ದಿಕ್ಕು ಬದಲಿಸಿದ “ತಂತಿ ಮೇಲಿನ ನಡಿಗೆ’ ಹೇಳಿಕೆ
Team Udayavani, Oct 5, 2019, 3:10 AM IST
ಬೆಂಗಳೂರು: ರಾಜ್ಯದ ಜನರ ಒತ್ತಾಯ, ಕೆಲ ಬಿಜೆಪಿ ನಾಯಕರ ಆಗ್ರಹ, ಕೇಂದ್ರ ಸಚಿವರು ಹಾಗೂ ರಾಜ್ಯ ನಾಯಕರ ಮನವಿ, ನಿರಂತರ ಪ್ರಯತ್ನದ ಫಲವೆಂಬಂತೆ ಕೇಂದ್ರ ಸರ್ಕಾರ ಶುಕ್ರವಾರ 1,200 ಕೋಟಿ ರೂ. ಮಧ್ಯಂತರ ಪರಿಹಾರ ಘೋಷಿಸಿದೆ. ಕೇಂದ್ರದ ಮೇಲೆ ಒತ್ತಡ ಹೇರಲು, ಜನಾಂದೋಲನ ರೂಪುಗೊಳ್ಳಲು ಹಾಗೂ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ “ತಂತಿ ಮೇಲಿನ ನಡಿಗೆ’ ಹೇಳಿಕೆ!
ರಾಜಕೀಯವಾಗಿ ತಮಗೆ ಎದುರಾಗಿದ್ದ ಸವಾಲುಗಳ ಜತೆಗೆ ನೆರೆ ಪರಿಹಾರ ಕಾರ್ಯಕ್ಕೆ ಹಣಕಾಸಿನ ಕೊರತೆ ಎದುರಿಸುತ್ತಿದ್ದ ಹೊತ್ತಿನಲ್ಲೇ ಯಡಿಯೂರಪ್ಪ ಅವರು ನೀಡಿದ ಆ ಒಂದು ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸೃಷ್ಟಿಸಿದ ತರಂಗಗಳು ದೂರದ ದೆಹಲಿಯಲ್ಲಿರುವ ವರಿಷ್ಠರನ್ನೂ ತಲುಪಿದಂತಿದೆ. ಹಾಗಾಗಿ ಶುಕ್ರವಾರ ರಾತ್ರಿ 1,200 ಕೋಟಿ ರೂ. ಪರಿಹಾರ ಘೋಷಣೆಯಾಗಿದೆ. ತಮ್ಮ ಒಂದು ಹೇಳಿಕೆ ಮೂಲಕ ಪಕ್ಷ, ಸಂಘಟನೆ ಹಾಗೂ ಸಮುದಾಯಕ್ಕೆ ಯಡಿಯೂರಪ್ಪ ರವಾನಿಸಿದ ಸಂದೇಶದ ಕುರಿತೇ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ರಾಜ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಚನೆಯಾದ ಬಿಜೆಪಿ ಸರ್ಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ನಂತರ ರಾಜ್ಯ ಪದಾಧಿಕಾರಿಗಳ ಆಯ್ಕೆ ಸೇರಿ ಸಂಘಟನಾತ್ಮಕ ವಿಚಾರಗಳಲ್ಲಿ ರಾಜ್ಯ ಬಿಜೆಪಿ ಪ್ರಮುಖರೇ ನಿರ್ಧಾರ ಕೈಗೊಳ್ಳುತ್ತಿದ್ದ ಕಾರಣ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತು ಕೇಳಿಬರಲಾ ರಂಭಿ ಸಿತು. ನೆರೆ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಲು ಪ್ರಧಾನಿ ಭೇಟಿಗೆ ಎರಡು ಬಾರಿ ಪ್ರಯತ್ನಿಸಿದರೂ ಅವ ರಿಗೆ ಅವಕಾಶ ಸಿಗದಿದ್ದುದು ಸಹ ನಿರ್ಲಕ್ಷಿಸಲಾಗುತ್ತಿದೆ ಎಂಬ ಮಾತುಗಳಿಗೆ ಪುಷ್ಠಿ ನೀಡುವಂತಿತ್ತು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಹೇಶ್ ಟೆಂಗಿನಕಾಯಿ ನೇಮಕ ವಿಚಾರ ಕೂಡ ಯಡಿಯೂರಪ್ಪ ಅವರ ಕಂಗೆಡಿಸಿತು. ಪಕ್ಷದಲ್ಲಿ ಕಡೆಗಣನೆ, ತಮ್ಮ ಪುತ್ರ ವಿಜಯೇಂದ್ರ ವಿರುದ್ಧ ಆಡಳಿತದಲ್ಲಿ ಹಸ್ತಕ್ಷೇಪ ಆರೋಪ, ಕೇಂದ್ರದಿಂದ ನೆರವು ಬಾರದಿರುವುದು, ಪ್ರಧಾನಿ ಭೇಟಿಗೆ ಅವಕಾಶ ಸಿಗದೆ ತಮ್ಮ ವರ್ಚಸ್ಸು ಕುಂದುತ್ತಿದೆ ಎಂಬ ಭಾವನೆ ಮೂಡುವ ಹೊತ್ತಿನಲ್ಲೇ ಯಡಿಯೂರಪ್ಪ ಕೂಡ ಸದ್ದಿಲ್ಲದೇ ಪ್ರತಿತಂತ್ರ ಹೂಡಲಾರಂಭಿಸಿದ್ದಂತೆ ಕಂಡುಬಂತು.
