Desi Swara: Yoga Day-ಬಸವತತ್ತ್ವ ಮತ್ತು ಯೋಗತತ್ತ್ವ: ಅನುಸಂಧಾನ
ಬಸವಣ್ಣ ವಚನಗಳಲ್ಲಡಗಿದೆ ಯೋಗ
Team Udayavani, Jun 22, 2024, 12:50 PM IST
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಯೋಗದ ಅತ್ಯಂತ ದೊಡ್ಡ ವರ್ಷಾವಧಿ ಹಬ್ಬ. ವರ್ಷದ ಅತ್ಯಂತ ದೊಡ್ಡ ಹಗಲಾದ ಜೂನ್ 21ರಂದು ಆಚರಿಸಲಾಗುತ್ತದೆ. 2015ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆರಂಭವಾದ ಈ ಆಚರಣೆಯು ಯೋಗಕ್ಕೆ ಅಂತಾರಾಷ್ಟ್ರೀಯ ಮಹತ್ವವನ್ನು ತಂದುಕೊಟ್ಟಿದೆ. ಈ ವರ್ಷ ಹತ್ತನೆಯ ಯೋಗ ದಿನಾಚರಣೆ. ಈ ಸಂದರ್ಭದಲ್ಲಿ ಅನಾದಿಕಾಲದಿಂದಲೂ ಭಾರತದ ಸಂಸ್ಕೃಯ ಭಾಗವಾಗಿ ಬೆಳೆದು ಬಂದ “ಯೋಗ ತತ್ತÌ’ ಮತ್ತು ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಕ್ರಾಂತಿಕಾರಿ ವಿಚಾರಗಳೊಂದಿಗೆ ಸಮಾಜದಲ್ಲಿ ಸಮಾನತೆಯನ್ನು ಬಯಸಿದ “ಬಸವತತ್ತ್ವ’ಗಳನ್ನು ಜತೆಯಾಗಿ ಅವಲೋಕಿಸುವ ಒಂದು ಪ್ರಯತ್ನವನ್ನು ಮಾಡೋಣ
ಯೋಗತತ್ತ್ವ:
ಮೊದಲಿಗೆ ಯೋಗತತ್ತ್ವ ಎಂದರೆನೆಂದು ನೋಡೋಣ. ಯೋಗ ಎನ್ನುವುದು ಒಂದು ಅಗಾಧವಾದ ಶಾಸ್ತ್ರ. ಇದರ ಹಿಂದೆ ದರ್ಶನ ಶಾಸ್ತ್ರವೇ ಇದೆ. ಇದೊಂದು ಜೀವನ ವಿಧಾನ ಜೀವನವಿಡೀ ಸಾಧನೆ ಮಾಡಬೇಕಾದ ಅನುಷ್ಠಾನ ವಿದ್ಯೆ. ಇವತ್ತು ಬಹಳ ಜನಪ್ರಿಯವಾಗಿರುವ ಆಸನಗಳು ಯೋಗಶಾಸ್ತ್ರದ ಅಷ್ಟಾಂಗಗಳಲ್ಲಿ ಒಂದು. ಭಾರತೀಯ ಷಟ್ ದರ್ಶನಗಳೆಂದು ಪ್ರಸಿದ್ಧವಾದ ನ್ಯಾಯ, ವೈಶೇಷಿಕ, ಸಾಂಖ್ಯ, ಮೀಮಾಂಸ, ವೇದಾಂತಗಳೊಂದಿಗೆ ಯೋಗಶಾಸ್ತ್ರವೂ ಬರುತ್ತದೆ ಎಂಬ ವಿಚಾರವೇ ಸನಾತನ ಸಂಸ್ಕೃತಿಯಲ್ಲಿ ಈ ಶಾಸ್ತ್ರಕ್ಕಿರುವ ಮಹತ್ವವನ್ನು ತಿಳಿಸುತ್ತದೆ. ಯೋಗವು ಚತುರ್ಮುಖ ಬ್ರಹ್ಮನಿಂದಲೇ ಪರಿಚಯಿಸಲ್ಪಟ್ಟಿತು ಅಂತ ಯೋಗ ಯಾಜ್ಞವಲ್ಕ್ಯ ನು ಹೇಳುತ್ತಾನೆ. ಆದರೆ ಈ ವಿದ್ಯೆಯನ್ನು ಸೂತ್ರರೂಪದಲ್ಲಿ ಬಂಧಿಸಿ ಕೊಟ್ಟಿರುವುದು ಪತಂಜಲಿ ಮುನಿಯ ಯೋಗಸೂತ್ರ ಎನ್ನುವ ಗ್ರಂಥ. ಈ ಗ್ರಂಥದ ಕಾಲವನ್ನು ಕ್ರಿ.ಪೂ. 900ನೇಯ ಶತಮಾನ, ಅಂದರೆ ಸುಮಾರು 3000 ವರ್ಷಗಳ ಹಿಂದೆ.
