ಆದಾಯದ ಅಸಮಾನತೆ ಅತಿರೇಕಕ್ಕೆ ತಲುಪಿದೆಯೆ?
Team Udayavani, Feb 5, 2020, 6:20 AM IST
ಸಾಮಾನ್ಯವಾಗಿ ಬಂಡವಾಳಶಾಹಿ ಮತ್ತು ಅರೆ ಬಂಡವಾಳಶಾಹಿ ದೇಶಗಳಲ್ಲಿ ಆದಾಯದ ಅಸಮಾನತೆ ಅಧಿಕವಿರುತ್ತದೆ. ನಮ್ಮ ದೇಶದಲ್ಲೂ ಈ ಸಮಸ್ಯೆ ಆದಿಯಿಂದಲೂ ಇದೆ. ಆದಾಯದ ಅಸಮಾನತೆ ನಮ್ಮಲ್ಲಿ ಎಷ್ಟರಮಟ್ಟಿಗೆ ಇದೆ ಎಂದು ಆಕ್ಸ್‌ಫಾಮ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಕೈಗೊಂಡ ಆರ್ಥಿಕ ಸಮೀಕ್ಷೆ ಹೇಳುತ್ತದೆ. ನಮ್ಮ ದೇಶದ ಶೇ.77.4ರಷ್ಟು ರಾಷ್ಟ್ರೀಯ ಆದಾಯ ಮೇಲ್ವರ್ಗದ ಶೇ.10 ರಷ್ಟು ಜನರಲ್ಲಿ ಇದೆ, ಅಷ್ಟೆ ಅಲ್ಲ ನಮ್ಮ ಒಟ್ಟು ಸಂಪತ್ತಿನ ಒಡೆತನ ತೆಗೆದುಕೊಂಡರೆ ಶೇ.1ರಷ್ಟು ಜನರಲ್ಲಿ ನಮ್ಮ ದೇಶದ ಶೇ.51.53 ರಷ್ಟು ಸಂಪತ್ತು ಕೇಂದ್ರೀಕೃತವಾಗಿದೆ. ಜಗತ್ತಿನಲ್ಲಿಯೇ ಶ್ರೀಮಂತಿಕೆಯಲ್ಲಿ 19ನೇ ಸ್ಥಾನವನ್ನು ಅಲಂಕರಿಸಿರುವ ಮುಖೇಶ್ ಅಂಬಾನಿ ಅವರು ಮುಂಬಯಿಯಲ್ಲಿ ಹೊಂದಿರುವ 570 ಅಡಿ ಕ್ಷೇತ್ರದ, 27 ಮಹಡಿಗಳಿರುವ ಮನೆ ಜಗತ್ತಿನಲ್ಲಿಯೇ ಅತಿ ದುಬಾರಿಯಾದುದು. ಈ ಮನೆಯ ನಿರ್ವಹಣೆಗೆ 600 ಜನ ನೌಕರರಿದ್ದಾರೆ ಎನ್ನುತ್ತದೆ ಫೋರ್ಬ್ಸ್ ನಿಯತಕಾಲಿಕೆ. ಅದರ ಒಟ್ಟು ಖರ್ಚು ಒಂದು ಬಿಲಿಯನ್ ಡಾಲರ್. ನಮ್ಮ ರೂಪಾಯಿ ಲೆಕ್ಕದಲ್ಲಿ ಸುಮಾರು ರೂ.7000 ಕೋಟಿ. ಅಂದರೆ ವಿಚಾರ ಮಾಡಿ, ನಮ್ಮಲ್ಲಿಯ ಬಡವರಿಗೆ ಕೇವಲ 5 ಲಕ್ಷ ರೂ.ಗೆ ಒಂದೊಂದು ಮನೆ ಕಟ್ಟಿ ಕೊಟ್ಟರೆ ಸುಮಾರು ಒಂದು ಕೋಟಿ 40 ಲಕ್ಷ ಬಡವರು ನಿವಾಸಗಳನ್ನು ಪಡೆಯುತ್ತಿದ್ದರು.
