ಬೆನ್ನು ಮತ್ತು ಮೊಣಕಾಲುಗಳ ಮೇಲೆ ಪರಿಣಾಮ
ಮನೆಯಿಂದಲೇ ಉದ್ಯೋಗ ನಿರ್ವಹಣೆ
Team Udayavani, Aug 29, 2021, 6:00 AM IST
ಕಳೆದ ವರ್ಷ ಕೋವಿಡ್-19 ಸೃಷ್ಟಿಸಿದ ಪರಿಸ್ಥಿತಿಯಿಂದಾಗಿ ಅನೇಕ ಮಂದಿ ಮನೆಯಿಂದಲೇ ಉದ್ಯೋಗ ನಿರ್ವಹಣೆ ಮಾಡಲು ಆರಂಭಿಸಿದ್ದಾರೆ. ಇಂತಹ ಬಹುತೇಕ ಪ್ರಕರಣಗಳಲ್ಲಿ ಮನೆಯಲ್ಲಿ ಸಹಾಯಕ್ಕೆ ಜನರು ಸಿಗದ್ದರಿಂದಾಗಿ ಅನೇಕರಿಗೆ “ಮನೆಯಿಂದ ಉದ್ಯೋಗ ನಿರ್ವಹಣೆ’ ಮತ್ತು “ಮನೆಗೆಲಸ’ ಎರಡನ್ನೂ ಏಕಕಾಲದಲ್ಲಿ ನಿರ್ವಹಿಸಬೇಕಾದ ಪರಿಸ್ಥಿತಿ ಹಾಗೂ ಮನೆಯ ಕೆಲಸಕಾರ್ಯಗಳು ಮತ್ತು ಕಚೇರಿಯ ಜವಾಬ್ದಾರಿ ಗಳನ್ನು ನಿಭಾಯಿಸಬೇಕಾದ ಸ್ಥಿತಿ ಉಂಟಾಯಿತು. ಗೃಹಿಣಿಯರ ಪಾಲಿಗೆ ಕೆಲಸದವರು ಸಿಗದೆ ಕೆಲಸದ ಹೊರೆ ಹೆಚ್ಚಾಗಿದೆ. ವೃತ್ತಿಪರರು ಹೆಚ್ಚು ಕಾಲ ಕುಳಿತೇ ಇರುವ ಅನಿವಾರ್ಯ ಉಂಟಾಗಿದ್ದು, ಇದರಿಂದ ಅವರ ನೋವು ಹೆಚ್ಚಿದೆ. ಲಾಕ್‌ಡೌನ್ ಅವಧಿಯಲ್ಲಿ ಜಿಮ್‌ಗಳು, ಉದ್ಯಾನಗಳು, ವಾಕಿಂಗ್ ಪ್ರದೇಶಗಳು ಮುಚ್ಚಿದ್ದರಿಂದ ವ್ಯಾಯಾಮದ ಕೊರತೆ ಎದುರಾಗಿದ್ದು, ಇದರಿಂದ ಸ್ನಾಯುಗಳು ದುರ್ಬಲವಾಗಿವೆ, ಅನೇಕರು ತೂಕ ಹೆಚ್ಚಿಸಿಕೊಂಡಿದ್ದಾರೆ.
ಇಂತಹ ಸಮಸ್ಯೆಗಳ ಪೈಕಿ ಮನೆಯಿಂದಲೇ ಕೆಲಸ ನಿರ್ವಹಿಸಬೇಕಾಗಿ ಬಂದಿರುವ ಅನೇಕರಲ್ಲಿ ದೈಹಿಕ ನೋವುಗಳು ಮತ್ತು ಇತರ ಲಕ್ಷಣಗಳು ಹೆಚ್ಚಾಗಿರುವುದು ಕಂಡುಬರುತ್ತಿದೆ. ಇವುಗಳಲ್ಲಿ ಹೆಚ್ಚು ಸಾಮಾನ್ಯವಾದವು ಎಂದರೆ ಬೆನ್ನು ಮತ್ತು ಮೊಣಕಾಲು ನೋವು. ಆಲಸ್ಯದ ಜೀವನಶೈಲಿ ಮತ್ತು ಕಳಪೆ ಕುಳಿತುಕೊಳ್ಳುವ ಭಂಗಿಗಳು ಸ್ನಾಯುಗಳು-ಮೂಳೆಗಳಿಗೆ ಸಂಬಂಧಿಸಿದ ಅನಾರೋಗ್ಯಗಳು, ಅದರಲ್ಲೂ ವಿಶೇಷವಾಗಿ ಕೆಳಬೆನ್ನು ಮತ್ತು ಮೊಣಕಾಲು ನೋವು ಆರಂಭವಾಗುವುದಕ್ಕೆ ಕೊಡುಗೆ ನೀಡುತ್ತವೆ.
