ಈಶ್ವರಾನಂದಪುರಿ ಶ್ರೀ ಹೇಳಿಕೆ ವಿವಾದ ಶೀಘ್ರ ಸುಖಾಂತ್ಯ: ಶಾಂತವೀರ ಶ್ರೀ
Team Udayavani, Feb 4, 2024, 11:37 PM IST
ಚಿತ್ರದುರ್ಗ: ಬಾಗೂರು ಶ್ರೀ ಚನ್ನಕೇಶವಸ್ವಾಮಿ ದೇಗುಲದ ಗರ್ಭಗುಡಿ ಪ್ರವೇಶ ವಿಚಾರವಾಗಿ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ನೀಡಿರುವ ಹೇಳಿಕೆ ಸಂಬಂಧ ತಹಶೀಲ್ದಾರ್, ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಸಭೆ ನಡೆಸಿ ವಿವಾದಕ್ಕೆ ತೆರೆ ಎಳೆಯಲಾಗುವುದು ಎಂದು ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದ್ದಾರೆ.
ಭಗೀರಥ ಗುರುಪೀಠದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶ್ರೀಗಳು, ಸಾಣೇಹಳ್ಳಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ “ಪರಿವರ್ತನೆಯತ್ತ ಮಠಗಳು” ಎನ್ನುವ ಗೋಷ್ಠಿಯಲ್ಲಿ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಈ ವಿಷಯವನ್ನು ಪ್ರಸ್ತಾವಿಸಿದ್ದಾರೆ. ಇದರಲ್ಲಿ ಆಡಳಿತ ಮಂಡಳಿ, ಗ್ರಾಮಸ್ಥರು, ಭಕ್ತರ ಪಾತ್ರ ಇಲ್ಲ ಎಂದರು.
ಗರ್ಭಗುಡಿ ಪ್ರವೇಶ ವಿಚಾರದಲ್ಲಿ ಪ್ರಧಾನ ಅರ್ಚಕರ ಪಾತ್ರ ಇಲ್ಲ. ಅಲ್ಲಿದ್ದ ಸಹಾಯಕ ಅರ್ಚಕರೊಬ್ಬರು ಮಾಡಿದ ಎಡವಟ್ಟು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ. ಈ ವೇಳೆ ನಾವು ಕೂಡ ಅಲ್ಲಿಯೇ ಇದ್ದೆವು. ಗ್ರಾಮಸ್ಥರು, ಭಕ್ತರು, ಮಠಾಧಿಧೀಶರನ್ನು ಬಿಟ್ಟು ಅರ್ಚಕರ ಕುಟುಂಬದ ಮಹಿಳೆಯರಿಗೆ ಗರ್ಭಗುಡಿ ಬಳಿಗೆ ಅವಕಾಶ ಕೊಟ್ಟಾಗ ಸಹಜವಾಗಿ ಉಳಿದವರಿಗೆ ಬೇಸರವಾಗಿತ್ತು. ಅದನ್ನು ಈಶ್ವರಾನಂದಪುರಿ ಶ್ರೀಗಳು ಗೋಷ್ಠಿಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹೇಳಿದ್ದಾರಷ್ಟೇ ಎಂದರು.
ಭಗೀರಥ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಪ್ರಧಾನ ಅರ್ಚಕರು ಪೂಜೆ ಮಾಡುತ್ತಿದ್ದಾಗ ಅವರ ಸಹಾಯಕರು, ಕುಟುಂಬದವರು ಸುಖನಾಸಿಯಲ್ಲಿ ನಿಂತರು. ಆಗ ಮಠಾ ಧೀಶರಾದ ನಮಗೆ ಗೌರವ ಸಿಗದೆ ಜನಸಾಮಾನ್ಯರಿಗೆ ಹೇಗೆ ಗೌರವ ಸಿಗುತ್ತದೆ ಎಂಬ ಪ್ರಶ್ನೆ ಮೂಡಿತ್ತು. ಈ ಬಗ್ಗೆ ಕೆಲವು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ತಾಲೂಕು ಆಡಳಿತದ ಜತೆ ಚರ್ಚಿಸಿ ವಿವಾದ ತಿಳಿಗೊಳಿಸುತ್ತೇವೆ ಎಂದು ಹೇಳಿದರು.
ವೈಕುಂಠ ಏಕಾದಶಿಗೆ ಹೋದಾಗ ದೇವಸ್ಥಾನ ಸ್ವತ್ಛಗೊಳಿಸಿದ್ದರು ಎಂಬರ್ಥದಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಆದರೆ ಇವೆರಡು ಬೇರೆ ಬೇರೆ ಘಟನೆ. ದೇವಸ್ಥಾನ ಸ್ವತ್ಛಗೊಳಿಸಿದ್ದರು ಎನ್ನುವ ಮಾಹಿತಿ ನಮಗೆ ಬಂದಿದ್ದು ಬಹಳ ವರ್ಷಗಳ ಹಿಂದಿನ ಘಟನೆ. ದೇವಸ್ಥಾನದ ಗರ್ಭಗುಡಿವರೆಗೆ ಅರ್ಚಕರ ಕುಟುಂಬದವರಿಗೆ ಪ್ರವೇಶವಿದೆ ಎಂದಾದದರೆ ಉಳಿದವರಿಗೆ ಯಾಕಿಲ್ಲ ಎಂಬರ್ಥದಲ್ಲಿ ಸಾಣೇಹಳ್ಳಿಯಲ್ಲಿ ಪ್ರಸ್ತಾವಿಸಿದ್ದೆ. ಈ ಘಟನೆಗೂ ಗ್ರಾಮಸ್ಥರಿಗೂ, ಭಕ್ತರಿಗೂ ಸಂಬಂಧವಿಲ್ಲ. – ಈಶ್ವರಾನಂದಪುರಿ ಸ್ವಾಮೀಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.