ಡಚ್ಚರ ನಗರಗಳೂ, ಬೈಸಿಕಲ್‌ಗಳೂ…
Team Udayavani, Feb 5, 2023, 6:30 AM IST
ವಾಹನಗಳಿಂದ ಕಿಕ್ಕಿರಿದು ತುಂಬಿವೆ ನಮ್ಮ ನಗರಗಳು. ನಮ್ಮ ಈ ಪೇಟೆ ಖರೀದಿ (ಶಾಪಿಂಗ್)ಯ ಸಮಯದಲ್ಲಿ ವಾಹನವನ್ನು ನಿಲ್ಲಿಸಲೆಂದೇ ಒಂದು ಗಂಟೆ ಕಾದಿಡಬೇಕಾದ ಸ್ಥಿತಿ ಇದೆ. ಬೆಂಗಳೂರು, ಮೈಸೂರು, ಮಂಗಳೂರಿನಂಥ ದೊಡ್ಡ ನಗರಗಳಲ್ಲಿ ವಾಹನ ನಿಲುಗಡೆಗೆ ಸ್ಥಳ ಶೋಧನೆಯೇ ದೊಡ್ಡ ಸವಾಲು. ದಶಕದ ಹಿಂದೆ ಕಸ ವಿಲೇವಾರಿ ಬೃಹತ್ ಸಮಸ್ಯೆ ಎಂದು ತೋರಿತ್ತು. ಆ ಸಮಸ್ಯೆ ಇಂದಿಗೂ ಸಂಪೂರ್ಣವಾಗಿ ಬಗೆಹರಿದಿಲ್ಲ, ಬಗೆಹರಿಸಲೂ ಪ್ರಯತ್ನಿಸಿಲ್ಲ. ಆದರೆ ಸ್ಥಳೀಯ ಸಂಸ್ಥೆಗಳಿಗೆ ಭವಿಷ್ಯದ ದೊಡ್ಡ ಸವಾಲೆಂದರೆ ವಾಹನಗಳಿಗೆ ನಿಲುಗಡೆ ಸೌಲಭ್ಯವನ್ನು ಒದಗಿಸುವುದು.
ಈ ಸವಾಲು ಬರೀ ದೊಡ್ಡ ನಗರಗಳಲ್ಲಷ್ಟೇ ಅಲ್ಲ; ಸಣ್ಣ ಪಟ್ಟಣಗಳಲ್ಲೂ ತಲೆನೋವಾಗಿ ಪರಿಣಮಿಸುತ್ತಿರುವುದು ಸುಳ್ಳಲ್ಲ. ಹಿಂದಿನ ದಶಕದಲ್ಲಿ ವಾಹನ ದಟ್ಟಣೆ (ಟ್ರಾಫಿಕ್ ಜಾಮ್)ಯ ವಿಷಯ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿತ್ತು. ಆದರೀಗ ಸಣ್ಣ ಪಟ್ಟಣಗಳಲ್ಲೂ ಸಮಸ್ಯೆಯಾಗಿ ರೂಪುಗೊಳ್ಳುತ್ತಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಮುಖ್ಯವಾಗಿ ಆಂತರಿಕ ವಲಸೆ. ರಾಜ್ಯ-ರಾಜ್ಯಗಳ ನಡುವೆ, ಜಿಲ್ಲೆ-ಜಿಲ್ಲೆಗಳ ನಡುವೆ, ಪಟ್ಟಣ-ಪಟ್ಟಣಗಳ ನಡುವಿನ ವಲಸೆ ದಿನೇದಿನೆ ಹೆಚ್ಚುತ್ತಿದೆ. ಗ್ರಾಮಾಂತರ ಜನರಲ್ಲಿ ನಗರ-ಪಟ್ಟಣಗಳು ಆರ್ಥಿಕ ಸ್ವಾವಲಂಬನೆಯ ಕನಸು ಬಿತ್ತುತ್ತಿರುವುದು ಇದಕ್ಕೆ ಪ್ರಮುಖ ಕಾರಣ.