ಬೆನ್ನು ನೋವು
ನಮ್ಮ ದೇಹದಲ್ಲಿ ಉಂಟಾಗುವ ಬಹುತೇಕ ಹೊರೆ ಪೆಲ್ವಿಸ್‌ನಿಂದ ಸ್ವಲ್ಪವೇ ಮೇಲಕ್ಕಿರುವ ಕೆಳಬೆನ್ನು ಭಾಗದ ಮೇಲೆ ಬೀಳುತ್ತದೆ. ಈ ಸಂಧಿಭಾಗದ ಮೇಲೆ ಎಷ್ಟು ಹೊರೆ ಬೀಳುತ್ತದೆ ಎಂದರೆ, ಕಳಪೆ ಭಂಗಿಗಳು ಮತ್ತು ಕಳಪೆ ಯಾಂತ್ರಿಕ ಭಾರ ಹೊರುವಿಕೆಯಿಂದ ನಮ್ಮಲ್ಲಿ ಅನೇಕರಿಗೆ ಆಗಾಗ ಈ ಭಾಗದಲ್ಲಿ ನೋವು ಮತ್ತು ಅನಾನುಕೂಲಗಳು ಅನುಭವಕ್ಕೆ ಬರುತ್ತಿರುತ್ತವೆ.
ಬೆನ್ನುನೋವು ಉಂಟಾಗಲು
ಕಾರಣಗಳು
ಕಳಪೆಯಾದ, ಸತತವಾದ ಭಂಗಿಗಳು. ಕುಳಿತುಕೊಳ್ಳುವ, ನಿಲ್ಲುವ, ಮಲಗುವ ಅಥವಾ ಇನ್ಯಾವುದೇ ಸತತ ಭಂಗಿಗಳು ಇದರಲ್ಲಿ ಸೇರಿರಬಹುದು. ಕಳಪೆ ಭಂಗಿಗಳಿಂದಾಗಿ ಕ್ರಮೇಣ ನಮ್ಮ ಲಿಗೆ¾ಂಟ್ ಮತ್ತು ಇತರ ಅಂಗಾಂಶಗಳು ದಣಿಯುತ್ತವೆ ಮತ್ತು ವಿಸ್ತರಣೆಯಾಗುತ್ತವೆ; ಇದರಿಂದಾಗಿ ನೋವು ಅಥವಾ ಅನಾನುಕೂಲಗಳು ತಲೆದೋರುತ್ತವೆ.
ಬೆನ್ನುನೋವಿಗೆ ಸಾಮಾನ್ಯ ಕಾರಣ ಕುಳಿತುಕೊಳ್ಳುವ ಕಳಪೆ ಅಥವಾ ತಪ್ಪು ಭಂಗಿ. ಬೆನ್ನುಬಾಗಿಸಿ ಜಾರಿದ ಅಥವಾ ಬಾಗಿದ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಡಿಸ್ಕ್ ಗಳ ಮೇಲೆ ಹೊರೆ ಬೀಳುತ್ತದೆ. ಡಿಸ್ಕ್ ಎಂದರೆ ಕಶೇರುಕಗಳು ಒಂದಕ್ಕೊಂದು ಉಜ್ಜಿ ಘರ್ಷಿಸದಂತೆ ರಕ್ಷಿಸುವ ದ್ರವ ತುಂಬಿದ ಮೆತ್ತೆಗಳು. ಇನ್ನಿತರ ಯಾವುದಾದರೂ ಆಂತರಿಕ ಸಮಸ್ಯೆಗಳಿದ್ದರೆ ಇದು ಉಲ್ಬಣಗೊಳ್ಳುತ್ತದೆ. ಕಂಪ್ಯೂಟರ್ ಪರದೆ ಅಥವಾ ಮೊಬೈಲ್ ಫೋನ್ ಪರದೆಯನ್ನು ವೀಕ್ಷಿಸುವುದಕ್ಕಾಗಿ ದೇಹವನ್ನು ಮುಂದಕ್ಕೆ ಬಾಗಿಸುವುದರಿಂದ ಅನೇಕರಿಗೆ ಕುತ್ತಿಗೆ ಮತ್ತು ಬೆನ್ನಿನ ಮೇಲ್ಭಾಗದಲ್ಲಿ ನೋವು ಅನುಭವಕ್ಕೆ ಬರುತ್ತಿದೆ. ಸೋಫಾದಲ್ಲಿ ಮೈಚಾಚಿ ತಾಸುಗಟ್ಟಲೆ ಟಿ.ವಿ. ವೀಕ್ಷಿಸುವ ಆಸೆಯಾಗುತ್ತದೆ ನಿಜವಾದರೂ ಇದರಿಂದ ನಮ್ಮ ಬೆನ್ನಿನ ಸಮಸ್ಥಿತಿ ತಪ್ಪಬಹುದಾಗಿದೆ.
