ದಕ್ಷಿಣ ಕನ್ನಡ: ಸೀಲ್‌ಡೌನ್ ಜಾರಿ; ಮನೆಯೊಳಗೆ ಬಂದಿಯಾದ ಜನತೆ
Team Udayavani, Apr 20, 2020, 9:48 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಂದ ಇನ್ನೂ ವ್ಯಾಪಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತವು 7 ಗ್ರಾಮಗಳನ್ನು ಸೀಲ್‌ಡೌನ್ ಮಾಡಿ ಆದೇಶಿಸಿದೆ. ಅದರಂತೆ ಸೋಂಕು ದೃಢಪಟ್ಟ ವ್ಯಕ್ತಿಯ ಮನೆಯಿಂದ 1 ಕಿ.ಮೀ. ವ್ಯಾಪ್ತಿಯನ್ನು ತೀವ್ರ ಬಫರ್ ಝೋನ್ ಎಂದು ಗುರುತಿಸಲಾಗಿದೆ. ನಗರ ಪ್ರದೇಶದಲ್ಲಿ ಸೋಂಕು ಕಂಡುಬಂದ ಗ್ರಾಮದಿಂದ 5 ಕಿ.ಮೀ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 7 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ತೀವ್ರ ಬಫರ್ ಝೋನ್ ಭಾಗದಲ್ಲಿರುವ ಸೋಂಕಿತನ ಮನೆಯಿಂದ 100 ಮೀ. ವ್ಯಾಪ್ತಿಯಲ್ಲಿರುವ ಮನೆಗಳಿಂದ ಯಾರೂ ಹೊರಹೋಗುವುದು, ಬರುವುದನ್ನು ನಿರ್ಬಂಧಿಸಲಾಗಿದೆ. ಈ ಭಾಗದಲ್ಲಿ ಹಾಲು, ಔಷಧ, ದಿನಸಿ, ಮಾಂಸ ಮಾರಾಟಕ್ಕೆ ಅವಕಾಶ ಇಲ್ಲ. ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದುಕೊಳ್ಳಬಹುದು. ಅಲ್ಲಿನ ಜನತೆಗೆ ದಿನಸಿ ಮತ್ತಿತರ ಅಗತ್ಯ ವಸ್ತುಗಳನ್ನು ಸ್ಥಳೀಯ ಆಡಳಿತಗಳು ಮನೆ ಬಾಗಿಲಿಗೆ ಸರಬರಾಜು ಮಾಡುತ್ತಿವೆ. ಜನತೆಗೆ ಕುಡಿಯುವ ನೀರು, ಪಡಿತರ ಪೂರೈಕೆಯ ಕುರಿತು ಕೂಡ ಹೆಚ್ಚಿನ ನಿಗಾ ವಹಿಸಬೇಕಿದ್ದು, ಸ್ಥಳೀಯಾಡಳಿತಕ್ಕೂ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಪೊಲೀಸ್ ಇಲಾಖೆ ಕರ್ಫ್ಯೂ ಮಾದರಿಯಲ್ಲಿ ಕೆಲಸ ನಿರ್ವಹಿಸುವ ಕುರಿತು ಜಿಲ್ಲಾಡಳಿತ ಸೂಚಿಸಿದೆ. ಸೀಲ್ ಡೌನ್ ಘೋಷಣೆಯಾಗಿರುವ ಪ್ರದೇಶಗಳ ವಿವರ ಇಲ್ಲಿದೆ.
ಅಜ್ಜಾವರ
ಸುಳ್ಯ: ಕೋವಿಡ್ ಸೋಂಕು ಪತ್ತೆಯಾಗಿರುವ ಅಜ್ಜಾವರ ಪ್ರದೇಶದ 1 ಕಿ.ಮೀ. ವ್ಯಾಪ್ತಿಯನ್ನು ಕಂಟೈನ್‌ಮೆಂಟ್ ವಲಯ ಎಂದು ಎ. 19ರಿಂದ ಜಾರಿ ಮಾಡಲಾಗಿದ್ದು, ಪ್ರಥಮ ದಿನವಾದ ರವಿವಾರ ಮನೆ-ಮನೆಗೆ ಮಾಹಿತಿ ನೀಡಿ ಅನಂತರ ಕಟ್ಟುನಿಟ್ಟಿನ ಜಾರಿಗೆ ಸಿದ್ಧತೆ ನಡೆದಿದೆ.
