Desi Swara@100: ಈಸ್ ಇಟ್ ವರ್ಥ್ ?
Team Udayavani, Nov 27, 2023, 3:55 PM IST
ಶ್ರೀಪತಿ ರಾಯರು ಕೆಲಸದಿಂದ ನಿವೃತ್ತರಾಗಿ “ಟೊರಂಟೊ ಸ್ಟಾರ್’ ವಾರ್ತಾ ಪತ್ರಿಕೆಯನ್ನು ಮನೆಗೆ ತರಿಸಿ ಓದಲು ಆರಂಭಿಸಿದ್ದರು. ಕೈತುಂಬಾ ಸಂಬಳ ಬರುವ ಕೆಲಸವಿತ್ತು ಅವರಿಗೆ. ಆದರೆ ಕೋವಿಡ್‌ನ ಎರಡನೇ ಅಲೆ ಜೋರಾಗಿ ಹೊಡೆದಾಗ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಹೊಂದುವವರಿಗೆ ಉತ್ತಮ ಪ್ಯಾಕೇಜ್ ಘೋಷಿಸಿತ್ತು. ಹೇಗೂ ಪಿಂಚಣಿ ಪಡೆಯುವ ವಯಸ್ಸಾಗಿದೆ, ಕಂಪೆನಿ ಕೊಡುವ ಪ್ಯಾಕೇಜ್ ಪಡೆದುಕೊಂಡರೆ ಕೆಲಸ ಮಾಡದಿದ್ದರೂ ಎರಡು ವರ್ಷಗಳ ಸಂಬಳ ದೊರಕುವುದು. ಅನಂತರ ಪಿಂಚಣಿ ಆರಂಭಿಸಿದರಾಯಿತು ಎಂದು ಲೆಕ್ಕಾಚಾರ ಮಾಡಿ ನಿವೃತ್ತಿಗೆ ಅರ್ಜಿಯನ್ನು ಹಾಕಿದ್ದರು. ರಾಯರು ಸುಮಾರು ಇಪ್ಪತ್ತು ವರ್ಷಗಳಿಂದ ಇದೇ ಸಂಸ್ಥೆಯಲ್ಲಿ ಜವಾಬ್ದಾರಿಯುತ ಕೆಲಸ ಮಾಡಿದ್ದರು.
ಸಾಮನ್ಯವಾಗಿ ಉದ್ಯೋಗ ಬಿಟ್ಟು ಹೋಗುವವರನ್ನು ಬೀಳ್ಕೊಡಲು ಮಧ್ಯಾಹ್ನದ ಊಟಕ್ಕೆ ಸೇರುವುದು ವಾಡಿಕೆಯಾಗಿದ್ದರೂ ಕೋವಿಡ್‌ನ ನಿರ್ಬಂಧನೆಗಳಿಂದಾಗಿ ಸಹೋದ್ಯೋಗಿಗಳೆಲ್ಲ ಝೂಮ್‌ನಲ್ಲಿ ವರ್ಚುವಲ್ ಸಭೆ ಸೇರಿ ರಾಯರಿಗೆ ವಿದಾಯ ಹೇಳಿದ್ದರು. ಎಲ್ಲರೂ ಸೇರಿ ಒಂದು ಸ್ಮರಣಿಕೆಯನ್ನು ಪಾರ್ಸೆಲ್ ಮಾಡಿ ಕಳುಹಿಸಿದ್ದರು.
ಕೆಲಸದಲ್ಲಿರುವಾಗ ಅಂತರ್ಜಾಲದಲ್ಲಿಯೇ ಎಲ್ಲ ವಾರ್ತೆಗಳನ್ನು ಓದಿ ಮುಗಿಸುತ್ತಿದ್ದ ಶ್ರೀಪತಿ ರಾಯರು ಈಗ ಟೊರಂಟೊ ಸ್ಟಾರ್‌ನ ಎಲ್ಲ ಪುಟಗಳನ್ನೂ ಓದುವುದನ್ನು ರೂಢಿ ಮಾಡಿ ಕೊಂಡಿದ್ದರು. ಇತ್ತೀಚೆಗಿನ ದಿನಚರಿಯಂತೆ ಆ ದಿನವೂ ಬೆಳಗ್ಗೆ ಮುಖ್ಯ ವಾರ್ತೆಗಳನ್ನು ಒಂದು ಬಿಸಿ ಬಿಸಿ ಚಹಾದ ಜತೆಗೆ ಓದಿ ಮುಗಿಸಿದ ರಾಯರು, ಬೇಸ್‌ಮೆಂಟ್‌ನಲ್ಲಿರುವ ಕಪಾಟಿನಲ್ಲಿದ್ದ ಪುಸ್ತಕಗಳನ್ನು ಜೋಡಿಸಿ ಇಡಲು ಹೊರಟರು. ಒಂದೊಂದಾಗಿ ಪುಸ್ತಕಗಳನ್ನು ತೆಗೆದು ಬದಿಗೆ ಇಡುತ್ತಿದ್ದಂತೆ, ನಡುವೆ ಇದ್ದ ಒಂದು ಹಳೆಯ ಟೊರಂಟೊದ ವಾರ ಪತ್ರಿಕೆ “ದೇಸಿ ವಾಯ್ಸ್…’ ಕೆಳಕ್ಕೆ ಬಿದ್ದಿತು. ಆ ಪತ್ರಿಕೆಯನ್ನು ತೆಗೆದು ಅದರ ಪುಟಗಳನ್ನು ತಿರುವುತ್ತಿದ್ದಂತೆ ರಾಯರಿಗೆ ತನ್ನ ಜೀವನದ ಹಿಂದಿನ ದಿನಗಳು ಒಂದೊಂದಾಗಿ ನೆನಪಿಗೆ ಬರಲಾರಂಭಿಸಿದವು.
ಶ್ರೀಪತಿ ರಾಯರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಳಿಯ ಒಂದು ಹಳ್ಳಿಯಲ್ಲಿ. ತಂದೆ ವೆಂಕಟರಾಯರು. ಶ್ರೀಮಂತರಲ್ಲದಿದ್ದರೂ ಬಡವರೂ ಆಗಿರಲಿಲ್ಲ. ವೆಂಕಟ ರಾಯರಿಗೆ ಎರಡು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಐದು ಎಕ್ರೆ ಅಡಿಗೆ ತೋಟ ಇದ್ದುದರಿಂದ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅವರಿಗೆ ಚಿಂತೆಯಿರಲಿಲ್ಲ. ಯಾವುದರಲ್ಲೂ ಧಾರಾಳ ಖರ್ಚು ಮಾಡುವವರಲ್ಲ. ಲಕ್ಷ್ಮೀಯನ್ನು ನಾವು ಜೋಪಾನ ಮಾಡಿದಷ್ಟೂ ನಮಗೆ ಮುಂದೆ ಸಹಾಯಕ್ಕೆ ಸಿಗುವುದು ಎಂಬುದು ಅವರ ತತ್ತ್ವ ವಾಗಿತ್ತು. ಮಕ್ಕಳಲ್ಲಿ ಹಿರಿಯವರಾದ ಶ್ರೀಪತಿ ರಾಯರು ಕಲಿಯುವುದರಲ್ಲಿ ಮುಂದಿದ್ದು ಪ್ರಸಿದ್ಧ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ದೊರಕಿದಾಗ ಮನೆಯವರೆಲ್ಲರೂ ಸಂಭ್ರಮ ಪಟ್ಟಿದ್ದರು. ಎಂಜಿನಿಯರಿಂಗ್ ಪದವಿ ಮುಗಿಯುತ್ತಿದ್ದಂತೆ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸವೂ ದೊರಕಿತ್ತು.