ಕುಳಿತುಕೊಳ್ಳುವುದರಿಂದ ಉಂಟಾಗುವ ಬೆನ್ನುನೋವಿಗೆ ಪ್ರಧಾನ ಕಾರಣಗಳೆಂದರೆ, ತುಂಬಾ ಹೊತ್ತು ಕುಳಿತಿರುವುದು, ಕುಳಿತುಕೊಳ್ಳುವ ನಿರ್ದಿಷ್ಟ ಭಂಗಿಗಳಿಂದಾಗಿ ಬೆನ್ನಿನ ಸ್ನಾಯುಗಳು ಹೆಚ್ಚು ಸಕ್ರಿಯವಾಗಿರುವುದು ಮತ್ತು ಚಲನೆಗಳಲ್ಲಿ ವೈವಿಧ್ಯಗಳ ಕೊರತೆ.
ಸಾಮಾನ್ಯವಾಗಿ ನೋವು ಸ್ಥಿರವಾದ ಕಳಪೆ ಭಂಗಿಯಲ್ಲಿದ್ದಾಗ ಇರುತ್ತದೆ ಮತ್ತು ನಮ್ಮ ಬೆನ್ನುಹುರಿಗೆ ಸೀಮಿತವಾಗಿದ್ದು, ಅಲ್ಲಿಂದ ಇತರ ಭಾಗಗಳಿಗೆ ಪ್ರಸರಣವಾಗುವುದಿಲ್ಲ. ಅಲ್ಲದೆ, ಚಲಿಸಿದಾಗ ನೋವು ಮಾಯವಾಗುತ್ತದೆ ಮತ್ತು ಕೆಳಕಾಲಿನಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.
ಇಂಥ ಪ್ರಕರಣಗಳಲ್ಲಿ ಶೇ. 85ರಿಂದ ಶೇ. 90 ಮಂದಿಗೆ ನಿಲ್ಲುವ, ಕುಳಿತುಕೊಳ್ಳುವ, ನಡೆಯುವ ಅಥವಾ ಮಲಗುವ ಕಳಪೆ ಭಂಗಿಗಳನ್ನು ತ್ಯಜಿಸುವುದರಿಂದ ಇಂತಹ ಬೆನ್ನುನೋವಿನಿಂದ ಮುಕ್ತಿ ಸಿಗುತ್ತದೆ.ನಾವು ದೀರ್ಘಕಾಲ ಕುಳಿತುಕೊಳ್ಳುವ, ನಿಲ್ಲುವ ಅಥವಾ ಇತರ ಯಾವುದೇ ಸರಿಯಾದ ಭಂಗಿಗಳನ್ನು ಕಲಿತು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.
ಆಗಾಗ ವಿರಾಮ ತೆಗೆದುಕೊಳ್ಳುವುದು ಕೂಡ ಮುಖ್ಯ. ಅಲ್ಲದೆ, ನಮ್ಮ ಕೆಳಬೆನ್ನಿನ ಮೇಲೆ ಬಿದ್ದಿರುವ ಹೊರೆಯನ್ನು ತಗ್ಗಿಸುವುದಕ್ಕಾಗಿ ಬೆನ್ನನ್ನು ವಿವಿಧ ಕಡೆಗಳಿಗೆ ಲಘುವಾಗಿ ತಿರುಚುವುದು ಅಥವಾ ಬಾಗಿಸಬೇಕು.
ಪೋಶ್ಚರ್ ಒವರ್-ಕರೆಕ್ಟ್ ವ್ಯಾಯಾಮ. ನೀವು ಕಂಪ್ಯೂಟರ್ ಮುಂದೆ ದೀರ್ಘಕಾಲ ಕುಳಿತುಕೊಳ್ಳುವವರಾಗಿದ್ದರೆ ಇದೊಂದು ಶಕ್ತಿಯುತ ವ್ಯಾಯಾಮ. ಇದರಲ್ಲಿ ನಾವು ನಮ್ಮ ಬೆನ್ನನ್ನು ಮುಂದಕ್ಕೆ ಬಾಗಿಸುತ್ತೇವೆ ಮತ್ತು ಬಳಿಕ ಸಮಸ್ಥಿತಿಗೆ ಹಿಂದಿರುಗುತ್ತೇವೆ. ನಿಮ್ಮ ಕೆಲಸದ ದಿನಗಳಲ್ಲಿ ಇದನ್ನು ಪ್ರತೀ 30 ನಿಮಿಷಗಳಿಗೆ ಒಮ್ಮೆ 10ರಿಂದ 15 ಬಾರಿ ಮಾಡಬೇಕು. ಇದರಿಂದ ನಮ್ಮ ಬೆನ್ನಿನ ಮೇಲೆ ಬಿದ್ದಿರುವ ಹೊರೆ ತಗ್ಗುತ್ತದೆ.