ಆದಾಯದ ಅಸಮಾನತೆಯನ್ನು ತೆಗೆದುಕೊಂಡರೆ ಭಾರತಕ್ಕಿಂತ ನಿಕೃಷ್ಟ ಅವಸ್ಥೆಯಲ್ಲಿರುವ ದೇಶಗಳೆಂದರೆ ಉಕ್ರೇನ್, ಇಥಿಯೋ ಪಿಯಾ, ಕಾಂಗೋ ಮತ್ತು ಬುರಂಡಿ. ಹಾಗೆಯೇ ಕಡಿಮೆ ಅಸಮಾನತೆಯಲ್ಲಿರುವ ದೇಶಗಳೆಂದರೆ ಐಸ್‌ಲ್ಯಾಂಡ್, ಆಸ್ಟ್ರೇಲಿಯಾ, ಸ್ವಿಜರ್‌ಲ್ಯಾಂಡ್, ಬೆಲ್ಜಿಯಂ ಮತ್ತು ಲಕ್ಸಂಬರ್ಗ್.
ದುಃಖದ ಸಂಗತಿಯೇನೆಂದರೆ ನಮ್ಮಲ್ಲಿಯ ಕೆಳಸ್ತರದ ಶೇ.60ರಷ್ಟು ಜನರು ದೇಶದ ಒಟ್ಟು ಸಂಪತ್ತಿನಲ್ಲಿ ಕೇವಲ ಶೇ.4.8 ರಷ್ಟು ಮಾಲೀಕತ್ವ ಪಡೆದಿದ್ದಾರೆ. ಕಡು ಬಡತನದಲ್ಲಿರುವ ಕ‚ಡೆಯ 10 ಪ್ರತಿಶತ ಜನಸಂಖ್ಯೆಯಲ್ಲಿ 13.6 ಕೋಟಿ ಜನರು 2004ರಿಂದ ಸಾಲದ ಶೂಲದಲ್ಲಿ ಒದ್ದಾಡುತ್ತಿದ್ದಾರೆ.
ಮುಂದುವರಿದು ಹೇಳುವುದಾದರೆ ದೇಶದಲ್ಲಿ ಪ್ರತಿವರುಷ 6.3 ಕೋಟಿ ಜನರು ಆರೋಗ್ಯ ಚಿಕಿತ್ಸೆಯ ವೆಚ್ಚ ಭರಿಸಲಾಗದೆ ಸಾಲವೆಂಬ ಶೂಲದಲ್ಲಿ ಬಡವರಾಗುತಿದ್ದಾರೆ. ಆದುದರಿಂದ ಒಂದು ಅಂದಾಜಿನಂತೆ ನಮ್ಮಲ್ಲಿ ಪ್ರತಿ ಸೆಕಂಡಿಗೆ ಇಬ್ಬರು ಬಡತನದ ರೇಖೆಯ ಕೆಳಗೆ ಬಿದ್ದು ಜೀವಿಸುತ್ತಿರುವುದು ಕಂಡುಬಂದಿದೆ. ಐದು ವರುಷದೊಳಗಿನ ಶಿಶು ಮರಣ ಸಂಖ್ಯೆ ಶೇ.21ರಷ್ಟಿದೆ. ಹೆರಿಗೆ ವೇಳೆ ಮರಣಹೊಂದುವ ಮಹಿಳೆಯರ ಸಂಖ್ಯೆ ಶೇ.17ರಷ್ಟು.
