Desi Swara: ಮಡಿಲ ಸಾಂತ್ವಾನದ ಸುಖ ಬಯಸದವರ್ಯಾರು…?
ಪುರಾಣದ ಮಡಿಲ ಮಹಿಮೆ ಅನಂತ....
Team Udayavani, Feb 3, 2024, 12:45 PM IST
ಕಳೆದ ವಾರಗಳಲ್ಲಿ ಎಲ್ಲರ ನಾಲಿಗೆಯ ತುದಿಯ ಹಾಡು “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’…. ಇಂದಿನ ಬರಹದ ವಿಷಯ ಅದಲ್ಲ ಆದರೆ ಹಾಡಿನ ಒಂದು ಪದವಾದ “ಮಡಿಲು’ ಎಂಬುದರ ಬಗ್ಗೆ. ಈ ಹಾಡಿನ ಸಾಲುಗಳೆಲ್ಲ ಬಲು ಅರ್ಥ ಪೂರ್ಣವಾದರೂ “ಕೌಸಲ್ಯೆಯಾಗುವೆನು ಮಡಿಲಲಿರು ರಾಮ’ ಎಂಬುದು ಬಹುವಾಗಿ ನಾಟಿದ್ದೇ, ಇಂದಿನ ಬರಹದ ಮೂಲ.
ಮೊದಲಿಗೆ ಮಡಿಲು ಎಂಬುದಕ್ಕೆ ಉಡಿ, ತೊಡೆ, ಅಂಕ ಎಂದು ಪರ್ಯಾಯ ಪದಗಳಿವೆ. ದಶರಥನಿಗೆ ಮೂವರು ಪತ್ನಿಯರು. ಕೌಸಲ್ಯೆ, ಸುಮಿತ್ರಾ ದೇವಿ ಮತ್ತು ಕೈಕೇಯಿ. ತ್ಯಾಗ ಮತ್ತು ಪ್ರೀತಿಗೆ ಹೆಸರಾದ ಕೋಸಲ ದೇಶದ ರಾಜಕುಮಾರಿ ಕೌಸಲ್ಯೆ, ದಶರಥನ ಮೊದಲ ಪತ್ನಿ ಮತ್ತು ಪಟ್ಟದರಾಣಿ. ಪುತ್ರ ಕಾಮೇಷ್ಟಿಯಾಗದ ಫಲವಾಗಿ ಬಂದ ಪಾಯಸದ ಅಥವಾ ಪ್ರಸಾದದ ಅರ್ಧಭಾಗ ಕೌಸಲ್ಯೆಗೆ ದೊರೆತಾಗ ಹುಟ್ಟಿದವನೇ ಶ್ರೀರಾಮ. ಮಿಕ್ಕ ಅರ್ಧಭಾಗದಿಂದ ಜನ್ಮ ತಳೆದವರೇ ಲಕ್ಷಣ-ಶತ್ರುಘ್ನ ಮತ್ತು ಭರತ. ಮೂವರ ಮಡಿಲು ತುಂಬಿತ್ತು. ಪುಣ್ಯಾತ್ಗಿತ್ತಿ ಸುಮಿತ್ರೆಯ ಮಡಿಲು ಎರಡು ಬಾರಿ ತುಂಬಿತ್ತು. ಆದರೂ ಶತ್ರುಘ್ನನ ಬಗ್ಗೆ ಹೆಚ್ಚು ವಿಚಾರಗಳನ್ನು ನಾನು ಓದಿಲ್ಲ.
ರಾಮನು ಮಹಾವಿಷ್ಣುವಿನ ಅವತಾರ. ಲಕ್ಷ್ಮಣನು ಶೇಷನಾಗನ ಅವತಾರ. ಶತ್ರುಘ್ನ ಮತ್ತು ಭರತರು ಕ್ರಮವಾಗಿ ಸುದರ್ಶನ ಚಕ್ರ ಮತ್ತು ಪಾಂಚಜನ್ಯದ ಅವತಾರವಾಗಿದ್ದಾರೆ. ಇಂಥವರನ್ನು ತಮ್ಮ ಮಡಿಲಲ್ಲಿ ತುಂಬಿಕೊಂಡ ಆ ಮಹಾತಾಯಿಯರು ಅದೆಷ್ಟು ಪುಣ್ಯವಂತರು ಅಲ್ಲವೇ? ರಾಮನನ್ನು ಹೊತ್ತ ಆ ಕೌಸಲ್ಯೆಯ ಮಡಿಲಿನಂತೆ ತಮ್ಮ ಮಡಿಲೂ ಇರಬೇಕೆಂದು ಬಯಸುವುದೇ ಸೌಭಾಗ್ಯವಲ್ಲವೇ? ದಶರಥನಿಗೆ ಕೈಕೇಯಿಯೇ ಪ್ರಿಯ ಪತ್ನಿಯಾಗಿದ್ದಳು.
