ಅರಮನೆ ಮೈದಾನದಲ್ಲಿ ಈಡಿಗರ ಶಕ್ತಿ ಪ್ರದರ್ಶನ- ಕಾಂಗ್ರೆಸ್‌ಗೆ ಶಕ್ತಿ ತುಂಬಲು ಈಡಿಗರ ಶ್ರಮ
Team Udayavani, Dec 10, 2023, 11:23 PM IST
ಬೆಂಗಳೂರು: ರಾಜಕೀಯ ಲೆಕ್ಕಾಚಾರ ಹಾಗೂ ವೈಯಕ್ತಿಕ ಪ್ರತಿಷ್ಠೆಗಳ ಕಾರಣಕ್ಕೆ ಸಾಕಷ್ಟು ಕುತೂಹಲಗಳನ್ನು ಮೂಡಿಸಿದ್ದ ಈಡಿಗರ ಸಮಾವೇಶ ರಾಜಧಾನಿಯಲ್ಲಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಈಡಿಗ, ಬಿಲ್ಲವ, ನಾಮಧಾರಿ ಸೇರಿ ಎಲ್ಲ 26 ಪಂಗಡಗಳ ಬೃಹತ್ ಜಾಗೃತ ಹಾಗೂ ಸ್ವಾಭಿಮಾನಿ ಸಮಾವೇಶ ಸಮುದಾಯದ ಪ್ರಮುಖ ಬೇಡಿಕೆಗಳ ಈಡೇರಿಕೆ ಮತ್ತು ಪರೋಕ್ಷವಾಗಿ ರಾಜಕೀಯ ಸಂದೇಶ ರವಾನೆಗೆ ವೇದಿಕೆಯಾಗಿ ಬದಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಮಧು ಬಂಗಾರಪ್ಪ ಸಹಿತ ಈಡಿಗ ಸಮುದಾಯದ ಬಹುತೇಕ ಶಾಸಕರು, ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಸಮುದಾಯದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಗೈರಾಗಿದ್ದರು.
ವೇದಿಕೆಯಲ್ಲಿದ್ದ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಸಂಘದ ಅಧ್ಯಕ್ಷ ಡಾ| ಎಂ.ತಿಮ್ಮೇಗೌಡ ಸಹಿತ ಈಡಿಗ ಸಮುದಾಯದ ಮುಖಂಡರೆಲ್ಲರೂ ಈಡಿಗರ ಅಭಿವೃದ್ಧಿಗಾಗಿ ಸರಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದರು. ಮುಖ್ಯವಾಗಿ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಮುಂತಾದ ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವು ದರಿಂದ ಯಾವುದೇ ಭರವಸೆ ನೀಡಲಾಗುವುದಿಲ್ಲ. ಅಧಿವೇಶನ ಮುಗಿದ ಕೂಡಲೇ ಬೇಡಿಕೆಗಳ ಬಗ್ಗೆ ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಮಾತನಾಡಿದ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಈಡಿಗ ಸಮುದಾಯದ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ನೀಡಬೇಕೆಂಬ ಮನವಿ ಬಂದಿದ್ದು, ಇದನ್ನು ಈಡೇರಿಸುವ ಭರವಸೆ ನೀಡುತ್ತೇನೆ ಎಂದರು.
ಸಂಘಟನೆ ಬಹಳ ಮುಖ್ಯ
ಸಮಾವೇಶವನ್ನು ಉದ್ಘಾಟಿಸಿದ ಬಳಿಕ ಮಾತನಾ ಡಿದ ಸಿಎಂ, ಹಿಂದುಳಿದ ಜಾತಿಗಳ ಸಂಘಟನೆ, ಶಿಕ್ಷಣ, ಹೋರಾಟದ ಬಗ್ಗೆ ಹಾಗೂ ಈಡಿಗ ಸಮಾಜಕ್ಕೆ ಏನು ಅಗತ್ಯ ಎಂದು ಪ್ರಸ್ತಾವಿಸಿ¨ªಾರೆ. ಅನೇಕ ಬೇಡಿಕೆ ಗಳನ್ನು ಸಲ್ಲಿಸಿದ್ಧಾರೆ. ದೊಡ್ಡ ಇತಿಹಾಸವಿರುವ ಈಡಿಗ ಸಮುದಾಯದ ಬಗ್ಗೆ ಹೆಮ್ಮೆ ಇದೆ ಎಂದರು.