ಮೋಟಾರು ವಾಹನಗಳು ಅನಿವಾರ್ಯ ಎನ್ನುವಂತಾಗಿರುವ ಅಥವಾ ಎಂದುಕೊಂಡಿರುವ ಇಂಥ ಹೊತ್ತಿನಲ್ಲಿ ಅಲ್ಲೆಲ್ಲೋ ಡಚ್ಚರ ನಗರಗಳಲ್ಲಿ ವಾಹನಗಳು ರಸ್ತೆಯಿಂದಲೇ ನಿವೃತ್ತಿಗೊಳ್ಳುತ್ತಿವೆ. ಸರಕಾರ, ಸ್ಥಳೀಯ ಸಂಸ್ಥೆಯ ಆಡಳಿತಗಳು ಕಡ್ಡಾಯ ನಿವೃತ್ತಿ ಘೋಷಿಸುವಂತೆ ಮಾಡುತ್ತಿವೆ. ಮೋಟಾರು ವಾಹನ ಬಿಡಿ, ಬೈಸಿಕಲ್ ಹತ್ತಿ ಎಂದು ಘೋಷಿಸುತ್ತಿವೆ. ಆರೋಗ್ಯಕರ ಹಾಗೂ ಸಂತಸದಾಯಕ ಸಂಗತಿಯೆಂದರೆ ಜನರು ಹಾಗೆಯೇ ಮಾಡುತ್ತಿದ್ದಾರೆ. ಮೋಟಾರು ವಾಹನ ಬದಿಗಿಟ್ಟು, ಸೈಕಲ್ ಏರತೊಡಗಿದ್ದಾರೆ.
ಅದಕ್ಕೇ ಬೈಸಿಕಲ್ ದಿನಾಚರಣೆ (ಜೂನ್ 3)ಯಂದು ವರ್ಷಕ್ಕೊಮ್ಮೆ ನಡೆಯುವ ಬೈಸಿಕಲ್ ರ್ಯಾಲಿ ಈ ನಗರಗಳಲ್ಲಿ ವಿಶೇಷವೆನಿಸುವುದಿಲ್ಲ. ಉದಾಹರಣೆಗೆ ಡಚ್ಚರ ನಾಡಿನ ರಾಜಧಾನಿಯಲ್ಲಿ ನಿತ್ಯವೂ ಸೈಕಲ್ ರ್ಯಾಲಿ. ಸಾವಿರಾರು ಜನರು ಸೈಕಲ್ ತುಳಿದುಕೊಂಡೇ ಎಲ್ಲ ಕೆಲಸವನ್ನೂ ಮುಗಿಸುತ್ತಾರೆ. ಇದು ವಿಶ್ವದ ಎಂಟನೇ ಸೋಜಿಗ ಎನಿಸಬಹುದು.
ನೆದರ್‌ಲ್ಯಾಂಡ್ಸ್ ಡಚ್ಚರ ನಾಡು. ಆಮ್‌ಸ್ಟರ್‌ಡಮ್ ಅದರ ರಾಜಧಾನಿ. ಬೈಸಿಕಲ್‌ಗಳ ರಾಜಧಾನಿಯಾಗಲು ಹೊರಟಿದೆ. ಇಲ್ಲಿನ ರಾಜಕಾರಣಿಗಳೂ ಜನರಿಗೆ ನೀಡುವ ಭರವಸೆ “ಬೈಸಿಕಲ್‌ಗಳಿಗೆ ಕೆಂಪು ಹಾಸು ಹಾಸುತ್ತೇವೆ’ ಎಂಬುದು! ಅಷ್ಟೇ ಅಲ್ಲ. “ಕಾರುಗಳ ಪಾರ್ಕಿಂಗ್ ಜಾಗ ಮುಕ್ತಗೊಳಿಸುತ್ತೇವೆ’ ಎಂಬುದು!