ಅವಳಿಂದಲೇ ಅರಮನೆಯ ಸಂತಸವೆಲ್ಲ ಮಣ್ಣಾದ ಮೇಲೆ, ಕೊನೆಯ ದಿನಗಳನ್ನು ಕೌಸಲ್ಯೆಯ ಮನೆಯಲ್ಲೇ ಕಳೆದನಂತೆ.
ರಾಮ ಮತ್ತು ಲಕ್ಷ್ಮಣರು ಕಾಡಿಗೆ ತೆರಳಿದ ಮೇಲೆ, ಭರತ ಮತ್ತು ಶತೃಘ್ನರೂ ಅರಮನೆಯಲ್ಲಿ ಇಲ್ಲದ ಆ ಸಮಯದಲ್ಲಿ ತೀವ್ರವಾಗಿ ನೊಂದಿದ್ದ ಆ ದಶರಥನಿಗೆ ಯಾವ ಸುಪ್ಪತ್ತಿಗೆಯೂ ಬೇಕಿರುವುದಿಲ್ಲ. ಇಲ್ಲಿ ನನ್ನದೊಂದು ಕಲ್ಪನೆ ಹೀಗಿದೆ. ಆ ಕೌಸಲ್ಯಾದೇವಿಯ ಉಡಿ ಅರ್ಥಾತ್ ತೊಡೆಯೇ ಆ ದಶರಥನ ಸಾಂತ್ವನಕ್ಕೆ ಬೇಕಿದ್ದ ದಿಂಬಾಗಿತ್ತು. ಅವಳ ತೊಡೆಯನ್ನೇ ದಿಂಬಾಗಿರಿಸಿಕೊಂಡು ಮಲಗಿದವ ಜೀವ ತೊರೆದಿದ್ದ ಎನ್ನಬಹುದೇ? ರಾಮನು ನಿದ್ರಿಸಿದ್ದ ಆ ಮಡಿಲಿಗಿಂತಾ ಮತ್ತಾವ ಶ್ರೇಷ್ಠ ಜಾಗ ಇದೆ ಅಲ್ಲವೇ ಈ ಭುವಿಯಲ್ಲಿ? ರಾಮನನ್ನೇ ಮಗನಾಗಿ ಪಡೆದ ಆ ದಶರಥನು ಕೊನೆಯ ಘಳಿಗೆಯಲ್ಲೂ ಶಾಂತ ರೀತಿಯಲ್ಲೇ ಜೀವ ತೊರೆದ ಎನ್ನಲೇ? ಮಡಿಲ ಮೇಲೆ ತಲೆ ಇಟ್ಟು ಮಲಗಿದ ಎಂದಾಗ ನೆನಪಾಗುವ ಕಥೆಗಳು ಕೆಲವಾರು. ಮೊದಲಿಗೆ ಸತ್ಯವಾನ್ ಸಾವಿತ್ರಿಯ ಕಥೆ. ಪೂರ್ಣವಾಗಿ ಕಥೆಯನ್ನೇನೂ ಹೇಳೋದಿಲ್ಲ ಬಿಡಿ.
ಸತ್ಯವಾನನ ಕೊನೆಯ ದಿನ ಯಾವುದು ಎಂಬ ಅರಿವು ಅವನ ಮಾತಾಪಿತೃಗಳಿಗೆ ಇರುತ್ತದೆ. ಆ ಅರಿವು ಸಾವಿತ್ರಿಗೂ ಗೊತ್ತಾಗುತ್ತದೆ. ಗಂಡನ ಕೊನೆಯ ದಿನಕ್ಕೆ ಇನ್ನೂ ಮೂರು ದಿನ ಇರುವಂತೆ ಸಾವಿತ್ರಿಯು ಉಪವಾಸ ವ್ರತ ಆರಂಭಿಸುತ್ತಾಳೆ. ಕೊನೆಯ ದಿನದಂದು ಗಂಡನೊಂದಿಗೆ ಅರಣ್ಯಕ್ಕೂ ಹೋಗುತ್ತಾಳೆ. ದಿನದ ಮಧ್ಯದಲ್ಲಿ ಸುಸ್ತಾದ ಗಂಡನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಳ್ಳುತ್ತಾಳೆ. ಅನಂತರ ಸತ್ಯವಾನನ ಪ್ರಾಣ ತೆಗೆದುಕೊಂಡು ಹೋಗಲು ಬಂದ ಯಮನನ್ನು ಗೆದ್ದು ಗಂಡನ ಪ್ರಾಣದ ಜತೆಗೆ ಮತ್ತಷ್ಟು ವರಗಳನ್ನೂ ಪಡೆದು ಬರುತ್ತಾಳೆ.
