ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!
Team Udayavani, Sep 21, 2024, 5:05 PM IST
ಉದಯವಾಣಿ ಸಮಾಚಾರ
ಬೆಳಗಾವಿ: ದಟ್ಟ ಅರಣ್ಯ ಪ್ರದೇಶದಲ್ಲಿ ಮೈದುಂಬಿ ಹರಿಯುತ್ತಿರುವ ಕಳಸಾ ಬಂಡೂರಿ ನಾಲಾದಲ್ಲಿ ಕಳೆದ ಎರಡು ದಶಕಗಳಿಂದ ನೀರಿನ ಬದಲಾಗಿ ರಾಜಕಾರಣದ ಹರಿವೇ ಹೆಚ್ಚಾಗಿದೆ. ರಾಜಕೀಯ ಟೀಕೆಗಳಲ್ಲೇ ಇಡೀ ಯೋಜನೆಯ
ಕಾಲಹರಣವಾಗಿದೆ.
ಪ್ರತಿವರ್ಷ ಮಳೆಗಾಲದಲ್ಲಿ ಈ ನಾಲಾಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದರೂ ಸುದ್ದಿಯಾಗುವದಿಲ್ಲ. ಆದರೆ ಈ ನಾಲಾಗಳ ವಿಷಯದಲ್ಲಿ ನಡೆದಿರುವ ರಾಜಕಾರಣ ಮಾತ್ರ ಸದಾ ಸುದ್ದಿಯಾಗುತ್ತಲೇ ಇದೆ. ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಈಗ ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಕಳಸಾ ಬಂಡೂರಿ ರಾಜಕೀಯ ಸಂಘರ್ಷಕ್ಕೆ ಹೊಸ ಲೇಪನ ಹಚ್ಚಿದ್ದಾರೆ. ಮುಖ್ಯಮಂತ್ರಿಗಳ ಈ ಪತ್ರ ಮತ್ತು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಅವರಿಗೆ ಮಾಡಿರುವ ಒತ್ತಾಯ ನಿರೀಕ್ಷೆ ಮಾಡಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕದ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ನಿರ್ಣಾಯಕವಾಗಿರುವ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯು ದೀರ್ಘಕಾಲದಿಂದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ವನ್ಯಜೀವಿ ಅನುಮೋದನೆಗಾಗಿ ಕಾಯುತ್ತಿದೆ. ಮಹದಾಯಿ ನ್ಯಾಯಾಧಿಕರಣದಿಂದ ಕರ್ನಾಟಕಕ್ಕೆ ಒಟ್ಟು 13.42 ಟಿಎಂಸಿ ಹಂಚಿಕೆಯಾಗಿದೆ. ಕಳಸಾ ನಾಲಾದಿಂದ 1.72 ಟಿಎಂಸಿ ಮತ್ತು ಬಂಡೂರಿ ನಾಲಾದಿಂದ 2.18 ಟಿಎಂಸಿ ಹೀಗೆ ಒಟ್ಟು 3.9 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ತಿರುಗಿಸಲು ರಾಜ್ಯ ಸರ್ಕಾರವು 2022ರಲ್ಲಿ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ (ಲಿಫ್ಟ್ ಯೋಜನೆಗಳು) ಮಾರ್ಪಡಿಸಿದ ಪೂರ್ವ-ಕಾರ್ಯಸಾಧ್ಯತಾ ವರದಿಯನ್ನು ಅನುಮೋದನೆಗಾಗಿ ಸಲ್ಲಿಸಿದೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವೇದಿಕೆ ಸೃಷ್ಟಿಸಿದ ಸಿದ್ದು: ಮುಖ್ಯಮಂತ್ರಿಗಳ ಈ ಪತ್ರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಆರೋಪ,
ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿದೆ. ಯೋಜನೆಯ ನೆಪದಲ್ಲಿ ಸರ್ಕಾರಗಳನ್ನು ಟೀಕಿಸುವ ಕಾರ್ಯ ಆರಂಭವಾಗಿದೆ. ಉತ್ತರ
ಕರ್ನಾಟಕದ ಈ ಮಹತ್ವಾಕಾಂಕ್ಷಿ ಯೋಜನೆಯ ಸಮಸ್ಯೆ ಶಾಶ್ವತ ಪರಿಹಾರ ಕಾಣುವದರ ಬದಲು ರಾಜಕೀಯ ಟೀಕೆಗಳಿಗೆ ಆಹಾರವಾಗಿದೆ. ಇಡೀ ಯೋಜನೆಯನ್ನೇ ರಾಜಕೀಯ ದೃಷ್ಟಿಯಿಂದ ನೋಡುವಂತಾಗಿದೆ.
