ಡಾ| ಬಲ್ಲಾಳರ ಉದ್ಯೋಗ ಪರ್ವದ ಸುವರ್ಣ ಸಂಭ್ರಮ
Team Udayavani, Jun 29, 2021, 6:40 AM IST
ಮಣಿಪಾಲದ ಮಾಹೆ ವಿಶ್ವವಿದ್ಯಾ ನಿಲಯದ ಸಹಕುಲಾಧಿಪತಿ ಹೆಬ್ರಿಬೀಡು ಡಾ| ಸುಭಾಸ್‌ಕೃಷ್ಣ ಬಲ್ಲಾಳ್ ಮಾಹೆ ಯಲ್ಲಿ ಸತತ 50 ವರ್ಷಗಳ ಕಾಲ ಸೇವೆಯನ್ನು ಪೂರೈಸಿದ್ದಾರೆ. ಒಂದೇ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಮುಂದೆ ಆಡಳಿತಗಾರನಾಗಿ ಅವಿಚ್ಛಿನ್ನವಾಗಿ 50 ವರ್ಷ ಕರ್ತವ್ಯ ನಿರ್ವಹಿಸಿ ಉನ್ನತ ಸ್ಥಾನಕ್ಕೆ ಏರಿರುವ ಅಪರೂಪದ ವ್ಯಕ್ತಿ ಡಾ| ಬಲ್ಲಾಳ್ ಅವರು.
ಹೆಬ್ರಿ ಬೀಡಿನ ಪ್ರಪುಲ್ಲಾ ಹೆಗ್ಡೆ ಮತ್ತು ಬೇಳಂಜೆ ಸಂಜೀವ ಹೆಗ್ಡೆಯವರ ಐವರು ಪುತ್ರರಲ್ಲಿ ಡಾ| ಎಚ್.ಎಸ್. ಬಲ್ಲಾಳ್ ಹಿರಿಯರು. ಎಲ್ಲ ಸಹೋದರರೂ ವೈದ್ಯರು. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮಾಧ್ಯಮಿಕ, ಎಂಜಿಎಂನಲ್ಲಿ ಪಿಯುಸಿ, ಮೈಸೂರಿನ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿ, ಬೆಂಗಳೂರಿನ ವೈದ್ಯಕೀಯ ಕಾಲೇಜಿನಿಂದ ರೇಡಿ ಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಂದೆ ಅಮೆರಿಕದ ಮುಸೊರಿಯಲ್ಲಿರುವ ಸೈಂಟ್ ಲೂವಿಸ್ ವಿ.ವಿ.ಯಲ್ಲಿ ಆಲ್ಟ್ರಾ ಸೌಂಡ್ ಮತ್ತು ಸಿ.ಟಿ.ಸ್ಕ್ಯಾನ್‌ನಲ್ಲಿ ವಿಸ್ತೃತ ಜ್ಞಾನ ಗಳಿಸಿದರು.
ಕಾಲೇಜಿನ ದಿನಗಳಲ್ಲಿ ಡಾ| ಬಲ್ಲಾಳ್ ಅವರು ಮೈಸೂರು ವಿ.ವಿ. ಟೆನಿಸ್ ತಂಡದ ನಾಯಕರಾಗಿದ್ದರು. ಬೆಂಗಳೂರು ಮತ್ತು ಮೈಸೂರು ಮೆಡಿಕಲ್ ಕಾಲೇಜಿನ ಕ್ರಿಕೆಟ್ ಆಟಗಾರರಾಗಿದ್ದರು. 80ರ ಹರೆಯದ ಅವರು ಈಗಲೂ ಟೆನಿಸ್ ಆಡುತ್ತಾರೆ.
