Drought: ಆಹಾರ ಉತ್ಪಾದನೆಗೇ ಪೆಟ್ಟು- ಖುದ್ದು ಕೃಷಿ ಸಚಿವ ಚಲುರಾಯಸ್ವಾಮಿ ಆತಂಕ
ನಿರೀಕ್ಷಿತ ಗುರಿಗಿಂತ ಶೇ.50ಕ್ಕಿಂತ ಕಡಿಮೆ ಖಚಿತ- 40 ಲಕ್ಷ ಹೆಕ್ಟೇರ್ ಬೆಳೆ ಹಾನಿ; 30 ಸಾವಿರ ಕೋಟಿ ಮೊತ್ತ
Team Udayavani, Oct 12, 2023, 9:47 PM IST
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕುಸಿತದಿಂದಾಗಿ ಈಗಾಗಲೇ ಹಲವಾರು ಸಮಸ್ಯೆಗಳು ತಲೆದೋರಿದ್ದು, ವಿದ್ಯುತ್ ಅಭಾವ ತೀವ್ರವಾಗಿ ಕಾಡುತ್ತಿದೆ. ಇದರ ಜತೆಯಲ್ಲೇ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಅಭಾವ ಕಾಡಬಹುದು ಎಂದು ಕೃಷಿ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಮಳೆ ಕೊರತೆ ಕಾರಣದಿಂದಾಗಿ ಆಹಾರ ಉತ್ಪಾದನೆ ಪ್ರಮಾಣ ನಿರೀಕ್ಷಿತ ಗುರಿಯಲ್ಲಿ ಶೇ. 50ಕ್ಕಿಂತ ಹೆಚ್ಚು ಕುಸಿತ ಕಂಡುಬರಲಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಈಗಾಗಲೇ ಬೇಳೆ ಕಾಳುಗಳ ಬೆಲೆ ಹೆಚ್ಚಳವಾಗಿರುವ ಆತಂಕದ ಜತೆಗೆ, ಮುಂದಿನ ದಿನಗಳಲ್ಲಿ ಬೇರೆ ಬೇರೆ ವಸ್ತುಗಳ ಬೆಲೆ ಏರಿಕೆಯೂ ತುಸು ಜೋರಾಗಿಯೇ ತಟ್ಟುವ ಸಾಧ್ಯತೆಗಳು ನಿಚ್ಚಳವಾಗಿವೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಆಹಾರ ಉತ್ಪಾದನೆ ಗುರಿ ಇದ್ದದ್ದು 111 ಲಕ್ಷ ಮೆಟ್ರಿಕ್ ಟನ್. ಮಳೆಯ ತೀವ್ರ ಕೊರತೆಯಿಂದ ಶೇ. 50ಕ್ಕಿಂತ ಅಧಿಕ ಅಂದರೆ 58 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಖೋತಾ ಆಗುವ ಭೀತಿ ಎದುರಾಗಿದೆ. 53 ಲಕ್ಷ ಮೆಟ್ರಿಕ್ ಟನ್‌ಗೆ ಕೈಸೇರುವ ನಿರೀಕ್ಷೆ ಇದೆ ಎಂದು ಕೃಷಿ ಸಚಿವ ಎನ್.ಚಲುವನಾರಾಯಣಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ರಾಜ್ಯದ ಕೃಷಿ ಪರಿಸ್ಥಿತಿ ಬಗ್ಗೆ ವಿವರವಾಗಿ ಹೇಳಿದ್ದಾರೆ. ರಾಜ್ಯದ 161 ತಾಲೂಕುಗಳು ತೀವ್ರ ಮತ್ತು 34 ಸಾಧಾರಣ ಬರಪೀಡಿತ ತಾಲೂಕುಗಳಾಗಿವೆ. ಇದು ಬೆಳೆ ಹಾನಿ ರೂಪದಲ್ಲಿ ಪರಿಣಮಿಸಿದ್ದು, ಸಿರಿಧಾನ್ಯಗಳು, ತೋಟಗಾರಿಕೆ ಬೆಳೆಗಳು