ಗೆಲುವಿನ ವಿಶ್ವಾಸದ ನಾಯಕರಿಗೆ ಬನ್ನೂರ ಅಡ್ಡಿ
ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತ್ತಷ್ಟು ರಂಗು
Team Udayavani, Jun 6, 2022, 11:01 AM IST
ಬೆಳಗಾವಿ: ಕಾಲ್ಪನಿಕ ವೇತನ, ಅನುದಾನ, ಬಡ್ತಿ ಮೊದಲಾದ ಸುದೀರ್ಘ ವರ್ಷಗಳ ಬೇಡಿಕೆಯ ನಡುವೆ ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಈಗ ಮತ್ತಷ್ಟು ರಂಗುಬಂದಿದೆ. ಗೆಲುವಿಗೆ ಬೇಕಾದ ರಾಜಕೀಯ ಕಾರ್ಯತಂತ್ರ ತೆರೆಮರೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ 12 ಜನ ಅಭ್ಯರ್ಥಿಗಳು ಕಣದಲ್ಲಿದ್ದರೂ ಬಿಜೆಪಿ, ಕಾಂಗ್ರೆಸ್ ಮತ್ತು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಒಟ್ಟು 19,505 ಮತದಾರರಿದ್ದಾರೆ.
ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ವಿಜಯಪುರದ ಅರುಣ ಶಹಾಪುರ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇದುವರೆಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಅನುಭವ ಹೊಂದಿರುವ ಪ್ರಕಾಶ ಹುಕ್ಕೇರಿ ಕಾಂಗ್ರೆಸ್ ದಿಂದ ಕಣಕ್ಕಿಳಿದಿದ್ದರೆ, ಜೆಡಿಎಸ್‌ದಿಂದ ಚಂದ್ರಶೇಖರ ಲೋಣಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಎನ್.ಬಿ. ಬನ್ನೂರ ಸ್ಪರ್ಧೆ ಮಾಡಿದ್ದಾರೆ.
ತಮ್ಮದೇ ಮತ ಬ್ಯಾಂಕ್ ಹೊಂದಿರುವ ಬಿಜೆಪಿ ಹಾಗೂ ಕಾಂಗ್ರೆಸ್ ವಿಭಿನ್ನ ಕಾರ್ಯತಂತ್ರದ ಮೂಲಕ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಸೀಮಿತ ಮತದಾರರನ್ನು ಹೊಂದಿರುವುದರಿಂದ ಅವರನ್ನು ತಲುಪಲು ಮತ್ತು ಪ್ರಚಾರ ನಡೆಸಲು ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಪಕ್ಷೇತರರಾಗಿ ಸ್ಪರ್ಧೆ ಮಾಡಿರುವ ಎನ್.ಬಿ ಬನ್ನೂರ ಬಿಜೆಪಿ ಮತ್ತು ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ಅಡ್ಡಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ದಿಂದ ಸ್ಪರ್ಧೆ ಮಾಡಿ ಅಲ್ಪಮತಗಳ ಅಂತರದಿಂದ ಸೋತಿದ್ದ ಬನ್ನೂರಗೆ ನಿದಿಷ್ಟ ಮತದಾರರಿದ್ದಾರೆ. ಹೀಗಾಗಿ ಬನ್ನೂರ ಅವರನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಬನ್ನೂರ ಅವರನ್ನು ನಿರ್ಲಕ್ಷ ಮಾಡಿದಷ್ಟು ಅಪಾಯ ಎಂಬುದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಅರಿವಾಗಿದೆ. ಜೆಡಿಎಸ್ ಇಲ್ಲಿ ನೆಪಮಾತ್ರಕ್ಕಿರುವಂತೆ ಕಾಣುತ್ತಿದೆ.