ಅಜ್ಜಾವರ ಅಂಕೋತಿಮಾರ್ ರಸ್ತೆ ಮತ್ತು ಫಾರೆಸ್ಟ್, ಎಗ್ರಿಕಲ್ಚರ್ ಲ್ಯಾಂಡ್, ಆಚಾರ್ ಹೌಸ್, ಸವೇರಾ ಅವರ ಮನೆ ವ್ಯಾಪ್ತಿಯಲ್ಲಿ ಗಡಿ ಮಿತಿಗಳನ್ನು ನಿಗದಿಪಡಿಸಲಾಗಿದ್ದು, ನಿಯಂತ್ರಿತ ವಲಯ ಎಂದು ಘೋಷಿಸಲಾಗಿದೆ. ಘಟಕ ನಿಯಂತ್ರಕರ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಅವಶ್ಯ ಸಾಮಗ್ರಿ ಒದಗಿಸಲು ತಾಲೂಕು ಆಡಳಿತ ವಿವಿಧ ಇಲಾಖೆಗಳ ಮೂಲಕ ಸನ್ನದ್ಧವಾಗಿದೆ ಎಂದು ತಹಶೀಲ್ದಾರ್ ಅನಂತಶಂಕರ ಉದಯವಾಣಿಗೆ ತಿಳಿಸಿದ್ದಾರೆ.
ತಹಶೀಲ್ದಾರ್, ತಾ.ಪಂ. ಇಒ, ಪೊಲೀಸರು, ಸ್ಥಳೀಯಾಡಳಿತ ಹಾಗೂ ವಿವಿಧ ಸ್ತರದ ಜನಪ್ರತಿನಿಧಿಗಳು ಒಂದು ಸುತ್ತಿನ ಪರಿಶೀಲನೆ ನಡೆಸಿದ್ದು, ಮನೆ-ಮನೆಗೆ ಅಗತ್ಯ ವಸ್ತು ಪೂರೈಸಲು ತಂಡ ರಚನೆ ಬಗ್ಗೆ ಚಿಂತನೆ ನಡೆದಿದೆ.
1,350 ಮನೆ ಸಮೀಕ್ಷೆಗೆ ನಿರ್ಧಾರ
ಸೀಲ್‌ಡೌನ್ ವ್ಯಾಪ್ತಿ ಸೇರಿದಂತೆ ಅಲ್ಲಿಂದ ಒಟ್ಟು 7 ಕಿ.ಮೀ. ಪ್ರದೇಶದಲ್ಲಿ ಆರೋಗ್ಯ ಇಲಾಖೆ ಹದ್ದಿನಗಣ್ಣು ಇರಿಸಿದೆ ಎಂದು ತಾಲೂಕು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸೋಂಕು ಪತ್ತೆಯಾದ ಸಂದರ್ಭ ಮೂರು ಕಿ.ಮೀ. ವ್ಯಾಪ್ತಿಯ 937 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ.
2ನೇ ಹಂತದಲ್ಲಿ ಅಡ³ಂಗಾಯ, ಅಜ್ಜಾವರ, ಕಾಂತಮಂಗಲ, ಮಂಡೆಕೋಲು, ಪೇರಾಲು ಸೇರಿ ಒಟ್ಟು 1,350 ಮನೆಗಳು ಇವೆ. ಮೊದಲ ಹಂತದಲ್ಲಿ ಅನಾರೋಗ್ಯ ಪೀಡಿತರ, ಕೋವಿಡ್ ಪಾಸಿಟಿವ್ ವ್ಯಕ್ತಿಯ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದ್ದು, ಅಗತ್ಯ ಇರುವವರ ಗಂಟಲ ದ್ರವದ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಆರೋಗ್ಯ ಸಿಬಂದಿ, ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ಮಾಡುತ್ತಿದ್ದು, ತಾಲೂಕು ವತಿಯಿಂದ ಸರ್ವೇ ನಡೆಸಲಾಗುತ್ತಿದೆ. ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳನ್ನು ದಿನಂಪ್ರತಿ ದೂರವಾಣಿ ಮೂಲಕ ವಿಚಾರಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಚಂದ್ರಾವತಿ ಹೇಳಿದ್ದಾರೆ.
