವಿ ಮಾಡಿದರು.
ಗ್ರಾಮೀಣ ದಸರಾ ಆಯೋಜನೆಗಾಗಿಯೇ ಜಿಲ್ಲಾ ಪಂಚಾಯಿತಿಗೆ 50 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಪ್ರತಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗೆ ದಸರಾ ಅಲಂಕಾರಕ್ಕೆಂದೇ ಪ್ರತ್ಯೇಕವಾಗಿ 2 ಲಕ್ಷ ರೂಪಾಯಿ ಬಿಡುಗಡೆ ಮಾಡುವುದಾಗಿ ಹೇಳಿದರು.
ದಸರಾ ಸಂಬಂಧಿತ ಕಾಮಗಾರಿಗಳನ್ನು ನಡೆಸುವಾಗ ಗುಣಮಟ್ಟ ಕಾಯ್ದುಕೊಳ್ಳಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು, ಶಾಸಕ ನಿರಂಜನ್ ಕುಮಾರ್, ಮಾಜಿ ಶಾಸಕರಾದ ಸಿದ್ದರಾಜು, ಕೋಟೆ ಎಂ. ಶಿವಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ, ಉಪವಿಭಾಗಾಧಿಕಾರಿ ವೀಣಾ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳ ದೇವಣ್ಣ, ಉಪಾಧ್ಯಕ್ಷೆ ಮಂಜುಳಾ ಚಂದ್ರೇಗೌಡ, ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಯೋಗೇಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.