ಗಂಡನನ್ನು ತೊಡೆಯ ಮೇಲೆ ಮಲಗಿಸಿಕೊಳ್ಳುವುದರಿಂದ ಬಹಳ ಅನುಕೂಲವಿದೆ ಅಂತಾಯ್ತು, ಅಲ್ಲವೇ? ಒಂದು ಸಂದರ್ಭದಲ್ಲಿ ವಿಧಿ ಲಿಖೀತವೇ ಆಗಿದ್ದರೂ ಅದರ ವಿರುದ್ಧ ಸಾಗಲಾಗದೇ ನೆಮ್ಮದಿಯಿಂದಲೇ ಕೊನೆಯಾಯ್ತು ಎನ್ನಬಹುದು. ಇದು ನನ್ನ ಅನಿಸಿಕೆಯ ಆಧಾರದ ಮೇಲೆ ಅಷ್ಟೇ. ಮತ್ತೂಂದು ಸಂದರ್ಭದಲ್ಲೂ ವಿಧಿ ಲಿಖೀತವೇ ಆಗಬೇಕಿತ್ತು ಆದರೆ ಅದರ ವಿರುದ್ಧ ಸಾಗುವ ಯತ್ನದಲ್ಲಿ ಯಶಸ್ಸು ಸಾಧಿಸಿದ್ದು ಸಾಧನೆ.
ಮಡಿಲು ಎಂಬುದಕ್ಕೂ ಸಿನೆಮಾ ರಂಗಕ್ಕೂ ಬಲು ನಂಟಿದೆ ಎನ್ನಬಹುದೇ? ಬಹಳ ಹಿಂದೆ ತಾಯಿಯ ಮಡಿಲಲ್ಲಿ ಎಂಬ ಸಿನೆಮಾ ಬಂದಿತ್ತು. ಬಡ ಕುಟುಂಬದಲ್ಲಿ ಮಕ್ಕಳು ಹೆಚ್ಚು. ಕುಟುಂಬ ಯೋಜನೆ ಕುರಿತಾದ ಈ ಸಿನೆಮಾ, ಬರೀ ಕರವಸ್ತ್ರವೇನು, ಹೊದ್ದು ಹೋಗಿದ್ದರೆ ಶಾಲು ಕೂಡಾ ಒದ್ದೆಯಾಗಿರುತ್ತಿತ್ತು. ಕಿಲಾಡಿ ಕಿಟ್ಟು ಚಿತ್ರದಲ್ಲಿನ ಒಂದು ಹಾಡು ಮಡಿಲಲ್ಲಿ ಮಗುವಾದೆ ನಾನು. ನಮ್ಮ ವಿಷ್ಣುವರ್ಧನ್ ಅವರೇ ಹಾಡಿರುವ ಈ ಹಾಡು ಸೊಗಸಾಗಿದೆ.
ಇವರದ್ದೇ ಅಭಿನಯವಾದ ಬಂಧನ ಚಿತ್ರದಲ್ಲೂ ಒಂದು ಹಾಡಿದೆ. ಜೈ ಜಗದೀಶ್ ಮತ್ತು ಸುಹಾಸಿನಿ ಅವರ ಅಭಿನಯದ ಹಾಡು “ಈ ಬಂಧನ ಜನುಮ ಜನುಮದ ಅನುಬಂಧನ’. ಇದರಲ್ಲಿನ ಒಂದು ಚರಣದಲ್ಲಿ “ನಿನ್ನಾ ಮಡಿಲಲ್ಲಿ ನಾನು ಮಗುವಾದೆ’ ಎಂದಿದೆ. ಈ ಎರಡೂ ಹಾಡಿನ ಸಾಲುಗಳಿಂದ ಅರ್ಥವಾಗಬಹುದಾದದ್ದು ಎಂದರೆ ಪತಿ-ಪತ್ನಿಯರ ಸಂಬಂಧದಲ್ಲೂ ಈ ಮಡಿಲು ಎಂಬುದು ಮುಖ್ಯ ಪಾತ್ರವಹಿಸುತ್ತದೆ. ಸತಿ-ಸಾವಿತ್ರಿ ಕಥೆಯು ಮಹಾಭಾರತದ ಅರಣ್ಯ ಪರ್ವದಲ್ಲಿ ಬರುವಂಥಾ ಒಂದು ಉಪಕಥೆ.