ಆಮ್‌ಸ್ಟರ್‌ಡಮ್‌ನಲ್ಲಿ ಪ್ರತೀ ವರ್ಷ 1,500 ಕಾರು ನಿಲುಗಡೆಯ ಸ್ಥಳಗಳನ್ನು ಸಪಾಟುಗೊಳಿಸಿ, ಬೈಸಿಕಲ್ ಸ್ಟಾಂಡ್ ಫಲಕ ತೂಗು ಹಾಕಲಾಗುತ್ತಿದೆ. ಗಿಡಗಳನ್ನು ನೆಡಲಾಗುತ್ತಿದ್ದು ಕಾಲುಹಾದಿಗಳನ್ನು ವಿಸ್ತರಿಸಲಾಗುತ್ತಿದೆ. 2025ರೊಳಗೆ ಹನ್ನೊಂದು ಸಾವಿರಕ್ಕೂ ಹೆಚ್ಚು ವಾಹನ ನಿಲುಗಡೆ ಸ್ಥಳಗಳನ್ನು ಮುಕ್ತಗೊಳಿಸುವ ಗುರಿ ಸ್ಥಳೀಯ ಆಡಳಿತದ್ದು. ಇದು ಕಾರು ವಿರೋಧಿ ನೀತಿಯಲ್ಲ; ಅನಾಸಕ್ತಿ ಯೋಗ.
ಈ ಬೈಸಿಕಲ್ ಪ್ರೀತಿ ಡಚ್ಚರ ಹಲವು ನಗರಗಳು/ಪಟ್ಟಣಗಳಲ್ಲಿವೆ. ಇಂಥ ಕ್ರಾಂತಿಗೂ ಐದು ದಶಕಗಳ ಇತಿಹಾಸವಿದೆ. 1890ರ ಸಂದರ್ಭದಲ್ಲೇ ಬೈಸಿಕಲ್ ಜನಪ್ರಿಯ ಸಾರಿಗೆ ವಿಧಾನವಾಗಿತ್ತು. ಆ ಹೊತ್ತಿಗೆ ಅಮೆರಿಕ ಹಾಗೂ ಬ್ರಿಟನ್ ಬೈಸಿಕಲ್ ಕ್ರಾಂತಿಯಲ್ಲಿ ಸಾಕಷ್ಟು ಮುಂದೆ ಸಾಗಿತ್ತು. ಆದರೂ ಡಚ್ಚರು ಹಿಂದೆ ಬೀಳಲಿಲ್ಲ. ಲಭ್ಯ ಅಂಕಿ ಅಂಶಗಳ ಪ್ರಕಾರ 1940ರ ಹೊತ್ತಿಗೆ ಎಂಟು ಮಿಲಿಯನ್ ಜನಸಂಖ್ಯೆಯ ಪೈಕಿ 4 ದಶಲಕ್ಷ ಮಂದಿ ಬೈಸಿಕಲ್‌ನ್ನು ತಮ್ಮ ಸಾರಿಗೆ ಸಾಧನ ಬೈಸಿಕಲ್ ಎಂದು ಎದೆ ತಟ್ಟಿ ಹೇಳಿದರು. ಅಂದಾಜಿನಂತೆ ಒಂದು ಬೈಸಿಕಲ್ ವಾರ್ಷಿಕ 1,500 ಕಿ.ಮೀ.ಗಿಂತಲೂ ಹೆಚ್ಚು ದೂರವನ್ನು ಕ್ರಮಿಸುತ್ತಿತ್ತು. 1960ರ ಸಂದರ್ಭ. ಆರ್ಥಿಕತೆ ಸುಧಾರಿಸಿ ಡಚ್ಚರ ಜೇಬುಗಳೂ ಥಳಥಳಿಸತೊಡಗಿದವು. ಪಾಶ್ಚಾತ್ಯ ಜಗತ್ತಿನ ಇತರ ರಾಷ್ಟ್ರಗಳಲ್ಲಿನ ಮೋಟಾರು ವಾಹನಗಳು ಕಣ್ಣು ಕುಕ್ಕಿದವು. ರಸ್ತೆಗಳಲ್ಲೆಲ್ಲ ಕಾರುಗಳು ತುಂಬಿಕೊಳ್ಳತೊಡಗಿದವು. ಸೈಕಲ್‌ಗಳಿಗೆ ಪ್ರತ್ಯೇಕ ವ್ಯವಸ್ಥೆ ಇರದ ಪರಿಣಾಮ ಅಪಘಾತಗಳು