ಗೊಂದಲದಲ್ಲಿ ಅತೃಪ್ತರು; ಬೇಗ್ ನಡೆ ನಿಗೂಢ
Team Udayavani, May 23, 2019, 6:00 AM IST
ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಕಾಂಗ್ರೆಸ್ ಶಾಸಕರು ಫಲಿತಾಂಶದ ನಂತರ ರಾಜೀನಾಮೆ ನೀಡಬೇಕೆ ಅಥವಾ ಬೇಡವೆ ಎನ್ನುವ ಕುರಿತು ಗೊಂದಲಕ್ಕೊಳಗಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.
ಬಂಡಾಯ ಶಾಸಕರ ನಾಯಕ ರಮೇಶ್ ಜಾರಕಿಹೊಳಿ ಮತಗಟ್ಟೆ ಸಮೀಕ್ಷೆ ಬಂದ ತಕ್ಷಣವೇ ಸಕ್ರಿಯರಾಗಿ ತಮ್ಮ ಆಪ್ತ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದಾರೆ. ಅಲ್ಲದೇ ಮೇ 24ರ ನಂತರ ಎಲ್ಲರೂ ಒಟ್ಟಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಚರ್ಚಿಸಲು ಒಟ್ಟುಗೂಡಿಸುವ ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ.
ಆದರೆ, ಮೇ 23ರಂದು ಲೋಕಸಭೆ ಫಲಿತಾಂಶ ಬಂದ ನಂತರ ರಾಜ್ಯ ರಾಜಕಾರಣದಲ್ಲಿ ಆಗುವ ಬೆಳವಣಿಗೆಗಳನ್ನು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಬಿ.ನಾಗೇಂದ್ರ, ಮಹೇಶ್ ಕುಮಠಳ್ಳಿ ಸೇರಿ ರಮೇಶ್ ಜಾರಕಿಹೊಳಿ ಆಪ್ತ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಮಾನ, ರಾಜಕಾರಣದಲ್ಲಿ ಅವರ ಅಧಿಕಾರ ಎಷ್ಟು ದಿನ ಇರುತ್ತದೆ. ಯಡಿಯೂರಪ್ಪ ಅವರ ಅಧಿಕಾರ ಮುಗಿದ ಮೇಲೆ ಬಿಜೆಪಿಯಲ್ಲಿ ತಮ್ಮ ರಾಜಕೀಯ ಭವಿಷ್ಯ ಏನು ಎನ್ನುವ ಕುರಿತಂತೆಯೂ ಅತೃಪ್ತ ಶಾಸಕರು ಲೆಕ್ಕ ಹಾಕುತ್ತಿದ್ದಾರೆ. ಅಲ್ಲದೇ ಈಗಾಗಲೇ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಉಮೇಶ್ ಜಾಧವ್ ಅವರು ಚುನಾವಣೆಯಲ್ಲಿ ಸೋತರೆ, ಪಕ್ಷದಲ್ಲಿ ಅವರನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಎನ್ನುವುದನ್ನೂ ಗಮನಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿಯೇ ಇರುವ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳಗಳಲ್ಲಿ ತಮ್ಮ ಆಪ್ತರನ್ನು ಭೇಟಿ ಮಾಡಿ ಮುಂದಿನ ನಡೆಯ ಬಗ್ಗೆ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಬುಧವಾರ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಸಂಜೆವರೆಗೂ ರಮೇಶ್ ಜಾರಕಿಹೊಳಿಗಾಗಿ ಅವರ ಸರ್ಕಾರಿ ನಿವಾಸದಲ್ಲಿ ಕಾದು ಕುಳಿತರೂ ರಮೇಶ್ ಆಗಮಿಸದೇ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಸಂಜೆವರೆಗೂ ಕಾದು ಕೃಷ್ಣಾ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ಆಗಮಿಸಿದ್ದೆ ಎಂದು ಮಹೇಶ್ ಕುಮಠಳ್ಳಿ ಹೇಳಿದರು.
ಚುನಾವಣೆ ಫಲಿತಾಂಶ ಬಂದ ನಂತರ ಕೇಂದ್ರದಲ್ಲಿನ ಬೆಳವಣಿಗೆ ನೋಡಿಕೊಂಡು ರಮೇಶ್ ಜಾರಕಿಹೊಳಿ ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷ ತೊರೆಯೋದು ಅನುಮಾನ?
