ಮಂಡಲ ಪೂಜೆ ಯಾತ್ರೆಗೆ ಭಕ್ತರು ಸಜ್ಜು
Team Udayavani, Nov 13, 2019, 3:09 AM IST
ಬೆಂಗಳೂರು: ಶಬರಿಮಲೆ ಯಾತ್ರೆ ಸಂಬಂಧ ರಾಜ್ಯದ ಭಕ್ತರು ಸಜ್ಜಾಗುತ್ತಿದ್ದು, ಕಳೆದ ವರ್ಷ ಇದ್ದ ಆತಂಕ ನಿವಾರಿಸಿ ರಾಜ್ಯದ ಯಾತ್ರಾರ್ಥಿಗಳಿಗೆ ಎಲ್ಲ ಸೌಕರ್ಯ ನೀಡಲು ಸರ್ಕಾರ ನಿರ್ಧರಿಸಿದೆ. ಹಿಂದೆಲ್ಲಾ ಮಂಡಲಪೂಜೆ ನಡೆಯುವುದಕ್ಕಿಂತ ತಿಂಗಳ ಮುಂಚಿತವಾಗಿಯೇ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ, ಭಕ್ತರು ಯಾತ್ರೆಗೆ ಸಜ್ಜಾಗುತ್ತಿದ್ದರು. ಖಾಸಗಿ ಬಸ್, ಕಾರು, ಟೆಂಪೋ ಟ್ರಾವೆಲರ್‌ಗಳಲ್ಲಿ ಮುಂಗಡ ಕಾಯ್ದಿರಿಸುತ್ತಿದ್ದರು.
ಆದರೆ, ಈ ಬಾರಿ ಮುಂಗಡ ಕಾಯ್ದಿರಿಸುವಿಕೆಯ ಪ್ರಮಾಣದಲ್ಲಿ ಕುಸಿತವಾಗಿದೆ. ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ಮರು ಪರಿಶೀಲನೆಗೆ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಲಾಗಿದೆ. ಅಲ್ಲದೆ, ನ.17ರೊಳಗೆ ತೀರ್ಪು ಹೊರ ಬೀಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮಹಿಳೆಯರ ಪ್ರವೇಶ ವಿಚಾರ ವಿವಾದದ ಸ್ವರೂಪ ಪಡೆದು ಪ್ರತಿಭಟನೆ, ಬಂದ್, ಧರಣಿಗಳು ನಡೆದ ಹಿನ್ನೆಲೆಯಲ್ಲಿ ಕಳೆದ ವರ್ಷ ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತರ ಸಂಖ್ಯೆ ಶೇ.50ರಷ್ಟು ಕಡಿಮೆಯಾಗಿತ್ತು. ಬಹುತೇಕ ಭಕ್ತರು ರೈಲು, ಬಸ್ ಟಿಕೆಟ್ ಸಹ ರದ್ದುಪಡಿಸಿ ಯಾತ್ರೆಯಿಂದ ಹಿಂದೆ ಸರಿದಿದ್ದರು. ಈ ವರ್ಷ ಮತ್ತೆ ಸಮಸ್ಯೆ ಶುರುವಾದರೆ ಹೇಗೆ? ಎಂಬ ಚಿಂತೆ ಭಕ್ತರದ್ದಾಗಿರಬಹುದು.
ದಕ್ಷಿಣ ಭಾರತೀಯರೇ ಹೆಚ್ಚು: ವಾರ್ಷಿಕವಾಗಿ ಶಬರಿಮಲೆಗೆ 80 ಲಕ್ಷದವರೆಗೆ ಭಕ್ತರು ಯಾತ್ರೆ ಕೈಗೊಳ್ಳಲಿದ್ದು, ಆ ಪೈಕಿ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಭಾಗದವರೇ ಹೆಚ್ಚು. ಕರ್ನಾಟಕದಿಂದ ಪ್ರತಿವರ್ಷ 10 ಲಕ್ಷ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಕಳೆದ ವರ್ಷ ಆ ಸಂಖ್ಯೆ 6 ಲಕ್ಷಕ್ಕೆ ಇಳಿದಿತ್ತು ಎಂದು ಹೇಳಲಾಗಿದೆ. 2017ರಲ್ಲಿ ಶಬರಿಮಲೆಗೆ 60 ಲಕ್ಷ ಭಕ್ತರು ಯಾತ್ರೆ ಕೈಗೊಂಡಿದ್ದರು.
