Drought: ಕೇಂದ್ರದ ನಡೆಗೆ ಖಂಡನೆ- ರಾಜ್ಯಕ್ಕೆ ಸಿಗದ ಬರಪರಿಹಾರ- ಸಚಿವ ಸಂಪುಟ ಸಭೆ ನಿರ್ಣಯ
Team Udayavani, Nov 9, 2023, 11:45 PM IST
ಬೆಂಗಳೂರು: ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ತೀಕ್ಷ್ಣವಾಗಿ ಆರೋಪಿಸಿರುವ ರಾಜ್ಯ ಸರಕಾರವು ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಖಂಡನ ನಿರ್ಣಯ ಅಂಗೀಕರಿಸಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿ ಮತ್ತು ಕೇಂದ್ರದ ನಿಲುವಿನ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಅಷ್ಟೇ ಅಲ್ಲ, ಲೋಕಸಭಾ ಚುನಾವಣ ಹೊಸ್ತಿಲಿನಲ್ಲಿ ಕೇಂದ್ರದ ವಿರುದ್ಧ ಸಂಘರ್ಷಕ್ಕೆ ಇಳಿಯಲು ರಾಜ್ಯ ಸರಕಾರ ಮುಂದಾಗಿದೆ.
ಪ್ರಧಾನಿ ಮೋದಿ ಮತ್ತು ಕೇಂದ್ರದ ಸಚಿವರು ರಾಜ್ಯದ ನಿಯೋಗದ ಭೇಟಿಗೆ ಅವಕಾಶ ನೀಡದೆ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಕೇಂದ್ರ ಸರಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸುವ ನಿರ್ಣಯ ಕೈಗೊಳ್ಳಲಾಗಿದೆ. ಒಂದೆಡೆ ಬಿಜೆಪಿ ಹಾಗೂ ಜೆಡಿಎಸ್ ಪ್ರತ್ಯೇಕವಾಗಿ ಬರವೀಕ್ಷಣೆ ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರದ ವಿರುದ್ಧ ಖಂಡನ ನಿರ್ಣಯ ಕೈಗೊಳ್ಳುವುದರೊಂದಿಗೆ ರಾಜಕೀಯ ಸಂಘರ್ಷದ ವೇದಿಕೆ ಸಿದ್ಧಗೊಂಡಿದೆ.
ಇದೇ ವೇಳೆ ಬರದಲ್ಲಿ ಸಿಲುಕಿರುವ ಜನರಿಗೆ ನೆರವು ನೀಡಲು ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿರುವ 700ರಿಂದ 800 ಕೋಟಿ ರೂ. ಹಣ ಬಳಸಿಕೊಳ್ಳಲು ಸೂಚಿಸಿದ್ದಾರೆ.
ಕೃಷಿ ಭಾಗ್ಯ ಮರು ಜಾರಿ
ಕೃಷಿಭಾಗ್ಯ ಯೋಜನೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ಮರಳಿ ಜಾರಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 24 ಜಿಲ್ಲೆಗಳ ಮಳೆ ಆಶ್ರಿತ ಕೃಷಿ ಚಟುವಟಿಕೆ ನಡೆಸುವ 106 ತಾಲೂಕುಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಸಹಾಯಧನ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಪಾಲಿಥಿನ್ ಹೊದಿಕೆ, ಡೀಸೆಲ್ ಪಂಪ್ ಸಹಿತ ವಿವಿಧ ಕೃಷಿ ಚಟುವಟಿಕೆಗಳಿಗೆ ಯೋಜನೆಯನ್ವಯ ಉತ್ತೇಜನ ನೀಡಲಾಗುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಜನನ-ಮರಣ ನೋಂದಣಿ ತುಟ್ಟಿ
ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳ ತಿದ್ದುಪಡಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ವಿಳಂಬ ನೋಂದಣಿಗೆ ಸಲ್ಲಿಸುವ ಅರ್ಜಿ ಶುಲ್ಕವೂ ತುಟ್ಟಿಯಾಗಲಿದೆ. 21 ದಿನಗಳ ಅನಂತರ ಹಾಗೂ 30 ದಿನಗಳೊಳಗೆ ಅರ್ಜಿ ನೋಂದಣಿಗೆ 2 ರೂ. ಇರುವ ಶುಲ್ಕವನ್ನು 100 ರೂ.ಗಳಿಗೆ, 30 ದಿನಗಳಿಂದ ಒಂದು ವರ್ಷದ ಅವಧಿಗೆ ಇರುವ 5 ರೂ. ಶುಲ್ಕವನ್ನು 200 ರೂ.ಗಳಿಗೆ, 1 ವರ್ಷದ ಅನಂತರದ ವಿಳಂಬ ಶುಲ್ಕ 10 ರೂ. ಬದಲು 500 ರೂ.ಗಳಿಗೆ ಹೆಚ್ಚಿಸಲಾಗಿದೆ. ವಿಳಂಬ ಶುಲ್ಕದೊಂದಿಗೆ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸುವ ಬದಲು ಸಹಾಯಕ ಆಯುಕ್ತರಿಗೆ (ಎ.ಸಿ.) ಅರ್ಜಿ ಸಲ್ಲಿಸಿ ಪ್ರಮಾಣಪತ್ರ ಪಡೆಯಬಹುದಾಗಿದೆ.