ಆದಾಯದ ಅಸಮಾನತೆಗೆ ಹತ್ತು ಹಲವಾರು ಕಾರಣಗಳಿದ್ದರೂ ಮುಖ್ಯವಾದ ಕಾರಣಗಳು ಈ ಕೆಳಗಿನಂತೆ ಪಟ್ಟಿ ಮಾಡಬಹುದು. ಮೊದಲನೆಯದಾಗಿ ನಮ್ಮದು ಅರೆ ಬಂಡವಾಳಶಾಹಿ ಅರ್ಥವ್ಯವಸ್ಥೆ. ಇಂತಹ ಅರ್ಥವ್ಯವಸ್ಥೆಯಲ್ಲಿ ಯಾರು ಬೇಕಾದರೂ ಇಡೀ ದೇಶದಲ್ಲಿ ಎಲ್ಲಿ ಬೇಕಾದಲ್ಲಿ ಆಸ್ತಿ ಖರೀದಿಸುವ ಮತ್ತು ಹೊಂದುವ ಅಧಿಕಾರ ಹೊಂದಿರುವರು.
ಸಾಮಾನ್ಯವಾಗಿ ಅವಕಾಶವುಳ್ಳವರು ತಮ್ಮಲ್ಲಿರುವ ಸಂಪತ್ತನ್ನು ಉಪಯೋಗಿಸಿ ದೇಶದಲ್ಲಿ ಸಾಕಷ್ಟು ಹಣ, ಆಸ್ತಿಪಾಸ್ತಿ ಮತ್ತು ಇತರೆ ಸಂಪತ್ತನ್ನು ಗಳಿಸಿ ಇನ್ನಷ್ಟು ಶ್ರೀಮಂತರಾದರೆ ಉಳಿದವರು ಇದ್ದುದರಲ್ಲಿಯೇ ತೃಪ್ತಿ ಪಡುವರು. ಇಲ್ಲವೆ ಇನ್ನಷ್ಟು ಬಡವರಾಗುವರು.
ಎರಡನೆಯದಾಗಿ, ತೆರಿಗೆಯಿಂದ ತಪ್ಪಿಸಿಕೊಳ್ಳುವ ಪ್ರಕ್ರಿಯೆ. ನಮ್ಮಲ್ಲಿ ತೆರಿಗೆಯ ವಿಷಯದ ಕುರಿತೇ ಒಂದು ಗಾದೆ ಇದೆ- ಅದೇನೆಂದರೆ, ಪ್ರಾಮಾಣಿಕತೆಗೆ ತೆರಿಗೆಯ ದಂಡ, ಆದರೆ ಅಪ್ರಾಮಾಣಿಕತೆಗೆ ಬಹುಮಾನದ ಪುಂಜ. ಹೌದು ನಮ್ಮ ದೇಶದಲ್ಲಿ ಬಹಳಷ್ಟು ಸ್ವಯಂ ಉದ್ಯೋಗ ಮಾಡುವವರು ಸರಕಾರಕ್ಕೆ ಸರಿಯಾದ ಗಳಿಕೆಯ ಮಾಹಿತಿ ನೀಡುವುದೇ ಇಲ್ಲ. ಅದರಿಂದಾಗಿ ಅಂಥವರ ಸಂಪತ್ತು ಗೊತ್ತಿಲ್ಲದೆ ವೃದ್ಧಿಯಾಗುತ್ತಲೇ ಇದೆ. ಅದೇ ಸರಕಾರಿ ನೌಕರನಿದ್ದರೆ ಅವರ ವೇತನದ ಸರಿಯಾದ ಲೆಕ್ಕ ಸರಕಾರಕ್ಕೆ ಸಿಗುವುದರಿಂದ, ತೆರಿಗೆಯನ್ನು ವೇತನ ಬಟವಾಡೆ ಮಾಡುವಾಗಲೇ ಮುರಿದುಕೊಳ್ಳುತ್ತದೆ. ಹಾಗೆಯೇ, ಹಿನ್ನಡೆಯ ತೆರಿಗೆ. ಅಂದರೆ ಸರಕಾರ ಸರಕು ಹಾಗೂ ಸೇವೆಗಳ ಮೇಲೆ ಹೇರುವ ತೆರಿಗೆಯ ಭಾರ ಶ್ರೀಮಂತರಿಗಿಂತ ಬಡವರ ಮೇಲೆಯೇ ಹೆಚ್ಚಿಗೆ ಬೀಳುತ್ತದೆ.