ಹೆಚ್ಚತೊಡಗಿದವು. ಇದರ ಭೀಕರತೆ ಎಷ್ಟಿತ್ತೆಂದರೆ, 1971ರಲ್ಲಿ ಕಾರುಗಳಿಂದಾದ ಅಪಘಾತಗಳಲ್ಲಿ 3 ಸಾವಿರ ಮಂದಿ ಸತ್ತರು. ಇವರಲ್ಲಿ 450 ಮಂದಿ ಮಕ್ಕಳಿದ್ದರು. ಇದು ಜನರ ನಿದ್ದೆಗೆಡಿಸಿತು. ಮಾರ್ತ್‌ಜೆ ವಾನ್ ಪುತಿನ್ ಎಂಬಾಕೆ “ಮಕ್ಕಳ ಕೊಲೆಯನ್ನು ನಿಲ್ಲಿಸಿ’ ಎಂಬ ಹೋರಾಟಕ್ಕೆ ತಿದಿ ಒತ್ತಿದರು. ಜನರ ಪ್ರತಿಭಟನೆ ಮುಗಿಲುಮುಟ್ಟಿತು. ಸರಕಾರದ ಹಿಮ್ಮುಖ ನಡಿಗೆ ಆರಂಭವಾಯಿತು. ಇದಕ್ಕೆ 1973ರ ತೈಲ ಕೊರತೆ (ಜಾಗತಿಕ) ಕೊಂಚ ವೇಗ ಒದಗಿಸಿತು. ಕಾರುಗಳಿಗೆ ಟಾಟಾ ಹೇಳಿ ಬೈಸಿಕಲ್‌ಗಳಿಗೆ ಮತ್ತೆ ಮಣೆ ಹಾಕಿತು. ಇಂದು ಆಮ್‌ಸ್ಟರ್‌ಡಮ್ ಸಹಿತ ಹಲವು ನಗರಗಳಲ್ಲಿ ಎಲ್ಲಿ ಕಂಡರೂ ಬೈಕ್‌ಗಳು. ಸರಕಾರವೂ ಸಹ ಮೂಲ ಸೌಕರ್ಯ (ರಸ್ತೆ ಇತ್ಯಾದಿ ಸಾರಿಗೆ ಸಂಬಂಧಿ) ನೀತಿ ರೂಪಿಸುವಾಗ ಮೊದಲು ನೆನಪಿಸಿಕೊಳ್ಳುವುದು ಸೈಕಲ್ ಮೋಹಿಗಳನ್ನು.
ಸರಕಾರದ ಒತ್ತಾಸೆ ಎಲ್ಲಿಯವರೆಗೆ ಇದೆ ಎಂದರೆ, ಕಾರುಗಳನ್ನು ಪರಕೀಯರಂತೆ (ನಮ್ಮ ಸಂಸ್ಕೃತಿಯಲ್ಲ ಎಂಬಂತೆ) ಕಾಣುತ್ತಿದೆ. ಕನಿಷ್ಠ ಸೌಲಭ್ಯಗಳಲ್ಲೇ ಕಾರುಗಳು ಬದುಕಬೇಕು. ಕಾರಿಗೆಂದು ನಿಗದಿಪಡಿಸಿದ ನಿಲುಗಡೆ ಸೌಲಭ್ಯಗಳನ್ನು ನಿರ್ಮೂಲನೆ ಮಾಡುತ್ತಿರುವುದು ಒಂದು ಉದಾಹರಣೆ. ನಿಯಮಗಳಲ್ಲೂ ಕಠಿನತೆ. ಒಂದುವೇಳೆ ಬೈಸಿಕಲ್ ಸವಾರನಿಗೂ ಕಾರಿಗೂ ಅಪಘಾತವಾದರೆ ಕಾರಿನ ಮಾಲಕನೇ ಎಲ್ಲ ನಷ್ಟವನ್ನು ತುಂಬಬೇಕು. ಒಂದು ವೇಳೆ ಸೈಕಲ್ ಸವಾರನದ್ದು ಉದ್ದೇಶಿತ ತಪ್ಪಾಗದಿದ್ದಾಗ ಕಾರಿನವನೇ ಪರಿಹಾರ ನೀಡಬೇಕು. ನಗರಗಳಲ್ಲಿ ಕಾರುಗಳ ವೇಗದ ಮಿತಿ ಗಂಟೆಗೆ 28 ಕಿ.ಮೀ.