ಸಜೀಪನಡು ಗ್ರಾಮ
ಬಂಟ್ವಾಳ: ಕೋವಿಡ್ ಸೋಂಕು ದೃಢಪಟ್ಟ (ಪಿ-56 ಪ್ರಕರಣ) ಹಿನ್ನೆಲೆಯಲ್ಲಿ ಸಜೀಪನಡು ಗ್ರಾಮವನ್ನು ಜಿಲ್ಲಾಡಳಿತ ಈ ಹಿಂದೆಯೇ ಕ್ವಾರಂಟೈನ್‌ನಲ್ಲಿಟ್ಟಿದ್ದು, ಪ್ರಸ್ತುತ ಗ್ರಾಮವನ್ನು ನಿಯಂತ್ರಿತ ವಲಯ ಎಂದು ಘೋಷಿಸಿದೆ. ಗ್ರಾಮಕ್ಕೆ ಘಟಕ ನಿಯಂತ್ರಣಾಧಿಕಾರಿಯಾಗಿ ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ನಿಯುಕ್ತಿಗೊಂಡಿದ್ದಾರೆ.
ರವಿವಾರ ಪರಿಸರದಲ್ಲಿ ಯಾವುದೇ ಬದಲಾವಣೆಗಳು ನಡೆಯದಿದ್ದರೂ ಮುಂದಿನ ದಿನಗಳಲ್ಲಿ 500 ಮೀ. ವ್ಯಾಪ್ತಿಯಲ್ಲಿ ಸೀಲ್‌ಡೌನ್ ಆಗಲಿದೆ. ಈ ನಿಟ್ಟಿನಲ್ಲಿ ರವಿವಾರ ಸ್ಥಳೀಯ ಅಭಿವೃದ್ಧಿ ಅಧಿಕಾರಿ, ಪೊಲೀಸ್ ಇಲಾಖೆಯ ಜತೆ ತಹಶೀಲ್ದಾರ್ ಚರ್ಚೆ ನಡೆಸಿದ್ದಾರೆ. ಹಿಂದೆ ಗ್ರಾಮವು ಕ್ವಾರಂಟೈನ್‌ನಲ್ಲಿದ್ದರೂ ನಿರ್ಬಂಧಗಳನ್ನು ಸ್ವಲ್ಪಮಟ್ಟಿಗೆ ಸಡಿಲಿಸುವ ಮಾತುಗಳು ಕೇಳಿಬಂದಿದ್ದವು. ಆದರೆ ಮುಂದಿನ ದಿನಗಳಲ್ಲಿ ಇಲ್ಲಿ ಕರ್ಫ್ಯೂ ಮಾದರಿಯಲ್ಲಿ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಲಿದೆ.
ಘಟಕ ನಿಯಂತ್ರಣಾಧಿಕಾರಿಯಾಗಿ ನೇಮಕಗೊಂಡಿರು ವವರಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಕ್ತ ಮಾರ್ಗ
ದರ್ಶನ ನೀಡಿದ್ದು, ರವಿವಾರ ಅದರ ಆದೇಶ ನಿಯಂತ್ರಣಾಧಿಕಾರಿಗಳ ಕೈಸೇರಿದೆ. ಮುಂದಿನ ದಿನಗಳಲ್ಲಿ ಅದರ ಅನುಷ್ಠಾನಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಜತೆ ಚರ್ಚೆ ನಡೆಸಲಿದ್ದೇವೆ ಎಂದು ಇಒ ರಾಜಣ್ಣ ತಿಳಿಸಿದ್ದಾರೆ.