ಯಾವುದೋ ಹಬ್ಬದ ರಜೆಯ ಸಮಯದಲ್ಲಿ ಊರಿಗೆ ಹೋಗಿದ್ದಾಗ ಶ್ರೀಪತಿ ರಾಯರಿಗೆ ನೆರೆಮನೆಯವರ ಸಂಬಂಧಿಕರಾದ ರಾಘವೇಂದ್ರ ಕಾಮತರು ಸಿಕ್ಕಿದ್ದರು. ಅವರು ಕೆನಡಾದ ಟೊರಂಟೋದಲ್ಲಿ ಕೆಲಸ ಮಾಡುತ್ತಿದ್ದವರು ಊರಿಗೆ ಬಂದಿದ್ದರು. ಇಡೀ ತಾಲೂಕಿನಲ್ಲಿ ಹೊರ ದೇಶಕ್ಕೆ ಹೋದವರು ಅವರೊಬ್ಬರೇ ಆಗಿದ್ದುದರಿಂದ ಫಾರಿನ್ ಕಾಮತರು ಎಂದೇ ಪ್ರಚಾರದಲ್ಲಿದ್ದರು. ಅವರು ಕೆನಡಾದ ಬಗ್ಗೆ ವಿವರಿಸುವುದನ್ನು ಕುತೂಹಲದಿಂದ ಕೇಳಿದ ರಾಯರಿಗೆ ತಾನೂ ಅಲ್ಲಿ ಯಾಕೆ ಹೋಗಬಾರದು ಎಂದೆನ್ನಿಸಿತು. ಕಾಮತರ ವಿಳಾಸ ಬರೆದಿಟ್ಟು ಕೊಂಡು ಒಂದೆರಡು ಸಲ ಪತ್ರ ಮುಖೇನ ಸಂಪರ್ಕ ಮಾಡಿದರು.
ಕೆನಡಾಕ್ಕೆ ಹೋಗಲು ಸ್ಟೂಡೆಂಟ್ ವೀಸಾ ಸುಲಭ ಮಾರ್ಗ ಎಂದು ಅರ್ಥ ಮಾಡಿಕೊಂಡು ಅದಕ್ಕೆ ಬೇಕಾದ ತಯಾರಿ ಆರಂಭಿಸಿದ್ದರು. ಇಮೇಲ್ ಹಾಗೂ ಮೊಬೈಲ್ ಫೋನ್ ಬಳಕೆಗೆ ಬರುವ ಮೊದಲಿನ ಕಾಲ ಅದು! ಟೊರಂಟೋ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ದೊರಕಿದ ಅನಂತರವೇ ಅವರು ಅಪ್ಪ ಅಮ್ಮನಿಗೆ ಕೆನಡಾಕ್ಕೆ ಹೋಗುವ ಇಚ್ಛೆ ಬಗ್ಗೆ ಹೇಳಿದ್ದರು. ಮಗ ಪರದೇಶಕ್ಕೆ ಹೋಗುವುದು ಅಮ್ಮನಿಗೆ ಸುತರಾಂ ಇಷ್ಟ ಇರಲಿಲ್ಲ. ಅಮೆರಿಕ ಬಗ್ಗೆ ಅಲ್ಪ ಸ್ವಲ್ಪ ತಿಳಿದಿಕೊಂಡಿದ್ದ ಅವರಿಗೆ ಕೆನಡಾ ಎನ್ನುವ ದೇಶ ಭೂಪಟದಲ್ಲಿದೆ ಎನ್ನುವುದೇ ತಿಳಿದಿಲ್ಲವಾಗಿತ್ತು. ಅಂತೂ ಅಪ್ಪ ಅಮ್ಮರನ್ನು ಒಪ್ಪಿಸಿ ಕೆನಡಾಕ್ಕೆ ಹೋಗುವುದೆಂದು ನಿರ್ಧಾರವಾಗಿತ್ತು.