ಮಹಾಭಾರತದ ಗರ್ಭದಲ್ಲಿ ಅದೆಷ್ಟು ವಿಚಾರಗಳು ಅಡಕವಾಗಿದೆಯೋ ಬಲ್ಲವನೇ ಬಲ್ಲ. ಇರಲಿ ಮಹಾಭಾರತದ ಮತ್ತೂಂದು ಕಥೆಯನ್ನೂ ನೋಡೋಣ ಬನ್ನಿ.
ಕಲಿಕೆಯ ವಿಷಯದಲ್ಲಿ ದ್ರೋಣಾಚಾರ್ಯರಿಂದ ತಿರಸ್ಕೃತನಾದ ಕಾರಣ, ಕರ್ಣನು ಸೀದಾ ಪರಶುರಾಮರ ಬಳಿ ಹೋಗುತ್ತಾನೆ. ತಾನು ಬ್ರಾಹ್ಮಣ ಎಂದು ಹೇಳಿಕೊಂಡು ವಿದ್ಯೆಯನ್ನೂ ಕಲಿಯುತ್ತಾನೆ. ಒಮ್ಮೆ ಹೀಗೇ ಕಲಿಕೆಯ ಸಮಯದಲ್ಲಿ ಪರುಶುರಾಮರಿಗೆ ಸುಸ್ತಾದಂತಾಗಿ ಮಲಗಬೇಕು ಎನ್ನಿಸಿತು. ಕರ್ಣನ ಮಡಿಲ ಮೇಲೆ ತಲೆ ಇಟ್ಟು ಮಲಗುತ್ತಾರೆ. ಅದೇ ಸಮಯಕ್ಕೆ ದುಂಬಿಯೊಂದು ಬಂದು, ಪರಶುರಾಮ ತಲೆ ಇಟ್ಟು ಮಲಗಿದ್ದ ಕರ್ಣನ ಅದೇ ತೊಡೆಯನ್ನು ಕೊರೆಯುತ್ತಾ ಸಾಗುತ್ತದೆ. ಮೂಲತಃ ಕ್ಷತ್ರಿಯನೇ ಆಗಿರುವ ಕರ್ಣನು ನೋವನ್ನು ತಡೆಯುತ್ತಾನೆ.
ಮಲಗಿರುವ ಗುರುಗಳನ್ನು ಎಬ್ಬಿಸಿದರೆ ಶಾಪಕ್ಕೆ ಒಳಗಾಗುವ ಅಪಾಯ ಇದೆ ಎಂದರಿತು ನೋವನ್ನು ನುಂಗಿಕೊಂಡು ಸುಮ್ಮನೆ ಕೂರುತ್ತಾನೆ. ಒಂದು ಹಂತದಲ್ಲಿ ತೊಡೆಯಿಂದ ಹರಿದ ರಕ್ತವು ಗುರುಗಳತ್ತ ಹರಿದು ಅವರ ವಸ್ತ್ರ ಒದ್ದೆಯಾದಾಗ ಅವರಿಗೆ ಎಚ್ಚರವಾಗುತ್ತದೆ. ಅಷ್ಟೆಲ್ಲ ನೋವನ್ನು ಒಬ್ಬ ಬ್ರಾಹ್ಮಣ ತಡೆಯಲಾರ ಹಾಗಾಗಿ ಇವನು ಕ್ಷತ್ರಿಯನೇ ಆಗಿರಬೇಕು ಎಂದು ಅರಿತು ಶಾಪ ಕೊಡುತ್ತಾರೆ. ಮಡಿಲು ಎಂಬುದಕ್ಕೆ ಊರು ಎಂಬ ಪರ್ಯಾಯ ಪದವೂ ಇದೆ ಅಂತ ಹೇಳಿದ್ದೆ.