ಇಲ್ಲಿ ಯಾವುದೇ ಕಾರಣವನ್ನು ನೀಡಿ ಜನತೆ ಹೊರಬರುವಂತಿಲ್ಲ. ಹೀಗಾಗಿ ರೇಷನ್ ವ್ಯವಸ್ಥೆ, ನೀರಿನ ವ್ಯವಸ್ಥೆ, ಇತರ ವ್ಯವಸ್ಥೆಗಳ ಕುರಿತು ಸ್ಥಳೀಯಾಡಳಿತ ಸೇರಿದಂತೆ ಇತರ ಎಲ್ಲ ಇಲಾಖೆಗಳು ಜವಾಬ್ದಾರಿ ತೆಗೆದುಕೊಳ್ಳಬೇಕಿವೆ. ಈ ಕುರಿತು ಎ. 20ರಿಂದಲೇ ಕಾರ್ಯಚಟುವಟಿಕೆಗಳು ಆರಂಭಗೊಳ್ಳುವ ಸಾಧ್ಯತೆ ಇದೆ.
ನಿಯಂತ್ರಿತ ವಲಯಕ್ಕೆ ಬೌಂಡರಿ ನಿಗದಿಯಾಗಿದ್ದು, ಉತ್ತರದಲ್ಲಿ ಸಜೀಪನಡು ಕೇಂದ್ರ ಜುಮಾ ಮಸೀದಿ, ದಕ್ಷಿಣದಲ್ಲಿ ಮಾಣಿ-ಉಳ್ಳಾಲ ರಸ್ತೆ, ಪೂರ್ವದಲ್ಲಿ ಲಕ್ಷ್ಮಣಕಟ್ಟೆ ಹಾಗೂ ಪಶ್ಚಿಮದಲ್ಲಿ ಶ್ರೀರಾಮ ಭಜನ ಮಂದಿರವನ್ನು ಗುರುತಿಸಲಾಗಿದೆ. ಜತೆಗೆ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಇಂಟೆನ್ಸ್ ಬಫರ್ ಝೋನ್ ಹಾಗೂ ಅದರ ಬಳಿಕ ಬಫರ್ ಝೋನ್ ಎಂದು ಗುರುತಿಸಲಾಗಿದೆ.
ಕರಾಯದ ಜನತಾ ಕಾಲನಿ
ಬೆಳ್ತಂಗಡಿ: ಕೋವಿಡ್ ಸೋಂಕು ಬಾಧಿಸಿರುವ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಜನತಾ ಕಾಲನಿಯನ್ನು ಕಂಟೈನ್
ಮೆಂಟ್ ವಲಯ ಎಂದು ಘೋಷಿಸಿ ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ.
ಇತ್ತೀಚೆಗೆ ಜನತಾ ಕಾಲನಿ ನಿವಾಸಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಡಾ| ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ಕಾಲನಿಯ 88 ಮನೆಗಳನ್ನು ತಹಶೀಲ್ದಾರ್ ಸೂಚನೆಯಂತೆ ಸೀಲ್‌ಡೌನ್ ಮಾಡಲಾಗಿತ್ತು.