ಸಮಾಧಿಪಾದ, ಸಾಧನಪಾದ, ವಿಭೂತಿ ಪಾದ ಮತ್ತು ಕೈವಲ್ಯ ಪಾದ ಎಂಬ ನಾಲ್ಕು ಅಧ್ಯಾಯಗಳಲ್ಲಿ 195 ಸೂತ್ರಗಳಿರುವ ಈ ಗ್ರಂಥದ ಆಳ ಮತ್ತು ಯೋಗ್ಯತೆಗಳು ಇದಕ್ಕೆ ಬಂದಿರುವ ಅಸಂಖ್ಯಾಕ ವ್ಯಾಖ್ಯಾನಗಳನ್ನು ನೋಡಿದರೆ ತಿಳಿಯುತ್ತದೆ.
ಮನಸ್ಸಿನ ನಿಗ್ರಹದ ಮೂಲಕ ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತಾ ಬ್ರಹ್ಮಾನಂದವನ್ನು ಸಾಧಿಸುವುದು ಯೋಗಶಾಸ್ತ್ರದ ಗುರಿ. “ಯೋಗಃ ಚಿತ್ತವೃತ್ತಿ ನಿರೋಧಃ’ ಎನ್ನುವುದು ಯೋಗಶಾಸ್ತ್ರವು ಯೋಗ ಎನ್ನುವ ಪದಕ್ಕೆ ಕೊಡುವ ಭಾಷ್ಯ.
ಮನುಷ್ಯರಾದ ನಾವು ಚಿತ್ತದ ಮೂಲಕ ಈ ಪ್ರಪಂಚವನ್ನು ತಿಳಿಯುತ್ತೇವೆ. ಈ ಚಿತ್ತದಲ್ಲಿ ಬರುವ ಯೋಚನೆಗಳಿಂದ ಏಳುವ ಅಲೆಗಳೇ ವೃತ್ತಿಗಳು. ನಿರೋಧ ಎಂದರೆ ವ್ಯವಸ್ಥೆಯ ಸಮತೋಲನವನ್ನು ಕಾಯ್ದುಕೊಳ್ಳುವುದು. ಅಂದರೆ ಮನಸ್ಸಿನಲ್ಲಿ ಎದ್ದ ಭಾವನೆಗಳನ್ನು ಅಡಗಿಸುವುದು ಯೋಗವಲ್ಲ. ಹೊರಗಿನ ಏರುಪೇರುಗಳಿಂದ ಮನದ ಪ್ರಶಾಂತತೆಯನ್ನು ಕದಡದಂತೆ ಕಾಯುವ ಸ್ಥಿತಿಗೆ ಮನಸ್ಸನ್ನು ಕೊಂಡೊಯ್ಯುವುದೇ ಯೋಗವೆನಿಸುತ್ತದೆ.
