ವಿಧಾನಸಭೆ ಚುನಾವಣೆ ಬಗ್ಗೆ ಆತುರವಿಲ್ಲ
Team Udayavani, Nov 6, 2019, 3:06 AM IST
ಬೆಂಗಳೂರು: “ಜೆಡಿಎಸ್ ಪಕ್ಷಕ್ಕೆ ವಿಧಾನಸಭೆ ಚುನಾವಣೆ ಈಗಲೇ ಆಗಬೇಕೆಂಬ ಆತುರವಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಚುನಾವಣೆ ಬೇಕಿರಬಹುದು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮಗೆ ಪಕ್ಷ ಗಟ್ಟಿಗೊಳಿಸಿಕೊಳ್ಳಬೇಕಿದೆ. ಯಡಿಯೂರಪ್ಪ ಸರ್ಕಾರ ನಾಳೇನೇ ಬೀಳಲಿ ಎಂದು ನಾನು ಕಾದು ಕುಳಿತಿಲ್ಲ,3 ವರ್ಷ ಆಳಿಕೊಳ್ಳಲಿ. ಇದಕ್ಕೆ ಬೇರೆ ಬೇರೆ ವ್ಯಾಖ್ಯಾನ ಬೇಡ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ ಗೌಡರು, ಸಿದ್ದರಾಮಯ್ಯನವರಿಗೆ ಚುನಾವಣೆ ಬೇಕೇನೋ, ಅವರು ಪ್ರತಿಪಕ್ಷ ನಾಯಕರಾಗಿದ್ದಾರೆ, ಸಿಎಂ ಆಗಲು ಹೊರಟಿರಬೇಕು. ಅವರು ಅಹಿಂದ ನಾಯಕರು, ನಮಗೆ ಯಾವ ಹಿಂದವೂ ಗೊತ್ತಿಲ್ಲ. ನಮಗೆ 224 ಕ್ಷೇತ್ರಗಳಲ್ಲೂ ಅಭ್ಯರ್ಥಿ ಹಾಕಲು ಯೋಗ್ಯತೆ ಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಬಗ್ಗೆ ಜೆಡಿಎಸ್ ಸಾಫ್ಟ್ ಕಾರ್ನರ್ ತೋರಿಸುತ್ತಿಲ್ಲ. ಕಾಂಗ್ರೆಸ್ ಬಗ್ಗೆಯೂ ಇಲ್ಲ. ನಾವು ನೇರವಾಗಿ ಚುನಾವಣೆ ಎದುರಿಸುತ್ತೇವೆ. ಉಪ ಚುನಾವಣೆಯಲ್ಲಿ ಎಲ್ಲ ಕಡೆ ಅಭ್ಯರ್ಥಿ ಹಾಕಬೇಕು ಎಂಬುದು ಕುಮಾರಸ್ವಾಮಿಯವರ ನಿರ್ಧಾರ. ಒಂದೊಮ್ಮೆ ಆಗದಿದ್ದರೂ ಶಕ್ತಿ ಇರುವ ಕಡೆ ಮಾತ್ರ ಹಾಕಿ ಹೋರಾಟ ಮಾಡುತ್ತೇವೆ. ಯಾರೊಂದಿಗೆ ಮೈತ್ರಿ ಇಲ್ಲವೇ ಇಲ್ಲ ಎಂದು ತಿಳಿಸಿದರು.