ಪರಿಸರದ ಮಡಂತ್ಯಾರು -ಉಪ್ಪಿನಂಗಡಿ ರಸ್ತೆಯ ಅಳಕೆ, ಉಪ್ಪಿನಂಗಡಿ -ಧರ್ಮಸ್ಥಳ ರಸ್ತೆಯ ಜಾರಿಗೆಬೈಲು ಮತ್ತು ಕರಾಯದಲ್ಲಿ ಬ್ಯಾರಿಕೇಡ್ ಅಳವಡಿಸಿ ಜನರ ಓಡಾಟವನ್ನು ನಿರ್ಬಂಧಿಸಿತ್ತು. ಪ್ರಸಕ್ತ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ರವಿವಾರ ಉತ್ತರಕ್ಕೆ ತುರ್ಕಳಿಕೆ ರಸ್ತೆ, ದಕ್ಷಿಣಕ್ಕೆ ಜನತಾ ಕಾಲನಿ, ಪೂರ್ವಕ್ಕೆ ಕಲ್ಲೇರಿ- ಮಡಂತ್ಯಾರು ರಸ್ತೆ, ಪಶ್ಚಿಮಕ್ಕೆ ತುರ್ಕಳಿಕೆ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಕೋವಿಡ್ ಸರ್ವೀಸ್ ಟೀಮ್
ಇನ್ನೊಂದೆಡೆ ಸೀಲ್‌ಡೌನ್ ಆದ ಜನತಾ ಕಾಲನಿಗೆಂದೆ ಪ್ರತ್ಯೇಕ 22 ಮಂದಿಯ “ಕೋವಿಡ್ ಸರ್ವೀಸ್ ಟೀಮ್’ ರಚಿಸಲಾಗಿದೆ. ಪ್ರತಿ ಮನೆಯ ಒಬ್ಬ ಸದಸ್ಯ ಹಾಗೂ 22 ಮಂದಿ ಸದಸ್ಯರ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ಕಾಲನಿಯ 88 ಮನೆಗಳ 264 ಮಂದಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಇದೇ ಟೀಮ್ ಪೂರೈಸುತ್ತಿದೆ. ಇದಕ್ಕೆಂದೇ ಪಂಚಾಯತ್ ತನ್ನ ಸ್ವಂತ ನಿಧಿಯಿಂದ 85 ಸಾವಿರ ರೂ.ಗಳನ್ನು ಈ ವರೆಗೆ ವ್ಯಯಿಸಿದೆ.
ಪ್ರಸಕ್ತ ಜನತಾ ಕಾಲನಿ ಸೋಂಕಿತನ 2 ವರದಿ ನೆಗೆಟಿವ್ ಬಂದಿದ್ದು ತಂದೆ, ತಾಯಿಯ ವರದಿಯೂ ನೆಗೆಟಿವ್ ಆಗಿದೆ. ಈಗಾಗಲೇ ಪ್ರಾಥಮಿಕ ಸಂಪರ್ಕ ಆರಂಭವಾಗಿ ಎ. 24ಕ್ಕೆ ಒಂದು ತಿಂಗಳು ಪೂರ್ಣಗೊಳ್ಳುವುದರಿಂದ ಕಾಲನಿ ಜನತೆ ಸೀಲ್‌ಡೌನ್ ಮುಕ್ತರಾಗಲಿದ್ದಾರೆ. ಆದರೆ ಬಂಟ್ವಾಳ ಪ್ರಕರಣದಿಂದ ತಾಲೂಕಾಡಳಿತ ಮತ್ತಷ್ಟು ಬಿಗಿ ಕ್ರಮ ಕೈಗೊಂಡಿದ್ದು, ಜಿಲ್ಲಾಡಳಿತದ ಮುಂದಿನ ನಿರ್ಧಾರ ಏನೆಂದು ಕಾದು ನೋಡಬೇಕಿದೆ.