ರಾಘವೇಂದ್ರ ಕಾಮತರು ಕೆನಡಾಕ್ಕೆ ಪ್ರಯಾಣದ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆಯೆಲ್ಲ ಮಾಡಿಕೊಟ್ಟಿದ್ದರು. ಯೂನಿವರ್ಸಿಟಿಯಿಂದ ವಿದ್ಯಾರ್ಥಿವೇತನ ಸೌಲಭ್ಯ ದೊರಕಿದುದರಿಂದ ಎರಡು ವರ್ಷದ ಸ್ನಾತಕೋತ್ತರ ಪದವಿ ಸುಗಮವಾಗಿ ಮುಗಿದಿತ್ತು. ಕೆಲವೇ ದಿವಸಗಳಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸವೂ ದೊರಕಿತ್ತು. ಇಷ್ಟರಲ್ಲಿ ಶ್ರೀಪತಿ ರಾಯರಿಗೆ ಮೂವತ್ತರ ವಯಸ್ಸಾದುದರಿಂದ ಊರಿಗೆ ಹೋಗಿ ಮದುವೆ ಮಾಡಿಕೊಂಡೇ ಬರುವುದೆಂದು ನಿರ್ಧರಿಸಿ ಊರಿಗೆ ಹೋಗಿದ್ದರು. ದುಂಡು ಮುಖದ ಪದವೀಧರೆ ಗಾಯತ್ರಿ ಶ್ರೀಪತಿ ರಾಯರ ಕೈಹಿಡಿದರು. ಗಾಯತ್ರಿಗೆ ವೀಸಾ ದೊರಕಿ ಶ್ರೀಪತಿ ರಾಯರನ್ನು ಕೆನಡಾದಲ್ಲಿ ಸೇರುವಾಗ ಸುಮಾರು ಒಂದು ವರ್ಷ ಸಮಯ ಬೇಕಾಯಿತು. ಹೊಸ ದಂಪತಿಗಳಾಗಿ ಕಾಮತರು ಒಂದು ಔತಣ ಕೂಟವನ್ನು ಏರ್ಪಡಿಸಿದ್ದರು. ಸುಮಾರು ಎಂಟು ಹತ್ತು ಕುಟುಂಬಗಳು ಸೇರಿದ್ದ ಕೂಟದಲ್ಲಿ ಆ ದಿನದ ಬಿಸಿ ಸುದ್ದಿ ಏನೆಂದರೆ “ದೇಸಿ ವಾಯ್ಸ’ ಎಂಬ ಹೆಸರಿನ ವಾರಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನ. ಟೊರಂಟೋದ ಹಿಂದೂ ದೇವಾಲಯಗಳಲ್ಲಿ “ದೇಸಿ ವಾಯ್ಸ್’ ಪತ್ರಿಕೆಯನ್ನು ಉಚಿತವಾಗಿ ವಿತರಿಸುತ್ತಿದ್ದರು.
ಕೇವಲ ಜಾಹೀರಾತುಗಳಿಂದ ಬರುವ ಆದಾಯದಿಂದಲೇ ಈ ಪತ್ರಿಕೆ ನಡೆಯುತ್ತಿತ್ತು. ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಕೆಲವು ಬರಹಗಳು, ಕೆಲವು ಭಾರತ ದೇಶದ ವಾರ್ತೆಗಳು ಮತ್ತು ಕೆಲವು ಸ್ಥಳೀಯ ಸುದ್ದಿ ಹೀಗೆ ಎಂಟು ಪುಟಗಳ ಪತ್ರಿಕೆಯಾಗಿತ್ತು “ದೇಸಿ ವಾಯ್ಸ’. ಕಾಫೀ ಟೇಬಲ್ ಮೇಲೆ ಇದ್ದ ಆ ದಿನವೇ ಪ್ರಕಟವಾದ ದೇಸಿ ವಾಯ್ಸ… ನಲ್ಲಿ “ಈಸ್ ಇಟ್ ವರ್ಥ್?’ ಎಂಬ ಶೀರ್ಷಿಕೆಯ ಒಂದು ಲೇಖನವಿತ್ತು. ಅದರ ಬಗ್ಗೆಯೇ ಜೋರಾಗಿ ಚರ್ಚೆ ನಡೆಯುತ್ತಿತ್ತು. ಅದರ ಲೇಖಕರು ಹದಿನೈದು ವರ್ಷಗಳ ಹಿಂದೆ ಕೆನಡಾಕ್ಕೆ ಬಂದವರು ಒಳ್ಳೆಯ ಕೆಲಸದಲ್ಲಿದ್ದರೂ ಕೊನೆಗೆ ಎರಡು ಬೆಡ್ ರೂಮಿನ ಮನೆ ಮಾತ್ರ ಮಾಡಿಕೊಳ್ಳಲು ಸಾಧ್ಯವಾಗಿತ್ತು. ಅದೇ ಸಮಯಕ್ಕೆ ಭಾರತದಲ್ಲಿರುವ ಅವರ ಗೆಳೆಯರೂ ಎರಡು ಬೆಡ್ ರೂಮ್‌ನ ಮನೆ ಕಟ್ಟಿಸಿಕೊಂಡಿದ್ದರು.
