ನಮ್ಮೂರಿಗೆ ಸದ್ಯಕ್ಕೆ ಬಸ್ ಬಿಡಬೇಡಿ!
Team Udayavani, May 28, 2020, 6:00 AM IST
ಬೆಂಗಳೂರು: ಸಾಮಾನ್ಯವಾಗಿ ತಮ್ಮ ಊರುಗಳಿಗೆ ಬಸ್ ಕೊಡುವಂತೆ ಸಾರಿಗೆ ಸಂಸ್ಥೆಗಳಿಗೆ ಸ್ಥಳೀಯರು ದುಂಬಾಲು ಬೀಳುವುದು ರೂಢಿ. ಆದರೆ, ಈಗ “ಸದ್ಯಕ್ಕೆ ನಮ್ಮೂರಿಗೆ ಬಸ್ ಬೇಡ’ ಎಂದು ಗ್ರಾಮಸ್ಥರು ಕರೆ ಮಾಡುತ್ತಿದ್ದಾರೆ. – ಇದು ಕೊರೊನಾ ವೈರಸ್ ಕರಾಮತ್ತು. ಈ ರೀತಿಯ ಕರೆಗಳು ಬರುತ್ತಿರುವುದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಚೇರಿಗೆ!.
ಬೆಂಗಳೂರು ಮುಖ್ಯವಾಗಿ ಕೆಂಪು ವಲಯದಲ್ಲಿದೆ. ಅದರಲ್ಲೂ ಕೆಲವು ವಾರ್ಡ್ ಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿವೆ. ಇದಲ್ಲದೆ ಸಂಸ್ಥೆಯಲ್ಲಿ ಕಾರ್ಯನಿರ್ವ ಹಿಸುವ ಬಹುತೇಕ ಚಾಲನಾ ಸಿಬ್ಬಂದಿ ಹೊರ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಈ ಮಧ್ಯೆ ಇತ್ತೀಚೆಗೆ ತುಮಕೂರು ಮೂಲದ ಕೆಎಸ್‌ಆರ್‌ಟಿಸಿಯ ಮಾಗಡಿ ಘಟಕದ ಚಾಲಕರೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಹತ್ತಾರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಎಲ್ಲ ಕಾರಣಗಳಿಂದ ಆತಂಕಗೊಂಡ ಕೆಲವರು “ತಮ್ಮ ಹಳ್ಳಿಗಳಲ್ಲಿ ಬಸ್ ಮತ್ತು ಅದರ ಸಿಬ್ಬಂದಿ ವಾಸ್ತವ್ಯ ಹೂಡುವುದೇ ಬೇಡ’ ಎಂದು ಹೇಳುತ್ತಿದ್ದಾರೆ.
ಬಿಎಂಟಿಸಿಯಂತಹ ಬಸ್ ಸೇವೆ ಅತ್ಯಗತ್ಯ. ಆದರೆ, ಸದ್ಯದ ಸ್ಥಿತಿ ಭಿನ್ನವಾಗಿದೆ. ಆದ್ದರಿಂದ ಇನ್ನೂ ಹತ್ತು- ಹದಿನೈದು ದಿನ ರಾತ್ರಿ ಬಸ್ ಸೇವೆ ಕಲ್ಪಿಸುವುದು ಬೇಡ. ತುಂಬಾ ತುರ್ತು ಅಗತ್ಯಬಿದ್ದರೆ, ಖಾಸಗಿ ವಾಹನಗಳಿವೆ. ಅವುಗಳಿಂದಲೇ ಸದ್ಯಕ್ಕೆ ಪರಿಸ್ಥಿತಿ ನಿಭಾಯಿಸುತ್ತೇವೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಕರೆ ಮಾಡಿ ಮನವಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆದರೆ, ಈ ರೀತಿಯ ಕರೆಗಳು ಬೆರಳೆಣಿಕೆಯಷ್ಟು ಮಾತ್ರ ಎಂದು ಸಂಸ್ಥೆಯ ಹೆಸರು ಹೇಳಲಿಚ್ಛಿಸದ ಅಧಿಕಾರಿ ಯೊಬ್ಬರು ‘ಉದಯವಾಣಿ’ಗೆ ಮಾಹಿತಿ ನೀಡಿದರು.
