ಗೊಂದಲಕ್ಕೆ ಆಸ್ಪದ ಬೇಡ, ನಿರ್ಧಾರ ಬೇಗ ತೆಗೆದುಕೊಳ್ಳಿ
Team Udayavani, Jun 1, 2021, 3:19 AM IST
ರಾಜ್ಯಾದ್ಯಂತ ಕಾಡುತ್ತಿರುವ ಕೊರೊನಾದಿಂದಾಗಿ ಎಲ್ಲ ಚಟುವಟಿಕೆಗಳು ಬಂದ್ ಆಗಿರುವುದಷ್ಟೇ. ವಾಣಿಜ್ಯ ಚಟುವಟಿಕೆಗಳಾದರೂ ಕೊಂಚ ಸಮಯವಾದ ಒಪನ್ ಆಗಿದ್ದವು. ಆದರೆ ಕೊರೊನಾ ಆರಂಭವಾದಾಗಿನಿಂದಲೂ ಹೆಚ್ಚು ಹೊಡೆತ ತಿಂದಿರುವುದು ಶೈಕ್ಷಣಿಕ ಕ್ಷೇತ್ರ. ಕಳೆದ ವರ್ಷದ ಮಾರ್ಚ್ ಅಂತ್ಯದಿಂದ ಹಿಡಿದು, ಇಲ್ಲಿವರೆಗೂ ಬರೀ ಗೊಂದಲದಲ್ಲೇ ಈ ವಲಯ ಮುಳುಗಿದೆ.
ಶೈಕ್ಷಣಿಕ ಆರಂಭದ ದಿನಗಳಲ್ಲಿ ಶಾಲಾರಂಭದ ಬಗ್ಗೆ ಗೊಂದಲಗಳಿದ್ದರೆ, ಪರೀಕ್ಷಾ ಋತು ಬಂದರೆ ಸಾಕು ಬೇಕೋ ಅಥವಾ ಬೇಡವೋ ಎಂಬ ಚರ್ಚೆಗಳು ಶುರುವಾಗುತ್ತವೆ. ಈ ಬಾರಿಯಂತೂ ಎರಡನೇ ಅಲೆ ಕಳೆದ ಬಾರಿಗಿಂತಲೂ ಹೆಚ್ಚು ಕಾಡಿದ್ದು, ಸಾವು ನೋವೂ ಹೆಚ್ಚಾಗಿದೆ. ಇದನ್ನು ಮನಗಂಡೇ ಈಗಾಗಲೇ ಕೆಲವು ರಾಜ್ಯಗಳು ಮತ್ತು ಸಿಬಿಎಸ್‌ಇ ಮತ್ತು ಐಸಿಎಸ್‌ಇಗಳು 10ನೇ ತರಗತಿ ಪರೀಕ್ಷೆಯನ್ನೇ ರದ್ದು ಮಾಡಿವೆ. ಈಗ 12ನೇ ತರಗತಿ ಪರೀಕ್ಷೆ ರದ್ದು ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆಯಲ್ಲಿ ತೊಡಗಿವೆ. ಈ ಬಗ್ಗೆ ಸುಪ್ರೀಂಕೋರ್ಟ್ ಕೂಡ ವಿಚಾರಣೆ ನಡೆಸುತ್ತಿದೆ.