ಕೆನಡಾಕ್ಕೆ ಬಂದು ಕೇವಲ ಎರಡು ಬೆಡ್ ರೂಮಿನ ಮನೆ ಮಾಡಿ ಕೊಳ್ಳುವುದಷ್ಟೇ ಸಾಧ್ಯವಾಗುವುದಾದರೆ ಭಾರತ ದೇಶ ಬಿಟ್ಟು ವಿದೇಶಕ್ಕೆ ಬರುವುದು ನಿಜವಾಗಿಯೂ ಅವಶ್ಯವೇ? ಎಂದು ಪ್ರಶ್ನಿಸಿ ಬರಹವನ್ನು ಕೊನೆಗೊಳಿಸಿದ್ದರು. ದೇಸಿ ವಾಯ್ಸ…ನ ಆ ಬರಹದ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳನ್ನು ಮಂಡಿಸಿ ಆ ದಿನ ಚರ್ಚೆ ನಡೆದು ರಾತ್ರಿ ಊಟದ ಅನಂತರ ಕೊನೆಗೂ ಪ್ರಯತ್ನಪೂರ್ವಕವಾಗಿ ಚರ್ಚೆ ಅಂತ್ಯವಾಗಿತ್ತು. ಕೆನಡಾದಲ್ಲಿ ಇನ್ನೂ ಹೊಸತಾಗಿ ಬಂದಿದ್ದ ಶ್ರೀಪತಿ ರಾಯರು ಹಾಗೂ ಗಾಯತ್ರಿ ಅವರು ನಾವು ಎರಡು ಬೆಡ್ ರೂಮಿನ ಮನೆಗೋಸ್ಕರ ಕೆನಡಾಕ್ಕೆ ಬಂದವರಲ್ಲ ಇಲ್ಲಿಯ ಜನ ಜೀವನ, ವ್ಯವಸ್ಥೆ ಇದೆಲ್ಲ ಪರಿಗಣಿಸಿ ಬಂದವರಾದ್ದರಿಂದ ಆ ಬರಹ ತಮಗೆ ಅನ್ವಯಿಸುವುದಿಲ್ಲ ಎಂದು ಕೊಂಡು ಮನೆಗೆ ಹಿಂತಿರುಗಿದ್ದರು. ಆ ದೇಸಿ ವಾಯ್ಸ ಪತ್ರಿಕೆಯನ್ನು ಓದಲೆಂದು ಹಿಡಿದುಕೊಂಡು ಬಂದಿದ್ದರು.