ಸೆ. 17ರಂದು ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರ ವೇದಿಕೆಯಿಂದ ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು. ಆ ಸಮಾ ರಂಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವೀರಶೈವ- ಲಿಂಗಾಯತ ಸಮುದಾಯದ ಮಠಾಧೀಶರು “ಯಡಿಯೂರಪ್ಪ ಅವರನ್ನು ಸ್ವಪಕ್ಷದವರು ಇಲ್ಲವೇ ಪ್ರತಿಪಕ್ಷದವರು ಕೆಣಕಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಬಹಿರಂಗ ಎಚ್ಚರಿಕೆ ನೀಡಿದರು. ಇದು ಪ್ರತಿಪಕ್ಷಗಳಿಗಿಂತ ಬಿಜೆಪಿಯಲ್ಲೇ ಹೆಚ್ಚು ಚರ್ಚೆಗೆ ಗ್ರಾಸವಾಯಿತು.
ಬಳಿಕ ತಮ್ಮ ನಾಯಕತ್ವದ ವಿರುದ್ಧವೇ ದನಿಯೆತ್ತಿ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಭಾನುಪ್ರಕಾಶ್, ನಿರ್ಮಲ್ ಸುರಾನಾ ಅವರನ್ನು ಮತ್ತೆ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದು ಯಡಿಯೂರಪ್ಪನವರ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿತ್ತು. ಜತೆಗೆ ಮೇಯರ್ ಅಭ್ಯರ್ಥಿ ಆಯ್ಕೆಗೆ ತಾವು ರಚಿಸಿದ್ದ ಸಮಿತಿಯನ್ನು ಪಕ್ಷದ ರಾಜ್ಯಾಧ್ಯಕ್ಷರು ಬರ್ಖಾಸ್ತುಗೊಳಿಸಿದ್ದು ಅವರನ್ನು ಇನ್ನಷ್ಟು ಕೆರಳಿಸಿದಂತಿತ್ತು.
ಸಂಚಲನ ಸೃಷ್ಟಿಸಿದ ಹೇಳಿಕೆ: ದಾವಣಗೆರೆಯಲ್ಲಿ ಸೆ. 29ರಂದು ನಡೆದ ಬಾಳೆಹೊನ್ನೂರು ರಂಭಾಪುರಿ ಸ್ವಾಮೀಜಿ ಅವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ “ನಾನು ತಂತಿ ಮೇಲೆ ನಡೆಯುತ್ತಿದ್ದೇನೆ. ಯಾವುದೇ ತೀರ್ಮಾನ ಕೈಗೊಳ್ಳಲು 10 ಬಾರಿ ಯೋಚಿಸುತ್ತಿದ್ದೇನೆ’ ಎಂಬ ಹೇಳಿಕೆ ನೀಡಿದ್ದು ಸಂಚಲನ ಮೂಡಿಸಿತು. ಲಿಂಗಾಯತ ಸಮುದಾಯದ ದೊಡ್ಡ ಸಮಾರಂಭದಲ್ಲಿ ಯಡಿಯೂರಪ್ಪ ಹೇಳಿಕೆ ಅವರ ಅಸಹಾಯತೆ ಎಂಬುದಕ್ಕಿಂತ ಪಕ್ಷದಲ್ಲಿ ಅವರಿಗೆ ಸಹಕಾರ ಸಿಗುತ್ತಿಲ್ಲ ಎಂಬ ಸಂದೇಶ ರವಾನೆಯಾದಂತಾಯಿತು.
ಚರ್ಚೆಯ ದಿಕ್ಕು ಬದಲಿಸಿದ ಮಾತು: ಅಲ್ಲಿಯವರೆಗೆ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದೇ ಪ್ರತಿಪಕ್ಷಗಳು, ಸಂತ್ರಸ್ತರು ಟೀಕೆ ಮಾಡುತ್ತಿದ್ದರು. ಆ ಹೊತ್ತಿಗೆ ನೆರೆ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿ ಎರಡು ತಿಂಗಳಾಗಿ ಜನಾಕ್ರೋಶ ಹೆಚ್ಚಾಗಿತ್ತು. ಆ ಹೊತ್ತಿಗೆ ಯಡಿ ಯೂರಪ್ಪ ಹೇಳಿದ ಮಾತು ಚರ್ಚೆಯ ದಿಕ್ಕನ್ನೇ ಬದಲಿಸಿತು. ಅಲ್ಲಿಂದ ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದಿರುವ ಬಗ್ಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಲಾರಂಭಿಸಿತು. ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಮುಗಿಬಿದ್ದವು. ಇದು ಕ್ರಮೇಣ ಜನಾಕ್ರೋಶವಾಗಿ ಪರಿವರ್ತನೆಯಾಗಲಾರಂಭಿಸಿತು.