ಸೇರಿದಂತೆ ಎಲ್ಲ ಪ್ರಕಾರದ ಬೆಳೆಗಳ ಮೇಲೂ ಇದು ಪರಿಣಾಮ ಬೀರಿದೆ. ಹಾಗಾಗಿ, ಆಹಾರ ಉತ್ಪಾದನೆ 58 ಲಕ್ಷ ಮೆಟ್ರಿಕ್ ಟನ್‌ಗೆ ಕುಸಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳಿಂದ ನಗರದ ಕಡೆಗೆ ವಲಸೆ ಪ್ರಮಾಣ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ರಾಜ್ಯದ ವಾರ್ಷಿಕ ಆಹಾರ ಉತ್ಪಾದನೆ (ಧಾನ್ಯಗಳು ಮತ್ತು ದ್ವಿದಳಧಾನ್ಯಗಳು) ಗುರಿ 144 ಲಕ್ಷ ಮೆಟ್ರಿಕ್ ಟನ್ ಇದೆ. ಈ ಪೈಕಿ ಮುಂಗಾರು ಹಂಗಾಮಿನಲ್ಲೇ 111 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತದೆ. ಈ ದೃಷ್ಟಿಯಿಂದ ಮುಂಗಾರು ಮಾರುತಗಳು ರಾಜ್ಯದ ಜೀವನಾಡಿ ಆಗಿವೆ. ಪ್ರಸಕ್ತ ಸಾಲಿನಲ್ಲಿ ಅವು ಕೈಕೊಟ್ಟಿದ್ದರಿಂದ ಉತ್ಪಾದನೆ ಪ್ರಮಾಣ ಅರ್ಧಕ್ಕೆ ಅರ್ಧ ಕುಸಿಯುವ ಸಾಧ್ಯತೆ ಇದೆ. ಒಂದು ವೇಳೆ ಹಿಂಗಾರಿನಲ್ಲೂ ಇದೇ ಸ್ಥಿತಿ ಮುಂದುವರಿದರೆ, ಪರಿಸ್ಥಿತಿ ಬಿಗಡಾಯಿಸಲಿದೆ ಎಂಬುದು ಕೃಷಿ ಇಲಾಖೆಯ ಆತಂಕ.
ನಷ್ಟ ಪ್ರಮಾಣ 30 ಸಾವಿರ ಕೋಟಿ:
ರಾಜ್ಯದಲ್ಲಿ ಮುಂಗಾರಿನಲ್ಲಿ ಒಟ್ಟು ಬಿತ್ತನೆಯಾದ ಪ್ರದೇಶ 118 ಲಕ್ಷ ಹೆಕ್ಟೇರ್ (ಶೇ. 89). ಈ ಪೈಕಿ ಮಳೆ ಅಭಾವದಿಂದ 39.74 ಲಕ್ಷ ಹೆಕ್ಟೇರ್ ಕೃಷಿ ಮತ್ತು 1.82 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಬೆಳೆ ಹಾನಿ ಮೊತ್ತ ಅಂದಾಜು 30 ಸಾವಿರ ಕೋಟಿ ಆಗಿದೆ. 13 ಜಿಲ್ಲೆಗಳ 195 ತಾಲ್ಲೂಕುಗಳನ್ನು ಈಗಾಗಲೇ “ಬರಪೀಡಿತ’ ಎಂದು ಘೋಷಿಸಲಾಗಿದ್ದು, ಅದರಂತೆ ಆ ಪ್ರದೇಶಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಶೀಘ್ರ ಅದು ವರದಿ ಕೂಡ ನೀಡಲಿದ್ದು, ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಇದರ ಬೆನ್ನಲ್ಲೇ ಇನ್ನೂ 21 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಬೆಳೆ ಸಮೀಕ್ಷೆ ನಡೆದಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಅದರ ವರದಿ ಕೂಡ ಬರಲಿದೆ ಎಂದು ಮಾಹಿತಿ ನೀಡಿದರು.