ನಿಂತು ಮಾಡುವ ಬೆನ್ನು ವಿಸ್ತರಣೆ. ಇದು ಇನ್ನೊಂದು ಸರಳ ವಿಸ್ತರಣೆ ವ್ಯಾಯಾಮವಾಗಿದೆ. ದಿನದಲ್ಲಿ ಪ್ರತೀ 2 ತಾಸುಗಳಿಗೆ ಒಮ್ಮೆ ಐದಾರು ಬಾರಿ ಇದನ್ನು ಪುನರಾವರ್ತಿಸುವುದರಿಂದ ಪರಿಣಾಮಕಾರಿಯಾಗುತ್ತದೆ. ಭಂಗಿಗಳಿಗೆ ಸಂಬಂಧಿಸಿದ ಬೆನ್ನುನೋವಿನಿಂದ ಮುಕ್ತಿ ನೀಡಿ ದೀರ್ಘಕಾಲಿಕ ತೊಂದರೆ ಉಂಟಾಗದಂತೆ ಇದು ತಡೆಯುತ್ತದೆ.
ಮೊಣಕಾಲು ನೋವು
ಭಂಗಿಗೆ ಸಂಬಂಧಿಸಿದ ಮೊಣಕಾಲು ನೋವು ಕುಳಿತಿರುವ ಅವಧಿ ಮತ್ತು ಭಂಗಿಯ ಪರಿಣಾಮವಾಗಿ ಉಂಟಾಗಿರಬಹುದು. ಜತೆಗೆ, ನಾವು ಕುಳಿತುಕೊಳ್ಳುವ ಪೀಠೊಪಕರಣ ಅಥವಾ ಅಂತರ್ಗತವಾಗಿರುವ ಇತರ ಯಾವುದೇ ಆರೋಗ್ಯ ಸಮಸ್ಯೆಯಿಂದ ಉಂಟಾಗಿರಬಹುದು.
ಒಂದು ದಿನದಲ್ಲಿ 6ರಿಂದ 8 ಗಂಟೆಗಳಿಗಿಂತ ಹೆಚ್ಚು ಹೊತ್ತು ಕುಳಿತಿರುವುದು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂಬುದಾಗಿ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಶಿಫಾರಸು ಮಾಡುತ್ತದೆ. ದೀರ್ಘಾವಧಿ ಕುಳಿತುಕೊಳ್ಳುವುದನ್ನು ತಪ್ಪಿಸಬೇಕು ಮತ್ತು ತುಂಬಾ ಹೊತ್ತು ಕುಳಿತಿರಬೇಕಾದ ಅನಿವಾರ್ಯ ಇದ್ದರೆ ಪ್ರತೀ 30ರಿಂದ 60 ನಿಮಿಷಗಳಿಗೆ ಒಮ್ಮೆ ಎದ್ದು ಚಲಿಸಬೇಕು ಮತ್ತು ದೇಹವನ್ನು ವಿಸ್ತರಿಸಬೇಕು ಎಂಬುದಾಗಿ ಅದು ಶಿಫಾರಸು ಮಾಡುತ್ತದೆ. ನಿರ್ದಿಷ್ಟ ಹೊತ್ತು ಕುಳಿತುಕೊಂಡೇ ಇರುವುದರಿಂದ ನಮ್ಮ ಸ್ನಾಯುಗಳು ಮತ್ತು ಟೆಂಡನ್‌ಗಳು ಪೆಡಸಾಗುತ್ತವೆ, ಇದರಿಂದ ಅನಾನುಕೂಲ ಉಂಟಾಗಬಹುದು. ಕಾಲುಗಳನ್ನು ಒಂದರ ಮೇಲೆ ಒಂದು ಹಾಕಿಕೊಂಡು, ಬಾಗಿಕೊಂಡಂತಹ ಕೆಟ್ಟ ಅಥವಾ ಅಸಮರ್ಪಕ ಭಂಗಿಯಲ್ಲಿ ಕುಳಿತಿರುವುದು ನಮ್ಮ ಮೊಣಕಾಲು ಚಿಪ್ಪಿನ ಮೇಲೆ ಒತ್ತಡವನ್ನು ಉಂಟುಮಾಡಿ ಅನಾನುಕೂಲಕ್ಕೆ ಕಾರಣವಾಗುತ್ತದೆ. ಕುಳಿತುಕೊಳ್ಳುವ ಕುರ್ಚಿ ತೀರಾ ಕೆಳಮಟ್ಟದಲ್ಲಿ ಇರುವುದು ಅಥವಾ ಫುಟ್‌ರೆಸ್ಟ್ ಇಲ್ಲದಿರುವುದು ಇತ್ಯಾದಿಗಳಿಂದ ಮೊಣಕಾಲು ದೀರ್ಘಕಾಲ ಮಡಚಿಕೊಂಡಿರಬೇಕಾದ ಸ್ಥಿತಿ ಉಂಟಾಗಬಹುದಾಗಿದ್ದು, ಇದರಿಂದಲೂ ಮೊಣಕಾಲು ನೋವು ಉಲ್ಬಣವಾಗಬಹುದು.