ಉದಾ: ಸರಕಾರ ಯಾವುದೇ ಸರಕಿನ ಮೇಲೆ ಶೇ.10ರಷ್ಟು ತೆರಿಗೆ ಹೇರಿದರೆ ತಿಂಗಳಿಗೆ ರೂಪಾಯಿ ಇಪ್ಪತ್ತು ಸಾವಿರ ಗಳಿಸುವವನು ರೂ 2000 ಕೊಟ್ಟರೆ, ತಿಂಗಳಿಗೆ ರೂ. 2000 ಗಳಿಸುವವನು ತೆರಿಗೆಯೆಂದು ರೂ.200 ಕೊಡಬೇಕು. ಇಲ್ಲಿ ತೆರಿಗೆಯ ಭಾರ ಹೆಚ್ಚಿನ ಆದಾಯದವರಿಗೆ ಹೋಲಿಸಿದರೆ ಕಡಿಮೆ ಆದಾಯದವರಿಗೆ ಜಾಸ್ತಿ ಅಂತ ಆಗಲಿಲ್ಲವೆ?
ಅಂದರೆ, ಮೊದಲನೆಯವನಿಗೆ ಅದು ಅಷ್ಟಾಗಿ ನೋವಾಗುವುದಿಲ್ಲ. ಎರಡನೆಯವನಿಗೆ ಅದು ನೋವುಂಟು ಮಾಡುತ್ತದೆ. ಅದರಂತೆ ಹಣದುಬ್ಬರದ ಸಮಸ್ಯೆ ಕೂಡ ಕಾಣದ ರಾಕ್ಷಸನಂತೆ ಕೆಲಸ ಮಾಡುತ್ತದೆ. ಕಾರಣ ಬೆಲೆ ಏರಿದ ಹಾಗೆ ಹಣದ ಮೌಲ್ಯ ಕುಸಿಯುವುದರಿಂದ ಕೊಂಡು ಕೊಳ್ಳುವ ಶಕ್ತಿ ಕ್ಷೀಣಿಸುತ್ತದೆ. ಹೀಗಾಗಿ ಬಡತನದ ಬವಣೆ ಇನ್ನಷ್ಟು ವಿಸ್ತಾರಗೊಳ್ಳುವುದು. ಯಾಕೆಂದರೆ ಅಸಂಘಟಿತ ವರ್ಗದವರ ಕೂಲಿದರ ಹೆಚ್ಚಾಗುವುದಿಲ್ಲ. ಆದರೆ ಉದ್ಯೋಗಪತಿಗಳ ಲಾಭ ಹೆಚ್ಚುವುದರಿಂದ ಮತ್ತು ಸಂಘಟಿತ ವಲಯದ ಕೆಲಸಗಾರರ ತುಟ್ಟಿಭತ್ಯೆ ಹೆಚ್ಚಿಸುವುದರಿಂದ ಆದಾಯದ ಅಸಮಾನತೆ ಇನ್ನಷ್ಟು ಹೆಚ್ಚುತ್ತಿದೆ. ಅದರಂತೆಯೆ 60 ರ ದಶಕದ ನಂತರ ಯೋಜಿಸಿ ಕೈಗೊಂಡ ಹೊಸ ಕೃಷಿ ಸಾಗುವಳಿ ಪದ್ಧತಿ. ಬಹಳಷ್ಟು ದೊಡ್ಡ ರೈತರು ಹೊಸ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯುತ್ತಿದ್ದರೆ ಸಣ್ಣ ಹಾಗೂ ಅತಿ ಸಣ್ಣ ರೈತರು ಅವರ ಜತೆಗೆ ಸ್ಪರ್ಧಿಸಲಾಗದೆ ಹಿಂದೇಟು ಹಾಕುತ್ತಿದ್ದಾರೆ.