ಡಚ್ಚರ ನಗರಗಳಲ್ಲಿ ಕಾರಿಗೆ ಇರುವಂತೆ ಅಗಲವಾದ ಪ್ರತ್ಯೇಕ ರಸ್ತೆಗಳು ಸೈಕಲ್‌ಗಳಿಗಿವೆ. ಸೈಕಲ್ ಸವಾರರಿಗೆ ಒಳದಾರಿಗಳನ್ನು ನಿರ್ಮಿಸಲಾಗಿದೆ. ಸೈಕಲ್ ಸ್ಟಾಂಡ್‌ಗಳಿಂದ ಹಿಡಿದು ಪೂರಕವಾದ ಸೌಲಭ್ಯಗಳಿವೆ. ಒಟ್ಟಿನಲ್ಲಿ ಬೈಸಿಕಲ್ ದೇಶವಾಗಿಸಬೇಕೆಂಬ ಗುರಿ ಈ ಡಚ್ಚರದ್ದು.
ಪರಿಸರಸ್ನೇಹಿ ಕ್ರಮಗಳನ್ನು ಬರೀ ಘೋಷಿಸಿದರೆ ಸಾಲದು, ಅನುಷ್ಠಾನಿಸಬೇಕು. ತನ್ನ ಉದ್ದೇಶಿತ ಉಪಕ್ರಮಗಳು ಫಲ ನೀಡುವಂತೆ ಪೂರಕ ನೀತಿ, ವಾತಾವರಣ ನಿರ್ಮಿಸಬೇಕೆಂಬುದಕ್ಕೆ ಡಚ್ಚರ ಉದಾಹರಣೆಯೇ ಸಾಕ್ಷಿ. ಈಗ ಕಾರು ಮುಕ್ತ ಬೈಸಿಕಲ್ ಪ್ರಿಯ ಬಡಾವಣೆಗಳನ್ನು ನಿರ್ಮಿಸುವ ಕನಸು ಸಾಕಾರಗೊಳ್ಳುತ್ತಿದೆ.
ಈಗ ನಮ್ಮ ರಸ್ತೆಗಳತ್ತ ಕಣ್ಣು ಹಾಯಿಸೋಣ. ಎಲ್ಲೆಲ್ಲೂ ಮೋಟಾರು ವಾಹನಗಳು, ವಾಹನ ನಿಲುಗಡೆಗೆ ಸಂಘರ್ಷಕ್ಕೆ ಇಳಿಯುವಂಥ ದೃಶ್ಯಗಳು, ಹೈರಾಣಾಗಿರುವ ಟ್ರಾಫಿಕ್ ಪೊಲೀಸರು…ಇತ್ಯಾದಿ. ಇದು ಬರೀ ದೊಡ್ಡ ನಗರಗಳ ಕಥೆಯಲ್ಲ; ನಮ್ಮ ಪುಟ್ಟ ಪಟ್ಟಣಗಳದ್ದೂ ಸಹ.
ಬರೀ ನಮ್ಮ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 1.10 ಕೋಟಿಗೆ ತಲುಪಿದೆ. ಸುಮಾರು 75 ಲಕ್ಷ ದ್ವಿಚಕ್ರ ವಾಹನಗಳಿದ್ದರೆ, 21 ಲಕ್ಷದಷ್ಟು ಕಾರುಗಳಿವೆ. ಈ ಸಂಖ್ಯೆ ಇನ್ನೂ ಏರುತ್ತಲೇ ಇದೆ. ನಮ್ಮ ರಸ್ತೆಗಳು ವಾಹನಗಳಿಗೆ ಇನ್ನಷ್ಟು ಕಿಷ್ಕಿಂಧೆಯಾಗುತ್ತಲೇ ಇದೆ. ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ನಮ್ಮನ್ನು ನಾವು ಕಳೆದುಕೊಂಡು ಮನೆಗೆ ಬಂದು ಟಿವಿ ಧಾರಾವಾಹಿಯನ್ನು ನೋಡುತ್ತಾ ರಸ್ತೆ ಮೇಲಿನ ಸಂಕಟವನ್ನು ಮರೆತು ಬಿಡುತ್ತೇವೆ. ಅಲ್ಲಿಗೆ ಒಂದು ಪ್ರಹಸನ ಮುಗಿದಂತೆ.