ಇವೆಲ್ಲದರ ಮಧ್ಯೆ, ಉದಯವಾಣಿ ನಡೆಸಿದ ಮೆಗಾ ಸರ್ವೆಯಲ್ಲಿ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಲು ಸಿದ್ಧವಾಗಿರುವುದು ಬಹಿರಂಗಗೊಂಡಿದೆ. ಆದರೆ ಇಲ್ಲಿ ವಿದ್ಯಾರ್ಥಿಗಳು ಮತ್ತು ಹೆತ್ತವರು ಪ್ರಶ್ನೆ ಇರುವುದು ಗೊಂದಲಗಳ ಬಗ್ಗೆ. ದಯಮಾಡಿ ಯಾವುದೇ ಕಾರಣಕ್ಕೆ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿ ಅವರಲ್ಲಿ ಒತ್ತಡ ಹೆಚ್ಚಿಸಬೇಡಿ. ಒಂದು ಪರೀಕ್ಷೆ ಮಾಡುವುದಾದರೆ ಮಾಡಿ, ಇಲ್ಲವೇ ರದ್ದು ಮಾಡಿ ಬಿಡಿ ಎಂದು ಹೇಳಿದ್ದಾರೆ. ಹೆತ್ತವರುೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಲು ಸಿದ್ಧ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ಹೀಗಾಗಿ ರಾಜ್ಯ ಸರಕಾರ ಕೊರೊನಾ ಕಡಿಮೆಯಾದ ಮೇಲೆ ಪರೀಕ್ಷೆ ನಡೆಸುವುದಾದರೆ ನಡೆಸಲಿ. ಆದರೆ ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಿ. ಕಳೆದ ಬಾರಿಯೂ ದೇಶದ ಹಲವಾರು ರಾಜ್ಯಗಳು 10 ಮತ್ತು 12ನೇ ತರಗತಿ ಪರೀಕ್ಷೆ ರದ್ದು ಮಾಡಿದ್ದವು. ಆದರೆ ರಾಜ್ಯ ಸರಕಾರ ಮಾತ್ರ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡದೇ ಯಶಸ್ವಿಯಾಗಿ ನಡೆಸಿತ್ತು. ಈ ಮೂಲಕ ದೇಶದಲ್ಲೇ ಪ್ರಶಂಸೆಗೂ ಪಾತ್ರವಾಗಿತ್ತು.
ಅದೇ ರೀತಿಯಲ್ಲಿ ಈ ಬಾರಿಯೂ ಪರೀಕ್ಷೆ ನಡೆಸಲಿ. ಆದರೆ ಇಲ್ಲಿ ಕೆಲವೊಂದು ಅಂಶಗಳಿವೆ. ಉದಯವಾಣಿ ಸಮೀಕ್ಷೆಯಲ್ಲಿ ಕಂಡುಕೊಂಡ ಹಾಗೆ, ವರ್ಷವಿಡೀ ನಡೆದ ಆನ್ ಲೈನ್ ತರಗತಿಗಳು ಮಕ್ಕಳಿಗೆ ಅರ್ಥವಾಗಿಲ್ಲ. ಶಿಕ್ಷಕರೂ ಸಿಲಬಸ್ ಮುಗಿಸಿದ್ದೇವೆ ಎಂದು ಹೇಳಿದ್ದಾರೆಯೇ ಹೊರತು, ಭೌತಿಕ ತರಗತಿಯಷ್ಟು ಆನ್ ಲೈನ್ ತರಗತಿ ಪರಿಣಾಮಕಾರಿಯಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಡಿಮೆ ಅಂಕದ, ಸುಲಭವಾಗಿರುವಂಥ ಪ್ರಶ್ನೆಗಳುಳ್ಳ, ಕಡಿಮೆ ಅವಧಿಯ, ಪ್ರಮುಖ ವಿಷಯಗಳ ಮೇಲೆ ಪರೀಕ್ಷೆ ನಡೆಸುವುದು ಒಳಿತು. ಇದರಿಂದ ಮಕ್ಕಳ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ, ಹಾಗೆಯೇ ಪರೀಕ್ಷೆ ಮೇಲಿನ ಮಕ್ಕಳ ಭಯವೂ ಹೋಗುತ್ತದೆ.
ಏನೇ ಆಗಲಿ ಸರಕಾರ ಈ ಬಗ್ಗೆ ಬೇಗನೇ ನಿರ್ಧಾರ ತೆಗೆದುಕೊಳ್ಳಲಿ ಎಂಬುದು ರಾಜ್ಯದ ಜನರ ಆಗ್ರಹ. ಇತ್ತ ಸರಕಾರ ಗಮನ ಹರಿಸುವುದು ಒಳಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.