ಮನೆಯಿಂದ ಕೆಲಸ ಮಾಡುವ ಸಂದರ್ಭ ಸ್ನಾಯು ಮತ್ತು ಸಂಧಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದಕ್ಕೆ ನಾಲ್ಕು ಪ್ರಧಾನವಾದ ಕಾರಣಗಳಿವೆ. ಅವುಗಳೆಂದರೆ, ಕಳಪೆಯಾದ ಎರ್ಗೊನಾಮಿಕ್ ಸೆಟ್-ಅಪ್ (ಪೀಠೊಪಕರಣಗಳು, ಕುರ್ಚಿಯ ಬೆನ್ನು ಒರಗುವ ಭಾಗದ ಸ್ಥಿತಿ ಇತ್ಯಾದಿ), ದೀರ್ಘಕಾಲ ಕೆಲಸ ಮಾಡುವುದು, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಸರಿಯಾದ ಪೌಷ್ಟಿಕಾಂಶ ಪೂರೈಕೆ ಇಲ್ಲದಿರುವುದು.
ಮನೆಯಿಂದ ಕೆಲಸ ಮಾಡುವ ವೇಳೆ ಸರಿಯಾದ ಎರ್ಗೊನಾಮಿಕ್ ಸೆಟ್‌ಅಪ್ ಇರುವುದಿಲ್ಲ ಅಥವಾ ಕೆಸಮ ಮಾಡುವ ಸರಿಯಾದ ಸ್ಥಳಾವಕಾಶದ ಕೊರತೆ ಇರುತ್ತದೆ. ತಪ್ಪು ಭಂಗಿಯಲ್ಲಿ ದೀರ್ಘಕಾಲ ಕಳೆಯುವುದು ನಮ್ಮ ಸಂಧಿಗಳು ಮತ್ತು ಸ್ನಾಯುಗಳಿಗೆ ಹಾನಿಕರವಾಗಿದೆ.
ವಿರಾಮಗಳಿಲ್ಲದೆ ಸತತವಾಗಿ ದೀರ್ಘಕಾಲ ಕೆಲಸ ಮಾಡುವುದು ಜಡತ್ವದ ಜೀವನಶೈಲಿಗೆ ಕೊಡುಗೆ ನೀಡುತ್ತದೆ. ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯ ವ್ಯಕ್ತಿಯ ಒಟ್ಟು ವೇಳಾಪಟ್ಟಿಯನ್ನು ಬದಲಾಯಿಸಿದೆ. ಇದರಿಂದ ಮಾನಸಿಕ ಮತ್ತು ದೈಹಿಕ ಒತ್ತಡಗಳೆರಡೂ ಹೆಚ್ಚಿವೆ. ಕೆಲಸ ಮಾಡುವ ತಾಸುಗಳಲ್ಲಿಯೂ ಬದಲಾವಣೆಯಾಗಿದೆ.