ಸಿಬ್ಬಂದಿಯಲ್ಲೂ ಆತಂಕ: ಜನರಿಗೆ ಮಾತ್ರವಲ್ಲ, ಚಾಲನಾ ಸಿಬ್ಬಂದಿಯಲ್ಲೂ ಆತಂಕ ಮನೆಮಾಡಿದೆ. ಈ ಮೊದಲು ಶಾಲೆ, ಪಂಚಾಯ್ತಿ ಕಟ್ಟೆಗಳಲ್ಲಿ ಮಲಗಲು ಜನ ಅವಕಾಶ ನೀಡಿ ಊಟದ ವ್ಯವಸ್ಥೆ ಮಾಡುತ್ತಿದ್ದರು. ಅಷ್ಟರಮಟ್ಟಿಗೆ ಆತ್ಮೀಯತೆ ಇತ್ತು. ಆದರೆ, ಈಗ ಅದೇ ಜನ ತಮ್ಮನ್ನು ಅನುಮಾನದಿಂದ ನೋಡುವ ಸ್ಥಿತಿ ಎದು ರಾಗಿದೆ. ಇದು ತುಸು ಕಸಿವಿಸಿ ಉಂಟುಮಾಡುವುದರ ಜತೆಗೆ ನಮ್ಮ ಮನಸ್ಸಲ್ಲೂ ಅನುಮಾನದ ಬೀಜ ಬಿತ್ತುತ್ತಿದೆ ಎಂದು ಚಂದಾಪುರ ಮಾರ್ಗದ ಚಾಲಕರೊಬ್ಬರು ಅಲವತ್ತುಕೊಂಡರು.
ಬಸ್ಸಿಗೆ ಬೇಡಿಕೆಗಳೂ ಹೆಚ್ಚಿವೆ; ಅಧಿಕಾರಿ: “ಬೆಂಗಳೂರಾದ್ಯಂತ ಸುತ್ತಾಡಿ ಬಂದಿರುತ್ತಾರೆ. ಅದರಲ್ಲೂ ಯಾವುದೇ ಲಕ್ಷಣ ಇಲ್ಲದವರಲ್ಲೂ ಸೋಂಕು ಕಾಣಿಸಿ ಕೊಳ್ಳುತ್ತಿದೆ. ಹೀಗಾಗಿ ಆತಂಕಕ್ಕೊಳಗಾದ ಕೆಲವರು ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇದಕ್ಕಿಂತ 3-4 ಪಟ್ಟು ಕರೆಗಳು’ ತಮ್ಮೂರಿಗೆ ಬಸ್ ಸೇವೆ ಕಲ್ಪಿಸುವಂತೆ’ ಬರುತ್ತಿವೆ ಎಂದೂ ಸಂಚಾರ ವಿಭಾಗದ ಅಧಿಕಾರಿ ಯೊಬ್ಬರು ಸ್ಪಷ್ಟಪಡಿಸಿದರು. ಕಳೆದೆರಡು ದಿನಗಳಿಂದ ರಾತ್ರಿಪಾಳಿಯಲ್ಲಿ ಬಸ್ ಕಾರ್ಯಾಚರಣೆ ಮಾಡುತ್ತಿವೆ. ಆದರೆ, ಅವೆಲ್ಲವೂ ಮುಖ್ಯರಸ್ತೆಗೆ ಬಂದು ನಿಲ್ಲುತ್ತಿವೆ. ಹಳ್ಳಿಗಳ ಒಳಗೆ ಪ್ರವೇಶಿಸುತ್ತಿಲ್ಲ. ಪರಿಣಾಮ ಕೆಲಸ ಮುಗಿಸಿ ಹಳ್ಳಿಗಳಿಗೆ ವಾಪಸ್ಸಾಗುವ ಉದ್ಯೋಗಿಗಳಿಗೆ ತೀವ್ರ ಸಮಸ್ಯೆ ಆಗುತ್ತಿದೆ ಎಂಬ ಅಸಮಾಧಾನವೂ ಕೇಳಿಬರುತ್ತಿದೆ.
ರಿಯಾಯ್ತಿ ಪಾಸು: ಬರುವ ತಿಂಗಳಿಂದ ಬಿಎಂಟಿಸಿ, ಪ್ರಯಾ ಣಿಕರ ಅನುಕೂಲಕ್ಕಾಗಿ ರಿಯಾಯ್ತಿ ದರ ದಲ್ಲಿ ಪಾಸು ವಿತರಣೆ ಮಾಡಲು ನಿರ್ಧರಿ ಸಿದೆ. ಸಾಮಾನ್ಯ ಬಸ್ ಗಳಲ್ಲಿ ಕೇವಲ 1,050 ರೂ.ಗೆ ಮಾಸಿಕ ಪಾಸು ವಿತರಣೆ ಮಾಡಲಾಗುತ್ತಿದೆ. ಇದನ್ನು ಹೊಂದಿದವರು ಇಡೀ ತಿಂಗಳು ಅನಿಯಮಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಬಹುದು. ಮೇ 29ರಿಂದ ಪಾಸುಗಳನ್ನು ವಿತರಿಸಲಾಗುವುದು. ಬಿಎಂಟಿಸಿ, ಪ್ರಮುಖ ನಿಲ್ದಾಣಗಳು ಒಳಗೊಂಡಂತೆ 65 ಸ್ಥಳಗಳಲ್ಲಿ ಪ್ರಯಾಣಿಕರು ಈ ಪಾಸುಗಳನ್ನು ಪಡೆಯಬಹುದು. ಅಲ್ಲದೆ, ನಗರದ ಎಲ್ಲ 200 ‘ಬೆಂಗಳೂರು ಒನ್’ ಕೇಂದ್ರಗಳು ಹಾಗೂ 11 ಕಡೆ ಖಾಸಗಿ ಏಜೆನ್ಸಿಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.