ಅಷ್ಟೇ ಏಕೆ, ಕೆಲವರು ಸಾಗುವಳಿಯನ್ನೇ ಬಿಟ್ಟು ಬಿಟ್ಟಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಆದಾಯದ ಅಸಮಾನತೆ ಇನ್ನಷ್ಟು ವೃದ್ಧಿಯಾಗಿದೆ. ಕೆಲವು ತಜ್ಞರ ಅಭಿಪ್ರಾಯದಂತೆ 90ರ ದಶಕದಲ್ಲಿ ಪಾಸುಮಾಡಿ ಅನುಷ್ಠಾನಕ್ಕೆ ತಂದ ಆರ್ಥಿಕ ನೀತಿಗಳ ದುಷ್ಪರಿಣಾಮ ಇದಾಗಿದೆ.
ಆದಿಯಿಂದಲೂ ಸರಕಾರಗಳು ಈ ಸಮಸ್ಯೆಯ ಪರಿಹಾರಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದರೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಮುಂದೆಯಾದರೂ ಈ ಸಮಸ್ಯೆ ಪರಿಹಾರವಾಗಬೇಕಾದಲ್ಲಿ ಸರಕಾರ ಪ್ರಗತಿಪರ ತೆರಿಗೆ ನೀತಿಯನ್ನು ದೇಶದಾದ್ಯಂತ ಅನ್ವಯವಾಗುವಂತೆ ಪಾಸುಮಾಡಬೇಕು. ಅಂದರೆ ಹೆಚ್ಚಿನ ಆದಾಯದಾರರಿಗೆ ಅತಿ ಹೆಚ್ಚು ತೆರಿಗೆಯನ್ನು ವಿಧಿಸಬೇಕು. ಅದರಂತೆಯೆ ಕಪ್ಪು ಹಣದವರ ದಾಖಲೆಯನ್ನು ಸ್ವಿಸ್ ಬ್ಯಾಂಕಿನಿಂದ ಪಡೆದು ಅವರ ಹಣವನ್ನು ಮುಟ್ಟುಗೋಲು ಹಾಕಿಸಬೇಕು. ಇಲ್ಲವೆ ಆ ಹಣದ ಅರ್ಧದಷ್ಟನ್ನು ತೆರಿಗೆ ರೂಪದಲ್ಲಿ ಪಡೆಯಬೇಕು. ಅದರಂತೆಯೇ ಆರ್ಥಿಕ ಅಭಿವೃದ್ಧಿಯ ದರವನ್ನು ಶೇ.10ರಷ್ಟಾದರು ಹೆಚ್ಚಿಸಬೇಕು. ನನ್ನ ದೃಷ್ಟಿಯಲ್ಲಿ ಆದಾಯ ತೆರಿಗೆಯ ಜತೆಗೆ ಹೆಚ್ಚಿನ ಆದಾಯದವರಿಗೆ ಅನ್ವಯವಾಗುವಂತೆ ವೆಚ್ಚದ ತೆರಿಗೆಯನ್ನು ಖರೀದಿಸುವ ಸರಕು ಹಾಗೂ ಸೇವೆಗಳ ಗುಣಮಟ್ಟಕ್ಕನುಗುಣವಾಗಿ ಹೇರಲೇಬೇಕು. ಹಾಗೆಯೇ ದೇಶದ ಪ್ರತಿಯೋರ್ವ ನಾಗರಿಕರಿಗೂ ಸಂಪೂರ್ಣ ಉಚಿತ ಆರೋಗ್ಯ ಸೇವಾ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು.
– ಡಾ.ಎಸ್.ಡಿ.ನಾಯ್ಕ, ಕಾರವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.