ಬಿಎಸ್‌ವೈ ವಿರುದ್ಧ ಗರಂ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾನೂನಿಗೆ ಬೆಲೆ ಕೊಡುತ್ತಿಲ್ಲ. ಮಂಡ್ಯ ಜಿಲ್ಲೆ ಕೆ.ಆರ್.ನಗರದಲ್ಲಿ ಜೆಲ್ಲಿ ಕ್ರಶರ್ ವಿಚಾರದಲ್ಲಿ ರೈತರೊಬ್ಬರ ಪರ ಹೈಕೋರ್ಟ್ ತೀರ್ಪು ಬಂದರೂ ಪಾಲನೆಯಾಗಿಲ್ಲ. ಆಲ್ಲಿನ ಜಿಲ್ಲಾಧಿಕಾರಿ ಮುಖ್ಯಮಂತ್ರಿಯೇ ಹೇಳಬೇಕು ಎಂದು ಹೇಳುತ್ತಾರೆ. ಮುಖ್ಯ ಕಾರ್ಯದರ್ಶಿ ಮಾತಿಗೂ ಬೆಲೆ ಇಲ್ಲ. ಇದು ಯಡಿಯೂರಪ್ಪ ಅವರು ರಾಜಕಾರಣದ ಪರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳುತ್ತಲೇ ಯಾದಗಿರಿ, ಕಲಬುರಗಿಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ದಮನ ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಯೊಬ್ಬ ಬಾಯಲ್ಲಿ ಬಂದೂಕು ತುರುಕಿ ಹಿಂಸೆ ಕೊಟ್ಟಿದ್ದಾನೆ. ಯಡಿಯೂರಪ್ಪ ಮೊಳೆ ಹೊಡೆದುಕೊಂಡು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರಾ? ನಾನು ನೋಡ್ತೇನೆ. ಇದೆಲ್ಲವನ್ನೂ ಖಂಡಿಸಿ ನ.15ರಂದು ನಾನು ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ಮಾಡಲಿದ್ದೇನೆ ಎಂದರು.
ವಿಧಾನಪರಿಷತ್ ಸದಸ್ಯರ ಜತೆ ಎಚ್.ಡಿ.ಕುಮಾರಸ್ವಾಮಿ ಸಭೆ ವಿಚಾರದಲ್ಲಿ ಗೊಂದಲ ಬೇಡ. ಖಾಸಗಿ ಕೆಲಸಕ್ಕಾಗಿ ಕುಮಾರಸ್ವಾಮಿ ಲಂಡನ್‌ಗೆ ಹೋಗಿದ್ದು ನ.9 ಅಥವಾ 10 ರಂದು ಸಭೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ದೇವೇಗೌಡರು, ನಾನೂ ಈ ಬಗ್ಗೆ ಪ್ರಧಾನಿ ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೆ. ಸೂಕ್ತ ನಿರ್ಧಾರ ಕೈಗೊಂಡಿದ್ದು ರೈತಾಪಿ ಸಮುದಾಯ ಪರ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕೈ, ಕಮಲದ ಜತೆ ಒಳ ಒಪ್ಪಂದ ಇಲ್ಲ: 14 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಎಲ್ಲ ಕಡೆ ಅಭ್ಯರ್ಥಿಗಳನ್ನು ಹಾಕಿಲ್ಲ. ಆದರೆ, ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಯಾವುದೇ ರೀತಿಯ ಒಳ-ಹೊರ ಒಪ್ಪಂದ ಇಲ್ಲ ಎಂದು ಮಾಜಿ ಪಿಎಂ ಎಚ್.ಡಿ. ದೇವೇಗೌಡರು ಹೇಳಿದ್ದಾರೆ. ಮಂಗಳೂರು ಹಾಗೂ ದಾವಣಗೆರೆ ಮಹಾನಗರ ಪಾಲಿಕೆಗಳಲ್ಲಿ 15 ಕಡೆ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಕನಕಪುರದಲ್ಲಿ ನಾಲ್ಕು ಕಡೆ ಮಾತ್ರ ಸ್ಪರ್ಧೆ ಮಾಡಿದ್ದೇವೆ. ನಮ್ಮ ಶಕ್ತಿ ಇರುವ ಕಡೆ ಸ್ಪರ್ಧೆ ಮಾಡಿದ್ದೇವೆ. ಗೆಲುವಿಗಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಫಲಿತಾಂಶದ ನಂತರವೂ ಅತಂತ್ರ ಸ್ಥಿತಿ ಏರ್ಪಟ್ಟರೆ ನಾವು ಪ್ರತಿಪಕ್ಷ ಸ್ಥಾನದಲ್ಲೇ ಕುಳಿತು ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧವೇ ನಮ್ಮ ಹೋರಾಟ. ಎರಡೂ ಪಕ್ಷಗಳ ಜತೆ ಸರ್ಕಾರ ಮಾಡಿ ಅನುಭವಿಸಿದ್ದು ಸಾಕು ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.