ಶ್ರೀ ಕೃಷ್ಣನು ಭಗವದ್ಗಿತೆಯಲ್ಲಿ “ಯೋಗಃ ಕರ್ಮಸು ಕೌಶಲಮ್’ ಎನ್ನುತ್ತಾನೆ. ಅಂದರೆ ನಮ್ಮ ಪಾಲಿಗೆ ಬಂದ ಕೆಲಸವನ್ನು ಶುದ್ಧಚಿತ್ತದಿಂದ ಯಜ್ಞ ಭಾವನೆಯಿಂದ ಮಾಡಿ ಅದರ ಮೂಲಕ ಸಾರ್ಥಕ್ಯವನ್ನು ಕಾಣುವುದು, ಭಗವಂತನಲ್ಲಿ ಐಕ್ಯನಾಗುವುದೇ ಯೋಗ ಎನ್ನುತ್ತಾನೆ. ಬಸವಣ್ಣನವರ ಕಾಯಕ ತತ್ತ್ವವು ಇದೇ ಅಲ್ಲವೇ !!
“ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು
ಅಸಮಂಜಸದಿ ಸಮನ್ವಯ ಸೂತ್ರ ನಯವ
ವೆಸನಮಯ ಸಂಸಾರದಲಿ ವಿನಯವ ಕಾಣ್ವರಸಿಕತೆಯೇ ಯೋಗವೆಲೊ ಮಂಕುತಿಮ್ಮ’ ಎನ್ನುವ ಡಿವಿಜಿ ಅವರ ಯೋಗದ ವಿವರಣೆಯು ಯೋಗವೆಂದರೇನೆಂದು ಸ್ಪಷ್ಟವಾಗಿ ವಿವರಿಸುತ್ತದೆ.
ಈ ಸಮತೆಯನ್ನು ಸಾಧಿಸುವ ಮಾರ್ಗವನ್ನು ಅಷ್ಟಾಂಗಗಳ ಮೂಲಕ ವಿವರಿಸುವ ಯೋಗತತ್ತ್ವವನ್ನು ಅರಿಯಲು ಅಷ್ಟಾಂಗಗನ್ನು ಸ್ಥೂಲವಾಗಿ ಪರಿಶೀಲಿಸೋಣ. ಯಮ, ನಿಯಮ, ಆಸನ, ಪ್ರಾಣಾಯಾಮ, ಧಾರಣ ಧ್ಯಾನ ಮತ್ತು ಸಮಾಧಿ – ಇವು ಯೋಗದ ಅಷ್ಟಾಂಗಗಳು ಎಂದು ಪತಂಜಲಿಯ ಯೋಗಸೂತ್ರವು ಪಟ್ಟಿ ಮಾಡುತ್ತದೆ.
ಯಮ ಅಂದರೆ ಬಿಡುವುದು. ಜೀವನದಲ್ಲಿ ನಾವು ಬಿಡಬೇಕಾದ ಗುಣಗಳು ಯಾವುವು ಎಂದು ಇವು ತಿಳಿಸುತ್ತದೆ. ಅಹಿಂಸೆ, ಅಸತ್ಯ ಅಸ್ತೇಯ, ಬ್ರಹ್ಮಚರ್ಯ ಅಪರಿಗ್ರಹಗಳು ಎಲ್ಲರೂ ಜೀವನದಲ್ಲಿ ಪಾಲಿಸಬೇಕಾದ ಸಾಮಾಜಿಕ ಕರ್ತವ್ಯಗಳು, ಸಮಾಜ ಜೀವಿಯಾದ ಮಾನವನ ಸಮಾಜ ಶಾಂತಿಯಿಂದ ಇರಬೇಕಾದರೆ ಎಲ್ಲರೂ ತಮ್ಮ ಕರ್ತವ್ಯವನ್ನು ಪಾಲಿಸಬೇಕು. ಹಾಗಾಗಿ ಯಮ ಯೋಗ ಸಾಧನೆಯ ಮೊದಲ ಅಂಗ ನಿಯಮಗಳು- ಅಂದರೆ ಹಿಡಿದುಕೊಳ್ಳುವುದು ಎಂದರ್ಥ. ನಾವು ಸ್ವಂತ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳಿವು. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ – ಇವುಗಳು ನಿಯಮಗಳು. ಆಸನ- ಧ್ಯಾನದ ಅಭ್ಯಾಸಕ್ಕಾಗಿ ಸ್ಥಿರವಾಗಿ, ಸುಖವಾಗಿ ಕುಳಿತುಕೊಳ್ಳುವ ಅಂಗ ವಿನ್ಯಾಸವೇ ಆಸನಗಳು.
