ಲಾಕ್‌ಡೌನ್ ತೆರವಾದರೂ ಶೇ. 50ರಷ್ಟು ಬಸ್‌ಗಳು ರಸ್ತೆಗಿಳಿಯುವುದು ಅನುಮಾನ !
ತಾಂತ್ರಿಕ ತೊಂದರೆ ಹಿನ್ನೆಲೆ
Team Udayavani, Apr 24, 2020, 6:01 AM IST
ವಿಶೇಷ ವರದಿ- ಮಂಗಳೂರು: ಕೋವಿಡ್ 19 ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಲಾಕ್‌ಡೌನ್ ಅಂತ್ಯಗೊಳ್ಳುವ ದಿನದ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಲಾಕ್‌ಡೌನ್ ಕೊನೆಗೊಂಡ ಬಳಿಕ ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಿದರೂ ದ.ಕ. ಜಿಲ್ಲೆಯಲ್ಲಿ ಶೇ. 50ರಷ್ಟು ಬಸ್‌ಗಳು ರಸ್ತೆಗಿಳಿಯುವುದು ಅನುಮಾನ. ಕಾರಣ ತಾಂತ್ರಿಕ ತೊಂದರೆ.
ಮಂಗಳೂರು ನಗರದಲ್ಲಿ ಸುಮಾರು 360 ಸಿಟಿ ಬಸ್‌ಗಳು ಸಂಚರಿಸುತ್ತವೆ. ಅದೇ ರೀತಿ ಮಂಗಳೂರಿನಿಂದ ಸುಮಾರು 700 ಸರ್ವಿಸ್ ಬಸ್‌ಗಳಲ್ಲಿ 70 ಬಸ್‌ಗಳು ಒಪ್ಪಂದದ ಮೇರೆಗಿನ ಸಾರಿಗೆ, 150ಕ್ಕೂ ಮಿಕ್ಕಿ ಟೂರಿಸ್ಟ್ ಬಸ್‌ಗಳಾಗಿ ಸಂಚರಿಸುತ್ತಿವೆ. ಒಂದು ತಿಂಗಳಿ ನಿಂದೀಚೆಗೆ ಇವು ನಿಂತಲ್ಲೇ ನಿಂತಿವೆ. ಇದರಿಂದಾಗಿ ಸಾಮಾನ್ಯವಾಗಿ ಟಯರ್, ಬ್ಯಾಟರಿ ಸಮಸ್ಯೆ ಕಾಣಿಸಿಕೊಳ್ಳಬಹುದು.
ಸರ್ವಿಸ್ ಅಗತ್ಯ
ಬ್ಯಾಟರಿ ಹಾಳಾದರೆ ಬಸ್ ಚಾಲೂ ಆಗುವುದಿಲ್ಲ. ಹೊಸ ಬ್ಯಾಟರಿಗೆ 17 ಸಾವಿರ ರೂ. ತನಕ ಇದೆ. ಟಯರ್ ಹಾಳಾಗಿದ್ದರೆ ಒಂದು ಜತೆಗೆ ಸುಮಾರು 40 ಸಾವಿರ ರೂ. ಇದೆ. ಇವಿಷ್ಟೇ ಅಲ್ಲದೆ ಎಂಜಿನ್ ಆಯಿಲ್ ಲೀಕೇಜ್, ಡೀಸೆಲ್ ಆ್ಯರ್ ಲಾಕ್, ಬಾಡಿ ಪೈಂಟಿಂಗ್, ಗೇರ್‌ಬಾಕ್ಸ್ ಸಹಿತ ವಾಹನಗಳನ್ನು ಒಮ್ಮೆ ಸರ್ವಿಸ್ ಮಾಡಿಸಿದ ಬಳಿಕವಷ್ಟೇ ರಸ್ತೆಗಿಳಿಸಬೇಕಾಗುತ್ತದೆ.
ಮಂಗಳೂರಿನಲ್ಲಿ ಓಡಾಡುವ ಸುಮಾರು ಶೇ. 50ರಷ್ಟು ಬಸ್‌ಗಳು ಮಾತ್ರ ಇತ್ತೀಚಿನ ದಿನಗಳದ್ದು. ಉಳಿದ ಬಸ್‌ಗಳು ಸುಮಾರು 8 ವರ್ಷಗಳಿಗೂ ಹಿಂದಿನವು.
ತಾಪಮಾನ ಏರಿಕೆ ತೊಂದರೆ
ಕರಾವಳಿಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಗರಿಷ್ಠ 38 ಡಿ.ಸೆ. ತನಕ ದಾಖಲಾಗುತ್ತಿದೆ. ಬಿಸಿಲಿನ ತಾಪ ಹೆಚ್ಚಾದಾಗ ವಾಹನಗಳ ಬಿಡಿ ಭಾಗಗಳಲ್ಲಿ ತೊಂದರೆ ಉಂಟಾಗುತ್ತದೆ. ಬಹುಕಾಲ ಬಿಸಿಲಿನಲ್ಲಿ ನಿಲ್ಲಿಸಿದ್ದರೆ ಟಯರ್ ಸವೆಯುವ ಸಾಧ್ಯತೆ ಇದೆ. ಅದೇ ರೀತಿ ಇಂಧನವೂ ಆವಿಯಾಗುತ್ತದೆ.
ಬಿಡಿ ಭಾಗಗಳಲ್ಲಿ ತೊಂದರೆ
ಲಾಕ್‌ಡೌನ್ ಯಾವಾಗ ಮುಗಿಯುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ದೇಶನವಿಲ್ಲ. ಸಿಟಿ ಬಸ್‌ಗಳು ತಿಂಗಳಿನಿಂದ ನಿಂತಲ್ಲೇ ನಿಂತಿವೆ. ಬಸ್ ಕಾರ್ಯಾಚರಣೆ ಮಾಡುವ ವೇಳೆಗೆ ತಾಂತ್ರಿಕ ತೊಂದರೆ ಕಾಣಿಸಿಕೊಳ್ಳಬಹುದಾದ ಕಾರಣ ಆರಂಭದಲ್ಲಿ ಶೇ. 50ರಷ್ಟು ಬಸ್‌ಗಳ ಕಾರ್ಯಾಚರಣೆ ಮಾತ್ರ ಸಾಧ್ಯವಾದೀತು.
- ದಿಲ್‌ರಾಜ್ ಆಳ್ವ ,ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ
ಸರ್ವಿಸ್ ಬಳಿಕ ರಸ್ತೆಗೆ
ಅನೇಕ ದಿನಗಳಿಂದ ಚಾಲೂ ಆಗದ ವಾಹನಗಳನ್ನು ಏಕಾಏಕಿ ಸ್ಟಾರ್ಟ್ ಮಾಡಿದಾಗ ತಾಂತ್ರಿಕ ಸಮಸ್ಯೆ ತಲೆದೋರಬಹುದು. ಸರ್ವಿಸ್ ಮಾಡಿಸಿದ ಬಳಿಕವೇ ರಸ್ತೆಗಿಳಿಯಬೇಕಾಗಿರುವುದರಿಂದ ಸ್ವಲ್ಪ ವಿಳಂಬವಾದೀತು.
- ಗುಣಪಾಲ್, ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.