ಇದಲ್ಲದೆ ವಿರಾಮ ತೆಗೆದುಕೊಳ್ಳಲು, ಹೊರಗೆ ಹೋಗಿಬರುವ ನೆಪವೂ ಇಲ್ಲವಾಗಿದೆ. ಇದರಿಂದಾಗಿ ದೀರ್ಘಾವಧಿ ಕೆಲಸ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದು, ಇದು ಕುತ್ತಿಗೆ ಮತ್ತು ಬೆನ್ನಿನ ಮೇಲೆ ಹೆಚ್ಚು ಒತ್ತಡ ಹೇರುತ್ತದೆ. ಒಟ್ಟಾರೆಯಾದ ದೈಹಿಕ ಚಟುವಟಿಕೆಗಳ ಕೊರತೆಯಿಂದ ಸ್ನಾಯುಗಳ ಮೇಲೆ ಹೆಚ್ಚು ಒತ್ತಡವುಂಟಾಗಿ ನಾವು ಕೆಲಸ ಮಾಡುತ್ತಿದ್ದರೂ ಇಲ್ಲದಿದ್ದರೂ ನೋವನ್ನು ಉಂಟುಮಾಡುತ್ತದೆ. ಹಿಂದೆ ದೈಹಿಕವಾಗಿ ಚಟುವಟಿಕೆಗಳಿಂದ ಕೂಡಿ ಸಕ್ರಿಯವಾಗಿದ್ದವರಿಗೂ ಹಠಾತ್ ಚಟುವಟಿಕೆಗಳ ಕೊರತೆಯಿಂದ ಸಮಸ್ಯೆಯಾಗಿದೆ. ಸ್ನಾಯುಗಳು ಮಾತ್ರವಲ್ಲ, ನಮ್ಮ ಸಂಧಿಗಳು ಮತ್ತು ಎಲುಬುಗಳು ಕೂಡ ಪ್ರತಿಕೂಲ ಪರಿಣಾಮಕ್ಕೆ ಒಳಗಾಗುತ್ತವೆ.
ಕೊನೆಯದಾಗಿ, ಸರಿಯಾದ ಪೌಷ್ಟಿಕಾಂಶಗಳ ಕೊರತೆ, ಅದರಲ್ಲೂ ವಿಶೇಷವಾಗಿ ವಿಟಮಿನ್ ಡಿಯ ಕೊರತೆ, ಆರೋಗ್ಯಕರ ಆಹಾರವನ್ನು ಸೇವಿಸದೆ ಇರುವುದು ಮತ್ತು ಬಾಯಿಗೆ ರುಚಿಕರವಾದ ಆದರೆ ದೇಹಕ್ಕೆ ಒಳ್ಳೆಯದಲ್ಲದ ಜಂಕ್ ಫುಡ್‌ನಂತಹ ಆಹಾರಗಳನ್ನು ಅವಲಂಬಿಸಿರುವುದು ಕೂಡ ಈ ಸಮಸ್ಯೆಗಳಿಗೆ ಕೊಡುಗೆ ನೀಡುತ್ತದೆ.ತಡೆ ನಾವು ಕಾಳಜಿ ವಹಿಸಬೇಕಾದ ಎರಡು ಅಂಶಗಳು ಎಂದರೆ, ವ್ಯಾಯಾಮ ಮತ್ತು ಆಹಾರ ಶೈಲಿ. ಸ್ನಾಯುಗಳು ಮತ್ತು ಸಂಧಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಮ್ಮ ದೇಹತೂಕದ ಬಗ್ಗೆ ಎಚ್ಚರದಿಂದ ಇರಬೇಕು. ಮನೆಯಲ್ಲಿಯೇ ದಿನಕ್ಕೆ ಹಲವು ಬಾರಿ ವ್ಯಾಯಾಮ ನಡೆಸಬಹುದು. ಇದು ನಮ್ಮ ದೇಹವನ್ನು ಸಕ್ರಿಯವಾಗಿ, ಚಲನೆ ಯಿಂದ ಕೂಡಿರಲು ಸಹಾಯ ಮಾಡುತ್ತದೆ. ಜಾರಿಕೊಂಡಂತೆ ಇರಬಾರದು, ಸೊಂಟದಿಂದ ಮುಂದಕ್ಕೆ ಬಾಗಿದಂತೆ ಇರ ಬಾರದು, ಮೊಣಕಾಲುಗಳಿಂದ ನಿಧಾನವಾಗಿ ನೇರವಾಗಿರಬೇಕು. ಪುಸ್ತಕಗಳನ್ನು ಓದುವಾಗ, ಟಿ.ವಿ. ನೋಡುವಾಗ, ಮೊಬೈಲ್ ಫೋನ್ ಉಪಯೋಗಿಸುವಾಗ ಅಥವಾ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ನಮ್ಮ ದೇಹ ಭಂಗಿಗಳ ಬಗ್ಗೆ ಕಾಳಜಿ ವಹಿಸಬೇಕು. ಈ ಚಟುವಟಿಕೆಗಳನ್ನು ಕೈಗೊಳ್ಳುವಾಗ ಸರಿಯಾದ ಭಂಗಿಯಲ್ಲಿ ಕುಳಿತಿರಬೇಕು. ಇವುಗಳನ್ನು ಮಲಗಿಕೊಂಡು ಮಾಡಬಾರದು, ಏಕೆಂದರೆ ಅದರಿಂದ ನಮ್ಮ ದೇಹದಲ್ಲಿ ರಕ್ತಪರಿ ಚಲನೆ ಕಡಿಮೆಯಾಗಿ ಭಂಗಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.