ಗಾಯತ್ರಿಗೂ ಅನಂತರ ಉದ್ಯೋಗ ದೊರಕಿ ಇಬ್ಬರಿಗೂ ಬಿಡುವಿಲ್ಲದ ಕೆಲಸ, ಬಳಿಕ ಹುಟ್ಟಿದ ಎರಡು ಮಕ್ಕಳು ಮತ್ತೆ ಅವರ ವಿದ್ಯಾಭಾಸ ಹೀಗೆ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಈ ನಡುವೆ ಸ್ವಂತ ಮನೆಯನ್ನೂ ಬ್ಯಾಂಕ್‌ನಿಂದ ಸಾಲ ಪಡೆದು ಖರೀದಿಸಿದ್ದರು. ಮೊದಲನೆಯವ ಮಗ ಅಭಿಷೇಕ್ ವೈದ್ಯಕೀಯದಲ್ಲಿ ಆಸಕ್ತಿಯಿದ್ದು ಅದನ್ನೇ ಗುರಿಯಾಗಿಸಿ ಓದಿ ಕೆನಡಾದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಸೀಟ್ ಗಿಟ್ಟಿಸಿಕೊಂಡಿದ್ದನು. ಮಗಳು ಆಶಿಕಾಗೆ ಮೆಡಿಸಿನ್‌ನಲ್ಲಿ ಹಾಗೂ ಎಂಜಿನಿಯರಿಂಗ್‌ಗಳಲ್ಲಿ ಆಸಕ್ತಿಯಿರಲಿಲ್ಲ. ಅವಳು ಕಾಮರ್ಸ್‌ನಲ್ಲಿ ಪದವಿ ಪಡೆದುಕೊಂಡು ಮುಂದೆ ಎಂಬಿಎ ಮುಗಿಸಿ ಪ್ರತಿಷ್ಠಿತ ಬ್ಯಾಂಕ್‌ನಲ್ಲಿ ಉದ್ಯೋಗ ಆರಂಭಿಸಿದ್ದಳು. ಅಭಿಷೇಕನೂ ಅಷ್ಟೇ ವೈದ್ಯಕೀಯ ಪದವಿ ಮುಗಿಸಿ ಮನೋವೈದ್ಯ ಶಾಸ್ತ್ರದಲ್ಲಿ ವಿಶೇಷ ಪದವಿಗಾಗಿ ಅಮೆರಿಕಾಕ್ಕೆ ಹೋಗಿದ್ದನು. ಅಲ್ಲಿ ಪದವಿ ಪಡೆದು ಅಲ್ಲಿಯೇ ಒಂದು ಆಸ್ಪತ್ರೆಯಲ್ಲಿ ಉದ್ಯೋಗ ಪಡೆದಿದ್ದನು. ಅಭಿಷೇಕ್ ಮತ್ತು ಆಶಿಕಾ ಇಬ್ಬರೂ ಕೆಲಸ ದೊರಕುವ ಮೊದಲೇ ತಮ್ಮ ತಮ್ಮ ಬಾಳಸಂಗಾತಿಗಳನ್ನು ಆರಿಸಿಯೂ ಬಿಟ್ಟಿದ್ದರು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಂತೆ ಚೀನದಲ್ಲಿ ಕೋವಿಡ್ ಆರಂಭದ ವಾರ್ತೆ ಹಬ್ಬಲಾರಂಭಿಸಿತ್ತು.