ಆದರೆ, 2019ರಲ್ಲಿ ಮಹಿಳೆಯರ ಪ್ರವೇಶ ವಿವಾದದಿಂದ ಭಕ್ತರ ಸಂಖ್ಯೆ 32 ಲಕ್ಷಕ್ಕೆ ಇಳಿದಿತ್ತು. ಟ್ರಾವೆಂಕೂರ್ ದೇವಸ್ವಂ ಮಂಡಳಿ ಆದಾಯವೂ 160 ಕೋಟಿ ರೂ.ನಿಂದ 101 ಕೋಟಿ ರೂ.ಗೆ ಇಳಿದಿತ್ತು. ಭಕ್ತರ ಸಂಖ್ಯೆ ಇಳಿಮುಖಗೊಂಡಿದ್ದರಿಂದ ಅಲ್ಲಿನ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿ ಶೇ.30 ರಿಂದ 35ರಷ್ಟು ಕಡಿಮೆಯಾಗಿತ್ತು. ಈ ವರ್ಷ ಮಳಿಗೆಗಳ ಟೆಂಡರ್ ಪಡೆಯಲು ಹಿಂದೇಟು ಹಾಕುವಂತಾಗಿದೆ.
ಡಿಸೆಂಬರ್ ನಂತರ ಹೆಚ್ಚಾಗಬಹುದು: ಕಳೆದ ವರ್ಷದ ವಿವಾದದ ಹಿನ್ನೆಲೆಯಲ್ಲಿ ಮಂಡಲ ಪೂಜೆಗೆ ಪ್ರತಿವರ್ಷ ಹೋಗುತ್ತಿದ್ದ ಭಕ್ತರ ಸಂಖ್ಯೆಯಷ್ಟು ಈ ಬಾರಿ ಇಲ್ಲ. ಇರುಮುಡಿ ಕಟ್ಟಲು ಮುಂಗಡವಾಗಿ ಬುಕಿಂಗ್ ಮಾಡುವವರ ಸಂಖ್ಯೆ ಕಡಿಮೆ ಇದೆ. ಬಹುಶಃ ಡಿಸೆಂಬರ್ ನಂತರ ಹೆಚ್ಚಾಗಬಹುದು ಎಂದು ಆನಂದ್ ಗುರುಸ್ವಾಮಿ ಎಂಬುವರು ಹೇಳುತ್ತಾರೆ.
ಈ ಮಧ್ಯೆ, ಟ್ರಾವೆಂಕೂರ್ ದೇವಸ್ವಂ ಮಂಡಳಿಯವರು ಸಹ ರಾಜ್ಯದ ಎಲ್ಲ ಅಯ್ಯಪ್ಪಸ್ವಾಮಿ ದೇವಾಲಯಗಳ ಮುಖ್ಯಸ್ಥರಿಗೆ ಶಬರಿಮಲೆಯಲ್ಲಿ ಈ ವರ್ಷ ಭಕ್ತರ ಯಾತ್ರೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಸೇರಿದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಅಯ್ಯಪ್ಪ ಭಕ್ತರಿಗೆ ಮಾಹಿತಿ ನೀಡಿ ಎಂದು ತಿಳಿಸಿದ್ದಾರೆ.
ಭಕ್ತರ ಅನುಕೂಲಕ್ಕೆ ಸರ್ಕಾರ ಅಗತ್ಯ ಕ್ರಮ: ರಾಜ್ಯ ಸರ್ಕಾರದ ವತಿಯಿಂದ ಹಿಂದೆಲ್ಲಾ ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ರಾಜ್ಯದಿಂದ ಹೋಗುವ ಭಕ್ತರಿಗೆ ಆರೋಗ್ಯ ಸೇವೆ ಒದಗಿಸಲು ಸಂಚಾರಿ ಆಸ್ಪತ್ರೆ, ಪೊಲೀಸ್, ಗೃಹರಕ್ಷಕ ದಳ ಸಿಬ್ಬಂದಿ ನಿಯೋಜನೆ, ಸಹಾಯವಾಣಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಈ ಕುರಿತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು “ಉದಯವಾಣಿ’ ಸಂಪರ್ಕಿಸಿದಾಗ, ಈ ಬಾರಿ ರಾಜ್ಯದ ಭಕ್ತರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಬುಧವಾರ ಇಲಾಖೆಯ ಆಯುಕ್ತರು ಸೇರಿದಂತೆ ಪ್ರಮುಖ ಅಧಿಕಾರಿಗಳ ಸಭೆ ಕರೆಯಲಾಗಿದೆ. ರಾಜ್ಯದ ಭಕ್ತರಿಗೆ ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.
ನ.16ರಿಂದ ಸೀಸನ್ ಆರಂಭ: ಈ ವರ್ಷ ಮಂಡಲ ಪೂಜೆ ಸೀಸನ್ ನ.16 ರಂದು ಸಂಜೆ 5 ಗಂಟೆಯಿಂದ ಡಿಸೆಂಬರ್ 27ರ ರಾತ್ರಿ 10 ಗಂಟೆವರೆಗೆ ಇರುತ್ತದೆ. ನಂತರ, ಮಕರ ಜ್ಯೋತಿ ಸೀಸನ್ ಡಿಸೆಂಬರ್ 30ರಿಂದ ಜನವರಿ 20 ರವರೆಗೆ ಇರಲಿದ್ದು, ಜ.15ರಂದು ಜ್ಯೋತಿ ದರ್ಶನ ಇರುತ್ತದೆ.
* ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.