ಅರುಣ ಶಹಾಪುರ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಸಲ ಬಂದಿಲ್ಲ. ಶಿಕ್ಷಕರ ಸಮಸ್ಯೆ ಕೇಳಿಲ್ಲ ಎಂಬ ಅಸಮಾಧಾನ ಇದೆ. ಇದನ್ನೇ ನೆಪ ಮಾಡಿಕೊಂಡು ಬಿಜೆಪಿಯ ಕೆಲ ಪ್ರಭಾವಿ ನಾಯಕರು ಅವರ ಟಿಕೆಟ್ ತಪ್ಪಿಸಲು ಪ್ರಯತ್ನ ಮಾಡಿದ್ದರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಪಕ್ಷದ ವರಿಷ್ಠರ ಮನ ಗೆದ್ದಿದ್ದ ಅರುಣ ಶಹಾಪುರ ಟಿಕೆಟ್ ಪಡೆಯುವಲ್ಲಿ ಯಾವುದೇ ಸಮಸ್ಯೆ ಎದುರಿಸಲಿಲ್ಲ. ನಾನು ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಹಾಗಿಲ್ಲದಿದ್ದರೆ ಪಕ್ಷವು ಎರಡು ಬಾರಿ ಟಿಕೆಟ್ ನೀಡುತ್ತಿರಲಿಲ್ಲ. ಮತದಾರರು ನನ್ನನ್ನು ಗೆಲ್ಲಿಸುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಹೊರಗಿನವನು ಎಂದು ಹೇಳುವ ಕೆಲ ನಾಯಕರಿಗೆ ಕಳೆದ ಚುನಾವಣೆಯಲ್ಲಿ ಇದು ಕಾಣಿಸಲಿಲ್ಲವೇ. ಆಗ ನಾನು ಹೊರಗಿನವನಾಗಿರಲಿಲ್ಲವೇ ಎಂಬುದು ಅರುಣ ಶಹಾಪುರ ಪ್ರಶ್ನೆ. ಅತೀ ಹೆಚ್ಚು ಮತದಾರರನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಇದನ್ನು ಯಾವ ರೀತಿ ಸ್ವೀಕರಿಸುತ್ತದೆ ಎಂಬುದು ಕುತೂಹಲ ಹುಟ್ಟಿಸಿದೆ.
ಗೆಲ್ಲುವ ಖಚಿತ ವಿಶ್ವಾಸ ಇದೆ. ಕ್ಷೇತ್ರ ವ್ಯಾಪ್ತಿಯ ಎಲ್ಲ 33 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ತ್ರಿಕೋನ ಸ್ಪರ್ಧೆಯಿಂದ ಆತಂಕ ಇಲ್ಲ. ಬದಲಾಗಿ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ. ಕೆಲ ನಾಯಕರು ನೂರು ಬಾರಿ ಹೇಳಿದ್ದನ್ನೇ ಹೇಳಿ ಅದನ್ನು ಸತ್ಯ ಮಾಡಲು ಹೊರಟಿದ್ದಾರೆ. ಅವರ ತಂತ್ರ ಫಲಿಸುವುದಿಲ್ಲ. –ಅರುಣ ಶಹಾಪುರ, ಬಿ ಜೆ ಪಿ ಅಭ್ಯರ್ಥಿ
ಶಿಕ್ಷಕರ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಹಿಂದೆ ಶಾಸಕನಾಗಿದ್ದಾಗ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅವರ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆದಿದ್ದೇನೆ. ವಿರೋಧ ಪಕ್ಷದವರು ಹೇಳುವಂತೆ ನಾನೇನು ಶಿಕ್ಷಕರ ಸಮುದಾಯಕ್ಕೆ ಹೊಸಬನಲ್ಲ. ನನ್ನ ಬಗ್ಗೆ ಶಿಕ್ಷಕರಿಗೆ ಒಳ್ಳೆಯ ಅಭಿಪ್ರಾಯ ಇದೆ. ಇದೇ ನನ್ನ ಗೆಲುವಿಗೆ ನೆರವಾಗಲಿದೆ. –ಪ್ರಕಾಶ ಹುಕ್ಕೇರಿ, ಕಾಂಗ್ರೆಸ್ ಅಭ್ಯರ್ಥಿ
ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಪಕ್ಷದ ನಾಯಕರು ಸಹ ಈ ಮೊದಲೇ ಚುನಾವಣಾ ತಯಾರಿ ಮಾಡಿಕೊಳ್ಳುವಂತೆ ಹೇಳಿದ್ದರು. ಅದರಂತೆ ನಾನು ಎಲ್ಲ ಕಡೆ ಓಡಾಡಿ ಸಿದ್ಧತೆ ಮಾಡಿಕೊಂಡಿದ್ದೆ. ಕೊನೆಯ ಕ್ಷಣದವರೆಗೂ ನನಗೆ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಮೋಸ ಮಾಡಿದರು. ಇದರಿಂದ ನೊಂದು ಪಕ್ಷಕ್ಕೆ ರಾಜೀನಾಮೆ ನೀಡಿದೆ. ಕಳೆದ ಸಲ ಅಲ್ಪಮತಗಳ ಅಂತರದಿಂದ ಸೋತಿದ್ದೆ. ಅದರ ಅನುಕಂಪ ನನ್ನ ಮೇಲಿದೆ. ಶಿಕ್ಷಕರು ನನ್ನ ಕೈಹಿಡಿಯುತ್ತಾರೆ. –ಎನ್.ಬಿ ಬನ್ನೂರ, ಪಕ್ಷೇತರ ಅಭ್ಯರ್ಥಿ
