ಉತ್ತರಪ್ರದೇಶದಲ್ಲಿ ರೈತರು-ಬಿಜೆಪಿ ಘರ್ಷಣೆ; ನಾಲ್ವರು ರೈತರು ಸೇರಿ 8 ಸಾವು
Team Udayavani, Oct 4, 2021, 5:45 AM IST
ಲಕ್ನೋ: ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ರವಿವಾರ ಪ್ರತಿಭಟನಕಾರ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 8 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. 3ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.
ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರು ಪ್ರತಿಭಟನಕಾರರ ಮೇಲೆಯೇ ಕಾರು ಚಲಾಯಿಸಿದ್ದು, ನಾಲ್ವರು ರೈತರು ಸ್ಥಳದಲ್ಲೇ ಅಸುನೀಗಿದ್ದಾಗಿ ರೈತರು ಆರೋಪಿಸಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಅನ್ನದಾತರು, ಅಲ್ಲಿದ್ದ 3 ಕಾರುಗಳಿಗೆ(ಮಿಶ್ರಾರದ್ದೂ ಸೇರಿ) ಬೆಂಕಿ ಹಚ್ಚಿದ್ದು, ಹಿಂಸಾಚಾರ ಭುಗಿಲೆದ್ದಿದೆ.
ಪುತ್ರ ಸ್ಥಳದಲ್ಲಿರಲಿಲ್ಲ ಎಂದ ಸಚಿವ: ಇದೇ ವೇಳೆ, “ಘಟನೆ ವೇಳೆ ನನ್ನ ಪುತ್ರ ಆ ಸ್ಥಳದಲ್ಲೇ ಇರಲಿಲ್ಲ. ಅದಕ್ಕೆ ನನ್ನಲ್ಲಿ ವೀಡಿಯೋ ಸಾಕ್ಷ್ಯವಿದೆ. ಬಿಜೆಪಿ ಕಾರ್ಯಕರ್ತರ ಕಾರಿನ ಮೇಲೆ ರೈತರು ಕಲ್ಲುತೂರಾಟ ನಡೆಸಿದ್ದರಿಂದ, ಕಾರು ಪಲ್ಟಿಯಾಯಿತು. ಈ ವೇಳೆ ಇಬ್ಬರು ಸಾವಿಗೀಡಾದರು. ಅನಂತರ ರೈತರು ಕಾರಿನಲ್ಲಿದ್ದ ನಮ್ಮ ಪಕ್ಷದ ಮೂವರು ಕಾರ್ಯಕರ್ತರು ಹಾಗೂ ಚಾಲಕನಿಗೆ ಥಳಿಸಿ ಕೊಂದುಹಾಕಿದ್ದಾರೆ’ ಎಂದು ಸಚಿವ ಮಿಶ್ರಾ ಆರೋಪಿಸಿದ್ದಾರೆ.
ರೈತರ ವಾದವೇನು?: ಇತ್ತೀಚೆಗೆ ಭಾಷಣವೊಂದರಲ್ಲಿ ಕೇಂದ್ರ ಸಚಿವ ಮಿಶ್ರಾ ಅವರು, ಕೇಂದ್ರ ಸರಕಾರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಕುರಿತು ಪ್ರಸ್ತಾವಿಸಿ, “ಇದು 10-15 ಜನರು ನಡೆಸುತ್ತಿರುವ ಪ್ರತಿಭಟನೆಯಾಗಿದ್ದು, ಅವರನ್ನು ಸರಿದಾರಿಗೆ ತರಲು ನಮಗೆ ಕೇವಲ 2 ನಿಮಿಷ ಸಾಕು’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ರೈತರು, ಮಿಶ್ರಾ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದರು. ರವಿವಾರ ಮಿಶ್ರಾ ಅವರ ಸ್ವಗ್ರಾಮ ಟಿಕುನಿಯಾದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಇಲ್ಲಿಗೆ ಉತ್ತರಪ್ರದೇಶ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಕೂಡ ಆಗಮಿಸುವವರಿದ್ದರು. ಅಲ್ಲಿಗೆ ಬರುವ ಮೌರ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ರೈತರು ಸಿದ್ಧತೆ ನಡೆಸಿದ್ದರು. ಈ ವೇಳೆ, ಅಲ್ಲಿಗೆ ಬಂದ ಮೂರು ಕಾರುಗಳು ಏಕಾಏಕಿ ರೈತರ ಮೇಲೆಯೇ ಹಾದುಹೋದವು. ಘಟನೆಯಲ್ಲಿ ನಾಲ್ವರು ರೈತರು ಸಾವಿಗೀಡಾದರು ಎಂದು ರೈತ ಸಂಘಟನೆಯ ನಾಯಕ ತೇಜೀಂದರ್ ಎಸ್. ವಿರಾಕ್ ಹೇಳಿದ್ದಾರೆ. ಜತೆಗೆ, ಮೃತರಲ್ಲಿ ಒಬ್ಬ ರೈತನನ್ನು ಆ::ಶಿಷ್ ಮಿಶ್ರಾ ಗುಂಡು ಹಾರಿಸಿ ಕೊಂದಿದ್ದಾಗಿಯೂ ಆರೋಪಿಸಿದ್ದಾರೆ.
