“ಡಿವೈಡರ್ ಕ್ರಾಸಿಂಗ್, ಸರ್ವೀಸ್ ರಸ್ತೆಗಾಗಿ ಹೋರಾಟ’
ಹೆಮ್ಮಾಡಿ: "ದಾರಿಗಾಗಿ ಧ್ವನಿ' ಹೋರಾಟ ಸಮಿತಿ ಸಮಾಲೋಚನ ಸಭೆ
Team Udayavani, Apr 19, 2021, 2:45 AM IST
ಹೆಮ್ಮಾಡಿ: ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಜಾಲಾಡಿಯಲ್ಲಿ ಅಧಿಕೃತ ಡಿವೈಡರ್ ಕ್ರಾಸಿಂಗ್ ಕೊಡಬೇಕು ಹಾಗೂ ಹೆಮ್ಮಾಡಿಯಿಂದ ಜಾಲಾಡಿಯವರೆಗೆ, ಮತ್ತೂಂದು ಕಡೆ ಮೂವತ್ತುಮುಡಿಯವರೆಗೆ ಸರ್ವೀಸ್ ರಸ್ತೆ ನಿರ್ಮಿಸಿಕೊಡಬೇಕು. ಇದಕ್ಕಾಗಿ ಗ್ರಾಮಸ್ಥರನ್ನೆಲ್ಲ ಒಗ್ಗೂಡಿಸಿಕೊಂಡು, ಮತ್ತೂಂದು ಹಂತದ ಹೋರಾಟಕ್ಕೆ ಮುಂದಾಗುವ ಕುರಿತಂತೆ ರವಿವಾರ ಹೆಮ್ಮಾಡಿಯಲ್ಲಿ ನಡೆದ “ದಾರಿಗಾಗಿ ಧ್ವನಿ’ ಹೋರಾಟ ಸಮಿತಿಯ ಸಮಾಲೋಚನ ಸಭೆಯಲ್ಲಿ ಚರ್ಚೆಯಾಯಿತು.
ಹೆಮ್ಮಾಡಿ ಹಾಗೂ ಕಟ್‌ಬೆಲೂ¤ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ, ಡಿವೈಡರ್ ಕ್ರಾಸಿಂಗ್, ಹೆಮ್ಮಾಡಿ ಜಂಕ್ಷನ್, ಚರಂಡಿ, ಬಸ್ ನಿಲ್ದಾಣ ನಿರ್ಮಾಣ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕೈಗೊಳ್ಳುವ ಹೋರಾಟದ ಕುರಿತಂತೆ ಚರ್ಚಿಸುವ ಸಲುವಾಗಿ ಹೆಮ್ಮಾಡಿಯ ಜುವೆಲ್ ಪಾರ್ಕ್‌ನ ಜಯಶ್ರೀ ಸಭಾಂಗಣದಲ್ಲಿ “ದಾರಿಗಾಗಿ ಧ್ವನಿ’ ಹೋರಾಟ ಸಮಿತಿಯು ಸಾರ್ವಜನಿಕರ ಸಭೆ ಕರೆದಿತ್ತು.
ಮನವಿ ಕೊಟ್ಟು, ಕೊಟ್ಟು ಸಾಕಾಯಿತು
ಸಭೆಯನ್ನುದ್ದೇಶಿಸಿ ಮಾತನಾಡಿದ “ದಾರಿಗಾಗಿ ಧ್ವನಿ’ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಈ ವರೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರು, ಶಾಸಕರು, ಪ್ರಾಧಿಕಾರ, ಡಿಸಿ, ಎಸಿ, ಪಂಚಾಯತ್‌ಗಳಿಗೆ ಮನವಿ ಕೊಟ್ಟು, ಕೊಟ್ಟು ಸಾಕಾಯಿತು. ಈ ವರೆಗೆ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಅದಕ್ಕಾಗಿ ಇನ್ನು ಮುಂದಾದರೂ ಎಲ್ಲ ಗ್ರಾಮಸ್ಥರನ್ನು ಒಗ್ಗೂಡಿಸಿಕೊಂಡು, ಹೋರಾಟ ಮಾಡಬೇಕಾದ ಆವಶ್ಯಕತೆಯಿದೆ ಎಂದವರು ತಿಳಿಸಿದರು.
ಮತ್ತೂಂದು ಹಂತದ ಹೋರಾಟ
ಹೆಮ್ಮಾಡಿ ಗ್ರಾ.ಪಂ. ಮಾಜಿ ಸದಸ್ಯ ಸಯ್ಯದ್ ಯಾಸೀನ್ ಮಾತನಾಡಿ, ಹೆದ್ದಾರಿಯಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲ. ಇದಲ್ಲದೆ ನಮ್ಮ ಹೆಮ್ಮಾಡಿ ಪಂಚಾಯತ್ ವ್ಯಾಪ್ತಿಯ ಹೆದ್ದಾರಿಯಲ್ಲಿ ಸಾಕಷ್ಟು ಬೇಡಿಕೆಗಳಿದ್ದು, ಇದಕ್ಕಾಗಿ ಮುಂದಿನ ದಿನಗಳಲ್ಲಿ ಮತ್ತೂಂದು ಹಂತದ ಹೋರಾಟ ಮಾಡಬೇಕಿದೆ ಎಂದರು.