ಸ್ಪಂದಿಸದ ಕೇಂದ್ರ
ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್, ನರೇಗಾ ಯೋಜನೆ ಅನ್ವಯ 100 ಮಾನವ ದಿನಗಳ ಕೆಲಸವನ್ನು ಬಡ ಕುಟುಂಬಗಳು ಪೂರೈಸಿವೆ. ಹೀಗಾಗಿ ಬರದ ಸಂದರ್ಭದಲ್ಲಿ ಅದನ್ನು 150 ದಿನಕ್ಕೆ ವಿಸ್ತರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಇದುವರೆಗೆ ನಮ್ಮ ಮನವಿಗೆ ಸ್ಪಂದಿಸಿಲ್ಲ. ಆದಷ್ಟು ಬೇಗ ಕೇಂದ್ರ ನಿರ್ಣಯ ತೆಗೆದುಕೊಳ್ಳಬೇಕೆಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಸಮಯ ಕೊಡದ ಕೇಂದ್ರ
ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಿ ಬರಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದೆ ಎಂದು ಸಚಿವ ಪಾಟೀಲ್ ಹೇಳಿದ್ದಾರೆ. ರಾಜ್ಯ ಸರಕಾರದ ವತಿ ಯಿಂದ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರೂ ಇದುವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿಗಳಿಗೆ ಪ್ರಧಾನಿ ಭೇಟಿಗೆ ಸಮಯಾವಕಾಶ ನೀಡಿಲ್ಲ ಎಂದು ದೂರಿದರು. ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಸಚಿವರ ನಿಯೋಗದ ಭೇಟಿಗೆ ಕೇಂದ್ರದ ಕಾರ್ಯದರ್ಶಿಗಳು ಅವಕಾಶ ಕಲ್ಪಿಸಿಲ್ಲ. ಹೀಗಾಗಿ, ಕೇಂದ್ರ ತತ್‌ಕ್ಷಣ ನಿರ್ಣಯ ಕೈಗೊಂಡು ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಒತ್ತಾಯ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ಬರ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ನಡೆಸುತ್ತಿವೆ. ಕೇಂದ್ರ ತಂಡದ ವರದಿ ಸಲ್ಲಿಕೆಯ ಬಳಿಕವೂ ಪರಿಹಾರ ಬಿಡುಗಡೆಯಾಗದಿರುವ ಬಗ್ಗೆ ಧ್ವನಿ ಎತ್ತುವ ಬದಲು ತಾವೇ ಬರ ಅಧ್ಯಯನ ಮಾಡಲು ಹೊರಟಿವೆ. ಈ ರಾಜಕೀಯ ನಡೆಯಿಂದ ಜನಕಲ್ಯಾಣ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ರಜನೀಶ್ ಗೋಯೆಲ್ ನೂತನ ಮುಖ್ಯ ಕಾರ್ಯದರ್ಶಿ?
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಈ ತಿಂಗಳು ಸೇವಾ ನಿವೃತ್ತಿಯಾಗಲಿದ್ದಾರೆ. ನೂತನ ಮುಖ್ಯ ಕಾರ್ಯದರ್ಶಿ ನೇಮಕ ಅಧಿಕಾರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. 2025 ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಗೆ ಸೇವಾವಧಿ ಹೊಂದಿರುವ ಹಿರಿಯ ಐಎಎಸ್ ಅಧಿಕಾರಿಗಳ ಹೆಸರು ಸಭೆಯಲ್ಲಿ ಪ್ರಸ್ತಾವವಾಗಿದೆ. ಮೂಲಗಳ ಪ್ರಕಾರ ರಜನೀಶ್ ಗೋಯೆಲ್ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗುವ ಸಾಧ್ಯತೆ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.