ಇದನ್ನೂ ಓದಿ:ಆರೋಗ್ಯ ಖಾತರಿಗೆ ಓಟದ ಸ್ಪರ್ಧೆ ನಡೆಸೋಣ, ಬನ್ನಿ!
ಸಿಎಂ ತುರ್ತು ಸಭೆ: ಘಟನೆ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನೂ ಸ್ಥಗಿತಗೊಳಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಘಟನೆಯನ್ನು ಖಂಡಿಸಿರುವ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಕೂಡಲೇ ಪರಿಸ್ಥಿತಿ ತಹಬಂದಿಗೆ ತರುವಂತೆ ಸಹಾಯಕ ಡಿಜಿಪಿ ಪ್ರಶಾಂತ್ ಕುಮಾರ್‌ಗೆ ಸೂಚಿಸಿದ್ದಾರೆ. ಘರ್ಷಣೆ ಬಳಿಕ ಲಖೀಂಪುರ ಖೇರಿಯಲ್ಲಿ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಲಕ್ನೋ ಸುತ್ತಲಿನ ಎಲ್ಲ ಗಡಿಗಳನ್ನೂ ಮುಚ್ಚಲಾಗಿದೆ.
ಕೇಂದ್ರ ಸಚಿವರ ರಾಜೀನಾಮೆಗೆ ಆಗ್ರಹ: ರೈತರ ಸಾವಿಗೆ ಕಾರಣವಾದ ಕೇಂದ್ರ ಸಚಿವ ಮಿಶ್ರಾರನ್ನು ಕೂಡಲೇ ಆ ಹುದ್ದೆಯಿಂದ ಕಿತ್ತೂಗೆಯಬೇಕು, ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು, ಗಾಯಾಳುಗಳಿಗೆ ಪರಿಹಾರ ನೀಡಬೇಕು ಮತ್ತು ಮೃತರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಪಂಜಾಬ್ ಕಾಂಗ್ರೆಸ್ ಆಗ್ರಹಿಸಿದೆ.
ಇಂದು ಪ್ರತಿಭಟನೆ
ಲಖೀಂಪುರ ಘಟನೆ ಖಂಡಿಸಿ ಸೋಮವಾರ ದೇಶಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವಂತೆ ರೈತರಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಸುಪ್ರೀಂ ನ್ಯಾಯಮೂರ್ತಿ ನೇತೃತ್ವದಲ್ಲಿ ಘಟನೆ ಬಗ್ಗೆ ತನಿಖೆಗೂ ಆಗ್ರಹಿಸಿದೆ. ಇದೇ ವೇಳೆ, ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು ಗಾಜಿಪುರದಿಂದ ಲಖೀಂಪುರದತ್ತ ಪ್ರಯಾಣ ಬೆಳೆಸಿದ್ದಾರೆ. ಘಟನೆಯನ್ನು ಕಾಂಗ್ರೆಸ್, ಎಸ್ಪಿ, ಆಪ್, ಆರ್‌ಎಲ್‌ಡಿ ಖಂಡಿಸಿವೆ.
ಪ್ರಿಯಾಂಕಾ ಗೃಹಬಂಧನ
ವಿಚಾರ ತಿಳಿಯುತ್ತಿದ್ದಂತೆ ರವಿವಾರ ರಾತ್ರಿಯೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರು ಲಖೀಂಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಲಕ್ನೋ ಏರ್‌ಪೋರ್ಟ್‌ನಲ್ಲಿ ಇಳಿದ ಅವರು ನೇರವಾಗಿ ಲಕ್ನೋದಲ್ಲಿನ ತಮ್ಮ ಮನೆಗೆ ತೆರಳಿದರು. ಅಷ್ಟರಲ್ಲಿ ಪೊಲೀಸರು ಧಾವಿಸಿ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ. ಇದನ್ನು ಖಂಡಿಸಿ ನಿವಾಸದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ಪಂಜಾಬ್ ಡಿಸಿಎಂ ಸುಖ್‌ಜಿಂದರ್ ಸಿಂಗ್ ರಾಂಧವಾ ಅವರೂ ಸೋಮವಾರ ಘಟನ ಸ್ಥಳಕ್ಕೆ ತೆರಳಲಿದ್ದಾರೆ.
ಇಡೀ ಘಟನೆಯು ದೊಡ್ಡ ಸಂಚು. ರೈತರು ಆರೋಪಿಸಿರುವಂತೆ ನನ್ನ ಮಗ ಘಟನ ಸ್ಥಳದಲ್ಲಿ ಇರಲೇ ಇಲ್ಲ. ಅದನ್ನು ಪುಷ್ಟೀಕರಿಸುವ ವೀಡಿಯೋ ಸಾಕ್ಷ್ಯ ನನ್ನಲ್ಲಿದೆ.
-ಅಜಯ್ ಮಿಶ್ರಾ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
MUST WATCH
ಹೊಸ ಸೇರ್ಪಡೆ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Congress Gurantee: ಗೃಹಜ್ಯೋತಿ: 3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್’
High Court: ಮತದಾರರಿಗೆ ಅನುದಾನ ಆಮಿಷ; ನಡ್ಡಾ ವಿರುದ್ಧದ ಪ್ರಕರಣ ರದ್ದು
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.