1971ರಲ್ಲಿ ಮಂಗಳೂರಿನ ಕೆಎಂಸಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ, ಮುಂದೆ ವಿಭಾಗ ಮುಖ್ಯಸ್ಥರಾಗಿ, ಅಸೋಸಿಯೇಟ್ ಡೀನ್ ಮತ್ತು ಡೀನ್ ಆಗಿ ಪದೋನ್ನತಿ ಪಡೆದರು. ಅನಂತರ ಮಣಿಪಾಲ ಮಾಹೆ ಕುಲಪತಿಯಾಗಿ 2003ರಲ್ಲಿ ಅಧಿಕಾರ ಸ್ವೀಕರಿಸಿದರು. 2007ರಲ್ಲಿ ಪ್ರಥಮ ಸಹಕುಲಾಧಿಪತಿಯಾದರು.
ಇಂದು 57 ದೇಶಗಳ 34,000 ವಿದ್ಯಾರ್ಥಿಗಳು, 11,000 ಉದ್ಯೋಗಿ ಗಳು, 5,000 ಆಸ್ಪತ್ರೆ ಬೆಡ್‌ಗಳು, 300 ಕ್ಕೂ ಹೆಚ್ಚು ವಿಷಯಗಳಲ್ಲಿ ಡಿಪ್ಲೊಮಾ, ಸ್ನಾತಕ, ಸ್ನಾತಕೋತ್ತರ ಮತ್ತು ಪಿಎಚ್.ಡಿ. ಪದವಿ ನೀಡುವ ಬೃಹತ್ ಸಂಸ್ಥೆಯನ್ನು ಡಾ| ಬಲ್ಲಾಳರು ಡಾ| ರಾಮದಾಸ ಪೈ ಅವರ ಮಾರ್ಗದರ್ಶನದಲ್ಲಿ ಮುನ್ನಡೆ ಸುತ್ತಿದ್ದಾರೆ. 2017ರಲ್ಲಿ ಮಣಿಪಾಲ ವಿ.ವಿ. ಭಾರತ ಸರಕಾರದಿಂದ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಎಂಬ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗಿದೆ. ಇವರ ಆಡಳಿತಾವಧಿಯಲ್ಲಿ ಮಾಹೆ ಅನೇಕ ಸಾಧನೆಗಳನ್ನು, ವಿವಿಧ ಕ್ಯಾಂಪಸ್‌ಗಳಲ್ಲಿ ವಿಸ್ತರಣೆಯನ್ನೂ ಕಂಡಿದೆ. ಹಸುರೀಕರಣದ ಸಾಧನೆಗಳಿಂದ “ಗ್ರೀನ್ ಕ್ಯಾಂಪಸ್’ ಎಂದು ಘೋಷಿಸಲ್ಪಟ್ಟಿದೆ. ಡಾ| ಟಿ.ಎಂ.ಎ ಪೈಯವರಿಂದ ಸ್ಥಾಪಿಸಲ್ಪಟ್ಟ 30 ವಿದ್ಯಾಸಂಸ್ಥೆಗಳನ್ನು ಹೊಂದಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ್‌ನ ಅಧ್ಯಕ್ಷರಾಗಿದ್ದಾರೆ.
ಡಾ|ಎಚ್.ಎಸ್. ಬಲ್ಲಾಳ್ ಅವರು ಭಾರತೀಯ ವೈದ್ಯಕೀಯ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿದ್ದರು. ಎಫ್ಐಸಿಸಿಐ ಉನ್ನತ ಶಿಕ್ಷಣ ಸಮಿತಿಯ ಅಧ್ಯಕ್ಷರೂ ಭಾರತೀಯ ವೈದ್ಯಕೀಯ ಮಂಡಳಿ ಮತ್ತು ಜೆಎಸ್‌ಎಸ್ ವಿ.ವಿ. ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದರು. ಅಸ್ಸಾಂ ವಿಶ್ಯವಿದ್ಯಾನಿಲಯದ ಆಡಳಿತ ಮಂಡಳಿಯ ಸದಸ್ಯ ರಾಗಿದ್ದಾರೆ. ಆರೋಗ್ಯ, ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಯಾಗಿರುವ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಬಹಳಷ್ಟು ಹೆಚ್ಚು ಶಿಖರೋಪನ್ಯಾಸಗಳನ್ನು ನೀಡಿದ್ದಾರೆ. ರಾಜ್ಯೋತ್ಸವ ಸಹಿತ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳೂ ಇವರಿಗೆ ಸಂದಿವೆ. ಮಾನವ ದೇಹದ ರಚನೆಯ ಕುರಿತಾದ “ಪೀಪಿಂಗ್ ಇನ್‌ಸೈಡ್ ದಿ ಬಾಡಿ’ ಮತ್ತು ಮಕ್ಕಳ ಕ್ಯಾನ್ಸರ್ ರೋಗದ ಬಗ್ಗೆ “ಚೈಲ್ಡ್‌ಹುಡ್ ಕ್ಯಾನ್ಸರ್’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ.