ನಿಮ್ಮ ವಿಚಾರದಲ್ಲಿ ನಾವಿದ್ದೇವೆ
ಡಿ.ಕೆ.ಶಿವಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದ ಈಡಿಗ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಒಟ್ಟಾಗಿ ಶ್ರಮಿಸಿದೆ. ನಿಮ್ಮ ಬೆಂಬಲಕ್ಕೆ ಎಷ್ಟು ಅಭಿನಂದನೆ ತಿಳಿಸಿದರೂ ಸಾಲದು. ನಾವು ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತೇವೆ. ವಿಧಾನಸಭಾ ಚುನಾವಣೆಯಲ್ಲಿ ಮತ್ತು ಇಂದು ಈಡಿಗ ಸಮುದಾಯದವರೆಲ್ಲ ಒಗ್ಗಟ್ಟಾಗಿ, ಸಿದ್ದರಾಮಯ್ಯನವರ ಸರಕಾರದ ಜತೆಗಿದ್ದೇವೆ ಎಂಬ ಸಂದೇಶ ನೀಡಿದ್ದೀರಿ. ಇದಕ್ಕೆ ನಾನು ಆಭಾರಿ. ನಿಮ್ಮ ವಿಚಾರದಲ್ಲಿ ನಾವಿದ್ದೇವೆ ಎಂದರು.
ಸಚಿವ ಮಧು ಬಂಗಾರಪ್ಪ, ಸೋಲೂರಿನ ವಿಖ್ಯಾತಾ ನಂದ ಸ್ವಾಮೀಜಿ, ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ನಿಟ್ಟೂರಿನ ರೇಣುಕಾನಂದ ಸ್ವಾಮೀಜಿ, ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತರು, ನಿಪ್ಪಾಣಿಯ ಅರುಣಾನಂದ ಸ್ವಾಮೀಜಿ, ಸಂಘದ ಅಧ್ಯಕ್ಷ ಡಾ| ಎಂ.ತಿಮ್ಮೇಗೌಡ, ನಟ ಮುರಳಿ, ನಿರ್ಮಾಪಕ ಚಿನ್ನೇಗೌಡ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಲೋಕಸಭಾ ಸದಸ್ಯ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಮಾಜಿ ಶಾಸಕ ವಸಂತ ಬಂಗೇರ, ಹರತಾಳು ಹಾಲಪ್ಪ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಬಿ.ಕೆ.ಹರಿಪ್ರಸಾದ್ ಅನುಪಸ್ಥಿತಿ
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅನುಪಸ್ಥಿತಿ ಈಡಿಗರ ನಡುವೆ ಎರಡು ಬಣಗಳು ಹುಟ್ಟಿಕೊಂಡಿರುವುದಕ್ಕೆ ಪುಷ್ಟಿ ನೀಡಿದಂತಿತ್ತು. ಕೆಲವು ತಿಂಗಳುಗಳ ಹಿಂದೆ ಬಿ.ಕೆ.ಹರಿಪ್ರಸಾದ್ ಇದೇ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಈಡಿಗರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಕ್ಕೆ ಈ ಬೃಹತ್ ಸಮಾವೇಶದ ಮೂಲಕ ಹರಿಪ್ರಸಾದ್ ಬಣಕ್ಕೆ ಪರೋಕ್ಷವಾಗಿ ಟಕ್ಕರ್ ಕೊಟ್ಟಂತಿತ್ತು.
ನನಗೆ ರಾಜಕೀಯ ಬೇಡ: ಶಿವರಾಜ್
ಬೆಂಗಳೂರು: “ಚುನಾವಣ ರಾಜಕೀಯಕ್ಕೆ ನಾನು ಬರುವುದಿಲ್ಲ’ ಎಂದು ನಟ ಶಿವರಾಜ್ ಕುಮಾರ್ ಬಹಿರಂಗವಾಗಿ ಸ್ಪಷ್ಟಪಡಿಸಿದ್ದಾರೆ.