ಬೆನ್ನು ಮತ್ತು ಮೊಣಕಾಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಸರಳ ಸಲಹೆಗಳು ಹೀಗಿವೆ:
– 30ರಿಂದ 60 ನಿಮಿಷಗಳಿಗಿಂತ ಹೆಚ್ಚುಕಾಲ ಸತತವಾಗಿ ಕುಳಿತುಕೊಂಡಿರುವುದನ್ನು ತಪ್ಪಿಸಿ. ಕೆಲಸದ ಮಧ್ಯೆ ಆಗಾಗ ವಿರಾಮ ತೆಗೆದುಕೊಳ್ಳಿ, ಒಂದು ಸುತ್ತು ತಿರುಗಾಡಿ ಬನ್ನಿ, ದೇಹವನ್ನು ಸ್ವಲ್ಪ ಚಾಚಿ ಚಲನಶೀಲರಾಗಿ.
– ಪ್ರಾಥಮಿಕವಾದ ದೈಹಿಕ ವಿಸ್ತರಣೆಯ ವ್ಯಾಯಾಮಗಳಿಗೆ ನಿಯಮಿತವಾದ ವೇಳಾಪಟ್ಟಿ ಹಾಕಿಕೊಳ್ಳಿ. ಕೆಲವರಿಗೆ ಇದನ್ನು ಬೆಳಗ್ಗೆ ಮಾಡುವುದು ಇಷ್ಟವಾಗಬಹುದು, ಇನ್ನು ಕೆಲವರಿಗೆ ಸಂಜೆ ಹಿತವೆನಿಸಬಹುದು. ನಿಮಗೆ ಯಾವುದು ಹಿತ ಎಂಬುದನ್ನು ಕಂಡುಕೊಳ್ಳಿ ಮತ್ತು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಿ.
– ಅಡುಗೆಮನೆಯಲ್ಲಿ, ಅಡುಗೆ ಮಾಡುವಾಗ ಅಥವಾ ಸಿಂಕ್‌ನಲ್ಲಿ ಪಾತ್ರೆ ತೊಳೆಯುವಾಗ ಬಾಗುವುದನ್ನು ತಪ್ಪಿಸಿ. ಬಾಗುವುದರಿಂದ ಬೆನ್ನುನೋವು ಉಲ್ಬಣವಾಗುತ್ತದೆ. ಒಂದು ಕಾಲಿಗೆ ವಿಶ್ರಾಂತಿ ನೀಡಲು ಒಂದು ಕಾಲುಮಣೆ ಅಥವಾ ಫುಟ್‌ಸ್ಟೂಲ್ ಇರಿಸಿಕೊಳ್ಳಿ. ಒಂದು ಕಾಲನ್ನು ಇದರ ಮೇಲಿರಿಸಿ, ಸ್ವಲ್ಪ ಸಮಯದ ಬಳಿಕ ಕಾಲನ್ನು ಬದಲಾಯಿಸಿ. ಇದರಿಂದ ದೇಹದ ತೂಕ ಎರಡು ಕಾಲುಗಳ ಮೇಲೆ ಪರ್ಯಾಯವಾಗಿ ಬೀಳುತ್ತದೆ. ಆಗ ಬಾಗಿದಾಗ ಬೆನ್ನಿನ ಮೇಲೆ ಹೊರೆ ಬೀಳುವುದು ತಪ್ಪುತ್ತದೆ.
-ನೆಲ ಗುಡಿಸುವಾಗ ಅಥವಾ ಒರೆಸುವ ಸಂದರ್ಭದಲ್ಲಿ ಫ್ಲೋರ್ ಮಾಪ್, ಉದ್ದನೆಯ ಹಿಡಿಕೆಯಿರುವ ಪೊರಕೆ ಮತ್ತು ಸ್ಟಾಂಡ್ ಉಪಯೋಗಿಸುವ ಮೂಲಕ ಬಾಗುವುದನ್ನು ತಪ್ಪಿಸಬಹುದು.