ಹಾಗೆ ನೋಡಿದರೆ ಕಳಸಾ ಬಂಡೂರಿ ಯೋಜನೆಯಲ್ಲಿ ನಿಜವಾದ ಫಲಾನುಭವಿಗಳು ಬೆಳಗಾವಿ, ಧಾರವಾಡ, ಗದಗ ಮತ್ತು
ಬಾಗಲಕೋಟೆ ಜಿಲ್ಲೆಗಳ ಜನರು ಮತ್ತು ವಿಶೇಷವಾಗಿ ರೈತ ಸಮುದಾಯ. ಆದರೆ ಈ ಯೋಜನೆಯಲ್ಲಿ ರಾಜಕೀಯ ನಾಯಕರು
ಫಲಾನುಭವಿಗಳಾಗಿದ್ದಾರೆ. ಕಳಸಾ ಬಂಡೂರಿ ಯೋಜನೆ ಮುಂದಿಟ್ಟುಕೊಂಡು ಎರಡೂ ಪಕ್ಷಗಳಿಂದ ಶಾಸಕರು ಆಯ್ಕೆಯಾಗಿದ್ದಾರೆ. ಕೆಲವರು ಸಚಿವರೂ ಆಗಿದ್ದಾರೆ. ಆದರೆ ಯೋಜನೆ ಮಾತ್ರ ಇನ್ನೂ ವಿವಾದದಲ್ಲೇ ಮುಂದುವರಿದಿದೆ.
ಚುನಾವಣೆ ಸಮೀಪ ಬಂದಾಗ ಅಥವಾ ಕಳಸಾ ಬಂಡೂರಿ ವಿಷಯ ಪ್ರಸ್ತಾಪವಾದಾಗಲೆಲ್ಲ ಉತ್ತರ ಕರ್ನಾಟಕದ ವಿಶೇಷವಾಗಿ ಮಹದಾಯಿ ಯೋಜನೆ ವ್ಯಾಪ್ತಿಯ ರಾಜಕಾರಣಿಗಳು ಎಚ್ಚರವಾಗುತ್ತಾರೆ. ಒಂದು ಹಂತಕ್ಕೆ ರೈತ ಸಂಘಟನೆಗಳು ಸಹ ಹೆಚ್ಚು ಜಾಗೃತವಾಗುತ್ತವೆ. ದುರ್ದೈವದ ಸಂಗತಿ ಎಂದರೆ ಈ ಜಾಗೃತಿಗೆ ಕಳಸಾ ಬಂಡೂರಿ ನಾಲಾ ನೀರನ್ನು ಮಲಪ್ರಭಾ ನದಿಗೆ ತಿರುಗಿಸಲು ಇನ್ನೂ ಸಾಧ್ಯವಾಗಿಲ್ಲ.
ಗೂಬೆ ಕೂರಿಸುವುದೇ ಕೆಲಸ: ಕಳೆದ 20 ವರ್ಷಗಳ ಅವಧಿಯಲ್ಲಿ ಈ ಯೋಜನೆಯ ವಿಷಯದಲ್ಲಿ ಸರ್ಕಾರಗಳ ಮೇಲೆ
ಒಬ್ಬರಿಗೊಬ್ಬರು ಗೂಬೆ ಕೂರಿಸುವದನ್ನು ಬಿಟ್ಟರೆ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಕರ್ನಾಟಕದಲ್ಲಿನ ಒಳಜಗಳ ಮತ್ತು ರಾಜಕೀಯ ಪ್ರತಿಷ್ಠೆ ನೆರೆಯ ಗೋವಾಕ್ಕೆ ಬಹಳಷ್ಟು ವರದಾನವಾಗಿದೆ ಎಂಬುದು ಸುಳ್ಳಲ್ಲ. ಕರ್ನಾಟಕದಲ್ಲಿನ ರಾಜಕೀಯ ಪ್ರತಿಷ್ಠೆಯ ಪರಿಣಾಮವಾಗಿ ಕೇವಲ ಇಬ್ಬರು ಸಂಸದರನ್ನು ಹೊಂದಿರುವ ಗೋವಾ ಇವತ್ತಿಗೂ ಮಹದಾಯಿ ವಿಷಯದಲ್ಲಿ ಕರ್ನಾಟಕದ ವಿರುದ್ಧ ಮೇಲುಗೈ ಸಾಧಿಸುತ್ತಲೇ ಬಂದಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಹದಾಯಿ ವಿಚಾರವಾಗಿ ನಾಲ್ಕೈದು ಬಾರಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆರಳಲು ನಿರ್ಧಾರ ಮಾಡಿದಾಗ ವಿಪಕ್ಷದಲ್ಲಿದ್ದ ಕಾಂಗ್ರೆಸ್ ನಿಂದ ನಿರೀಕ್ಷಿತ ಸಹಕಾರ ಸಿಗಲಿಲ್ಲ. ಇದರಿಂದ ಒಮ್ಮೆಯೂ ನಿಯೋಗ ತೆರಳಲಿಲ್ಲ. ಒಂದು ವೇಳೆ ಈಗ ಕಾಂಗ್ರೆಸ್ ಸರ್ಕಾರ ನಿಯೋಗ ಒಯ್ಯಲು ನಿರ್ಧಾರ ಮಾಡಿದರೆ ಅದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸಹಮತ ನೀಡುವದು ಅನುಮಾನ. ಕಳಸಾ ಬಂಡೂರಿ ಯೋಜನೆಯ ವಿಷಯದಲ್ಲಿ ಕರ್ನಾಟಕಕ್ಕೆ ಸೆಡ್ಡು ಹೊಡೆದಿರುವ ಗೋವಾ ಕೇಂದ್ರದ ಮೇಲೆ ಒತ್ತಡ ಹೇರಿ ಧಾರವಾಡದ ನರೇಂದ್ರ ವಿದ್ಯುತ್ ಕೇಂದ್ರದಿಂದ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿದೆ. ಇದಕ್ಕೆ ವಿರೋಧವಾಗಿ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ರಾಜ್ಯದ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುವದಕ್ಕೆ ಅನುಮತಿ ನೀಡಬಾರದು ಎಂಬ ಒತ್ತಾಯಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನಿರ್ಧಾರ ಬಹಳ ಮಹತ್ವ ಪಡೆದುಕೊಂಡಿದೆ.
ಪ್ರಧಾನಿಗೆ ಪತ್ರ ಬರೆಯುವದರಿಂದ ಏನು ಸಾಧನೆ ಮಾಡಿದಂತಾಗುತ್ತದೆ. ಪತ್ರ ಬರೆದು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬಿಡಬೇಕು. ಕಳಸಾ ಬಂಡೂರಿ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯುತ್ತೇನೆ. ನಂತರ ಕೇಂದ್ರಕ್ಕೆ ನಿಯೋಗ ಒಯ್ಯುವದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಇದುವರೆಗೆ ಸಭೆ ಕರೆದಿಲ್ಲ. ಇವರಿಗೆ ನಿಯೋಗ ಒಯ್ಯಬೇಡಿ ಎಂದು ಯಾರೂ ಹೇಳಿಲ್ಲ. ಅದರ ಬಗ್ಗೆ ವಿಚಾರ ಮಾಡುವದನ್ನು ಬಿಟ್ಟು ಪ್ರಧಾನಿಗೆ ಪತ್ರ ಬರೆದು ಟೀಕೆಗಳಿಗೆ ಆಸ್ಪದ ಮಾಡಿಕೊಟ್ಟಿದ್ದಾರೆ.
ಜಗದೀಶ ಶೆಟ್ಟರ್, ಬೆಳಗಾವಿ ಸಂಸದ
ಬಿಜೆಪಿ ಮತ್ತು ಕಾಂಗ್ರೆಸ್ ಇಬ್ಬರಿಗೂ ಈ ಯೋಜನೆ ಮಾಡಬೇಕು ಎಂಬ ಮನೋಭಾವ ಇಲ್ಲ. ಜನರ ಮೂಗಿಗೆ ತುಪ್ಪ ಹಚ್ಚುವಂತೆ ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ರೀತಿ ಪತ್ರ ಬರೆದರೆ ಏನೂ ಪ್ರಯೋಜನ ಇಲ್ಲ. ಪತ್ರ ಬರೆಯುವದರ ಬದಲು ಸಿದ್ದರಾಮಯ್ಯ ಅವರು ಗೋವಾ ಸರ್ಕಾರದವರು ವಿದ್ಯುತ್ ಮಾರ್ಗ ನಿರ್ಮಾಣ ಮಾಡಲು
ಕರ್ನಾಟಕದಲ್ಲಿ ಮರಗಳನ್ನು ಕಡಿಯುವದಕ್ಕೆ ಅವಕಾಶ ಮಾಡಿಕೊಡದೆ ಅದನ್ನು ವಿರೋಧಿಸಿ ಆದೇಶ ಮಾಡಲಿ.
ವಿಜಯ ಕುಲಕರ್ಣಿ,
ಮಹದಾಯಿ ಹೋರಾಟಗಾರ
■ ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.