ಸಂಸ್ಕೃತದ ನಾಟಕ, ಭಾಸ ವಿರಚಿತ ಊರುಭಂಗ ಬಹುಶ: ಎಲ್ಲರಿಗೂ ಅರಿವಿರುವ ವಿಷಯ ಎಂದುಕೊಳ್ಳುವ. ಇಲ್ಲಿ ಊರು ಎಂದರೆ ತೊಡೆ. ಭಂಗ ಎಂದರೆ ಮುರಿತ. ನೆಮ್ಮದಿಯ ಭಂಗ ಎಂದಾಗ ಹೇಗೆ ನೆಮ್ಮದಿಯು ಭಂಗವಾಗುತ್ತದೆ ಎನ್ನುವೆವೋ ಅದೇ ರೀತಿ ಇಲ್ಲಿ “ಊರು ಭಂಗ’ ಎಂದರೆ ತೊಡೆಯ ಮುರಿತ. ದುರ್ಯೋಧನ ಶರೀರದಲ್ಲಿ ತೊಡೆಯನ್ನು ಹೊರತು ಪಡಿಸಿದರೆ ಮಿಕ್ಕೆಲ್ಲ ವಜ್ರಕಾಯ. ಅವನನ್ನು ಕೊಲ್ಲಬೇಕೆಂದರೆ ಅವನ ತೊಡೆಯನ್ನು ಮುರಿದೇ ಆಗಬೇಕಿತ್ತು. ಊರುಭಂಗದ ಸಾರವೇ ಭೀಮ ಮತ್ತು ದುರ್ಯೋಧನರ ನಡುವಿನ ಯುದ್ಧ. ಶ್ರೀಕೃಷ್ಣನ ತಂತ್ರವು ಈ ಊರುಭಂಗದ ಬಲು ಮುಖ್ಯವಾದ ಅಂಗ ಎಂಬುದೂ ಉಲ್ಲೇ ಖನೀಯ. ಮತ್ತೊಂದು ಮಾತನ್ನೇ ಹೇಳಿದರೆ, ಶ್ರೀಕೃಷ್ಣನಿಲ್ಲದ ತಂತ್ರಗಳೂ ಇವೆಯೇ?
ಕುಮಾರವ್ಯಾಸ ಭಾರತದಲ್ಲಿ ದುರ್ಯೋಧನನು ಕೃಷ್ಣನನ್ನು ನಿಂದಿಸುವ ಹಂತದಲ್ಲಿ “ಆರ ಬಸುರಲಿ ಬಂದು ಮೊಲೆಯುಂಡಾರ ಮಡಿಲಲಿ ಬೆಳೆದು ಬಳಿಕಿನೊಳಾರ ಹೆಂಡಿರ ಕೊಂದು’ ಎಂದು ಆಡಿಕೊಳ್ಳುವಾಗ “ಅದಾರ ಮಡಿಲಲ್ಲಿ ಬೆಳೆದವನೋ ನೀನು’ ಎಂದು ನಿಂದಿಸುತ್ತಾನೆ. ಶಾಸ್ತ್ರ ಸಂಪ್ರದಾಯವನ್ನು ಪಾಲಿಸುವ ಮನೆಗಳಲ್ಲಿ, ಮಡಿಲ ತುಂಬುವ ಶಾಸ್ತ್ರವು ಹಲವು ಸಂದರ್ಭಗಳಲ್ಲಿ ನಡೆಯುತ್ತದೆ. ಮದುವೆಗಳಲ್ಲಿ ಗೃಹ ಪ್ರವೇಶದ ಸಮಯದಲ್ಲಿ “ಸೊಸೆಯನ್ನು ಮಡಿಲಿಗೆ ಕರೆವ ಶಾಸ್ತ್ರ’ ನಡೆಯುತ್ತದೆ. ಮಡಿಲ ತುಂಬುವ ವಿಶೇಷದಲ್ಲಿ ಅಕ್ಕಿ, ಕಾಯಿ, ದುಡ್ಡು ಇತ್ಯಾದಿಗಳಿರುತ್ತದೆ. ಮಡಿಲ ಬಗ್ಗೆ ಮಡಿಲ ಭರ್ತಿ ವಿಷಯಗಳಿವೆ, ಮತ್ತು ವಿಶೇಷಗಳಿವೆ ಕೂಡಾ. ನಾನಿಲ್ಲಿ ಹೇಳಿರುವುದು ಒಂದೆರಡು ವಿಷಯಗಳನ್ನು ಮಾತ್ರ. ಓದುಗರು ಇಲ್ಲಿರುವ ವಿಷಯಗಳನ್ನು ಓದಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಎನ್ನೋಣ.
*ಶ್ರೀನಾಥ್ ಭಲ್ಲೆ, ರಿಚ್ಮಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.