– ಸರಿಯಾಗಿ ನಿದ್ದೆ ಮಾಡಿ. ಸರಿಯಾದ ನಿದ್ದೆಯಿಂದ ಒಟ್ಟು ಆರೋಗ್ಯ ಚೆನ್ನಾಗಿದ್ದು, ನೋವುಗಳು ಕಡಿಮೆಯಾಗುತ್ತವೆ.
– ಪ್ರತೀ ದಿನ ಸ್ವಲ್ಪ ಕಾಲ ಧ್ಯಾನ ಮಾಡಿ. ಇದರಿಂದ ಎರಡು ರೀತಿಗಳಲ್ಲಿ ಪ್ರಯೋಜನವಾಗುತ್ತದೆ- ಧ್ಯಾನವು ನೋವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಸದ್ಯದ ಪರಿಸ್ಥಿತಿಯಲ್ಲಿ ಎಲ್ಲೆಡೆ ಕಂಡುಬರುತ್ತಿರುವ ಋಣಾತ್ಮಕ ಸಂದೇಶಗಳಿಂದ ಉಂಟಾಗುವ ಒತ್ತಡವನ್ನು ನಿಭಾಯಿಸಲು ಕೂಡ ನೆರವಾಗುತ್ತದೆ.
– ನಮ್ಮ ದೇಹದ ಬಗ್ಗೆ ಗಮನಕೊಡಿ, ಅದರ ಧ್ವನಿಯನ್ನು ಆಲಿಸಿ. ಏನೋ ತಪ್ಪಾಗಿದೆ, ಏನೋ ಸರಿಯಾಗಿಲ್ಲ ಎಂಬುದನ್ನು ದೇಹ ಹೇಳುವ ವಿಧಾನವೇ ನೋವು. ದೀರ್ಘಕಾಲಿಕ ನೋವು ಇದ್ದರೆ ಅದನ್ನು ನಿರ್ಲಕ್ಷಿಸಿ ಮುಂದುವರಿಯಬೇಡಿ; ಅದರಿಂದ ಸಮಸ್ಯೆ ಉಲ್ಬಣವಾಗಬಹುದು.
– ನೋವು ಇದ್ದ ಸ್ಥಳದ ಮೇಲೆ ಇರಿಸುವುದಕ್ಕಾಗಿ ಬಿಸಿ ಅಥವಾ ಶೈತ್ಯ ಪ್ಯಾಕ್ ಉಪಯೋಗಿಸಿ. ಹಾಟ್ ಬ್ಯಾಗ್‌ಗಳನ್ನು ದೀರ್ಘಕಾಲ ಇರಿಸಬೇಡಿ, ಅದು ತೊಂದರೆ ಉಂಟುಮಾಡಬಹುದು. ಇವುಗಳನ್ನು ಕೆಲವು ನಿಮಿಷಗಳ ಕಾಲ ಉಪಯೋಗಿಸಬಹುದು ಮತ್ತು ಆಗಾಗ ಪುನರಾವರ್ತಿಸಿ.
– ಮುಖ್ಯವಾಗಿ, ವೈದ್ಯರನ್ನು ಕಂಡು ಸಮಾಲೋಚನೆ ನಡೆಸಲು ಹಿಂಜರಿಕೆ ಬೇಡ. ದೈಹಿಕವಾಗಿ ಅಂತರ ಕಾಪಾಡಿಕೊಳ್ಳುವುದು ಅಗತ್ಯವಾದರೂ ಈಗ ಆಗಿರುವ ತಾಂತ್ರಿಕ ಪ್ರಗತಿಯಿಂದಾಗಿ ವರ್ಚವಲ್ ಆಗಿ ಟೆಲಿಮೆಡಿಸಿನ್ ಮೂಲಕ ವೈದ್ಯರನ್ನು ಸಂಪರ್ಕಿಸಬಹುದಾಗಿದೆ. ಇದರಿಂದ ನಿಮಗೆ ನೋವನ್ನು ಆರಂಭಿಕ ಹಂತದಲ್ಲಿಯೇ ನಿಭಾಯಿಸುವ ಮೂಲಕ ಅದು ಉಲ್ಬಣಗೊಳ್ಳದಂತೆ ತಡೆಯಲು ಅಗತ್ಯವಾದ ಸರಿಯಾದ ಸಲಹೆ ಸೂಚನೆಗಳು ನಿಮಗೆ ಲಭಿಸುತ್ತವೆ.
-ಡಾ| ಸುರೇಂದ್ರ ಯು. ಕಾಮತ್
ಪ್ರೊಫೆಸರ್ ಮತ್ತು ಕನ್ಸಲ್ಟಂಟ್ ಆರ್ಥೊಪೆಡಿಕ್ ಸರ್ಜನ್
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
“ಟೋಲ್‌ಗಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.