ನಮ್ಮ ಪ್ರತಿಯೊಂದು ಆಸನವೂ ಸ್ಥಿರವಾಗಿ ಇರುವಂತೆ ನಾವು ಸಾಧನೆ ಮಾಡಿದಾಗ ಅವು ನಮ್ಮ ಮನಸ್ಸನ್ನು ಹದಗೊಳಿಸಿ ರಜಸ್ಸು ಮತ್ತು ತಮಸ್ ಗುಣಗಳನ್ನು ಕಡಿಮೆ ಮಾಡುವಲ್ಲಿ ಸಹಕಾರವನ್ನು ನೀಡುತ್ತದೆ. ಈ ಹಿನ್ನೆಲೆಯನ್ನೆಲ್ಲ ಅರಿತು ಆಸನಗಳ ಸಾಧನೆ ಮಾಡುವುದು ಬಹಳ ಮುಖ್ಯವೆನಿಸುತ್ತದೆ. ಬಾರಿಯ ಅಂಗ ಸೌಷ್ಠವವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಮಾಡಿದ ಕ್ರಿಯೆಗಳು ವ್ಯಾಯಾಮವೆನಿಸಿಕೊಳ್ಳುತ್ತವೆಯೋ ಹೊರತು ಯೋಗಾಭ್ಯಾಸವೆನಿಸದು. ಯೋಗತತ್ತ್ವದ ಅರಿವಿನಿಂದ, ಯಮ-ನಿಯಮಗಳ ಆಚರಣೆಯಿಂದ ಮಾಡಿದ ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗುತ್ತದೆ.
ಪ್ರಾಣಾಯಾಮ-ಉಸಿರಿನ ನಿಯಂತ್ರಣದ ಮೂಲಕ ಮನೋ ನಿಯಂತ್ರಣ; ಆ ಮೂಲಕ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣಶಕ್ತಿಯನ್ನೂ, ಮನಸ್ಸನ್ನೂ ನಿಗ್ರಹಿಸುವ ಉಪಾಯವೇ ಪ್ರಾಣಾಯಾಮ ಪ್ರತ್ಯಾಹಾರ- ಮನಸ್ಸನ್ನು ಮತ್ತು ಇಂದ್ರಿಯಗಳನ್ನು ಪ್ರಾಪಂಚಿಕ ಸೆಳೆತಗಳಿಂದ ವಿಮುಖಗೊಳಿಸುವುದೇ ಪ್ರತ್ಯಾಹಾರ. ಧಾರಣ- ಮನಸ್ಸನ್ನು ಒಂದು ಕಡೆಗೆ ಕೇಂದ್ರೀಕ ರಿಸಲು ಮಾಡುವ ತಯಾರಿಯೇ ಧಾರಣ. ಧ್ಯಾನ – ಮನಸ್ಸನ್ನು ಒಂದೇ ವಿಷಯದ ಮೇಲೆ ಕೇಂದ್ರೀಕರಿಸುವುದೇ ಧ್ಯಾನ. ಸಮಾಧಿ- ನಾವು ಧ್ಯಾನ ಮಾಡಿದ ವಿಷಯದ ಸಾಕ್ಷಾತ್ಕಾರವೇ ಸಮಾಧಿ. ಮೇಲಿನ ಐದು ಅಂಗಗಳು ಬಹಿರಂಗ ಸಾಧನೆಯ ಅಂಗಗಳೆಂದು ಪ್ರಸಿದ್ಧವಾಗಿವೆ. ಕೊನೆಯ ಮೂರು ಅಂಗಗಳಾದ ಧಾರಣ, ಧ್ಯಾನ ಮತ್ತು ಸಮಾಧಿಗಳು ಅಂತರಂಗ ಸಾಧನೆಯ ಅಂಗಗಳೆನಿಸಿವೆ.