*****
ಮೂವತ್ತು ವರ್ಷಗಳ ಹಿಂದಿನ ದೇಸಿ ವಾಯ್ಸ ಪತ್ರಿಕೆಯ ಪುಟವನ್ನು ತಿರುಗಿಸಿ ಒಮ್ಮೆ ನೋಡಿದ ರಾಯರು “ಈಸ್ ಇಟ್ ವರ್ಥ್ ?’ ಲೇಖನದ ಮೇಲೆ ಕಣ್ಣನ್ನೋಡಿಸಿದರು. ತಮ್ಮ ಜೀವನದಲ್ಲಿ ಈ ಪ್ರಶ್ನೆ ಈಗ ಅನ್ವಯವಾಗುವುದೇ ಎಂದು ವಿಮರ್ಶಿಸಲು ತೊಡಗಿದರು. ಭಾರತದಿಂದ ಕೆನಡಾಕ್ಕೆ ಬರದೇ ಇರುತ್ತಿದ್ದರೆ ತನ್ನ ಪರಿಸ್ಥಿತಿ ಹೇಗಿರುತ್ತಿತ್ತು ಎಂದೊಮ್ಮೆ ಪ್ರಶ್ನಿಸಿಕೊಂಡರು. ಭಾರತ ತಂತ್ರಜ್ಞಾನದಲ್ಲಿ ಈಗ ಬಹಳಷ್ಟು ಮುಂದುವರೆದಿದೆ, ಕೆಲವು ವಿಷಯಗಳಲ್ಲಿ ಕೆನಡಾದಿಂದಲೂ ಮುಂದಿದೆ. ಕೆನಡಾಕ್ಕೆ ಬಂದು ತನ್ನಲ್ಲಿ ಇರುವುದು ನಾಲ್ಕು ಬೆಡ್ ರೂಮ್‌ನ್ ಮನೆ, ಆದರೆ ನಾಲ್ಕು ಬೆಡ್ ರೂಮ್‌ನ ಮನೆ ಭಾರತದಲ್ಲಿರುವ ಗೆಳೆಯರಲ್ಲೂ ಇದೆ. ಅವರ ಮಕ್ಕಳೂ ಬೆಳೆದು ದೊಡ್ಡವರಾಗಿ ಸ್ವಂತ ದುಡಿಯಲಾರಂಭಿಸಿದ್ದಾರೆ.
ಹಾಗಾದರೆ….? ಒಳ್ಳೆಯ ಉದ್ಯೋಗ, ಮದುವೆ, ಮಕ್ಕಳು, ಮನೆ ಹಾಗೂ ಕೊನೆಗೆ ಮಕ್ಕಳನ್ನು ಆತ್ಮ ನಿರ್ಭರರಾಗಿ ಬೆಳೆಸುವುದು ಇದೇ ಜೀವನದ ಗುರಿಯಾದರೆ, ಅದನ್ನು ಎಲ್ಲಿದ್ದರೂ ತಲಪಬಹುದಲ್ಲವೇ? ಗುರಿಯನ್ನು ತಲಪಲು ಬಳಸಿದ ದಾರಿಯೂ ಮುಖ್ಯವಲ್ಲವೇ? ಸ್ವದೇಶವನ್ನು ಬಿಟ್ಟು ತನ್ನ ಕುಟುಂಬ ವರ್ಗದವರಿಂದ ದೂರವಿದ್ದು ಇನ್ನೊಂದು ನೆಲದಲ್ಲಿ ತನ್ನ ಗುರಿಯನ್ನು ತಲುಪುವುದು ದೊಡ್ಡ ಸಾಧನೆಯೇ ಅಲ್ಲವೇ? ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಅನೇಕ ಸಂಸ್ಕೃತಿಗಳನ್ನು ಕಲಿಯುವ ಅವಕಾಶ ಕೆನಡಾಕ್ಕೆ ಬರದೇ ಇದ್ದರೆ ದೊರಕುತ್ತಿತ್ತೇ? ರಾಯರ ಯೋಚನಾ ಲಹರಿ ಹೀಗೆ ಸಾಗುತ್ತಿದ್ದಂತೆ, ತಿಂಡಿ ತಯಾರಾಗಿದೆ ಮೇಲೆ ಬನ್ನಿ ಎಂದು ಪತ್ನಿ ಗಾಯತ್ರಿ ಅವರ ಕೂಗು ಕೇಳಿಸಿತು. ದೇಸಿ ವಾಯ್ಸ ಪತ್ರಿಕೆಯನ್ನು ಕಪಾಟಿನಲ್ಲಿ ಮತ್ತೆ ಜೋಡಿಸಿಟ್ಟು ಮೇಲೆ ನಡೆದರು.
*ಕೃಷ್ಣ ಪ್ರಸಾದ್ ಬಾಳಿಕೆ, ಬ್ರಾಂಪ್ಟನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.