ತೊಕ್ಕೊಟ್ಟು
ಉಳ್ಳಾಲ: ದಿಲ್ಲಿ ಸಮಾವೇಶದಿಂದ ಮರಳಿದ ತೊಕ್ಕೊಟ್ಟಿನ 52ರ ಹರೆಯದ ವ್ಯಕ್ತಿಗೆ ಕೋವಿಡ್ ಸೋಂಕು ದೃಢವಾಗಿ 14
ದಿನಗಳ ಬಳಿಕ ಗುಣಮುಖರಾಗಿ ತೊಕ್ಕೊಟ್ಟಿನ ನಿವಾಸಕ್ಕೆ ಆಗಮಿಸಿದ್ದು, ಈಗಾಗಲೇ ಅವರು ವಾಸಿಸುತ್ತಿದ್ದ ವಸತಿ ಸಮುಚ್ಚಯ ಸೇರಿದಂತೆ ತೊಕ್ಕೊಟ್ಟು ಜಂಕ್ಷನ್ ಸೀಲ್‌ಡೌನ್ ಆಗಿ 15 ದಿನಗಳು ಕಳೆದಿದ್ದು ಮುಂದಿನ 13 ದಿನಗಳವರೆಗೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
ದಿಲ್ಲಿಯಿಂದ ಮರಳಿದವರನ್ನು ಎ. 1ರಂದು ದೇರಳಕಟ್ಟೆಯ ವಸತಿ ಸಂಕೀರ್ಣದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಎರಡು ದಿನಗಳ ಬಳಿಕ ಕ್ವಾರಂಟೈನ್‌ನಲ್ಲಿದ್ದ ತೊಕ್ಕೊಟ್ಟು ಮೂಲದ ವ್ಯಕ್ತಿಯಲ್ಲಿ ಸೋಂಕು ದೃಢವಾದ ಕಾರಣ ಎ. 4ರಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಎರಡು ವಸತಿ ಸಂಕೀರ್ಣ ಮತ್ತು ಸುತ್ತಮುತ್ತಲಿನ 40 ಮನೆಗಳು, 20ಕ್ಕೂ ಹೆಚ್ಚು ಅಂಗಡಿಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ಸೋಂಕಿತ ವ್ಯಕ್ತಿ ಗುಣಮುಖರಾಗಿ ಮರಳಿದಾಗ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎನ್ನುವ
ಆರೋಪವೂ ಕೇಳಿಬಂದಿದ್ದು, ಪ್ರಸ್ತುತ ಪರಿಸರದಲ್ಲಿ ಕಟ್ಟುನಿಟ್ಟಿನ ಸೀಲ್‌ಡೌನ್ ಜಾರಿಗೊಳಿಸಲಾಗಿದೆ.
ಆಹಾರಕ್ಕೆ ವಾಟ್ಸ್‌ಆ್ಯಪ್ ಗ್ರೂಪ್
15 ದಿನಗಳಂತೆ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಇಲ್ಲಿನ ನಿವಾಸಿ ಗಳಿಗೆ ತುರ್ತು ಆಹಾರ ಸಾಮಗ್ರಿಗಳನ್ನು ಉಳ್ಳಾಲ ನಗರಸಭೆ ಮತ್ತು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರು ಒದಗಿಸುತ್ತಿದ್ದಾರೆ. ವಸತಿ ಸಮುಚ್ಚಯ ಸಮಿತಿ ಕೂಡ ಸಹಕಾರ ನೀಡುತ್ತಿದೆ. ಆರಂಭದಲ್ಲಿ ಜನರು ವಿರೋಧಿಸಿದರೂ ಇದೀಗ ಸಹಕರಿಸುತ್ತಿದ್ದಾರೆ ಎಂದು ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಮಾಹಿತಿ ನೀಡಿದ್ದಾರೆ.
ತುಂಬೆ ಗ್ರಾಮ
ಬಂಟ್ವಾಳ: ಕೋವಿಡ್ ಸೋಂಕು ಬಾಧಿಸಿರುವ ತುಂಬೆ ಗ್ರಾಮದ ನಿರ್ದಿಷ್ಟ ಪ್ರದೇಶವನ್ನು ದ.ಕ. ಜಿಲ್ಲಾಡಳಿತ ನಿಯಂತ್ರಿತ ವಲಯ ಎಂದು ಘೋಷಿಸಿದ್ದು, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರನ್ನು ಘಟಕ ನಿಯಂತ್ರಕರಾಗಿ ನಿಯೋಜಿಸಿದೆ.
ಈ ಪ್ರದೇಶವು ಈ ಹಿಂದೆಯೇ ಕ್ವಾರಂಟೈನ್‌ನಲ್ಲಿದ್ದರೂ ಮುಂದಿನ ದಿನಗಳಲ್ಲಿ 500 ಮೀ. ವ್ಯಾಪ್ತಿಯಲ್ಲಿ ಸೀಲ್‌ಡೌನ್ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಇದರ ಅನುಷ್ಠಾನದ ದೃಷ್ಟಿಯಿಂದ ರವಿವಾರ ತಹಶೀಲ್ದಾರ್ ಅವರು ತುಂಬೆ ಪಿಡಿಒ, ಪೊಲೀಸರೊಂದಿಗೆ ಚರ್ಚೆ ನಡೆಸಿದ್ದಾರೆ.