ಅವರ ಕಾರ್ಯಸಾಧನೆಗಳನ್ನು ದಾಖಲಿಸಿ ಮಾಹೆ ಅಭಿನಂದನಾ ಗ್ರಂಥವನ್ನು ಪ್ರಕಟಿಸಿದೆ. ಯಕ್ಷಗಾನ ಕಲೆಯ ಅಭಿಮಾನಿಯಾದ ಅವರು ಸದಾ ಯಕ್ಷ ಕಲಾವಿದರಿಗೆ ಸಹಾಯ ಮಾಡುತ್ತಿದ್ದಾರೆ. ತಂದೆ ಬೇಳಂಜೆ ಸಂಜೀವ ಹೆಗ್ಡೆ ಅವರ ಹೆಸರಿನ ಟ್ರಸ್ಟ್ ಮೂಲಕ ವೈದ್ಯಕೀಯ ಸೇವೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ವಿಸ್ತರಿಸಿದ್ದಾರೆ.
ಡಾ| ಬಲ್ಲಾಳರ ಪತ್ನಿ ಇಂದಿರಾ ಎಸ್. ಬಲ್ಲಾಳರು ತಂಜಾವೂರು ಶೈಲಿಯ ವರ್ಣಚಿತ್ರ ಕಲಾವಿದೆ. ಅವರ ಕೃತಿಗಳು ಹಲವು ಪ್ರದರ್ಶನಗಳನ್ನು ಕಂಡಿದ್ದು, ಕುಟುಂಬಿಕರ ಮನೆಗಳಲ್ಲಿ ಅಲಂಕೃತಗೊಂಡಿವೆ.
ಸುಮಾರು 2 ವರ್ಷಗಳಿಂದ ಆಸ್ಪತ್ರೆಗಳು, ವಿದ್ಯಾ ಸಂಸ್ಥೆಗಳು, ಮುಚ್ಚಿದ್ದರೂ ಎಲ್ಲ ಸಿಬಂದಿ ವರ್ಗದವರಿಗೂ ಪೂರ್ಣ ಪ್ರಮಾಣದ ವೇತನ ಮತ್ತು ಸೌಲಭ್ಯಗಳನ್ನು ನೀಡಿರುವುದು ಮಣಿಪಾಲ ಸಮೂಹ ಸಂಸ್ಥೆಗಳ ಮಾನವೀಯ ಸ್ಪಂದನೆಗೆ ಸಾಕ್ಷಿ.
“ಡಾ| ಮಾಧವ ಪೈ ಅವರ ದೂರದರ್ಶಿತ್ವ, ಡಾ| ರಾಮದಾಸ್ ಎಂ. ಪೈ, ವಸಂತಿ ಆರ್. ಪೈ ಮತ್ತು ಡಾ| ರಂಜನ್ ಆರ್. ಪೈ ಅವರ ಮಾರ್ಗದರ್ಶನ ಸ್ಮರಣೀಯ, ಅಂತೆಯೇ ಎಲ್ಲ ಸಿಬಂದಿಯ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು’ ಎನ್ನುತ್ತಾರೆ
ಡಾ| ಎಚ್. ಎಸ್. ಬಲ್ಲಾಳ್.
– ಭುವನ ಪ್ರಸಾದ ಹೆಗ್ಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.