ಹುಕ್ಕೇರಿಗೆ ಹೊಸ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಶಿಕ್ಷಕರ ಕ್ಷೇತ್ರ ಸಂಪೂರ್ಣ ಹೊಸದು. ಶಿಕ್ಷಕರ ಸಮಸ್ಯೆಗಳ ಬಗ್ಗೆ ಅಷ್ಟಾಗಿ ಅನುಭವ ಇಲ್ಲ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಎನ್.ಬಿ ಬನ್ನೂರ ಅವರು, ಶಿಕ್ಷಕ ಮತದಾರರಲ್ಲಿ ಪ್ರಕಾಶ ಹುಕ್ಕೇರಿ ಬಗ್ಗೆ ನಕಾರಾತ್ಮಕ ಅಂಶಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಪ್ರಕಾಶ ಹುಕ್ಕೇರಿ ಪಕ್ಷದೊಳಗಿನ ಮನಸ್ತಾಪದ ಜೊತೆಗೆ ಈ ಕಷ್ಟವನ್ನು ಅರಗಿಸಿಕೊಳ್ಳಬೇಕಿದೆ. ಮೇಲಾಗಿ ಎನ್.ಬಿ ಬನ್ನೂರ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಅದರೆ ಸಾಕಷ್ಟು ಚುನಾವಣೆಗಳನ್ನು ಎದುರಿಸಿದ ಅನುಭವ ಹೊಂದಿರುವ ಪ್ರಕಾಶ ಹುಕ್ಕೇರಿ ಈ ಚುನಾವಣೆಗೆ ತಮ್ಮದೇ ಕಾರ್ಯತಂತ್ರ ರೂಪಿಸಿದ್ಧಾರೆ. ಬಿಜೆಪಿಯಲ್ಲಿನ ಅಸಮಾಧಾನದ ಹೊಗೆ ತಮಗೆ ಲಾಭ ತರಲಿದೆ ಎಂಬ ಅದಮ್ಯ ವಿಶ್ವಾಸ ಹೊಂದಿದ್ದಾರೆ. ಇದೇ ಕಾರಣದಿಂದ ಪ್ರಕಾಶ ಹುಕ್ಕೇರಿ ಅವರು ಜಿಲ್ಲೆಯ ಬಿಜೆಪಿ ನಾಯಕರನ್ನು ಸಂಪರ್ಕಿಸಿ ತಮ್ಮ ಪರ ನಿಲ್ಲುವಂತೆ ಮನವಿ ಮಾಡುತ್ತಿದ್ದಾರೆ. ಇದಕೆ ಜಿಲ್ಲೆಯ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮನಸ್ಫೂರ್ತಿ ಸಹಕಾರ ನೀಡಿದರೆ ಪ್ರಕಾಶ ಹುಕ್ಕೇರಿ ವಿಧಾನ ಪರಿಷತ್ ಮೆಟ್ಟಿಲು ಹತ್ತಬಹುದು. ಎರಡು ಬಾರಿ ಸೋಲು ಅನುಭವಿಸಿರುವ ಎನ್.ಬಿ ಬನ್ನೂರ ಈ ಸಲ ಅನುಕಂಪವನ್ನೇ ನಂಬಿಕೊಂಡಿದ್ದಾರೆ. ಈ ಬಾರಿ ಅವರಿಗೆ ಕಾಂಗ್ರೆಸ್ ನಾಯಕರ ನಿರ್ಧಾರದ ಬಗ್ಗೆ ಬೇಸರವಿದೆ. ತಮಗೆ ಟಿಕೆಟ್ ತಪ್ಪಿಸಿದವರ ಮೇಲೆ ಕೋಪ ಇದೆ. ಚುನಾವಣೆಗೆ ಮೊದಲು ನೀವೇ ಅಭ್ಯರ್ಥಿ ಎಂದು ಮಾತು ಕೊಟ್ಟು ತಯಾರಿ ಮಾಡಿಕೊಳ್ಳಲು ಹೇಳಿದ್ದ ನಾಯಕರು ಅನಂತರ ಏಕೆ ಮಾತು ತಪ್ಪಿದರು ಎಂಬುದು ಬನ್ನೂರ ಪ್ರಶ್ನೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಿರುಗು ಬಾಣವಾದರೂ ಅಚ್ಚರಿಯಿಲ್ಲ.
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!
Belagavi: ಆಟೋ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ
Belagavi: ಅಕ್ರಮ ಆಸ್ತಿ ಸಂಪಾದನೆ ಆರೋಪ… ಬೆಳಗಾವಿ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.