ಸಚಿವ ಸದಾನಂದಗೌಡ ಅವರು ವಿಜಯದಶಮಿ ನಂತರ ಪರಿಹಾರ ಬಿಡುಗಡೆಯಾಗಲಿದೆ ಎಂದು ಶುಕ್ರ ವಾರ ಮಧ್ಯಾಹ್ನ ಹೇಳಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ವಾರದೊಳಗೆ ಪರಿಹಾರ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಕೇಂದ್ರ ಮಧ್ಯಂತರ ಪರಿಹಾರ ನೀಡದೆ ಒಮ್ಮೆಗೆ ಪೂರ್ಣ ಪರಿಹಾರ ವಿತರಿಸಲಿದೆ ಎಂದು ಕೆಲ ನಾಯಕರು ಸಮಜಾಯಿಷಿ ನೀಡಿದ್ದರು. ಆದರೆ ಶುಕ್ರವಾರ ರಾತ್ರಿ ದಿಢೀರ್ 1,200 ಕೋಟಿ ರೂ. ಬಿಡುಗಡೆಯಾಗಿರುವುದು ಬಿಜೆಪಿ ನಾಯಕರಿಗೂ ಅಚ್ಚರಿ ಜತೆಗೆ ಸಂತಸ ತಂದಿದೆ. ಅಷ್ಟರ ಮಟ್ಟಿಗೆ ಯಡಿಯೂರಪ್ಪ ಅವರ ತಂತಿ ಮೇಲಿನ ನಡಿಗೆ ಹೇಳಿಕೆ ಹಾಗೂ ಜನಾಭಿಪ್ರಾಯ ಫಲ ನೀಡಿದಂತಿದೆ.
ಯಡಿಯೂರಪ್ಪ ಪರ ಯತ್ನಾಳ್ ಹೇಳಿಕೆ: ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಅವರ ಪರವಾಗಿ ನೀಡಿದ ಹೇಳಿಕೆ ಇನ್ನಷ್ಟು ಚರ್ಚೆಗೆ ಗ್ರಾಸವಾಯಿತು. ಕೇಂದ್ರ ಸರ್ಕಾರ ನೆರೆ ಪರಿಹಾರ ನೀಡಿಕೆಯಲ್ಲಿ ವಿಳಂಬ ಮಾಡುತ್ತಿದೆ ಎಂಬ ಅಸಮಾಧಾನದ ಜತೆಗೆ ಈ ವಿಚಾರವನ್ನೇ ಇಟ್ಟುಕೊಂಡು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದು, ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಲಾರಂಭಿಸಿತು.
ನೆರೆ ಸಂತ್ರಸ್ತರು ಹಾಗೂ ಸಾರ್ವಜನಿಕರು ರಾಜ್ಯದ ಕೇಂದ್ರ ಸಚಿವರು, ಸಂಸದರನ್ನು ಪ್ರಶ್ನಿಸಲಾರಂಭಿಸಿದರು. ಈ ಸಂದರ್ಭದಲ್ಲಿ ಕೆಲ ಕೇಂದ್ರ ಸಚಿವರು, ಸಂಸದರು ನೀಡಿದ ಹೇಳಿಕೆಗಳು ಇನ್ನಷ್ಟು ಅವಾಂತರ ಸೃಷ್ಟಿಸಿತು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಲಾರಂಭಿಸಿತು. ರಾಜ್ಯದ ಸಂಸದರು, ಕೇಂದ್ರ ಸಚಿವರು ಮಾತ್ರವಲ್ಲದೇ ಪ್ರಧಾನಿ, ಕೇಂದ್ರ ಗೃಹ ಸಚಿವರ ವಿರುದ್ಧವು ಸಂದೇಶಗಳು ಹರಿದಾಡಲಾರಂಭಿಸಿತು. ದಿನ ಕಳೆದಂತೆ ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸಚಿವರು, ಸಂಸದರು ಸಹ ಒತ್ತಡಕ್ಕೆ ಒಳಗಾದಂತಾಗಿದೆ ಕೇಂದ್ರ ನಾಯಕರಿಗೆ ಪರಿಹಾರಕ್ಕಾಗಿ ದುಂಬಾಲು ಬೀಳುವಂತಾಯಿತು.
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.