ಸಮಾವೇಶದ ವೇದಿಕೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಿವರಾಜ್‌ಕುಮಾರ್‌ಗೆ ಲೋಕಸಭೆ ಟಿಕೆಟ್ ಕೊಡುಗೆ ನೀಡಿದ್ದು, ಶಿವರಾಜ್ ಕುಮಾರ್ ಅದನ್ನು ನಯವಾಗಿ ನಿರಾಕರಿಸಿದರು.
ಸಮಾವೇಶದಲ್ಲಿ ಮಾತನಾಡುತ್ತ ಡಿ.ಕೆ. ಶಿವಕುಮಾರ್, “ನೀನು ರೆಡಿಯಾಗಪ್ಪ ಪಾರ್ಲಿಮೆಂಟ್‌ಗೆ ನಿಂತುಕೊಳ್ಳೋಕೆ. ನಿನಗೆ ಎಲ್ಲಿ ಬೇಕೋ ಅಲ್ಲಿ ಸೀಟು ಕೊಡುತ್ತೇನೆ ಎಂದು ಶಿವರಾಜ್ ಕುಮಾರ್‌ಗೆ ಹೇಳಿದ್ದೆ. ಇಲ್ಲ ಐದಾರು ಸಿನೆಮಾ ಒಪ್ಪಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ಸಿನೆಮಾ ಯಾವಾಗ ಬೇಕಾದರೂ ಮಾಡಬಹುದು, ಪಾರ್ಲಿಮೆಂಟ್‌ಗೆ ಹೋಗುವ ಯೋಗ ಸುಲಭವಾಗಿ ಬರುವುದಿಲ್ಲ. ಆ ಯೋಗ ಮನೆ ಬಾಗಿಲಿಗೆ ಬಂದಿದೆ. ಅವಕಾಶ ತಪ್ಪಿಸಿಕೊಳ್ಳಲು ಹೋಗಬೇಡಿ’ ಎಂದು ಡಿ.ಕೆ.ಶಿವಕುಮಾರ್ ಸಮಾವೇಶದಲ್ಲಿ ಬಹಿರಂಗವಾಗಿ ಶಿವರಾಜ್ ಕುಮಾರ್‌ಗೆ ಎಂಪಿ ಟಿಕೆಟ್ ಆಫರ್ ಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ನಮ್ಮ ತಂದೆ ಕೊಟ್ಟಿರುವ ಬಣ್ಣ ಹಚ್ಚುವ ಬಳುವಳಿಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಮ್ಮದೇನಿದ್ದರೂ ಮೇಕಪ್ ಹಾಕೋದು, ಸಿನೆಮಾ ಮಾಡೋದು. ರಾಜಕೀಯ ನಮಗೆ ಬೇಡ, ಅದಕ್ಕೆ ಬೇರೆಯವರು ಇದ್ದಾರೆ. ನನಗೆ ರಾಜಕೀಯ ಬೇಡ. ನಾನು ಮದುವೆಯಾಗಿದ್ದು ಬಂಗಾರಪ್ಪ ಅವರ ಮಗಳನ್ನು. ಪತ್ನಿ ಗೀತಾರಿಗೆ ಆಸಕ್ತಿಯಿದ್ದರೆ ರಾಜಕೀಯಕ್ಕೆ ಬರಲಿ. ಪತ್ನಿ ಬಯಸುವುದನ್ನು ನೆರವೇರಿಸೋದು ಗಂಡನ ಕರ್ತವ್ಯ. ನಾನು ಅವರ ಬೆಂಬಲಕ್ಕೆ ಇರುತ್ತೇನೆ ಎಂದು ಹೇಳಿದರು.
ಪ್ರಣವಾನಂದ ಶ್ರೀ ಉಪವಾಸ ಸತ್ಯಾಗ್ರಹ
ಗಂಗಾವತಿ: ಬೆಂಗಳೂರಿನಲ್ಲಿ ಆರ್ಯ ಈಡಿಗ ಸಂಘದ ಬೃಹತ್ ಸಮಾವೇಶಕ್ಕೆ ಪರ್ಯಾಯ ಎನ್ನುವಂತೆ ಈಡಿಗ ಸಮಾಜದ ಜಗದ್ಗುರು ಪ್ರಣಾವಾನಂದ ಸ್ವಾಮೀಜಿ ಗಂಗಾವತಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಸಮಾಜ ಒಡೆಯುವ ವ್ಯಕ್ತಿಗಳಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ. ಈಡಿಗ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.