ನೀರಿನೊಳಗೆ ಪಾರ್ಕಿಂಗ್!
ನಮ್ಮ ನಗರಗಳನ್ನು ಒಮ್ಮೆ ನೋಡಿಕೊಂಡು ಬನ್ನಿ. ಎಂಥ ದೊಡ್ಡ ನಗರಗಳಲ್ಲೂ ವಾಹನ ನಿಲುಗಡೆಗೆ ಸಾಕಷ್ಟು ಸುಸಜ್ಜಿತ ಸೌಲಭ್ಯಗಳಿಲ್ಲ. ಕೆಲವೆಡೆ ಇನ್ನೂ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂದಿದ್ದೇವೆ ಎನ್ನುತ್ತಾರೆ ನಮ್ಮ ಪೌರಾಡಳಿತ ಸಚಿವರು, ಮಹಾಪೌರರು, ಪುರಪಿತೃಗಳು ಹಾಗೂ ಅವರೊಂದಿಗೆ ಅಧಿಕಾರಿಗಳು. ಇನ್ನೂ ಯೋಚನೆಯಲ್ಲೇ ಇದ್ದಾರೆ. ಆದರೆ ಆಮ್‌ಸ್ಟರ್‌ಡಮ್ ನಲ್ಲಿ ಸೆಂಟ್ರಲ್ ಸ್ಟೇಶನ್ ಬಳಿ ಸುಮಾರು 7 ಸಾವಿರಕ್ಕೂ ಹೆಚ್ಚು ಬೈಸಿಕಲ್‌ಗಳನ್ನು ನಿಲ್ಲಿಸಲು ವೈಭವೋಪೇತ ಎನಿಸುವಂಥ ವಾಹನ ನಿಲುಗಡೆ ಕಟ್ಟಡವನ್ನು ಕಟ್ಟಿದ್ದಾರೆ. ಅದೂ ತಳಮಹಡಿಯಷ್ಟೇ ಅಲ್ಲ, ನೀರಿನೊಳಗೆ. ಇಂಥದೊಂದು ವ್ಯವಸ್ಥೆ ನಮ್ಮಲ್ಲಿ ಬರಲು ಸಾಧ್ಯವೇ? ಉತ್ತರ ಖಂಡಿತಾ ನನ್ನಲ್ಲಿ ಇಲ್ಲ.
ಸೈಕಲ್ ಬಳಸಿದರೆ ಭಕ್ಷೀಸು
ಹೊಸ ಉಪಕ್ರಮದ ಅನುಷ್ಠಾನದ ಗುರಿ ಈಡೇರಿಕೆಯಲ್ಲಿ ಎರಡು ವಿಧಾನಗಳಿರುತ್ತವೆ. ಮೊದಲನೆಯದು ನಿಧಾನವಾಗಿ ಕಠಿನ ಪರಿಸ್ಥಿತಿ ಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವಂಥ ಪರಿಸ್ಥಿತಿ ನಿರ್ಮಿಸು ವುದು. ಜನರೇ ಸ್ವಯಂ ಪ್ರೇರಣೆಯಿಂದ ಹೊಸ ಪರಿಸ್ಥಿತಿ, ಬದಲಾವಣೆ ಯನ್ನು ಅನುಷ್ಠಾನ ಮಾಡುವಂಥ ಪರಿಸರ, ವಾತಾವರಣ ನಿರ್ಮಿಸಿ ಗುರಿ ಸಾಧಿಸುವುದು. ಈ ಎರಡಕ್ಕೂ ನಮ್ಮಲ್ಲಿ ಉದಾಹರಣೆಗಳಿವೆ. ನೆದರ್‌ಲ್ಯಾಂಡ್ಸ್ ಎರಡನೇ ಉದಾಹರಣೆಗೆ ಸೇರಿರುವಂಥದ್ದು. ಅಲ್ಲಿ ಬೈಸಿಕಲ್ ಅನ್ನು ಎಷ್ಟರ ಮಟ್ಟಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದರೆ ಬೈಸಿಕಲ್ ಬಳಸುವ ನೌಕರರಿಗೆ ಪ್ರತೀ ಕಿ.ಮೀ.