ಈ ಅಷ್ಟಾಂಗಗಳ ನಿರಂತರ ಸಾಧನೆಯನ್ನು ಮಾಡುವ ಮೂಲಕ ಮಾನವನು ಅಂತರಂಗ ಮತ್ತು ಬಹಿರಂಗ ಶುದ್ಧಿಯನ್ನು ಸಾಧಿಸಿ ಜೀವನ್ಮುಕ್ತನಾಗುವುದೇ ಯೋಗ ಸಾಧನೆ ಎನಿಸುತ್ತದೆ. ಇದನ್ನು ಹೇಳುವಲ್ಲಿ ಬಸವಣ್ಣನವರ ಒಂದು ಪ್ರಸಿದ್ಧ ವಚನ ನೆನಪಾಗುತ್ತದೆ.
ಬಸವತತ್ತ್ವ-ಯೋಗ
ಕಾಯಕವೇ ಕೈಲಾಸ ಎಂದು ಭೋದಿಸಿದ ಬಸವಣ್ಣ ನಾವು ಮಾಡುವ ಕಾಯಕದ ಮೂಲಕ ಭಗವಂತನಲ್ಲಿ ಐಕ್ಯ ಹೊಂದುವ ಬ್ರಹ್ಮಾನಂದವನ್ನು ಕಂಡುಕೊಳ್ಳುವ ಸೂತ್ರವನ್ನು ಹೇಳಿ ಸಮಾಜದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಮಹಾನ್ ಚೇತನ. ಅವರ ತತ್ತ್ವಗಳಲ್ಲಿ ಯೋಗತತ್ತ್ವ ಹೇಗೆ ಅಡಕವಾಗಿದೆ ಎಂದು ಕೆಲವು ವಚನಗಳ ಉದಾಹರಣೆಯ ಮೂಲಕ ನೋಡೋಣ.
“ಕಳಬೇಡ, ಕೊಳಬೇಡ, ಹುಸಿಯನುಡಿಯಲುಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನನೊಲಿಸುವ ಪರಿ’ ಇಲ್ಲಿ ಮೊದಲನೆಯ ಸಾಲು ಅಷ್ಟಾಂಗದ ಮೊದಲ ಅಂಗವಾದ ಯಮಗಳನ್ನು ಭೋದಿಸುತ್ತದೆ. ಕಳಬೇಡ ಅಂದರೆ ಆಸ್ತೆಯ, ಕೊಲಬೇಡ ಅಂದರೆ ಅಹಿಂಸೆಯನ್ನು ಆಚರಿಸು ಎಂದು. ಎರಡನೆಯ ಸಾಲು ಎರಡನೆಯ ಅಂಗ ಅಂದರೆ ನಿಯಮಗಳಾದ ಶೌಚ, ಸಂತೋಷಗಳನ್ನು ಹೇಳುತ್ತದೆ. ಮುಂದೆ ಹೇಳುವ ಅಂತರಂಗ ಬಹಿರಂಗ ಶುದ್ಧಿಗಳು, ಈಶ್ವರ ಪ್ರಣೀಧಾನ ಮತ್ತು ಜೀವನಮುಕ್ತಿ ಅಂದರೆ ಸಮಾಧಿಯನ್ನು ಹೇಳುತ್ತದೆ.
“ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬವಯ್ಯ ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ ಕೊಡಲಸಂಗಮದೇವ ಕೇಳಯ್ನಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’
ಇಲ್ಲಿ ಬಸವಣ್ಣನವರು ದೇಹದ ಮಾಧ್ಯಮದ ಮೂಲಕ ಮೋಕ್ಷವನ್ನು ಸಾಧಿಸುವ ವಿಧಾನವನ್ನು ಸರಳವಾಗಿ ತಿಳಿಸಿದ್ದಾರೆ. ಎನ್ನ ಕಾಲೇ ಕಂಬ ಎಂದರೆ ಮನಸ್ಸಿನ ದೃಢ ನಿರ್ಧಾರದ ಬಲವೇ ದೇಹವೆಂಬ ದೇವಾಲಯದ ಅಡಿಪಾಯ ಎಂದು ಮನಸ್ಸನ್ನು ಹದಗೊಳಿಸಬೇಕಾದ ಅಗತ್ಯತೆಯನ್ನು ಹೇಳುತ್ತಾರೆ. ದೇಹವೇ ದೇಗುಲವಾದಾಗ ನಾವು ಮುಕ್ತರಾಗುವುದು ಖಂಡಿತ. ಶರೀರ ಮಾಧ್ಯಮದಿಂದ ಮನಸ್ಸಿನ ಶಕ್ತಿಯ ಮೂಲಕ ನಾವು ಸಾಧಿಸಬಹುದಾದ ಎತ್ತರವನ್ನು ಹೇಳುತ್ತಾರೆ.
“ಲೋಕಡದೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಆಳುವವರ ಮೆಚ್ಚ ಕೂಡಲಸಂಗಮದೇವ’
ಎನ್ನುವಲ್ಲಿ ನಮ್ಮ ಮನಸ್ಸನ್ನು ನಾವು ಸ್ವಸ್ಥವಾಗಿಡಬೇಕಾದ ಮಹತ್ವವನ್ನು ತಿಳಿಸುತ್ತಾರೆ.
“ಅತ್ತಲಿತ್ತಲು ನೋಡದಂತೆ ಹೇಳವನ ಮಾಡಯ್ಯ ತಂದೇ
ಸುತ್ತಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ
ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ
ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ’
ಎನ್ನುವ ವಚನದಲ್ಲಿ ಇಂದ್ರಿಯಗಳ ನಿಗ್ರಹ ಅಂದರೆ ಪ್ರತ್ಯಾಹಾರವನ್ನು ಹೇಳಿದ್ದಾರೆ.
ನಮಗಿಲ್ಲಿ ಮುಖ್ಯವಾಗುವುದು ಇವರ ಪ್ರತೀ ವಚನದಲ್ಲಿಯೂ ಬರುವ ಯೋಗಶಾಸ್ತ್ರದ ಅಷ್ಟಾಂಗಗಳು. ಹೀಗೆ ಬಸವತತ್ತ್ವ ಬೇರೆಯಲ್ಲ ಯೋಗತತ್ತ್ವ ಬೇರೆಯಲ್ಲ. ಒಂದನ್ನು ನಾವು ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಇನ್ನೊಂದು ತಾನಾಗಿಯೇ ನಮ್ಮ ಜೀವನದ ಭಾಗವಾಗುತ್ತದೆ.ಮನಸ್ಸಿನ ಶೋಧನೆಯನ್ನು ಮಾಡುತ್ತಾ ಚಿತ್ತವೃತ್ತಿಯ ನಿರೋಧದ ಮೂಲಕ ಕೈವಲ್ಯವನ್ನು ವಿವರಿಸುವ ಯೋಗತತ್ತ್ವ; ತ್ರಿವಿಧ ದಾಸೋಹದ ಮೂಲಕ ಅನಾಚಾರವೇ ನರಕ, ಅಚಾರವೇ ಸ್ವರ್ಗ ಎಂದು ಹೇಳುವ ಬಸವತತ್ತ್ವ- ಎರಡೂ ಹೇಳುವುದು ಒಂದೇ ವಿಚಾರವನ್ನು. ಶುದ್ಧವಾದ ಮನಸ್ಸು ಮತ್ತು ಆರೋಗ್ಯವಂತ ದೇಹದ ಮೂಲಕ ಸಮಾಜಮುಖಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಎರಡರ ಮೂಲ ಉದ್ದೇಶ. ಎರಡು ತತ್ತ್ವಗಳ ಸ್ವಲ್ಪ ಭಾಗವನ್ನಾದರೂ ನಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡರೆ ಅದೇ ನಮ್ಮ ಸಾಫಲ್ಯ.
*ಸುಧಾ ಶಶಿಕಾಂತ್, ಮಸ್ಕತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.