ಬೆಳೆ ಹಾನಿಯಲ್ಲಿ ಮುಖ್ಯವಾಗಿ ಭತ್ತ, ಮೆಕ್ಕೆಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹುರಳಿ, ಹತ್ತಿ, ಶೇಂಗಾ ಮತ್ತಿತರ ಬೆಳೆಗಳು ಹಾಳಾಗಿವೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮದ ಪ್ರಕಾರ ಪ್ರತಿ ಹೆಕ್ಟೇರ್ ಖುಷ್ಕಿ ಜಮೀನಿಗೆ 13,600 ರೂ. ಹಾಗೂ ನೀರಾವರಿ ಜಮೀನಿಗೆ 25 ಸಾವಿರ ಹಾಗೂ ಬಹುವಾರ್ಷಿಕ ಬೆಳೆಗೆ 28 ಸಾವಿರ ಹೆಕ್ಟೇರ್ ಪರಿಹಾರ ನೀಡಬೇಕು ಎಂದು ವಿವರಿಸಿದ ಅವರು, 2023ರ ಮುಂಗಾರು ಹಂಗಾಮಿನಲ್ಲಿ ಒಟ್ಟು 36 ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಅಧಿಸೂಚಿಸಲಾಗಿದೆ. 19.14 ಲಕ್ಷ ರೈತರು 15.10 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ರೈತ ಸುರಕ್ಷತಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಹೇಳಿದರು.
ಆತ್ಮಹತ್ಯೆ ಪ್ರಮಾಣ ಇಳಿಕೆ
ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 313 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು. 2022-23ನೇ ಸಾಲಿಗೆ ಹೋಲಿಸಿದರೆ, ರೈತರ ಆತ್ಮಹತ್ಯೆಗಳು ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ವರ್ಷ ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಬಾರಿ 313ಕ್ಕೆ ಇಳಿಕೆಯಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ಗ್ಯಾರಂಟಿಗಳು ಆಸರೆಯಾಗಿವೆ ಎಂದರು.
ಸಾವಿರ ಹುದ್ದೆಗಳ ನೇಮಕ
ಕೃಷಿ ಇಲಾಖೆಯಲ್ಲಿ ಶೇ. 57ರಷ್ಟು ಸಿಬ್ಬಂದಿ ಕೊರತೆ ಇದೆ. ಅವುಗಳ ಭರ್ತಿಗೆ ಕ್ರಮ ಕೈಗೊಂಡಿದ್ದು, ಮೊದಲ ಹಂತದಲ್ಲಿ ಸಾವಿರ ಹುದ್ದೆಗಳ ನೇಮಕ ಮಾಡಿಕೊಳ್ಳಲಾಗುವುದು. ಇದರಲ್ಲಿ 350 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳನ್ನು ನೇಮಿಸಲು ಉದ್ದೇಶಿಸಲಾಗಿದೆ. ಇವರೆಲ್ಲರೂ ಹೋಬಳಿ ಮತ್ತು ತಾಲೂಕು ಕೇಂದ್ರಗಳಿಗೆ ನೇಮಕಗೊಳ್ಳಲಿದ್ದಾರೆ ಎಂದು ಹೇಳಿದರು.
ಲೋಡ್‌ಶೆಡ್ಡಿಂಗ್ ಸತ್ಯ
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತುಸು ಹೆಚ್ಚಾಗಿಯೇ ಇದೆ. ಹಾಗಾಗಿ, ಲೋಡ್‌ಶೆಡ್ಡಿಂಗ್ ಆಗುತ್ತಿರುವುದು ಸತ್ಯ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಒಪ್ಪಿಕೊಂಡರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದ್ಯುತ್ ಇಲಾಖೆಯಲ್ಲಿ ತುಸು ಜಾಸ್ತಿಯೇ ಸಮಸ್ಯೆ ಆಗಿದೆ. ಹಾಗಾಗಿ, ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ಆಗುತ್ತಿದೆ. ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ಕೂಡ ಈ ಅಂಶ ಬಂದಿದ್ದು, ಅವರೂ ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದರು.
118 ಲಕ್ಷ ಹೆಕ್ಟೇರ್- ಒಟ್ಟು ಬಿತ್ತನೆ ಪ್ರದೇಶ
39.74 ಲಕ್ಷ ಹೆಕ್ಟೇರ್- ಕೃಷಿ ಪ್ರದೇಶ ಹಾನಿ
1.82 ಲಕ್ಷ ಹೆಕ್ಟೇರ್- ತೋಟಗಾರಿಕೆ ಬೆಳೆ ಹಾನಿ
195- ಬರಪೀಡಿತ ತಾಲೂಕುಗಳು
13- ಜಿಲ್ಲೆಗಳು
21- ಜಿಲ್ಲೆಗಳ ಸಮೀಕ್ಷೆ ಪ್ರಗತಿಯಲ್ಲಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.