ಗೂ 21 ಸೆಂಟ್ಸ್ (ಸುಮಾರು 16 ರೂ.) ಗಳನ್ನು ತೆರಿಗೆ ರಹಿತ ಭತ್ತೆ ನೀಡಲಾಗುತ್ತದೆ. ಅಷ್ಟೇ ಅಲ್ಲ, ಬೈಸಿಕಲ್-ಇ ಬೈಸಿಕಲ್ ಕೊಳ್ಳಲು ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲಾಗುತ್ತಿದೆ. ಹೇಗಿದೆ ನೀತಿ ಜಾರಿ ನೋಡಿ. ನಮ್ಮಲ್ಲಿ ಈ ಬಜೆಟ್ (2023-24)ನಲ್ಲಿ ಬೈಸಿಕಲ್‌ಗಳ ಮೇಲಿನ ಆಮದು ಶುಲ್ಕ ವನ್ನು ಶೇ. 30-35ರಷ್ಟು ಹೆಚ್ಚು ಮಾಡಿದ್ದೇವೆ. ಆದರೆ ಇದು ಉದ್ಯಮಕ್ಕೆ ಅನುಕೂಲವಾಗಬಹುದು. ಹಾಗೆಂದು ಸೈಕಲ್‌ಗಳು ಸಿಕ್ಕಾಪಟ್ಟೆ ಅಗ್ಗವೇನೂ ಆಗದು, ಜನರಿಗೂ ಬೈಸಿಕಲ್ ಮೇಲೆ ಪ್ರೀತಿ ಹುಟ್ಟದು.
ಅಲ್ಲುಂಟು ನಟರಾಜ ಸರ್ವೀಸ್…
ನೆದರ್‌ಲ್ಯಾಂಡ್ಸ್ ವರ್ಷಕ್ಕೆ 35 ಸಾವಿರ ಕಿ.ಮೀ. ಸೈಕಲ್ ಪಥವನ್ನು ನಿರ್ಮಿಸುವ ಗುರಿ ಹೊಂದಿದೆ. ಅದಕ್ಕಾಗಿ ಸುಮಾರು 400 ದಶಲಕ್ಷ ಯುರೋಗಳನ್ನು ಸೈಕಲ್ ಸವಾರಿಗೆ ಪೂರಕವಾದ ಮೂಲ ಸೌಕರ್ಯ ಗಳನ್ನು ಒದಗಿಸಲು ಕಾದಿರಿಸುತ್ತದೆ. ಮತ್ತೂಂದು ನಗರ ಉಟ್ರೆಚ್‌ನಲ್ಲಿ 1.25 ಲಕ್ಷ ಬೈಸಿಕಲ್‌ಗಳಿಗೆ 12, 500 ನಿಲುಗಡೆ ಸ್ಥಳಗಳನ್ನು ಕಲ್ಪಿಸುತ್ತಿದೆ. ಹಾಗಾಗಿ ಸಾರಿಗೆ ಪರಿಕರ ವ್ಯವಸ್ಥೆಯೇ ಅಚ್ಚರಿ ಹುಟ್ಟಿಸುವಂತಿದೆ. ಆಮ್‌ಸ್ಟರ್‌ಡಮ್‌ನಲ್ಲಿ ಶೇ. 34ರಷ್ಟು ಮಂದಿ ಬೈಸಿಕಲ್ ಸಾಧನ ಅವಲಂಬಿಸಿದರೆ, ಶೇ. 24ರಷ್ಟು ಮಂದಿ ಕಾರುಗಳನ್ನು ಹೊಂದಿದ್ದಾರೆ. ಶೇ. 16ರಷ್ಟು ಮಂದಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ್ದಾರೆ. ಉಳಿದ ಶೇ. 23 ರಷ್ಟು ಮಂದಿ ಬಳಸುವುದು ನಟರಾಜ್ ಸರ್ವೀಸ್ ಅನ್ನು. ಅಂದರೆ ನಿತ್ಯವೂ ಅವರದ್ದು ಪಾದಯಾತ್ರೆ!
-ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.