ಸಭೆಯಲ್ಲಿ ಕಟ್‌ಬೆಲೂ¤ರು ಗ್ರಾಮ ಪಂಚಾಯ ತ್ ಸದಸ್ಯ ಸಚ್ಚಿಂದ್ರ ದೇವಾಡಿಗ, ಕಿರಣ್ ದೇವಾಡಿಗ, ಕೃಷ್ಣ ಕೋಟ್ಯಾನ್, ಗ್ರಾಮಸ್ಥರು ಭಾಗವಹಿಸಿದ್ದರು.
ದಾರಿಗಾಗಿ ಧ್ವನಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಅಧಿಕೃತ ಕ್ರಾಸಿಂಗ್ ಬೇಕು
ಸಮಿತಿಯ ಪ್ರಮುಖರಾದ ಶಶಿಧರ ಹೆಮ್ಮಾಡಿ ಮಾತನಾಡಿ, ಹೆಮ್ಮಾಡಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಕೊಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಆದರೆ ಅದಕ್ಕಿಂತಲೂ ಪ್ರಮುಖವಾಗಿ ತುರ್ತಾಗಿ ಜಾಲಾಡಿ, ಸಂತೋಷನಗರ, ಹೊಸ್ಕಳಿ, ಬುಗುರಿಕಡು ಭಾಗದ ಜನರಿಗೆ ಅನುಕೂಲವಾಗುವಂತೆ ಜಾಲಾಡಿಯಲ್ಲಿ ಯು ಟರ್ನ್ ಗಾಗಿ ಅಧಿಕೃತ ಕ್ರಾಸಿಂಗ್ ಕೊಡಬೇಕು. ಈ ಹಿಂದೆ ಪೊಲೀಸ್ ಇಲಾಖೆಯ ಅನುಮತಿಯು ಸಿಕ್ಕಿದ್ದರೂ, ಕೊನೆಯ ಹಂತದಲ್ಲಿ ಕ್ರಾಸಿಂಗ್‌ಗೆ ನಿರಾಕರಿಸಿರುವುದು ಸರಿಯಲ್ಲ. ಕುಂದಾಪುರ- ಬೈಂದೂರು ಹೆದ್ದಾರಿಯಲ್ಲಿ ಅನೇಕ ಕಡೆಗಳಲ್ಲಿ ಅನಧಿಕೃತ ಕ್ರಾಸಿಂಗ್‌ಗಳಿವೆ. ಅಲ್ಲೆಲ್ಲ ಅಪಘಾತಗಳು ಆಗುವುದಿಲ್ಲವೇ ಎಂದವರು ಪ್ರಶ್ನಿಸಿದರು.
ಅಪಾಯಕಾರಿ ಜಂಕ್ಷನ್
ಹೆಮ್ಮಾಡಿಯು ಕೊಲ್ಲೂರು ಪುಣ್ಯ ಕ್ಷೇತ್ರ, ಕುಂದಾಪುರ, ಬೈಂದೂರು ಸೇರಿದಂತೆ ಅನೇಕ ಊರುಗಳನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಆಗಿದೆ. ಆದರೆ ಇಲ್ಲಿನ ಜಂಕ್ಷನ್ ಮಾತ್ರ ಅವೈಜ್ಞಾನಿಕ ಹಾಗೂ ಅಪಾಯಕಾರಿಯಾಗಿದೆ. ಹೆಮ್ಮಾಡಿ ಪಂಚಾಯತ್ ಹಾಗೂ ಕೊಲ್ಲೂರು ಕಡೆಗೆ ಹೋಗುವವರು ಹಾಗೂ ಬರುವವರು ಸಾಕಷ್ಟು ತೊಂದರೆ ಪಡುತ್ತಿದ್ದಾರೆ. ರಸ್ತೆ ದಾಟುವ ಪಾದಚಾರಿಗಳ ಪಾಡಂತೂ ಹೇಳತೀರದಾಗಿದೆ. ಇಲ್ಲೊಂದು ಸುಸಜ್ಜಿತ ಜಂಕ್ಷನ್ ಬೇಕಿದೆ ಎಂದು ಸಮಿತಿಯ ಪ್ರಮುಖರಾದ ರಾಘವೇಂದ್ರ ಕುಲಾಲ್ ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.