ಇನ್ನೊಂದೆಡೆ ಪಕ್ಷದ ನಾಯಕರ ವಿರುದ್ಧ ಬಹಿರಂಗ ಆರೋಪ ಮಾಡಿರುವ ಮಾಜಿ ಸಚಿವ ರೋಷನ್ ಬೇಗ್ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಸಂಖ್ಯಾ ಬಲದ ದೃಷ್ಠಿಯಿಂದ ಬಿಜೆಪಿಗೆ ಅನುಕೂಲವಾಗಲಿದ್ದು, ಅವರ ನಡೆ ಇನ್ನೂ ನಿಗೂಢವಾಗಿದೆ. ಬುಧವಾರ ರೋಷನ್ ಬೇಗ್ ಅಜ್ಞಾತ ಸ್ಥಳಕ್ಕೆ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅವರ ಹೇಳಿಕೆಯನ್ನು ಕಾಂಗ್ರೆಸ್‌ನಲ್ಲಿ ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದ್ದು, ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ವಿರೋಧಿ ಬಣದ ಕೇಂದ್ರ ನಾಯಕರ ಸೂಚನೆಯ ಮೇರೆಗೆ ರೋಷನ್ ಬೇಗ್ ಆ ರೀತಿಯ ಹೇಳಿಕೆ ನೀಡಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಹೀಗಾಗಿ ರೋಷನ್ ಬೇಗ್ ಕಾಂಗ್ರೆಸ್ ಬಗ್ಗೆ ಗಂಭೀರ ಆರೋಪ ಮಾಡಿದರೂ. ಪಕ್ಷ ತೊರೆಯುತ್ತಾರೆ ಎನ್ನುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬೇಗ್ ಅವರದ್ದು ರಾಜಕೀಯ ದುರುದ್ದೇಶದ ಟೀಕೆ: ಎಚ್ಸಿಎಂ
ಮೈಸೂರು: ರಾಜಿ ಮಾಡಿಕೊಂಡು ಎಲ್ಲಿಗೆ ಬೇಕೋ ಅಲ್ಲಿಗೆ ಹೋಗುವವರಿಗೆ ಸಿದ್ದರಾಮಯ್ಯನವರು ದುರಹಂಕಾರಿಯಾಗಿ ಕಾಣುತ್ತಾರೆ. ಬುದ್ಧ-ಬಸವ- ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡ ನಮ್ಮಂತವರಿಗೆ ಸಿದ್ದರಾಮಯ್ಯನವರು ಪ್ರಜಾಪ್ರಭುತ್ವವಾದಿಯಾಗಿ ಕಾಣುತ್ತಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.
ಮಾಜಿ ಸಚಿವ ಆರ್.ರೋಷನ್ ಬೇಗ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ದುರುದ್ದೇಶದಿಂದ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದರು. ರೋಷನ್ ಬೇಗ್ ಮನಸ್ಸಿನಲ್ಲಿ ಏನಿದೆ ಎಂದು ಅವರನ್ನೇ ಕೇಳಬೇಕು. ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತೆ ಎಂಬುದು ಗೊತ್ತಾಗಲ್ಲ. ಯಾರು ಎಲ್ಲಿ ಹೋಗುತ್ತಾರೆ ಎಂದು ತಿಳಿಯುವುದಿಲ್ಲ ಎಂದರು.
ರಿಜ್ವಾನ್ ದೂರು
ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ರೋಷನ್ ಬೇಗ್ ವಿರುದ್ಧ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ರೋಷನ್‌ಬೇಗ್, ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರೊಂದಿಗೆ ಸೇರಿಕೊಂಡು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿಯೇ ರೋಷನ್ ಬೇಗ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿ ದ್ದನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ. ಅವರು ನನ್ನ ವಿರುದ್ಧ ಕೆಲಸ ಮಾಡಿದರೂ, ಶಿವಾಜಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರು ನನ್ನ ಪರವಾಗಿ ಕೆಲಸ ಮಾಡಿ, ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ರೋಷನ್ ಬೇಗ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
CIDಗೆ ಹೆಬ್ಬಾಳ್ಕರ್ ಮಾಹಿತಿ: ಶೀಘ್ರ ಸಿ.ಟಿ. ರವಿ ವಿಚಾರಣೆ?
Congress; ಪರಿಷತ್ ನಾಮನಿರ್ದೇಶನಕ್ಕೆ ಆಕಾಂಕ್ಷಿಗಳಿಂದ ಲಾಬಿ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.