ಎ. 20ರ ಬಳಿಕ ನಿಯಂತ್ರಣ ವಲಯಕ್ಕೆ ಸಂಬಂಧಿಸಿದಂತೆ ಅನುಷ್ಠಾನ ಕಾರ್ಯಗಳು ನಡೆಯುವ ಸಾಧ್ಯತೆ ಇದ್ದು, ಮುಂದೆ ನಿಯಂತ್ರಿತ ವಲಯದ ವ್ಯಾಪ್ತಿಯಲ್ಲಿ ಬರುವ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರುವಂತಿಲ್ಲ.
ಪ್ರಸ್ತುತ ನಿಯಂತ್ರಣ ವಲಯಕ್ಕೆ ಗಡಿಯನ್ನು ಗುರುತಿಸಲಾಗಿದ್ದು, ಉತ್ತರದಲ್ಲಿ ತುಂಬೆ ಶಾಲೆ, ದಕ್ಷಿಣದಲ್ಲಿ ಮದಕ, ಪೂರ್ವದಲ್ಲಿ ಭಾರತ್ ಆಗ್ರೋ ಸಂಸ್ಥೆ ಹಾಗೂ ಪಶ್ಚಿಮದಲ್ಲಿ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರದೇಶದ ಗಡಿಯನ್ನು ಜಿಲ್ಲಾಡಳಿತ ಗುರುತಿಸಿದೆ. ಜತೆಗೆ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಇನ್‌ಟೆನ್ಸ್ ಬಫರ್ ಝೋನ್ ಹಾಗೂ 7 ಕಿ.ಮೀ. ವ್ಯಾಪ್ತಿಯಲ್ಲಿ ಬಫರ್ ಝೋನ್ ಎಂದು ಗುರುತಿಸಲಾಗಿದೆ.
ಸಂಪ್ಯ, ಉಪ್ಪಿನಂಗಡಿ ಲಕ್ಷ್ಮೀನಗರ
ಉಪ್ಪಿನಂಗಡಿ/ಪುತ್ತೂರು: ಪುತ್ತೂರು ತಾ|ನ ಉಪ್ಪಿನಂಗಡಿ ಹಾಗೂ ಸಂಪ್ಯ ಭಾಗದಲ್ಲಿ ತಲಾ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಸಂಪ್ಯ ಹಾಗೂ ಉಪ್ಪಿನಂಗಡಿ ಗ್ರಾಮದ ಲಕ್ಷ್ಮೀನಗರಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಸಂಪ್ಯ ಭಾಗದಲ್ಲಿ 91 ಮಂದಿಯ 23 ಮನೆಗಳು ಸೀಲ್‌ಡೌನ್ ವ್ಯಾಪ್ತಿಗೆ ಒಳಪಡಲಿವೆ. ಉಪ್ಪಿನಂಗಡಿ ಲಕ್ಷ್ಮೀನಗರದಲ್ಲಿ ಕೇವಲ 6 ಮನೆಗಳಿದ್ದು, 5 ಮನೆಗಳಲ್ಲಿ ಮಾತ್ರ 22 ಮಂದಿ ವಾಸ್ತವ್ಯವಿದ್ದಾರೆ. ಉಳಿದಂತೆ 1 ಕಿ.ಮೀ. ವ್ಯಾಪ್ತಿಯ ಪ್ರತಿ ಮನೆಯಲ್ಲೂ ತೀವ್ರ ಬಫರ್ ಝೋನ್ ನೆಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಯಲಿದೆ.
ಸಂಪ್ಯ ಭಾಗದಲ್ಲಿ ಪುತ್ತೂರು ತಾ.ಪಂ. ಇಒ ನವೀನ್ ಭಂಡಾರಿ ಘಟಕ ಅಧಿಕಾರಿಯಾಗಿದ್ದಾರೆ. ಲಕ್ಷ್ಮೀನಗರ ಭಾಗದಲ್ಲಿ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಘಟಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.